ADVERTISEMENT

ಅಯ್ಯೋ... ಹಲ್ಲು ನೋವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST
ಅಯ್ಯೋ...  ಹಲ್ಲು ನೋವು
ಅಯ್ಯೋ... ಹಲ್ಲು ನೋವು   

ಅನುಭವಿಸಿದವರಿಗಷ್ಟೇ ಗೊತ್ತು ಹಲ್ಲು ನೋವಿನ ಕಷ್ಟ. ಹಲ್ಲನ್ನು ಕಿತ್ತು ಹಾಕಿಬಿಡಬೇಕು ಎನ್ನುವಷ್ಟು ಹಿಂಸೆ ಅನುಭವಿಸಬೇಕಾಗುತ್ತದೆ. ಆದರೆ ನೋವು ಶಮನ ಆಗುವವರೆಗೂ ಹಲ್ಲನ್ನು ವೈದ್ಯರು ಕೀಳುವುದಿಲ್ಲ. ಇಂಥ ಸಂದರ್ಭದಲ್ಲಿ ಮನೆಯಲ್ಲೇ ಸಿಗುವ ಕೆಲವು ಸಾಮಗ್ರಿಗಳನ್ನು ಬಳಸಿ ನೋವನ್ನು ಉಪಶಮನ ಮಾಡಲು ಸಾಧ್ಯವಿದೆ.

ಅಂತಹ ಕೆಲವು ಔಷಧಗಳ ಬಗ್ಗೆ ಇಲ್ಲಿದೆ ಮಾಹಿತಿ:

ಐಸ್ ಕ್ಯೂಬ್
ಸುಮಾರು 15-20 ನಿಮಿಷ ಐಸ್ ಕ್ಯೂಬನ್ನು ಹಲ್ಲು ನೋವಿರುವ ಭಾಗದಲ್ಲಿ ದಿನಕ್ಕೆ 3 ರಿಂದ 4 ಬಾರಿ ಇರಿಸಿಕೊಳ್ಳಿ. ಇದು ಆ ಜಾಗವನ್ನು ಬೆಂಡಿನಂತೆ ಮಾಡಿ ನೋವು ಪರಿಹಾರಕ್ಕೆ ನೆರವಾಗುತ್ತದೆ.

ADVERTISEMENT

ವೆನಿಲ್ಲಾ ಎಣ್ಣೆ
ಒಂದು ಹತ್ತಿಯ ಉಂಡೆಗೆ 3-4 ಹನಿ ವೆನಿಲ್ಲಾ ಎಣ್ಣೆಯನ್ನು ಹಾಕಿ ಅದನ್ನು ನೋವಿರುವ ಹಲ್ಲು ಹಾಗೂ ಒಸಡಿನ ಮೇಲೆ ಇರಿಸಿ. ಸಾಧ್ಯವಾದರೆ ನೋವಿರುವ ಹಲ್ಲಿನ ಮೇಲೆ ಎಣ್ಣೆಯನ್ನು ನೇರವಾಗಿ ಹಾಕಿಕೊಳ್ಳಬಹುದು. ಇದರಿಂದ ತಾತ್ಕಾಲಿಕ ಉಪಶಮನಕ್ಕಿಂತಲೂ ಹೆಚ್ಚಾದ ಪರಿಹಾರ ಸಿಗುತ್ತದೆ.
ಕೆಮ್ಮಿನ ಸಿರಪ್
ಕೆಮ್ಮಿನ ಸಿರಪ್ಪಿನಲ್ಲಿ ಸ್ವಲ್ಪ ಪ್ರಮಾಣದ ಅನಸ್ತೇಷಿಯಾ ಇರುತ್ತದೆ. ಎರಡು ಹನಿಯನ್ನು ಬಾಯಿಗೆ ಹಾಕಿಕೊಳ್ಳಿ. ಇದರಿಂದ ಹಲ್ಲು ನೋವು ಸ್ವಲ್ಪ ಕಡಿಮೆಯಾಗುತ್ತದೆ.

ಹಸಿ ಈರುಳ್ಳಿ
>

ಹಸಿ ಈರುಳ್ಳಿಯಲ್ಲಿ ಹಲ್ಲು ನೋವು ಕಡಿಮೆ ಮಾಡುವ ಔಷಧೀಯ ಗುಣಗಳಿವೆ. ಸುಮಾರು 3-4 ನಿಮಿಷಗಳ ಕಾಲ ಈರುಳ್ಳಿಯನ್ನು ಜಗಿಯಬೇಕು. ಅದೂ ಕಷ್ಟವಾದರೆ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ನೋವಿರುವ ಹಲ್ಲಿನ ಮೇಲೆ ಇರಿಸಿಕೊಳ್ಳಿ. ಇದರಿಂದ ತಕ್ಕಮಟ್ಟಿಗೆ ನೋವು ಕಡಿಮೆ ಆಗುತ್ತದೆ.

ಗೋಧಿ ಹುಲ್ಲಿನ ರಸ

ಗೋಧಿ ಹುಲ್ಲು ಹಲವು ಕಾಯಿಲೆಗಳ ವಾಸಿಗೆ ರಾಮಬಾಣ. ಈ ಹುಲ್ಲಿನ ರಸ ಒಸಡು ನೋವಿಗೆ ದಿವ್ಯ ಔಷಧ. ಇದು ಹಲ್ಲಿನ ನೋವನ್ನು ತೆಗೆದು ಹಾಕುವುದು ಮಾತ್ರವಲ್ಲದೆ ಬ್ಯಾಕ್ಟೀರಿಯಾಗಳನ್ನೂ ತೊಲಗಿಸುತ್ತದೆ.

ಬೆಳ್ಳುಳ್ಳಿ-ಲವಂಗದೆಣ್ಣೆ

ಆಯುರ್ವೇದದಲ್ಲಿ ವಿಶೇಷ ಸ್ಥಾನ ಪಡೆದಿರುವ ಲವಂಗ ಹಲ್ಲು ನೋವು ನಿವಾರಣೆಗೆ ಒಳ್ಳೆಯ ಔಷಧ. ಲವಂಗದ ಎಣ್ಣೆಯನ್ನು ನೋವಿರುವ ಹಲ್ಲಿನ ಮೇಲೆ ಹಾಕಿ. ಎಣ್ಣೆ ಒಸಡಿನ ಮೇಲೆ ಬೀಳದ ಹಾಗೆ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಒಸಡು ಉರಿಯುತ್ತದೆ. ಒಂದು ವೇಳೆ ಬಿದ್ದರೂ ಉರಿ ಹೆಚ್ಚು ಸಮಯ ಇರುವುದಿಲ್ಲ. ಕೆಲ ನಿಮಿಷಗಳಲ್ಲಿ ಸರಿಹೋಗುತ್ತದೆ.

ಬೆಳ್ಳುಳ್ಳಿಯ ಒಂದು  ಎಸಳನ್ನು ನೋವಿರುವ ಹಲ್ಲಿನಿಂದ ಕಚ್ಚಿ. ಈ ರೀತಿ ಮಾಡಿದರೆ ಸ್ವಲ್ಪ ಸಮಯದಲ್ಲಿ ನೋವು ಮಾಯವಾಗುತ್ತದೆ. ಅನೇಕ ಸಮಯದವರೆಗೂ ನೋವು ಕಾಣಿಸಿಕೊಳ್ಳುವುದಿಲ್ಲ.

ಕಾಳು ಮೆಣಸು

ಕಾಳು ಮೆಣಸನ್ನು ನೋವಿರುವ ಜಾಗದಲ್ಲಿ ಉಜ್ಜಿಕೊಳ್ಳುವುದರಿಂದ ಆ ಜಾಗ ಬೆಂಡಿನಂತಾಗಿ ನೋವು ಮಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.