ADVERTISEMENT

ರೊಟ್ಟಿ ಬಡಿಯೂದು ಹ್ಯಾಂಗ ಗೊತ್ತೇನ್ರಿ...

ಸುಮಾ ಬಿ.
Published 5 ಜುಲೈ 2025, 0:12 IST
Last Updated 5 ಜುಲೈ 2025, 0:12 IST
ಉಂಡೆ ತಯಾರಿಯಲ್ಲಿ ತ್ರಿವೇಣಿ ಪಾಟೀಲ್‌
ಉಂಡೆ ತಯಾರಿಯಲ್ಲಿ ತ್ರಿವೇಣಿ ಪಾಟೀಲ್‌   

ಜೋಳದ ರೊಟ್ಟಿ ತಿನ್ನಲು ಇಷ್ಟ. ಆದರೆ, ಮಾಡಲು ಹೆಚ್ಚಿನವರಿಗೆ ಕಷ್ಟ. ಹಿಟ್ಟು ಕಲಸಿಕೊಳ್ಳುವಾಗ ನೀರಿನ ಅಳತೆಯಲ್ಲಿ ತುಸು ವ್ಯತ್ಯಾಸವಾದರೂ ಲಟ್ಟಿಸುವಾಗ ಅರ್ಧಕ್ಕೇ ತುಂಡಾಗುತ್ತದೆ. ತೆಗೆದು ಬಿಸಾಡಬೇಕೆಂಬಷ್ಟು ರೇಜಿಗೆ ಹುಟ್ಟಿಸುತ್ತದೆ. ತೆಳ್ಳಗೆ, ರುಚಿರುಚಿಯಾದ ರೊಟ್ಟಿ ಬೇಕೆಂದರೆ ಮೊದಲು ಹಿಟ್ಟನ್ನು ಕಲಸುವ, ನಾದುವ ಹದ ಕರಗತವಾಗಬೇಕು. ಅಂತಹ ಹದವರಿತ ರೊಟ್ಟಿ ತಯಾರಿಯ ಕ್ರಮವನ್ನು ಸರಳವಾದ ಮಾದರಿಯಲ್ಲಿ ಹೇಳಿಕೊಡುತ್ತಾರೆ ತ್ರಿವೇಣಿ ಪಾಟೀಲ್‌.

‘ಉತ್ತರ ಕರ್ನಾಟಕ ರೆಸಿಪೀಸ್‌’ ಯೂಟ್ಯೂಬ್‌ ಚಾನೆಲ್‌ ಮೂಲಕ ರವಾ ಉಂಡಿ, ಬೇಸನ್‌ ಲಾಡು, ಮಾದ್ಲಿ, ಸಜ್ಜಕದ ಹೋಳಿಗೆ, ಶೇಂಗಾ ಹೋಳಿಗೆ... ಹೀಗೆ ರಾಜ್ಯದ ಉತ್ತರ ಭಾಗದ ದೇಸಿ ಸೊಗಡಿನ ತರಹೇವಾರಿ ಪಾಕಗಳ ರುಚಿವೈವಿಧ್ಯವನ್ನು 9 ವರ್ಷಗಳಿಂದಲೂ ಉಣಬಡಿಸುತ್ತಿದ್ದಾರೆ ಅವರು. 

‘ಜ್ವಾಳದ್‌ ರೊಟ್ಟಿ ಕೈಯಲ್ಲಿ ತಟ್ಟಿ ಮಾಡಿದ್ರ ಅದ್ರ ರುಚಿನೇ ಬ್ಯಾರೆ. ಈಗೆಲ್ಲ ಲಟ್ಟಣಿಗೆ ಬಂದಾವ್ರೀ. ಕೈಯಾಗ ತಟ್ಟೂದಂದ್ರ  ತುಸು ತ್ರಾಸಾಕತಿ, ಅಲ್ದೆ ಬಾಳೊತ್ತು ಬೇಕಾಕತಿ. ಈಗಿನ್‌ ಧಾವಂತದ್‌ ಬದ್ಕಿಗೆ ಲಟ್ಟಣಿಗೇನೆ ಛೊಲೊ. ಬೆಂಗ್ಳೂರಿಗ್‌ ಹೊಸ್ದಾಗಿ ಬಂದಾಗ ನಾ ರೊಟ್ಟಿ ಬಡಿಯೋ ಸದ್‌ ಕೇಳಿ ಆಜುಬಾಜಿನ್‌ ಮನೆಯವ್ರೆಲ್ಲ ನಮ್ಮನಿಗ್‌ ಬಂದ್‌ ಕೇಳ್ತಿದ್ರು ಏನದು ಸದ್ದು ಅಂತ. ಈಗ್ಲೂ ನಾ ರೊಟ್ಟಿನ ಬಡದೇ ಮಾಡ್ತೀನಿ’ ಎಂದು ನಗೆ ಬೀರುತ್ತಾರೆ ತ್ರಿವೇಣಿ.

ADVERTISEMENT

‘ನಮ್‌ ಅಡುಗೆಗಳ್ನ ಕರಾವಳಿ, ಮಲ್ನಾಡ್‌ ಮಂದಿನೂ ಇಷ್ಟಪಟ್ ಮಾಡ್ತಾರ್‍ರಿ. ಅವ್ರು ಕಳಿಸೊ ಕಾಮೆಂಟ್‌ ನೋಡಿ ಖುಷಿ ಆಗ್ತೇತಿ. ನಮ್ಮ ಭಾಗದ ಊಟದ್ ರುಚಿ ಎಲ್ಲರಿಗೂ ಹಂಚಿದ್‌ ತೃಪ್ತಿ ಐತ್ರಿ’ ಎನ್ನುತ್ತಾರೆ.

ಜೋಳದ ರೊಟ್ಟಿಗೆ ಎಣ್ಣೆಗಾಯಿ ಪಲ್ಯ, ಕೊರೆದಿಟ್ಟ ಜುಣುಕ, ಸಿಹಿಗೊಂದಷ್ಟು ಮಾದ್ಲಿ, ಖಾರಕ್ಕೊಂದು ತುಂಬಿದ್‌ ಮೆಣಸಿನಕಾಯಿ, ಮತ್ತೆ ಮತ್ತೆ ಮೆಲ್ಲಬೇಕೆನಿಸುವ ಚೂಡಾ, ಬಾಯಲ್ಲಿ ನೀರೂರಿಸುವ ಮಿರ್ಚಿ ಬಜ್ಜಿ... ಆಹಾ... ಈ ಸ್ವಾದಿಷ್ಟ ತಿನಿಸುಗಳ ಘಮ ಈಗ ಈ ಭಾಗಕ್ಕಷ್ಟೇ ಸೀಮಿತವಾಗಿಲ್ಲ. ಪ್ರಾದೇಶಿಕ ಭೇದವಿಲ್ಲದೆ ಎಲ್ಲರ ಅಡುಗೆಮನೆಗಳಲ್ಲೂ ಅವು ಮೆರೆಯತೊಡಗಿವೆ.

‘ಗಂಡು ಮೆಟ್ಟಿನ’ ನಾಡಿನ ಪಾಕಗಳ ನಾಡಿಮಿಡಿತವನ್ನು ಅರಿತಿರುವ ತ್ರಿವೇಣಿ, ತಮ್ಮ ಧಾರವಾಡ ಕನ್ನಡದ ಶೈಲಿಯಿಂದಲೇ ಅಸಂಖ್ಯಾತರನ್ನು ಸೆಳೆದಿದ್ದಾರೆ. ‘ಸಿಲಿಕಾನ್‌ ಸಿಟಿ’ಯಲ್ಲಿ ವಾಸ್ತವ್ಯವಿದ್ದರೂ ಭಾಷಾ ಸೊಗಡನ್ನು ಕಾಪಿಟ್ಟುಕೊಂಡಿರುವ ಅವರು, ಆರೋಗ್ಯಕರ ಆಹಾರಗಳ ಪಾಠ ಹೇಳಿಕೊಡುತ್ತಿದ್ದಾರೆ. ತಮ್ಮ ಚಾನೆಲ್‌ನಲ್ಲಿರುವ ಸ್ವವಿವರದಲ್ಲಿ, ಆರೋಗ್ಯ ಕಾಯ್ದುಕೊಳ್ಳುವಲ್ಲಿ ಆಹಾರ ವಹಿಸುವ ಪ್ರಮುಖ ಪಾತ್ರದ ವಿವರಣೆಗೇ ಹೆಚ್ಚು ಒತ್ತು ನೀಡಿರುವುದು ಅವರ ಈ ಕಾಳಜಿಗೆ ಪೂರಕವಾಗಿಯೇ ಇದೆ.

ಅಡುಗೆ ಮಾಡುವುದೆಂದರೆ ಮೊದಲಿನಿಂದಲೂ ತ್ರಿವೇಣಿ ಅವರಿಗೆ ತುಂಬು ಪ್ರೀತಿ. ಅವಿಭಕ್ತ ಕುಟುಂಬದಿಂದ ಬಂದಿರುವ ಅವರು, 8ನೇ ತರಗತಿಯಲ್ಲಿ ಇದ್ದಾಗಲೇ ಜೋಳದ ರೊಟ್ಟಿಯನ್ನು ಹದವಾಗಿ ಬಡಿದು ಮನೆಯವರ ಹುಬ್ಬೇರಿಸಿದ್ದರು. ಈವರೆಗೆ 1,400ಕ್ಕೂ ಹೆಚ್ಚು ವೈವಿಧ್ಯಮಯ ಪಾಕಗಳು ಈ ಯೂಟ್ಯೂಬ್‌ ಚಾನೆಲ್‌ ಒಡತಿಯ ಹೆಸರಿನಲ್ಲಿ ದಾಖಲಾಗಿವೆ.

ಪೌಷ್ಟಿಕಾಂಶಯುಕ್ತ ಜೋಳ ಸಿರಿಧಾನ್ಯಗಳ ಸಾಲಿಗೆ ಸೇರುತ್ತದೆ. ಉತ್ತರ ಕರ್ನಾಟಕದ ಆಹಾರ ಕ್ರಮದಲ್ಲಿ ರಾಜನಂತೆ ಮೆರೆಯುವ ಇದು, ವೈವಿಧ್ಯಮಯ ಪಾಕ ಪ್ರಯೋಗಗಳಿಗೆ ತೆರೆದುಕೊಂಡಿದೆ. ಎಲ್ಲ ಬಗೆಯ ಪಾಕಗಳಲ್ಲೂ ರುಚಿಯ ಸವಿಯನ್ನು ಹತ್ತಿಸುವ ಜೋಳ, ತ್ರಿವೇಣಿ ಅವರ ಪಾಕಶಾಲೆಯಲ್ಲೂ ಹಲವು ಪ್ರಯೋಗಗಳಿಗೆ ಒಡ್ಡಿಕೊಂಡಿದೆ. ಜೋಳದ ವಡೆ, ಮಸಾಲ ರೊಟ್ಟಿ, ಚಕ್ಕುಲಿ, ಜೋಳದ ನುಚ್ಚು, ಹುಳಿ ನುಚ್ಚು, ಸಪ್ಪನ ನುಚ್ಚು, ಮುದ್ದೆ, ತಾಲಿಪೆಟ್ಟು, ಜೋಳದ ಅಂಬಲಿ, ಬಾನ ಬುತ್ತಿ, ಕಿಚಡಿ, ಉಪ್ಪಿಟ್ಟು... ಹೀಗೆ ಜೋಳದ ತರಹೇವಾರಿ ರೆಸಿಪಿಗಳು ಆರೋಗ್ಯದ ಅಭಿಲಾಷೆ ಮತ್ತು ಬಾಯಿರುಚಿ ಎರಡನ್ನೂ ತಣಿಸುತ್ತವೆ.

ಅಕ್ಕಿಹಿಟ್ಟು, ಕಡಲೆಹಿಟ್ಟು, ಗೋಧಿಹಿಟ್ಟು ಬೆರೆಸಿ, ಮಸಾಲೆ ಹಾಕಿ ಮಾಡುವ ‘ಧಪಾಟಿ’, ಗಟ್ಟಿ ಬ್ಯಾಳಿ, ಬಗೆಬಗೆಯ ಚಟ್ನಿಪುಡಿ, ಎಣ್ಣೆಯಲ್ಲಿ ಕರಿದು ಮಾಡುವ ಸಿಹಿ ಗಾರ್ಗಿ, ಸಿಹಿಪಾಕ, ಬಾಯಲ್ಲಿ ನೀರೂರಿಸುವ ಉಂಡಿ, ಸಂಜೆ ವೇಳೆ ಚಹಾದೊಂದಿಗೆ ಸವಿಯಲು ಇಷ್ಟವಾಗುವ ನರ್ಗೀಸ್‌ ಮಂಡಕ್ಕಿ, ಮಿರ್ಚಿ, ಬಾಯಲ್ಲಿಟ್ಟರೆ ಕರಗುವ ಶಂಕರಪೋಳಿ, ಹುಳಿ ಅವಲಕ್ಕಿ... ನೋಡನೋಡುತ್ತಾ ಈಗಲೇ ಮಾಡಿ ತಿಂದುಬಿಡಬೇಕೆನ್ನಿಸುವ ಭಾವ ಸ್ಫುರಿಸುತ್ತವೆ.

ಹಪ್ಪಳ ತಯಾರಿಯಲ್ಲಿ ತ್ರಿವೇಣಿ ಪಾಟೀಲ್‌

ಹೀಗೆ ಮಾಡಿ...

ಅಡುಗೆ ಮಾಡುವಾಗ, ವಿಶೇಷ ಖಾದ್ಯ ತಯಾರಿಸುವಾಗ ಅನುಸರಿಸಬೇಕಾದ ಕೆಲವು ಟಿಪ್ಸ್‌ಗಳನ್ನು ನೀಡಿದ್ದಾರೆ ತ್ರಿವೇಣಿ.

* ಜೋಳದ ರೊಟ್ಟಿ ಚೆನ್ನಾಗಿ ಬರಬೇಕು ಎಂದರೆ ನೀರನ್ನು ಚೆನ್ನಾಗಿ ಕುದಿಸಬೇಕು. ಕುದಿಯುವ ನೀರಿಗೆ ಹಿಟ್ಟು ಹಾಕಿ ಜಿಗುಟ್‌ ಮಾಡಿಕೊಳ್ಳಬೇಕು.

* ಸಿಹಿ ಖಾದ್ಯ ತಯಾರಿಸುವಾಗ ಹಿಟ್ಟು, ಡ್ರೈಫ್ರೂಟ್ಸ್‌, ಇತರ ಪದಾರ್ಥಗಳನ್ನು ಸಣ್ಣ ಉರಿಯಲ್ಲೇ ಹುರಿದುಕೊಳ್ಳಬೇಕು. ಸಮಯವಿಲ್ಲ ಎಂದು ದೊಡ್ಡ ಉರಿಯಲ್ಲಿ ಹುರಿದರೆ ಖಾದ್ಯ ಬೇಗ ಕೆಡುವ ಸಾಧ್ಯತೆ ಹೆಚ್ಚು.

* ಎಣ್ಣೆಗಾಯಿ ಪಲ್ಯ ಮಾಡುವಾಗ ಬಳಸುವ ಉಚ್ಚೆಳ್ಳುಪುಡಿ, ಶೇಂಗಾಪುಡಿಯನ್ನು ತಿಂಗಳಿಗೆ ಆಗುವಷ್ಟು ಮೊದಲೇ ತಯಾರಿಸಿ ಇಟ್ಟುಕೊಂಡರೆ ಪಲ್ಯಗಳನ್ನು ಕಡಿಮೆ ಸಮಯದಲ್ಲಿ ಮಾಡಲು ನೆರವಾಗುತ್ತದೆ.

* ಸಾಂಬಾರು ಅಥವಾ ಪಲ್ಯಕ್ಕೆ ಉಪ್ಪು ತುಸು ಹೆಚ್ಚಿಗೆ ಬಿದ್ದರೆ ಆಲೂಗಡ್ಡೆಯನ್ನು ಕತ್ತರಿಸಿ ಅದರಲ್ಲಿ ಹಾಕಬೇಕು. ಆಲೂಗಡ್ಡೆಯು ಉಪ್ಪಿನ ಅಂಶವನ್ನು ಹೀರಿಕೊಳ್ಳುತ್ತದೆ.

‘ರಾಗುದಾಸ್‌’ ಗೊತ್ತೇ?

ಹುಬ್ಬಳ್ಳಿ– ಧಾರವಾಡದ ವಿಶೇಷ ಖಾದ್ಯ ‘ರಾಗುದಾಸ್‌’ ಸಿಹಿಪ್ರಿಯರ ಬಾಯಲ್ಲಿ ನೀರೂರಿಸುತ್ತದೆ. ಈ ಭಾಗದಲ್ಲಿ ಪಂಚಮಿ ಹಬ್ಬದ ಸಮಯದಲ್ಲಿ ತಯಾರಿಸುವ ರಾಗುದಾಸ್‌ ಮಹಾರಾಷ್ಟ್ರದ ಅಡುಗೆ ಮನೆಗಳಲ್ಲಿ ದೀಪಾವಳಿ ಹಬ್ಬದ ವೇಳೆಗೆ ಹಾಜರಾಗುತ್ತದೆ. ಕಡಿಮೆ ಪದಾರ್ಥಗಳನ್ನು ಬಳಸಿ ಸುಲಭವಾಗಿ ಇದನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿ ಒಂದು ಕಪ್‌ ಮೀಡಿಯಂ ರವೆ ಅರ್ಧ ಕಪ್‌ ಕಡಲೆಹಿಟ್ಟು ಅರ್ಧ ಕಪ್‌ ತುಪ್ಪ ಒಂದು ಕಪ್‌ ಸಕ್ಕರೆ (ಸಕ್ಕರೆ ಬದಲು ಬೆಲ್ಲವನ್ನೂ ಬಳಸಬಹುದು) ಸ್ವಲ್ಪ ಗೋಡಂಬಿ ಬಾದಾಮಿ ಒಣದ್ರಾಕ್ಷಿ ಒಣಕೊಬ್ಬರಿ. ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಒಣಹಣ್ಣುಗಳನ್ನು ಹುರಿದು ತೆಗೆದಿಟ್ಟುಕೊಳ್ಳಬೇಕು. ಆ ಪಾತ್ರೆಯಲ್ಲಿ ಉಳಿದ ತುಪ್ಪದಲ್ಲಿ ಕಡಲೆಹಿಟ್ಟು ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಬೇಕು. ನಂತರ ಅದಕ್ಕೆ ರವೆ ಸೇರಿಸಿ ಹುರಿಯಬೇಕು. ಬಳಿಕ ಒಣಕೊಬ್ಬರಿ ಹಾಕಿ ಕೈಯಾಡಿಸಬೇಕು. ಹುರಿದದ್ದನ್ನು ಪಕ್ಕಕ್ಕೆ ಎತ್ತಿಟ್ಟು ಸಕ್ಕರೆ ಪಾಕ ಮಾಡಿಕೊಳ್ಳಬೇಕು. ಗಟ್ಟಿ ಪಾಕ ಬರುವವರೆಗೂ ಸಕ್ಕರೆಯನ್ನು ಕುದಿಸಬೇಕು. ಈ ಪಾಕಕ್ಕೆ ಹುರಿದುಕೊಂಡಿರುವ ಮಿಶ್ರಣವನ್ನು ಹಾಕಿ ಕೈಬಿಡದೆ ತಿರುಗಿಸಬೇಕು. ಆಗ ಹುಡಿಹುಡಿಯಾದ ರಾಗುದಾಸ್‌ ತಯಾರಾಗುತ್ತದೆ. ಅದಕ್ಕೆ ಒಣಹಣ್ಣುಗಳನ್ನು ಬೆರೆಸಿ ಸವಿಯಬಹುದು. ಸಕ್ಕರೆ ಪಾಕ ಸರಿಯಾದ ಕ್ರಮದಲ್ಲಿ ಬಂದರೆ ಮಾತ್ರ ರಾಗುದಾಸ್‌ ರುಚಿಕಟ್ಟಾಗಿರುತ್ತದೆ ಎಂಬುದನ್ನು ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.