ADVERTISEMENT

ಶ್ಯಾವಿಗೆ: ಸಿಹಿಗೂ ಸಿದ್ಧ ಖಾರಕ್ಕೂ ಸಿದ್ಧ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 19:30 IST
Last Updated 4 ಜನವರಿ 2019, 19:30 IST
ಮಾಲ್ದಿ
ಮಾಲ್ದಿ   

ಅಕ್ಕಿ ಶ್ಯಾವಿಗೆ

ಬೇಕಾಗುವ ಸಾಮಗ್ರಿಗಳು:ಅಕ್ಕಿಹಿಟ್ಟು – 2ಕಪ್‌, ನೀರು – 4ಕಪ್‌, ಉಪ್ಪು- ಅರ್ಧ ಟೀ ಚಮಚ, ಎಣ್ಣೆ ಸ್ವಲ್ಪ.

ತಯಾರಿಸುವ ವಿಧಾನ:ಮೊದಲು ನೀರಿಗೆ ಸ್ವಲ್ಪ ಅಕ್ಕಿಹಿಟ್ಟು, ಸ್ವಲ್ಪ ಎಣ್ಣೆ ಬೆರಸಿ ಕುದಿ ಬರಿಸಬೇಕು. ನಂತರ ಉಳಿದ ಹಿಟ್ಟನ್ನು ಸೇರಿಸಿ ಚೆನ್ನಾಗಿ ಬೇಯಿಸಿ. ಉದ್ದ ಕೋಲಿನಿಂದ ಚೆನ್ನಾಗಿ ನಾದಿ ಉಂಡೆ ತಯಾರಿಸಿಕೊಂಡು ಕುಕ್ಕರಿನಲ್ಲಿಟ್ಟು ಒಂದು ವಿಷಲ್ ಕೂಗಿಸಿ, ಬೆಂದ ಹಿಟ್ಟನ್ನು ಶ್ಯಾವಿಗೆ ಒರಳಿಗೆ ಹಾಕಿ ಒತ್ತಿದರೆ ಬಿಳಿಯ ಉದುರುದುರಾದ ಶ್ಯಾವಿಗೆ ರೆಡಿ.

ADVERTISEMENT

ಇದನ್ನು ಬೆಳಗಿನ ತಿಂಡಿಗೆ ಚಿತ್ರಾನ್ನ, ಪುಳಿಯೋಗರೆ ಮಿಕ್ಸ್ ಕಲೆಸಿಕೊಂಡು ಸವಿಯಬಹುದು. ಅವರೆಕಾಯಿ ಸೀಸನ್‌ನಲ್ಲಿ ಹಿಸುಕಿದ ಅವರೆಬೇಳೆಯ ಸಾರು ಒಳ್ಳೆಯ ಕಾಂಬಿನೇಷನ್. ಒಣಗಿದ ಅವರೆಬೇಳೆಯಿಂದಲೂ ತೊವ್ವೆ ತಯಾರಿಸಿ ಶ್ಯಾವಿಗೆ ಜೊತೆ ಸವಿಯಬಹುದು.

ಸಿಹಿ: ಅರ್ಧ ಕಪ್ ಕರಿಎಳ್ಳನ್ನು ಹುರಿದುಕೊಂಡು ಅದಕ್ಕೆ ಸ್ವಲ್ಪ ಗಸೆಗಸೆ, ಎಲಕ್ಕಿ, ಸ್ವಲ್ಪ ಹುರಿಗಡಲೆ ಹಾಕಿ ಪುಡಿ ಮಾಡಿಕೊಂಡು ಹಸಿಕಾಯಿ ಹಾಲಿಗೆ, ಬೆಲ್ಲದ ಪುಡಿ ಬೆರೆಸಿ. ಅದರ ಜೊತೆಗೆ ಎಳ್ಳಿನಪುಡಿ ಸೇರಿಸಿ ಶ್ಯಾವಿಗೆಯ ಜೊತೆ ಸವಿಯಿರಿ.

**

ಮಾಲ್ದಿ

ಬೇಕಾಗುವ ಸಾಮಗ್ರಿಗಳು: ಗೋಧಿಹಿಟ್ಟು – 2ಪಾವು, ಹುರಿಗಡಲೆ – 2ಪಾವು, ಬೆಲ್ಲದ ಪುಡಿ – ರುಚಿಗೆ.

ತಯಾರಿಸುವ ವಿಧಾನ:ಗೋಧಿಹಿಟ್ಟಿಗೆ ಸ್ವಲ್ಪ ಉಪ್ಪು, ತುಪ್ಪ ಕಾಸಿ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಅರ್ಧ ಗಂಟೆಯ ನಂತರ ತೆಳ್ಳಗೆ ಚಪಾತಿ ಲಟ್ಟಿಸಿ, ಖಡಕ್ ಜೋಳದ ರೊಟ್ಟಿಯಂತೆ ಬೇಯಿಸಬೇಕು. ಅದನ್ನು ಸಣ್ಣ ಸಣ್ಣ ಚೂರುಗಳಾಗಿ ಮಾಡಿಕೊಂಡು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಮಿಕ್ಸ್ ಮಾಡುವಾಗ ಹುರಿಗಡಲೆಯ ಪುಡಿ ಬೆರೆಸಿಕೊಳ್ಳಿ. ನಂತರ ಈ ಪುಡಿಗೆ ಬೆಲ್ಲದ ಪುಡಿ, ಏಲಕ್ಕಿ, ಜಾಕಾಯಿ ಪುಡಿ ಸೇರಿಸಿ.ಮಾಲ್ದಿಯ ಜೊತೆಗೆ ತುಪ್ಪ, ಬಾಳೆಹಣ್ಣು, ಕಾಯಿಹಾಲು, ಬಾದಾಮಿಪಾಯಸ ಚೆನ್ನಾಗಿರುತ್ತದೆ.

**

ಕಲಸರೊಟ್ಟಿ

ಬೇಕಾಗುವ ಸಾಮಗ್ರಿಗಳು:ಅಕ್ಕಿಹಿಟ್ಟು – 2ಪಾವು, ನೀರು – 4ಪಾವು.

ತಯಾರಿಸುವ ವಿಧಾನ:ಸ್ವಲ್ಪ ಅಕ್ಕಿಹಿಟ್ಟನ್ನು ಬೆರೆಸಿದ ನೀರು ಕುದಿ ಬಂದಾಗ ಉಳಿದ ಅಕ್ಕಿಹಿಟ್ಟು ಸೇರಿಸಿ ಚೆನ್ನಾಗಿ ಕುದಿಸಿ. ತಣ್ಣಗಾದ ಮೇಲೆ ಚೆನ್ನಾಗಿ ಕಲಸಿ ಉಂಡೆಗಳನ್ನು ಮಾಡಿಕೊಳ್ಳಿ. ಮಣೆಯ ಮೇಲೆ ತುಪ್ಪ ಅಥವಾ ಎಣ್ಣೆ ಸವರಿ ರೊಟ್ಟಿ ತಯಾರಿಸಿಕೊಂಡು ಗಟ್ಟಿಯಿಲ್ಲದಂತೆ ಮೃದುವಾಗಿ ಬೇಯಿಸಿ.

ಇನ್ನೊಂದು ಪಾತ್ರೆಯಲ್ಲಿ ಬೆಲ್ಲದ ಅಂಟು ಪಾಕ ಬರುವಂತೆ ತಯಾರಿಸಿಕೊಳ್ಳಿ. ಅದಕ್ಕೆ ಹುರಿದು ಪುಡಿಮಾಡಿದ ಎಳ್ಳು, ಗಸಗಸೆ, ಎಲಕ್ಕಿ, ಕೊಬ್ಬರಿಪುಡಿ ಬೆರಸಿ. ಇದಕ್ಕೆ ಮೃದುವಾದ ರೊಟ್ಟಿಯ ಚೂರುಗಳನ್ನು ಸೇರಿಸಿ ಒಂದು ಗಂಟೆಯ ಕಾಲ ನೆನೆಯಲು ಬಿಡಿ. ನಂತರ ಇದಕ್ಕೆ ಕಾಯಿ ಹಾಲು ಸೇರಿಸಿ ಸವಿಯಿರಿ.

**

ಹಾಲುಗಡಬು

ಬೇಕಾಗುವ ಸಾಮಗ್ರಿಗಳು: ಅಕ್ಕಿ – 1ಪಾವು, ಬೆಲ್ಲ – 1,1/2ಪಾವು, ಕಾಯಿ ತುರಿ ಸ್ವಲ್ಪ.

ತಯಾರಿಸುವ ವಿಧಾನ:ಅಕ್ಕಿಯನ್ನು 3 ಗಂಟೆಗಳ ಕಾಲ ನೆನಸಿ ಸ್ವಲ್ಪ ಕಾಯಿ ತುರಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಬೆಲ್ಲವನ್ನು ಕರಗಿಸಿ, ಸೋಸಿದ ನಂತರ ಅದು ಅಂಟು ಪಾಕ ಬಂದಾಗ ಅದಕ್ಕೆ ರುಬ್ಬಿಕೊಂಡ ಹಿಟ್ಟನ್ನು ಸೇರಿಸಿ. ಅದು ತಳ ಹಿಡಿಯದಂತೆ ಸಣ್ಣ ಉರಿಯಲ್ಲಿ ಕೈಯಾಡುತ್ತಿರಬೇಕು. ಬೇಕಾದರೆ ಸ್ವಲ್ಪ ಬಿಸಿ ನೀರು ಸೇರಿಸಿಕೊಳ್ಳಬಹುದು.

ಬೆಂದ ಹಿಟ್ಟು ಪಾತ್ರೆಗೆ ಅಂಟಿಕೊಳ್ಳದೆ ಗಟ್ಟಿಯಾಗುವ ಹದಕ್ಕೆ ಬರುತ್ತದೆ. ಹದವನ್ನು ಪರಿಕ್ಷೀಸಲು ಸ್ವಲ್ಪ ನೀರಿಗೆ ಹಿಟ್ಟಿನ ಹನಿಗಳನ್ನು ಬಿಟ್ಟಾಗ ಅದು ಗಟ್ಟಿಯಾಗೆ ಇದ್ದರೆ, ಹದಕ್ಕೆ ಬಂದಿದೆ ಎಂದು ತಿಳಿದು ತುಪ್ಪ ಸವರಿದ ತಟ್ಟೆಗೆ ಹರಡಿ. ಅದಕ್ಕೆ ಗೋಡಂಬಿ ಚೂರುಗಳು, ಕೊಬ್ಬರಿ ತುರಿಯಿಂದ ಅಲಂಕರಿಸಿ. ಕಾಯಿಹಾಲು-ತುಪ್ಪದೊಂದಿಗೆ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.