ADVERTISEMENT

ಮಾವಿನಕಾಯಿ ರಸಂ, ಆಮ್‌ ಪನ್ನಾ ಮಾಡುವ ವಿಧಾನ...

ಪ್ರಜಾವಾಣಿ ವಿಶೇಷ
Published 4 ಜೂನ್ 2022, 0:30 IST
Last Updated 4 ಜೂನ್ 2022, 0:30 IST
ರಸಂ
ರಸಂ   

ಮಾವು ರಸಂ

ಬೇಕಾಗುವ ಸಾಮಗ್ರಿಗಳು: ಮಾವಿನಕಾಯಿ– 1, ನೀರು – ಅರ್ಧ ಕಪ್‌, ತೊಗರಿಬೇಳೆ – ಕಾಲು ಕಪ್‌ (ಬೇಯಿಸಿಕೊಂಡಿದ್ದು), ತುಪ್ಪ– 1 ಚಮಚ, ಸಾಸಿವೆ – ಅರ್ಧ ಚಮಚ, ಜೀರಿಗೆ – 1 ಟೀ ಚಮಚ, ಕರಿಬೇವು – 5 ರಿಂದ 6, ಹಸಿಮೆಣಸು – 2, ಇಂಗು– ಚಿಟಿಕೆ, ಶುಂಠಿ – 1 ಇಂಚು, ಟೊಮೆಟೊ – 1 ದೊಡ್ಡದು (ಸಣ್ಣಗೆ ಹೆಚ್ಚಿದ್ದು), ಜೀರಿಗೆ ಪುಡಿ– 1 ಚಮಚ, ನಿಂಬೆರಸ– 1 ಚಮಚ, ಕಾಳುಮೆಣಸಿನ ಪುಡಿ – ಚಿಟಿಕೆ, ಅರಿಸಿನ ಪುಡಿ – ಚಿಟಿಕೆ, ಕೊತ್ತಂಬರಿ ಪುಡಿ– 1 ಚಮಚ, ಬೆಲ್ಲ – 1 ಸಣ್ಣ ತುಂಡು, ಉಪ್ಪು – ರುಚಿಗೆ, ಕೊತ್ತಂಬರಿ ಸೊಪ್ಪು – 2 ಚಮಚ (ಹೆಚ್ಚಿದ್ದು).

ತಯಾರಿಸುವ ವಿಧಾನ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿ 2 ಲೋಟ ನೀರು ಸೇರಿಸಿ 5 ರಿಂದ 6 ವಿಶಲ್‌ ಕೂಗಿಸಿ. ವಿಶಲ್‌ ಆರಿದ ಮೇಲೆ ಸಿಪ್ಪೆ ಹಾಗೂ ಗೊರಟೆ ತೆಗೆದು ಮಾವಿನ ಪಲ್ಪ್‌ ಅನ್ನ ತೆಗೆದು ಮಿಕ್ಸರ್‌ಗೆ ಹಾಕಿ ನುಣ್ಣಗೆ ರುಬ್ಬಿ. ತೊಗರಿಬೇಳೆಯನ್ನು ನುಣ್ಣಗೆ ಬೇಯಿಸಿಕೊಳ್ಳಿ.

ADVERTISEMENT

ಈಗ ಪ್ಯಾನ್‌ವೊಂದಕ್ಕೆ ತುಪ್ಪ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಗೂ ಜೀರಿಗೆ ಹಾಕಿ ಸಿಡಿಸಿ. ಅದಕ್ಕೆ ಇಂಗು, ಕರಿಬೇವು, ಹಸಿಮೆಣಸು, ಶುಂಠಿ ಎಲ್ಲವನ್ನೂ ಹಾಕಿ ಕೈಯಾಡಿಸಿ. ಅದಕ್ಕೆ ಮಾವಿನಕಾಯಿ ತಿರುಳು, ಟೊಮೆಟೊ, ನಿಂಬೆರಸ, ಕಾಳುಮೆಣಸಿನಪುಡಿ, ಅರಿಸಿನ ಪುಡಿ, ಜೀರಿಗೆ ಪುಡಿ, ಬೆಲ್ಲ, ಬೇಯಿಸಿದ ತೊಗರಿಬೇಳೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ನಿಮ್ಮ ಮುಂದೆ ಮಾವಿನಕಾಯಿ ರಸಂ ಸವಿಯಲು ಸಿದ್ಧ.

ಆಮ್‌ ಪನ್ನಾ

ಬೇಕಾಗುವ ಸಾಮಗ್ರಿಗಳು: ಮಾವಿನ ಕಾಯಿ – 3, ಸಕ್ಕರೆ – 3 ಟೇಬಲ್ ಚಮಚ, ಜೀರಿಗೆ ಪುಡಿ – 1 ಚಮಚ, ಕಪ್ಪು ಉಪ್ಪು – 1 ಚಮಚ, ನೀರು – 2 ಕಪ್‌, ಪುದಿನ ಸೊಪ್ಪು – 1 ಚಮಚ

ತಯಾರಿಸುವ ವಿಧಾನ: ಮಾವಿನಕಾಯಿಯನ್ನು ಬೇಯಿಸಿ ತಣ್ಣಗಾದ ಮೇಲೆ ಸಿಪ್ಪೆ ತೆಗೆದು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ದಪ್ಪದ ತಳದ ಪಾತ್ರೆಗೆ ಹಾಕಿ ಸಕ್ಕರೆ ಸೇರಿಸಿ. ಸಕ್ಕರೆ ಕರಗುವವರೆಗೂ ಕೈಯಾಡಿಸಿ. ಸಕ್ಕರೆ ಚೆನ್ನಾಗಿ ಕರಗಿದ ಮೇಲೆ ಜೀರಿಗೆ, ರುಚಿಗೆ ತಕ್ಕಷ್ಟು ಕಪ್ಪು ಉಪ್ಪು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎರಡು ಚಮಚ ಈ ಮಿಶ್ರಣಕ್ಕೆ ನೀರು ಸೇರಿಸಿ ಚೆನ್ನಾಗಿ ಕಲೆಸಿ, ಮೇಲೆ ಪುದಿನ ಸೊಪ್ಪು ಉದುರಿಸಿ. ಆಮ್‌ ಪನ್ನಾ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.