ADVERTISEMENT

ತಗತೆಯ ಒಗರಿಗೆ ರುಚಿಯ ಒಗ್ಗರಣೆ

ರುಕ್ಮಿಣಿಮಾಲಾ
Published 19 ಅಕ್ಟೋಬರ್ 2018, 19:30 IST
Last Updated 19 ಅಕ್ಟೋಬರ್ 2018, 19:30 IST
ತಗತೆಸೊಪ್ಪಿನ ದೋಸೆ
ತಗತೆಸೊಪ್ಪಿನ ದೋಸೆ   

ತಗತೆ ಎಂದರೆ, ಚಗತೆಸೊಪ್ಪು ಮಳೆಗಾಲದ ಪ್ರಾರಂಭದಲ್ಲಿ ಖಾಲಿಸೈಟಿನಲ್ಲೋ ರಸ್ತೆಬದಿಯಲ್ಲೋ ಸಮೃದ್ಧವಾಗಿ ತಾನಾಗಿಯೇ ಬೆಳೆಯುತ್ತದೆ. ವರ್ಷಕ್ಕೊಮ್ಮೆ ಮಾತ್ರ ಅದರ ಉಪಯೋಗ. ಸೊಪ್ಪು ಹೆಚ್ಚು ಬಲಿತಿರಬಾರದು. ಹೂ ಬರುವ ಮೊದಲೇ ಎಳೆಯಸೊಪ್ಪು ಕೊಯ್ಯಬೇಕು. ಇದರ ರುಚಿ ತುಸು ಒಗರಿನಿಂದ ಕೂಡಿರುತ್ತದೆ. ಈ ಸೊಪ್ಪಿನಿಂದ ರುಚಿಕರವಾದ ಹಲವು ತಿಂಡಿಗಳನ್ನು ಮಾಡುವ ವಿಧಾನವನ್ನು ಇಲ್ಲಿ ತಿಳಿಸಿದ್ದಾರೆ ರುಕ್ಮಿಣಿಮಾಲಾ...

ತಗತೆಸೊಪ್ಪಿನ ದೋಸೆ
ಬೇಕಾಗುವ ಸಾಮಗ್ರಿಗಳು: 2 ಪಾವು ಬೆಳ್ತಿಗೆ ಅಕ್ಕಿ, 2 ಮುಷ್ಟಿಯಷ್ಟು ತಗತೆಸೊಪ್ಪು, ಒಂದು ಚಮಚ ಜೀರಿಗೆ, ಒಂದು ಚಮಚ ಮೆಂತ್ಯೆ, ನಾಲ್ಕು ಒಣಮೆಣಸಿನ ಕಾಯಿ, 2 ಚಮಚ ಕೊತ್ತಂಬರಿ, ಚಿಟಿಕೆ ಅರಶಿಣಪುಡಿ


ತಯಾರಿಸುವ ವಿಧಾನ: ಅಕ್ಕಿ ಜೊತೆಗೆ ಮಸಾಲೆ ಸಾಮಗ್ರಿಗಳನ್ನು ನೀರಿನಲ್ಲಿ ಮೂರುಗಂಟೆ ನೆನೆಸಿಡಿ. ತಗತೆಸೊಪ್ಪನ್ನು ತೊಳೆದು ಅಕ್ಕಿಯೊಂದಿಗೆ ಸೇರಿಸಿ, ಮಸಾಲೆ ಸಾಮಾನುಗಳೊಂದಿಗೆ ಅರಸಿಣಪುಡಿ ಹಾಕಿ ನುಣ್ಣಗೆ ರುಬ್ಬಿರಿ. ರುಬ್ಬಿದ ಹಿಟ್ಟಿಗೆ ನೀರು ಹಾಕಿರಿ. ಈ ಹಿಟ್ಟು ತೆಳುದೋಸೆಗಿಂತ ಸ್ವಲ್ಪ ಮಂದವಾಗಿದ್ದರೆ ಸಾಕು. ಬಿಸಿ ಕಾವಲಿಗೆಗೆ ಒಂದು ಸೌಟಿನಷ್ಟು ಹಿಟ್ಟು ಹಾಕಿ ಹರಡಿ. ಹರಡಲು ಬರದಿದ್ದರೆ ತೆಳು ದೋಸೆ ತಯಾರಿಸುವಂತೆ ಹಿಟ್ಟು ಎರಚಿ. ದೋಸೆ ಎರಡೂ ಕಡೆ ಬೇಯಿಸಿ ತೆಗೆಯಿರಿ. ಹಸುರಾದ ದೋಸೆ ತಿನ್ನಲು ಚೆನ್ನಾಗಿರುತ್ತದೆ.

ADVERTISEMENT

ತಗತೆಸೊಪ್ಪಿನ ಸಾರು
ಬೇಕಾಗುವ ಸಾಮಗ್ರಿಗಳು: ತಗತೆಸೊಪ್ಪು ಒಂದು ಮುಷ್ಟಿಯಷ್ಟು, ಜೀರಿಗೆ ಒಂದು ಚಮಚ, ಕೊತ್ತಂಬರಿ ಒಂದು ಚಮಚ, ಮೆಂತ್ಯ ಅರ್ಧ ಚಮಚ, ಒಣಮೆಣಸಿನಕಾಯಿ ಎರಡು, ಚಿಟಿಕೆ ಇಂಗು, ಹುಣಸೆಹಣ್ಣು ಅಥವಾ 2 ಟೊಮೆಟೊ.


ತಯಾರಿಸುವ ವಿಧಾನ: ತಗತೆಸೊಪ್ಪನ್ನು ತೊಳೆದು ಹೆಚ್ಚಿ ತುಪ್ಪದಲ್ಲಿ ಬಾಡಿಸಿ. ಮಸಾಲೆಸಾಮಗ್ರಿಗಳನ್ನು ಹುರಿದು ಬಾಡಿಸಿದ ತಗತೆಸೊಪ್ಪಿಗೆ ಟೊಮೆಟೊ ಅಥವಾ ಹುಣಸೆಹಣ್ಣು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ಪಾತ್ರೆಗೆ ಹಾಕಿ ಬೇಕಾದಷ್ಟು ನೀರು–ಉಪ್ಪನ್ನು ಹಾಕಿ ಕುದಿಸಿ. ಅನ್ನದೊಂದಿಗೆ ಒಗರು ರುಚಿಯ ಖಡಕ್ ಸಾರು ಸೇರಿಸಿ ಚಪ್ಪರಿಸಿ ಹೊಡೆಯಿರಿ!

ತಗತೆಸೊಪ್ಪಿನ ತಂಬ್ಳಿ
ಬೇಕಾಗುವ ಸಾಮಾನುಗಳು: ಒಂದು ಹಿಡಿ ತಗತೆಸೊಪ್ಪು, ಒಂದು ಚಮಚ ಜೀರಿಗೆ, ಕಾಳುಮೆಣಸು ಸ್ವಲ್ಪ, ಒಂದು ಚಮಚ ತುಪ್ಪ, ಸ್ವಲ್ಪ ಕಾಯಿತುರಿ


ತಯಾರಿಸುವ ವಿಧಾನ: ಬಾಣಲೆಗೆ ತುಪ್ಪ ಹಾಕಿ ಜೀರಿಗೆ ಕಾಳುಮೆಣಸು ಹಾಕಿ ಹುರಿದು ಅದಕ್ಕೆ ತಗತೆಸೊಪ್ಪನ್ನು ಹಾಕಿ ಬಾಡಿಸಿ ಕಾಯಿತುರಿಯೊಂದಿಗೆ ಸೇರಿಸಿ ನುಣ್ಣಗೆ ರುಬ್ಬಿ ತೆಗೆದು ಸ್ವಲ್ಪ ಮೊಸರು ಅಥವಾ ಮಜ್ಜಿಗೆ ಹಾಕಿ ಒಗ್ಗರಣೆ ಕೊಡಿ.

ತಗತೆಸೊಪ್ಪಿನ ಪತ್ರೊಡೆ
ಬೇಕಾಗುವ ಸಾಮಗ್ರಿಗಳು: ಅರ್ಧಕಿಲೊ ಬೆಳ್ತಿಗೆ ಅಕ್ಕಿ, ಒಂದು ಚಮಚ ಜೀರಿಗೆ, ಒಂದು ಚಮಚ ಮೆಂತ್ಯೆ, 3 ಚಮಚ ಕೊತ್ತಂಬರಿ, 4–5 ಬ್ಯಾಡಗಿಮೆಣಸು, ಗೋಲಿಗಾತ್ರದಷ್ಟು ಹುಣಸೆಹಣ್ಣು, ಒಂದು ಚಮಚ ಅರಶಿಣ, ಉಪ್ಪು, ನಾಲ್ಕುಮುಷ್ಟಿಯಷ್ಟು ತಗತೆಸೊಪ್ಪು.

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು ನಾಲ್ಕು ಗಂಟೆ ನೆನೆಸಿಡಿ. ಮೆಂತ್ಯೆ, ಕೊತ್ತಂಬರಿ, ಜೀರಿಗೆ, ಮೆಣಸು, ಹುಣಸೆಹುಳಿಯನ್ನೂ ಪ್ರತ್ಯೇಕ ನೆನೆಸಿಡಿ. ಎಳೆತಗತೆಸೊಪ್ಪನ್ನು ಕೊಯಿದು ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಮೊದಲಿಗೆ ನೆನೆಸಿಟ್ಟ ಸಾಂಬಾರು ಸಾಮಗ್ರಿಯನ್ನು ಮಿಕ್ಸಿಗೆ ಹಾಕಿ ಅರಶಿಣಪುಡಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ಅಗಲವಾದ ಪಾತ್ರೆಗೆ ಹಾಕಿಕೊಳ್ಳಿ. ಮತ್ತೆ ಅಕ್ಕಿಯನ್ನು ತರಿತರಿ ರುಬ್ಬಿ ಅದಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ಕಲಸಿದ ಹಿಟ್ಟಿಗೆ ತಗತೆಸೊಪ್ಪನ್ನು ಹಾಕಿ ಮತ್ತೊಮ್ಮೆ ಕಲಸಿ. ಹಿಟ್ಟು ನೀರಾಗಬಾರದು. ಹಿಟ್ಟನ್ನು ಇಡ್ಲಿ ತಟ್ಟೆಯಲ್ಲಿ ಅಥವಾ ಕುಕ್ಕರ್ ಪಾತ್ರೆಯಲ್ಲಿ ಹಾಕಿ ಉಗಿಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿ. ಅದನ್ನು ಚಟ್ನಿಯೊಂದಿಗೆ ತಿನ್ನಬಹುದು. ಇಲ್ಲವೆ ಹುಡಿ ಮಾಡಿ ಬೆಲ್ಲ ಕಾಯಿತುರಿಯೊಂದಿಗೆ ಬೆರೆಸಿ ಸವಿಯಬಹುದು. ಅಥವಾ ಕಾಯಿತುರಿ ಈರುಳ್ಳಿ ಒಗ್ಗರಣೆಯೊಡನೆ ಬೆರೆಸಿ ತಿನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.