ADVERTISEMENT

‘ಪ್ರಜಾವಾಣಿ’ ಕರುನಾಡ ಸವಿಯೂಟ| ರಾಗಿ ಡಿಸರ್ಟ್‌ಗೆ ಬಂತು ಬಹುಮಾನ: ರೆಸಿಪಿ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 0:13 IST
Last Updated 6 ಸೆಪ್ಟೆಂಬರ್ 2025, 0:13 IST
<div class="paragraphs"><p>‘ಪ್ರಜಾವಾಣಿ’ಯ ಕರುನಾಡ ಸವಿಯೂಟ 4ನೇ ಆವೃತ್ತಿಯ ಅಡುಗೆ ಸ್ಪರ್ಧೆಯಲ್ಲಿ ‘ರಾಗಿ ಡೆಸರ್ಟ್‌’ ಸಿದ್ಧಪಡಿಸಿ ಮೊದಲ ಬಹುಮಾನ ಪಡೆದ ಬೆಂಗಳೂರಿನ ಎಚ್‌.ಎಲಿಜಬೆತ್‌</p></div>

‘ಪ್ರಜಾವಾಣಿ’ಯ ಕರುನಾಡ ಸವಿಯೂಟ 4ನೇ ಆವೃತ್ತಿಯ ಅಡುಗೆ ಸ್ಪರ್ಧೆಯಲ್ಲಿ ‘ರಾಗಿ ಡೆಸರ್ಟ್‌’ ಸಿದ್ಧಪಡಿಸಿ ಮೊದಲ ಬಹುಮಾನ ಪಡೆದ ಬೆಂಗಳೂರಿನ ಎಚ್‌.ಎಲಿಜಬೆತ್‌

   

ಅಡುಗೆಯೆಂಬ ಕಲೆಯನ್ನು ಕರಗತ ಮಾಡಿಕೊಂಡವರ ಬದುಕಿನ ರುಚಿ ಅಷ್ಟು ಸುಲಭಕ್ಕೆ ಕೆಡದು ಎಂಬ ಮಾತಿದೆ. ರುಚಿಕಟ್ಟುತನವನ್ನು ಅರ್ಥಮಾಡಿಕೊಳ್ಳುತ್ತಲೇ ಎಲ್ಲದರಲ್ಲಿಯೂ ಅಚ್ಚುಕಟ್ಟುತನ ಕಲಿಯುವ, ಎಷ್ಟು ಬೆರೆತರೆ, ಎಷ್ಟು ಬೆಂದರೆ ಅಡುಗೆ ಘಮಗುಡಬಹುದು ಎಂಬುದನ್ನು ಅನಾಯಾಸವಾಗಿ ಅರ್ಥ ಮಾಡಿಕೊಳ್ಳಲು ಅಡುಗೆ ಮನೆ ಎಂದಿಗೂ ಒಂದು ಪಾಠಶಾಲೆಯೇ ಹೌದು.  

‘ಪ್ರಜಾವಾಣಿ’ಯ ಕರುನಾಡ ಸವಿಯೂಟ 4ನೇ ಆವೃತ್ತಿಯ ಅಡುಗೆ ಸ್ಪರ್ಧೆಯಲ್ಲಿ ‘ರಾಗಿ ಡೆಸರ್ಟ್‌’ ಸಿದ್ಧಪಡಿಸಿ ಮೊದಲ ಬಹುಮಾನ ಪಡೆದ ಬೆಂಗಳೂರಿನ ಎಚ್‌.ಎಲಿಜಬೆತ್‌ ಅವರೊಂದಿಗೆ ‘ಭೂಮಿಕಾ’ ನಡೆಸಿದ ಚಿಟ್‌ಚಾಟ್ ಇಲ್ಲಿದೆ:

ADVERTISEMENT

ಇಷ್ಟಪಟ್ಟು ಮಾಡುವ ಅಡುಗೆಗಳು ಯಾವುವು?

ಮಾಂಸದ ಖಾದ್ಯಗಳನ್ನು ಬಹಳ ಇಷ್ಟಪಟ್ಟು ಮಾಡುತ್ತೇನೆ. ಇದಲ್ಲದೇ ಮಾವಿನ ಹಣ್ಣಿನ ಪುಡ್ಡಿಂಗ್‌, ಚಿಲ್ಲಿ ಚಿಕನ್‌, ಬಿರಿಯಾನಿ, ಬಗೆ ಬಗೆಯ ಸಿಹಿತಿಂಡಿಗಳು, ಅರೇಬಿಕ್‌ ಫುಡ್‌ಗಳು, ಕೇಕ್‌ಗಳು, ಮ್ಯಾಕ್ರೊನೀಸ್‌, ಡೋನಟ್‌, ಪಿಜ್ಜಾ, ಬಗೆ ಬಗೆಯ ಪುಡ್ಡಿಂಗ್‌ಗಳನ್ನು ಮಾಡುತ್ತೇನೆ.

ಯಾವಾಗಿನಿಂದ ಅಡುಗೆಯಲ್ಲಿ ಆಸಕ್ತಿ ಬಂತು?
ನನ್ನ ಅಮ್ಮ ಸೌದಿ ಅರೇಬಿಯಾದಲ್ಲಿ ಕೆಲಸದಲ್ಲಿದ್ದರು. ನಾವು ಹೆಣ್ಣುಮಕ್ಕಳೆಲ್ಲ ಬೆಂಗಳೂರಿನಲ್ಲಿ ತಂದೆಯ ಜತೆ ಬೆಳೆದೆವು. ಹಾಗಾಗಿ, ಅಡುಗೆ ಮಾಡುವುದು ಅನಿವಾರ್ಯವಾಯಿತು. ಹದಿನೈದನೇ ವಯಸ್ಸಿಗೆ ನಾನು ಚಪಾತಿ ಮತ್ತು ಬ್ಲ್ಯಾಕ್‌ಟೀ ಮಾಡಿದ್ದರ ನೆನಪು. ಒಂದೊಂದು ಚಪಾತಿಯೂ ಒಂದೊಂದು ಆಕಾರ ಬಂದಿತ್ತು.

ಮದುವೆಯಾದ ನಂತರ ಚಿಕ್ಕಮಕ್ಕಳ ಆರೈಕೆ ಮಾಡುವ ಕೆಲಸಕ್ಕೆಂದು ಕುವೈತ್‌ಗೆ ಹೋದೆ. ಆ ಮಕ್ಕಳು ದೊಡ್ಡವರಾದ ಮೇಲೆ ನನಗೆ ಅಡುಗೆ ಮನೆಯ ಕೆಲಸ ಕೊಟ್ಟರು. ಅಲ್ಲಿ ಅವರು ಹೇಳಿಕೊಟ್ಟ ‍ಪುಡ್ಡಿಂಗ್‌, ಡೆಸರ್ಟ್‌ಗಳಲ್ಲಿ ಹೊಸ ಪ್ರಯೋಗ ಮಾಡಲು ಶುರು ಮಾಡಿದೆ. ನನ್ನ ಆಸಕ್ತಿಯನ್ನು ಕಂಡು ಅವರು ಒಂದು ರೆಸ್ಟೊರೆಂಟನ್ನೇ ಆರಂಭಿಸಿ, ಅದರಲ್ಲಿ ನನ್ನನ್ನು ಮುಖ್ಯ ಶೆಫ್‌ ಆಗಿ ನೇಮಿಸಿದ್ದರು. ನಂತರ ಗಂಡ, ಮಗನಿಗಾಗಿ ಬೆಂಗಳೂರಿಗೆ ವಾಪಸಾದೆ. 

ಮುಂದೇನು ಮಾಡಬೇಕೆಂದಿದ್ದೀರಿ?

ಮನೆಯಲ್ಲೇ ಕುಕ್ಕೀಸ್‌, ಡೋನಟ್ಸ್‌, ಪಿಜ್ಜಾ ಮಾಡಿ ಮಾರುವ ಯೋಚನೆ ಇದೆ. ಕುವೈತ್‌ನಲ್ಲಿದ್ದಾಗ ನನಗೆ ಕೆಲಸ ಕೊಟ್ಟ ಮೇಡಂ, ಪ್ರತಿ ಖಾದ್ಯ ಹಾಗೂ ಅದಕ್ಕೆ ಬೇಕಿರುವ ಸಾಮಗ್ರಿಗಳನ್ನು ಓದಿ ಹೇಳುತ್ತಿದ್ದರು. ಅದನ್ನೆಲ್ಲ ನೆನಪಿಟ್ಟುಕೊಂಡು ಮಾಡುತ್ತಿದ್ದೆ. ಆಗ ಕಲಿತ ವಿದ್ಯೆ ಈಗ ನೆರವಿಗೆ ಬರುತ್ತಿದೆ.

ರಾಗಿ ಡೆಸರ್ಟ್‌ನ ವಿಶೇಷ ಏನು?

ಕರ್ನಾಟಕದ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದಾದ ರಾಗಿಯಲ್ಲೇ ಏನಾದರೂ ಹೊಸ ಪ್ರಯೋಗ ಮಾಡಬೇಕು ಅಂದುಕೊಂಡೆ. ಅದಕ್ಕಾಗಿ ಯೂಟ್ಯೂಬ್‌ನಲ್ಲಿ ತಡಕಾಡಿದೆ. ಅಲ್ಲಿ ರಾಗಿ ಹಾಲುಬಾಯಿ ತಯಾರಿಯ ವಿಡಿಯೊಗಳೇ ಹೆಚ್ಚು ಬರುತ್ತಿದ್ದವು. ಹಾಗಾಗಿ, ಮಾವಿನಹಣ್ಣಿನ ರಸದಿಂದ ಪುಡ್ಡಿಂಗ್‌ ತಯಾರಿಸಿ ಗೊತ್ತಿತ್ತಲ್ಲ, ಅದನ್ನೇ ಇಲ್ಲಿಯೂ ಪ್ರಯೋಗಿಸಿದೆ.

ರಾಗಿ ಡೆಸರ್ಟ್‌ ಕುರಿತು 

ಕೋಕೊ ಸಾಸ್‌ಗೆ ಬೇಕಾಗುವ ಸಾಮಗ್ರಿ: ಚೀಸ್ ಕ್ರೀಂ ಒಂದು ಪ್ಯಾಕೆಟ್‌, ರಾಗಿಯಿಂದ ತೆಗೆದ ಹಾಲು ಮೂರು ಸೌಟು, ಬೆಲ್ಲದ ಪುಡಿ ಅರ್ಧ ಲೋಟ, 100 ಗ್ರಾಂ ಚೀಸ್‌ಕ್ರೀಂ, 100 ಗ್ರಾಂ ಫ್ರೆಷ್‌ಕ್ರೀಂ, ಐದು ಚಮಚ ಕೋಕೊ ಪುಡಿ. 

ರಾಗಿ ಕೇಕ್‌ಗೆ ಬೇಕಾಗುವ ಸಾಮಗ್ರಿ: ಅರ್ಧ ಲೋಟ ಎಣ್ಣೆ, ಮುಕ್ಕಾಲು ಲೋಟ ಬೆಲ್ಲದ ಪುಡಿ, ಮುಕ್ಕಾಲು ಗ್ಲಾಸ್‌ ರಾಗಿ ಹಿಟ್ಟು, ಅರ್ಧ ಲೋಟ ಮೊಸರು, ಒಂದೂವರೆ ಚಮಚ ವೆನಿಲ್ಲಾ ಎಸೆನ್ಸ್‌, ಮುಕ್ಕಾಲು ಚಮಚ ಬೇಕಿಂಗ್‌ ಪೌಡರ್‌, ಕಾಲು ಚಮಚ ಸೋಡ, ಎರಡು ಚಮಚ ಹಾಲು. 

ಮಾಡುವ ವಿಧಾನ

ರಾಗಿ ಕೇಕ್‌: ಎಣ್ಣೆ, ಬೆಲ್ಲ ಮತ್ತು ಮೊಸರಿನ ಮಿಶ್ರಣಕ್ಕೆ ವೆನಿಲ್ಲಾ ಎಸೆನ್ಸ್‌ ಹಾಕಬೇಕು. ಅದಕ್ಕೆ ಜರಡಿ ಹಿಡಿದ ರಾಗಿ ಹಿಟ್ಟು, ಸೋಡ, ಬೇಕಿಂಗ್‌ ಪೌಡರ್‌ ಸೇರಿಸಬೇಕು. ಇಡ್ಲಿ ಹಿಟ್ಟಿನ ಹಾಗೆ ಗಟ್ಟಿಯಾಗುವವರೆಗೂ ಚೆನ್ನಾಗಿ ಕಲಕಬೇಕು. ತುಂಬಾ ಗಟ್ಟಿಯಾದರೆ ಎರಡು ಚಮಚ ಹಾಲು ಸೇರಿಸಬಹುದು. ಅದನ್ನು ಪ್ಲೇಟ್‌ ಅಥವಾ ಕೇಕ್‌ ಆಕಾರದ ತಟ್ಟೆಯಲ್ಲಿಟ್ಟು ಸುಮಾರು 20 ನಿಮಿಷ ಓವನ್‌ನಲ್ಲಿ ಬೇಯಿಸಿ ಇಟ್ಟುಕೊಳ್ಳಬೇಕು. 

ಕೋಕೊ ಸಾಸ್‌: ರಾಗಿ ಹಾಲಿಗೆ ಬೆಲ್ಲ ಹಾಕಿ ಬಿಸಿ ಮಾಡಿ ಗಟ್ಟಿ ಮಾಡಿಕೊಳ್ಳಬೇಕು. ಆಮೇಲೆ ಕ್ರೀಂ, ಚೀಸ್‌ಕ್ರೀಂ, ಫ್ರೆಶ್‌ ಕ್ರೀಂ ಹಾಗೂ ಗಟ್ಟಿ ಮಾಡಿಕೊಂಡ ರಾಗಿ ಹಾಲನ್ನು ಮಿಕ್ಸಿಗೆ ಹಾಕಿ, 2 ಸ್ಪೂನ್‌ ಕೋಕೊ ಪುಡಿ ಸೇರಿಸಬೇಕು. ಇದು ಒಂದು ಬಗೆಯ ಸಾಸ್‌ನಂತೆ ಆಗುತ್ತದೆ.

ನಂತರ ಓವನ್‌ನಲ್ಲಿ ಬೇಯಿಸಿಟ್ಟ ಕೇಕ್‌ನಲ್ಲಿ ಒಂದು ಲೇಯರ್ ತೆಗೆದುಕೊಂಡು, ಅದರ ಮೇಲೆ ಕೋಕೊ ಸಾಸ್‌ ಹಾಕಬೇಕು. ಅದರ ಮೇಲೆ ಮತ್ತೊಂದು ಲೇಯರ್‌ ಕೇಕ್‌ ಇಡಬೇಕು. ಅದರ ಮೇಲೆ ದಪ್ಪನಾಗಿ ಸಾಸ್ ಹಾಕಬೇಕು. ಬಳಿಕ ಗಾರ್ನಿಷ್‌ ಮಾಡಲು, ನೆನೆಸಿಟ್ಟ ಇಡೀ ರಾಗಿಯನ್ನು ಬಳಸಬೇಕು. ಅಂದರೆ, ಆ ರಾಗಿಯನ್ನು ಚೆನ್ನಾಗಿ ತೊಳೆದು, ಟಿಶ್ಯೂ ಪೇಪರ್‌ನಲ್ಲಿ ಒರೆಸಿ, ಬೆಲ್ಲದ ಪಾಕದಲ್ಲಿ ಒಂದು ಗಂಟೆ ನೆನೆಸಿಟ್ಟಿರಬೇಕು. ಈ ಪಾಕಕ್ಕೆ ಎರಡು ಚಮಚ ತುಪ್ಪ ಸೇರಿಸಬೇಕು. ಕೇಕ್‌ ಮತ್ತು ಸಾಸ್‌ ಜತೆಗೆ ಬೆಲ್ಲದ ಪಾಕದಲ್ಲಿ ನೆನೆದ ಈ ರಾಗಿಯನ್ನು ಸೇರಿಸಿದರೆ ರಾಗಿ ಡೆಸರ್ಟ್‌ ಸಿದ್ಧವಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.