ADVERTISEMENT

ಅನಿಯಮಿತ ಋತುಚಕ್ರ ವೈವಿಧ್ಯ

ಅಂಕುರ 87

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2016, 19:30 IST
Last Updated 4 ಮಾರ್ಚ್ 2016, 19:30 IST
ಅನಿಯಮಿತ ಋತುಚಕ್ರ ವೈವಿಧ್ಯ
ಅನಿಯಮಿತ ಋತುಚಕ್ರ ವೈವಿಧ್ಯ   

ಒಂದೊಂದು ಬಗೆಯ ಅನಿಯಮಿತ ಋತುಚಕ್ರಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಬೇರೆ ಬೇರೆ ಹೆಸರಿನಿಂದ ಗುರುತಿಸಲಾಗುತ್ತದೆ.
ಅನಿಯಮಿತ ಋತುಸ್ರಾವ (Irreg-MB)ಒಂದು ಋತುಚಕ್ರದಲ್ಲಿ 20 ದಿನಗಳಿಗಿಂತ ಹೆಚ್ಚು ಸ್ರಾವವಾಗುತ್ತಿದ್ದಲ್ಲಿ... ಮತ್ತು ಇಂಥದ್ದೇ ಋತು ಚಕ್ರ ಒಂದು ವರ್ಷದವರೆಗೆ ಮುಂದುವರಿದಲ್ಲಿ.. ಋತುಸ್ರಾವವಾಗದೇ ಇರುವುದು (ಅಮೆನ್ಹೊರಿಯಾ): 90 ದಿನಗಳ ಅವಧಿಯಲ್ಲಿ ಸ್ರಾವವಾಗದೇ ಇರುವುದು.

ಅತಿಯಾದ ರಕ್ತ ಸ್ರಾವ (HMB): ಅತಿಯಾದ ಸ್ರಾವವು ಮಹಿಳೆಯ ದೈಹಿಕ, ಭಾವನಾತ್ಮಕ ಹಾಗೂ ಸಾಮಾಜಿಕವಾಗಿಯೂ ಆತಂಕಗಳನ್ನು ಸೃಷ್ಟಿಸುತ್ತದೆ. ಇದಲ್ಲದೆ ಅತಿಯಾದ ಸ್ರಾವದಿಂದ ಇನ್ನಿತರ ದೈಹಿಕ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

ಅತಿಯಾದ ಮತ್ತು ಅತಿ ದೀರ್ಘಸ್ರಾವ: ಎಚ್ಎಂಬಿಗಿಂತ ಇದು ವಿರಳವಾಗಿ ಕಾಣಿಸಿಕೊಳ್ಳುತ್ತದೆ. ಸಾಕಷ್ಟು ಸ್ರಾವದೊಂದಿಗೆ ಸುದೀರ್ಘ ಚಕ್ರ ಇದಾಗಿರುತ್ತದೆ. ಹಲವಾರು ಪೂರಕ ಚಿಕಿತ್ಸೆಗಳಿಗೆ ಈ ಸಮಸ್ಯೆ ಹೊಂದಿರುವವರು ಸ್ಪಂದಿಸುತ್ತಾರೆ.

ಅತಿಕಡಿಮೆ ಸ್ರಾವ: ಇದು ಸಾಮಾನ್ಯವಾಗಿ ರೋಗಿಗಳ ದೂರು ಆಗಿರುತ್ತದೆ. ಕಡಿಮೆ ಸ್ರಾವಕ್ಕೆ ದೈಹಿಕ ಕಾರಣಗಳು ಮುಖ್ಯ ಆಗಿರುತ್ತವೆ.
ಈ ಎಲ್ಲ ಅನಿಯಮಿತ ಋತುಚಕ್ರಗಳಿಗೆ ಚಿಕಿತ್ಸೆಯ ಅಗತ್ಯವಿದೆಯೇ?

ಮುಂದೆ ಮಕ್ಕಳಾಗುವಲ್ಲಿ ಯಾವುದೇ ತೊಂದರೆಗಳಾಗದಿರಲಿ ಎಂಬ ಬಯಕೆ ಇದ್ದಲ್ಲಿ ಖಂಡಿತವಾಗಿಯೂ ಚಿಕಿತ್ಸೆಯ ಅಗತ್ಯವಿದೆ. ಮಕ್ಕಳಾದ ನಂತರ ಈ ಸಮಸ್ಯೆ ಕಂಡು ಬಂದಲ್ಲಿಯೂ ವೈದ್ಯರೊಂದಿಗೆ ಸಮಾಲೋಚಿಸುವುದು ಅತ್ಯಗತ್ಯ. ಈ ಅನಿಯಮಿತ ಋತುಚಕ್ರಕ್ಕೆ ಹಲವಾರು ಕಾರಣಗಳಿರುತ್ತವೆ. ನಿಮ್ಮ ದೇಹದಲ್ಲಿ ಈಸ್ಟ್ರೊಜನ್‌ ಮತ್ತು ಪ್ರೊಜೆಸ್ಟರಾನ್‌ ಹಾರ್ಮೋನುಗಳ ಮಟ್ಟವೂ ನಿಮ್ಮ ಋತುಚಕ್ರವನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಋತುಮತಿಯಾದ ಹುಡುಗಿಯರು ಹಾಗೂ ಋತುಬಂಧವಾಗುತ್ತಿರುವ ಮಹಿಳೆಯರಲ್ಲಿ ಈ ಸಮಸ್ಯೆಗಳು ಕಂಡು ಬರುತ್ತವೆ.

ಇವೆಲ್ಲವೂ ಅನಿಯಮಿತ ಋತುಚಕ್ರದ ಸಾಮಾನ್ಯ ಕಾರಣ. ಇವಲ್ಲದೇ ಇನ್ನಷ್ಟು ಕಾರಣಗಳನ್ನೂ ಪಟ್ಟಿಮಾಡಬಹುದು. ಗರ್ಭನಿರೋಧಕ ಮಾತ್ರೆಗಳ ಬದಲಾವಣೆ ಅಥವಾ ಮತ್ತಿತರ ಔಷಧಿಗಳ ಸೇವನೆ ಅತಿಯಾದ ವ್ಯಾಯಾಮ, ಅಂಡಾಶಯದ ಸಮಸ್ಯೆ, ಗರ್ಭಾವಸ್ಥೆ ಅಥವಾ ಮಗುವಿಗೆ ಹಾಲುಣಿಸುವ ಸಮಯ, ಒತ್ತಡ, ಥೈರಾಯ್ಡ್‌ನ ಅತಿಹೆಚ್ಚು ಸ್ರವಿಸುವಿಕೆ ಅಥವಾ ಹೈಪರ್ ಥೈರಾಯ್ಡಿಸಂನ ಲಕ್ಷಣ, ಗರ್ಭಾಶಯದಲ್ಲಿ ಗಂಟುಗಳು... ಗರ್ಭಾಶಯದೊಳಗಿನ ಪದರು ಹಾನಿಗೊಳಗಾಗಿದ್ದರೆ... ಇವೆಲ್ಲ ಕಾರಣಗಳಿಂದಲೂ ಅನಿಯಮಿತ ಋತುಚಕ್ರ ಕಾಣಿಸಿಕೊಳ್ಳುತ್ತದೆ.

ಅನಿಯಮಿತ ಋತುಚಕ್ರದ ಚಿಕಿತ್ಸೆ ಹೇಗೆ?
ಸಾಮಾನ್ಯವಾಗಿ ಋತುಮತಿಯಾಗಿರುವ ಹುಡುಗಿಯರಲ್ಲಿ ಮೊದಲೊಂದು ವರ್ಷ ಅನಿಯಮಿತ ಋತುಚಕ್ರ ಕಾಣಿಸಿಕೊಳ್ಳಬಹುದು. ಹಾಗೆಯೇ ಋತುಬಂಧದ ಸಮಯದಲ್ಲಿಯೂ ಮೊದಲ ಒಂದೆರಡು ವರ್ಷಗಳಲ್ಲಿ ಈ ಸಮಸ್ಯೆ ತಲೆದೋರಬಹುದು. ಈ ಎರಡೂ ಸನ್ನಿವೇಶಗಳಲ್ಲಿ ನಿಮ್ಮ ಬದುಕಿಗೆ ಯಾವುದೋ ತೊಂದರೆ ಕಾಣಿಸಿಕೊಳ್ಳದಿದ್ದರೆ ಅಥವಾ ದೈಹಿಕವಾಗಿ ಯಾವುದೇ ಸಮಸ್ಯೆಗಳಾಗದಿದ್ದರೆ ಅವಕ್ಕೆ ಚಿಕಿತ್ಸೆಯ ಅಗತ್ಯವಿಲ್ಲ. ಗರ್ಭಧಾರಣೆಯ ಸಮಯದಲ್ಲಿಯೂ ಈ ಸನ್ನಿವೇಶ ಎದುರಿಸಬಹುದು.

ನಿಮ್ಮ ಸಮಸ್ಯೆಗೆ ಅನುಗುಣವಾಗಿ ಚಿಕಿತ್ಸೆಯನ್ನು ನಿರ್ಣಯಿಸಲಾಗುತ್ತದೆ. ಗರ್ಭನಿರೋಧಕಗಳನ್ನು ಬದಲಿಸಲು ಸೂಚಿಸಬಹುದು. ಹಾರ್ಮೋನ್‌ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬಹುದು. ಜೀವನಶೈಲಿಯ ಬದಲಾವಣೆಗೆ ಶಿಫಾರಸ್ಸು ಮಾಡಬಹುದು. ತೂಕ ನಿಯಂತ್ರಿಸಲು ಹೇಳಬಹುದು. ಅಗತ್ಯವಿದ್ದವರಿಗೆ ಶಸ್ತ್ರಚಿಕಿತ್ಸೆಯನ್ನೂ ಕೈಗೊಳ್ಳಬಹುದು.

ಮಾಹಿತಿಗೆ ಸಂಪರ್ಕಿಸಿ: 18002084444.
info@manipalankur.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.