ADVERTISEMENT

ಚಳಿಗಾಲದ ಆಹಾರ ಹೀಗಿರಲಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2013, 19:59 IST
Last Updated 11 ಜನವರಿ 2013, 19:59 IST

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾದ ಆಹಾರದ ಬಗ್ಗೆ ಪೌಷ್ಟಿಕಾಂಶ ತಜ್ಞೆ, ದಿ ವೈಟ್ ಮಾನಿಟರ್ ಡಾಟ್‌ಕಾಂ, ಹೋಲ್‌ಫುಡ್ಸ್ ಇಂಡಿಯಾ ಹಾಗೂ ಸೆಲಿಯಾಕ್ ಸೊಸೈಟಿ ಫಾರ್ ದಿಲ್ಲಿಯ ಸಂಸ್ಥಾಪನಾ ಅಧ್ಯಕ್ಷೆ ಇಶಿ ಖೋಸ್ಲಾ ಇಲ್ಲಿ ಮಾಹಿತಿ ನೀಡಿದ್ದಾರೆ.

ಚಳಿಗಾಲದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರೊಡನೆ ಚಹಾ ಮತ್ತು ಪಕೋಡಾ ಸೇವಿಸುವುದು ಅಥವಾ ಸಾಯಂಕಾಲದ ತಂಗಾಳಿಯಲ್ಲಿ ಸುದೀರ್ಘ ನಡಿಗೆ ಹೊರಡುವುದು ಹಿತಕರವಾಗಿರುತ್ತದೆ. ಚಳಿಗಾಲದಲ್ಲಿ ವಿವಾಹಗಳೂ ಹೆಚ್ಚಾಗಿ ನಡೆಯುತ್ತವೆ. ಹಬ್ಬ, ಉತ್ಸವಾದಿಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತೇವೆ.

ಬಾಯಲ್ಲಿ ನೀರೂರಿಸುವ ಸಿಹಿ ಭಕ್ಷ್ಯಗಳು, ನಾನಾ ತಿಂಡಿಗಳು ಆಕರ್ಷಿಸುತ್ತವೆ. ಹೀಗಿದ್ದರೂ ನಮ್ಮ ಊಟೋಪಚಾರದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಎಚ್ಚರಿಕೆಯಿಂದ ಆಹಾರ ಸೇವಿಸುವುದು ಒಳ್ಳೆಯದು. ಇದರಿಂದ ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದು.

ಆಹಾರಾಭ್ಯಾಸದಲ್ಲಿ ಬದಲಾವಣೆ
ಪರಿಸರದ ತಾಪಮಾನ ಇಳಿಕೆಯಾಗುತ್ತಿದ್ದಂತೆ ನಮ್ಮ ಶರೀರದ ತಾಪಮಾನವೂ ಇಳಿಯುತ್ತದೆ. ಇದರ ಪರಿಣಾಮವನ್ನು ಎದುರಿಸಲು ಶರೀರವು ಚಯಾಪಚಯ ಕ್ರಿಯೆಯನ್ನು ಏರಿಸಿಕೊಳ್ಳುವ ಮೂಲಕ ಉಷ್ಣವನ್ನು ಉತ್ಪಾದಿಸಿಕೊಳ್ಳುತ್ತದೆ. ಆಹಾರದಲ್ಲಿನ ಕೊಬ್ಬಿನ ಅಂಶವನ್ನು ಕರಗಿಸುವ ಮೂಲಕ ಚಯಾಪಚಯ ಕ್ರಿಯೆ ಹೆಚ್ಚುತ್ತದೆ. ಇದರಿಂದ ಹೆಚ್ಚು ಆಹಾರ ಬೇಕೆಂಬ ಭಾವನೆ ನಮಗೆ ಉಂಟಾಗುತ್ತದೆ.

ಆರೋಗ್ಯಕರ ಮೆದುಳಿಗೆ ಆಹಾರ
ಚಳಿಗಾಲದಲ್ಲಿ ನಿತ್ಯ ಪೌಷ್ಟಿಕಾಂಶಯುಕ್ತ ಆಹಾರ, ವಿಟಮಿನ್, ಖನಿಜಾಂಶ ಒಳಗೊಂಡಿರುವ ಆಹಾರ ಸೇವಿಸಬೇಕು. ಇದರಿಂದ ಶರೀರ ಬೆಚ್ಚಗಿರುತ್ತದೆ. ಮೆದುಳನ್ನು ಚುರುಕಾಗಿಸುತ್ತದೆ. ಚರ್ಮದ ಆರೋಗ್ಯ ಕಾಪಾಡುತ್ತದೆ.

ನಿತ್ಯದ ಆಹಾರಾಭ್ಯಾಸ ಇಂತಿರಲಿ:
ಬಾದಾಮಿ:
ನಿಯಮಿತವಾಗಿ ಬಾದಾಮಿ ಸೇವನೆಯಿಂದ ಅಗತ್ಯ ಚೈತನ್ಯ, ದೈಹಿಕ ಶಕ್ತಿ, ಮಾನಸಿಕ ಚೈತನ್ಯ ಪಡೆಯಬಹುದು. ಲವಲವಿಕೆಯಿಂದ ಇರಬಹುದು. ಬಾದಾಮಿಯು ವೆುದುಳು ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿಯಲ್ಲಿ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳೂ ಮಿಳಿತವಾಗಿರುತ್ತವೆ.

ಇದು ಆರೋಗ್ಯಕರ ಜೀವನಕ್ಕೆ ನೆರವಾಗುತ್ತದೆ. ಬಾದಾಮಿ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಹೃದಯದ ಕಾಯಿಲೆಯನ್ನು ದೂರ ಮಾಡಲು ಸಹಕರಿಸುತ್ತದೆ. ಕೇವಲ ಒಂದು ಔನ್ಸ್‌ನಷ್ಟು ಬಾದಾಮಿ 13 ಗ್ರಾಂನಷ್ಟು ಸಾಂದ್ರವಲ್ಲದ ಕೊಬ್ಬಿನಂಶ ಹೊಂದಿರುತ್ತದೆ. ಕೇವಲ ಒಂದು ಗ್ರಾಂ ಸಾಂದ್ರತೆಯ ಕೊಬ್ಬು ಅದರಲ್ಲಿ ಇರುತ್ತದೆ. ಈ ಮೂಲಕ, ಕೊಲೆಸ್ಟ್ರಾಲ್ ಅನ್ನು ದೂರ ಇರಿಸುತ್ತದೆ. ಆದ್ದರಿಂದ ದಿನವನ್ನು ಬಾದಾಮಿಯೊಂದಿಗೆ ಪ್ರಾರಂಭಿಸಿ.

ADVERTISEMENT

ಮೀನು: ಮೀನನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಅಗತ್ಯವಾದ ಪೌಷ್ಟಿಕಾಂಶವೂ ಲಭಿಸುತ್ತದೆ. ಇದರಲ್ಲಿ ಉತ್ತಮ      ಡಿಎಚ್‌ಎ (ಫ್ಯಾಟಿ ಆಸಿಡ್) ಇರುತ್ತದೆ. ಇದು ನರವ್ಯೆಹವನ್ನು ಬಲಪಡಿಸುತ್ತದೆ. ಅಗತ್ಯವಾದ ಹಲವು ಪೌಷ್ಟಿಕಾಂಶಗಳು ಲಭಿಸುತ್ತವೆ.

ಹಸಿರೆಲೆಗಳು: ಕ್ಯಾಬೇಜ್, ಹೂಕೋಸು, ಹರಿವೆ ಸೊಪ್ಪು ಮುಂತಾದ ಹಸಿರೆಲೆ, ತರಕಾರಿಗಳಿಂದ ವಿಟಮಿನ್ ಎ, ಸಿ, ಕೆ, ಇ ಮುಂತಾದವು ಲಭಿಸುತ್ತವೆ. ವಿಟಮಿನ್ ಎ, ಸಿ ಮತ್ತು ಇ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ. ತರಕಾರಿಗಳು ಬಿ 6 ಮತ್ತು ಇತರ ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತವೆ.

ಕಾರ್ಬೊಹೈಡ್ರೇಟ್‌ಯುಕ್ತ ಆಹಾರ: ನಮಗೆ ಉತ್ತಮ ಕಾರ್ಬೋಹೈಡ್ರೇಟ್‌ಯುಕ್ತ ಆಹಾರ ಅಗತ್ಯ. ಸಿರೋಟೋನಿನ್ ಉತ್ಪಾದಿಸುವ ಇದು ಮೆದುಳಿನ ಆರೋಗ್ಯಕ್ಕೆ ಉತ್ತಮ. ಅಲ್ಲದೆ ಸುಖ ನಿದ್ರೆಗೆ ನೆರವಾಗುತ್ತದೆ. ಧಾನ್ಯ, ಬಾರ್ಲಿ, ದವಸ ಧಾನ್ಯಗಳು, ಆಲೂಗಡ್ಡೆ ಇತ್ಯಾದಿಗಳಲ್ಲಿ ಉತ್ತಮ ಕಾರ್ಬೊಹೈಡ್ರೇಟ್ ಅಂಶ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.