ADVERTISEMENT

ಜಗಳ: ಕುಟುಂಬ ಎಂಬ ಗೂಡಿನ ಕಾವು

​ಪ್ರಜಾವಾಣಿ ವಾರ್ತೆ
Published 19 ಜುಲೈ 2016, 19:30 IST
Last Updated 19 ಜುಲೈ 2016, 19:30 IST
ಜಗಳ: ಕುಟುಂಬ ಎಂಬ ಗೂಡಿನ ಕಾವು
ಜಗಳ: ಕುಟುಂಬ ಎಂಬ ಗೂಡಿನ ಕಾವು   

ರಾತ್ರಿ ಎಂಟು ಗಂಟೆಯಾಗಿರಬಹುದು. ಆಗಷ್ಟೇ ಗಿಜಿಗುಡುವ ಟ್ರಾಫಿಕ್ಕಲ್ಲಿ ಸೋತು ಸುಣ್ಣವಾದ ಅಪ್ಪ ಅಂತೂ ಮನೆಗೆ ತಲುಪಿ, ಸೋಫಾದ ಮೇಲೆ ಕುಸಿದು ಕೂತಿದ್ದಾನೆ. ಅಮ್ಮ ಮನೆಗೆ ಬಂದೂ ತುಂಬ ಹೊತ್ತೇನೂ ಆಗಿಲ್ಲ. ಬಟ್ಟೆ ಬದಲಾಯಿಸಿ ಮುಖ ತೊಳೆದುಕೊಂಡು ಈಗಷ್ಟೇ ಅಡುಗೆಮನೆ ಹೊಕ್ಕು ಕಾಫಿ ಮಾಡಿಕೊಳ್ಳಲು ತಯಾರಿ ನಡೆಸಿದ್ದಾಳಷ್ಟೇ.

ಪ್ರತಿಷ್ಠಿತ ಕಾನ್ವೆಂಟ್‌ನಲ್ಲಿ ಈಗಿನ್ನೂ ಮೂರನೇ ತರಗತಿಯಲ್ಲಿ ಓದುತ್ತಿರುವ ಮಗ ಹಾಲಿನ ಇನ್ನೊಂದು ಬದಿಗೆ ಕೂತು ಅಮ್ಮನ ಮೊಬೈಲಲ್ಲಿ ಕ್ಯಾಂಡಿ ಕ್ರಶ್ ಆಡುವುದರಲ್ಲಿ ತನ್ಮಯನಾಗಿದ್ದಾನೆ.

ಮೊನ್ನೆಯಷ್ಟೇ ಊರಿಂದ ಬಂದ ಅಜ್ಜಿ ದಿನವೀಡೀ ಕಳೆಯುವುದು ಹೇಗೆಂದು ಗೊತ್ತಾಗದೇ, ಸುಖಾ ಸುಮ್ಮನೇ ಸ್ವಚ್ಛವಾಗಿಯೇ ಇದ್ದ ಮನೆಯ ಮತ್ತೊಮ್ಮೆ ಗುಡಿಸಿ ಒರೆಸಿ, ತಿನ್ನುವವರು ಇಲ್ಲವೆಂದು ಗೊತ್ತಿದ್ದೂ ಏನೇನೋ ಅಡುಗೆ ಮಾಡುತ್ತ, ಹರಟೆಗೆ ಜನ ಸಿಗುತ್ತಾರೆ ಎಂದು ಹಂಬಲಿಸಿ ಪಕ್ಕದ ಫ್ಲ್ಯಾಟ್‌ನ ಕದ ಬಡಿದು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿಕೊಂಡು ಬಗೀಚಾದಲ್ಲಿ ನಿಂತುಕೊಂಡು ಉದ್ದದ್ದ ಬೀದಿಗಳನ್ನು ನೋಡುತ್ತಲೇ ಅಂತೂ ಹಗಲು ಕಳೆದಿದ್ದಾಳೆ.

ಸಂಜೆ ಶಾಲೆಯಿಂದ ಬಂದ ಮೊಮ್ಮಗನ ಜೊತೆ ಅದೂ ಇದೂ ಮಾತನಾಡಿ ಅವನು ಅಮ್ಮನ ಮೊಬೈಲಲ್ಲಿ ಮುಳುಗಿ ಹೋಗಿದ್ದೇ ಊರಿನಿಂದ ತಂದಿದ್ದ ‘ರಾಮರಕ್ಷಾಸ್ತೋತ್ರ’ವನ್ನು ಮನಸ್ಸಿನಲ್ಲಿಯೇ ಓದುತ್ತಾ ಕೂತಿದ್ದಾಳೆ. ಸುಸ್ತಾಗಿ ಸೋಫಾದಲ್ಲಿ ಕೂತ ಅಪ್ಪ ವಿಪರೀತ ಸೆಖೆಯೆನಿಸಿ ಅಂಗಿಯ ಮೇಲಿನೆರಡು ಗುಂಡಿಗಳನ್ನು ತೆರೆದು ಉಸ್ ಎಂದು ಎದೆಗೆ ಗಾಳಿಯೂದಿಕೊಂಡ. ಆದರೂ ತಡೆದುಕೊಳ್ಳಲಾರದೇ ಮಗನತ್ತ ತಿರುಗಿ ‘ಪುಟ್ಟಾ, ಆ ಫ್ಯಾನ್ ಆನ್ ಮಾಡು’ ಎಂದ.

ಊಹೂಂ, ಮತ್ತೆರಡೂ ಸಲ ಹೇಳಿದರೂ ಅವನಿಗೆ ಇತ್ತ ಕಡೆ ಲಕ್ಷ್ಯವೇ ಇಲ್ಲ. ಅಥವಾ ಲಕ್ಷ್ಯವಿದ್ದರೂ ಸುಮ್ಮನಿದ್ದ. ಕೊನೆಗೆ ಅಪ್ಪ ಅಡುಗೆಮನೆಯತ್ತ ಮುಖ ಮಾಡಿ ‘ಸ್ವಲ್ಪ ಈ ಫ್ಯಾನ್ ಆನ್ ಮಾಡಿ ಹೋಗ್ತಿಯೇನೇ?’ ಎಂದು ಕೊಂಚ ಧ್ವನಿ ಎತ್ತರಿಸಿಯೇ ಹೇಳಿದ. ಅತ್ತಲಿಂದಲೂ ಅಷ್ಟೇ ಎತ್ತರದ ಸ್ವರದಲ್ಲಿ ಉತ್ತರ ಬಂತು.

‘ಅಲ್ಲೇ ಇದೆ ಸ್ವಿಚ್ಚು. ಸ್ವಲ್ಪ ಎದ್ದು ಆನ್ ಮಾಡ್ಕೊ’. ಮೊದಲೇ ಸುಸ್ತಾಗಿದ್ದ ಅವನಿಗೆ ಒಮ್ಮಿಂದೊಮ್ಮೆಲೇ ಸಿಟ್ಟು ಉಕ್ಕಿತು. ‘ಎಲ್ಲರೂ ಸೋಮಾರಿಗಳೇ ಈ ಮನೆಯಲ್ಲಿ. ಒಂದು ಸಣ್ಣ ಕೆಲಸ ಹೇಳಿದ್ರೆ ಮಾಡೋರಿಲ್ಲ. ಇಷ್ಟು ಸುಸ್ತಾಗಿ ಬಂದಿದಿನಿ. ಆದ್ರೂ ಸ್ವಲ್ಪ ಕಾಳಜಿ ಇಲ್ಲ’ ಎಂದು ಕೂಗಾಡಲಾರಂಭಿಸಿದ. ಈಗ ‘ರಾಮರಕ್ಷಾಸ್ತೋತ್ರ’ ಪಾರಾಯಣದಲ್ಲಿ ಮೈಮರೆತಿದ್ದ ಅಜ್ಜಿ ಬೆಚ್ಚಿ ತಲೆ ಎತ್ತಿ ಏನಾಯಿತು ಎಂತು ಯಾವುದೂ ತಿಳಿಯದೇ ಪಿಳಿಪಿಳಿ ಕಣ್ಣು ಬಿಡತೊಡಗಿದಳು.

ಗಂಡನ ಕೂಗಾಟ ಕೇಳಿ ಅದಕ್ಕಾಗಿಯೇ ಕಾದಿದ್ದವಳಂತೇ ಸರ್ರನೇ ಹೊರಬಂದ ಹೆಂಡತಿಯೂ ಹೊರಗೆ ಬಂದು ಜಗಳಕ್ಕೆ ತೊಡಗಿದಳು. ‘ಯಾರು ಯಾರು ಸೋಮಾರಿಗಳು..? ನಾನೇನೂ ಇಡೀ ದಿನ ಮನೆಯಲ್ಲೇ ಕೂತು ಉಣ್ಣುತ್ತಿಲ್ಲ. ನಿನ್ನ ಹಾಗೆಯೇ ನಾನೂ ಕೆಲಸಕ್ಕೆ ಹೋಗುತ್ತಿದ್ದೇನೆ. ಈ ಮನೆಸಾಲವನ್ನು ತೀರಿಸಲಿಕ್ಕೆ ಅಂತಾನೇ ದುಡಿತಿದ್ದೇನೆ.

ನಿನಗಾದ್ರೆ ಆಫೀಸಲ್ಲಿ ಕೆಲಸ ಮಾಡಿ ಮನೆಗೆ ಬಂದರೆ ಮುಗಿತು. ಆದ್ರೆ ನನಗೆ ಹಾಗಲ್ಲ. ಬಂದು ಮನೆಗೆಲಸವನ್ನೂ ಮಾಡಬೇಕು. ಆ ಕಷ್ಟವನ್ನು ಯಾರಿಗೆ ಹೇಳಬೇಕು?’ ಹೆಂಡತಿಯ ಆಕ್ರೋಶಕ್ಕೆ ಗಂಡನದು ನಿರ್ಲಿಪ್ತ ಉತ್ತರ. ‘ನಿಂಗೇನು ಆರಾಮಾಗಿ ಹತ್ತೂವರೆಗೆ ಹೋಗಿ ಐದೂವರೆಗೆ ಬಂದ್ರಾಯ್ತು’.

ಫ್ಯಾನ್ ಹಚ್ಚುವ ವಿಷಯಕ್ಕೆ ಆರಂಭವಾದ ಜಗಳ ವಿಪರೀತಕ್ಕೆ ಹೋಗುತ್ತಿದೆ ಅನಿಸಿ ಅಜ್ಜಿ ತಾನೇ ಫ್ಯಾನ್ ಹಚ್ಚಿದರಾಯ್ತು ಎಂದು ಎದ್ದಳು. ಅದನ್ನು ಗಮನಿಸಿದ ಪುಟ್ಟ ಅವಳ ಕೈ ಹಿಡಿದು ಪಕ್ಕ ಕೂಡಿಸಿಕೊಂಡು ‘ಸುಮ್ನಿರಿ ಅಜ್ಜಿ, ಸುಮ್ಮನೇ ನೋಡ್ತಾ ಕೂತ್ಕೊಳಿ. ನೀವೇನಾದ್ರೂ ಈಗ ಮಧ್ಯ ಹೋದ್ರೆ ಇಬ್ರೂ ಸೇರಿಕೊಂಡು ನಿಮ್ಮ ಮೇಲೆ ಹಾರಾಡ್ತಾರೆ ಅಷ್ಟೆ’ ಎಂದು ಕಣ್ಣು ಮಿಟುಕಿಸಿ ಮತ್ತೆ ಮೊಬೈಲಲ್ಲಿ ಮುಳುಗಿದ.

ಹೊಸ ಕಾಲದ ಕುಟುಂಬ ಸಂಬಂಧದ ಈ ವ್ಯಾಕರಣ ಅರ್ಥವಾಗದೇ ಅಜ್ಜಿ ಮತ್ತದೆ ಪಿಳಿಪಿಳಿ ಕಣ್ಣುಗಳಿಂದ ಅವರನ್ನೇ ನೋಡಲು ಶುರುಮಾಡಿದ್ದಾಳೆ. ಗಂಡನ ವ್ಯಂಗ್ಯದ ಮಾತಿಗೆ ಉತ್ತರಿಸಹೊರಟ ಹೆಂಡತಿಯ ಧ್ವನಿಯಲ್ಲಿ ಅಳುಬುರುಕುತನದ ಕಂಪನವೊಂದು ಸೇರಿಕೊಂಡಿತು. ‘ನಿಂಗೇನ್ ಗೊತ್ತು? ಆಫೀಸಿಂದ ಹೊರಟಿದ್ದು ಆರು ಗಂಟೆಗೆ.

ಮನೆಗೆ ಬರಲಿಕ್ಕೆ ಏಳೂವರೆ ಆಯ್ತು. ಇಡೀ ದಿನ ದುಡಿದು ಸಾಯ್ಬೇಕು ಮೇಲಿಂದ ಬಾಸು ‘ಏನು ಮಾಡಿದಿರಿ ನೀವು?’’ ಅಂತ ಕೇಳ್ತಾರೆ..’ ಕೊನೆಕೊನೆಗೆ ಮಾತು ಅಸ್ಪಷ್ಟವಾಗಿ ಬಿಕ್ಕು ಉಕ್ಕಿತು. ಅವಳ ಕಣ್ಣಲ್ಲಿ ಚಿಮ್ಮಿದ ನೀರು ನೋಡಿ ಒಮ್ಮೆಲೆ ಮೆತ್ತಗಾದ ಗಂಡ ‘ಬಾ ಇಲ್ಲಿ’ ಎಂದು ಮೃದುವಾಗಿ ಕರೆದಿದ್ದಾನೆ. ಸುಮ್ಮನೇ ಬಂದು ಎತ್ತಲೋ ನೋಡುತ್ತಾ ಕೂತವಳ ಗಲ್ಲ ಹಿಡಿದು ತನ್ನತ್ತ ತಿರುಗಿಸಿಕೊಂಡು ‘ಯಾಕೆ ಏನಂದ್ರು ಆಫೀಸಲ್ಲಿ?’ ಕೇಳಿದ್ದೇ ಸಣ್ಣಗೇ ಬಿಕ್ಕುತ್ತಲೇ ಆಫೀಸು ಕಥನವನ್ನು ಆರಂಭಿಸಿದಳು.

‘ಇದು ಇಲ್ಲಿಗೇ ಬಂದು ಮುಟ್ಟುತ್ತದೆ ಎಂದು ನನಗೆ ಗೊತ್ತಿತ್ತು’ ಎಂಬಂತೆ ಒಮ್ಮೆ ಮುಖ ಎತ್ತಿ ನೋಡಿ, ಅಜ್ಜಿಯತ್ತ ತಿರುಗಿ ನಕ್ಕು ಮತ್ತೆ ಮೊಬೈಲಲ್ಲಿ ಮುಳುಗಿದ್ದಾನೆ ಮಗ. ಈ ಹೊಸ ಜಗತ್ತಿನ ಜೀವನ ವ್ಯಾಕರಣ ತಿಳಿಯಲಾರದ ಅಜ್ಜಿ ಮಾತ್ರ ಇನ್ನೂ ಅಯೋಮಯಳಾಗಿ ನೋಡುತ್ತಿದ್ದಾಳೆ. ಈ ಎಲ್ಲರ ತಲೆಮೇಲೆ ಕೆಳಮುಖವಾಗಿ ಜೋತಾಡುತ್ತಿರುವ ಫ್ಯಾನ್ ಮಾತ್ರ ಯಾರಾದರೂ ತನಗೆ ಚಾಲನೆ ಕೊಡುತ್ತಾರೋ ಎಂಬಂತೇ ಕಾದೇ ಇದೆ.
***
ಜಗಳವೆಂಬುದು ಕುಟುಂಬದಲ್ಲಿ ಕಾಣಿಸಿಕೊಳ್ಳುವ ಬಿರುಕಿನ ಮುನ್ಸೂಚನೆ ಎಂಬ ಮಾತು ಆಧುನಿಕ ಒತ್ತಡದ ಬದುಕಿನ ಎಲ್ಲ ಸಂದರ್ಭದಲ್ಲಿಯೂ ಅಷ್ಟೊಂದು ಹೊಂದುವುದಿಲ್ಲ.

ಯಾಕೆಂದರೆ ಬಹುತೇಕ ಸಂದರ್ಭಗಳಲ್ಲಿ ಕುಟುಂಬದೊಳಗಿನ ಜಗಳ ಎಂಬುದು ಇಲ್ಲಿ ಮಾನಸಿಕ ಒತ್ತಡ ಹುಟ್ಟಿಸುವ ಸಂಗತಿಯಲ್ಲ. ಬದಲಿಗೆ ಹೊರಜಗದ-ವೃತ್ತಿಬದುಕಿನ ಒತ್ತಡವನ್ನು ಹೊರಗೆಡವಿ ಹಗುರಾಗುವ ಮಾರ್ಗವೂ ಹೌದು. ಮೇಲಿನ ನಿದರ್ಶನವನ್ನೇ ತೆಗೆದುಕೊಳ್ಳಿ. ಇಲ್ಲಿನ ಗಂಡ-ಹೆಂಡತಿಯ ನಡುವೆ ಜಗಳಕ್ಕೆ ಕಾರಣವಾದ ಸಂಗತಿ ಕ್ಷುಲ್ಲಕ. ಜಗಳಕ್ಕೆ ಅದೊಂದು ಸಂಗತಿಯೇ ಅಲ್ಲ. ಆದರೆ ಇಂಥ ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಜಗಳ ತಲುಪಿದ್ದೆಲ್ಲಿ? ಅವರವರ ವೃತ್ತಿಜಗತ್ತಿನ ಸಂಕಷ್ಟಗಳಿಗೆ. ಹಾಗೆ ಜಗಳವಾಡಿಕೊಂಡು ಹಗುರಾದವರು ಮತ್ತೆ ಮರುದಿನದ ದೈನಂದಿನ ಜಂಜಡಕ್ಕೆ ಸಜ್ಜುಗೊಳ್ಳುತ್ತಾರೆ.

ಈ ನಿಟ್ಟಿನಲ್ಲಿ ಆಪ್ತರೊಂದಿಗೆ ನಾವು ಆಡುವ ಜಗಳವೆಂಬುದು ಅನುದಿನದ ಅಂತರಗಂಗೆಯನ್ನು ದಾಟಲು ಹೊಂದಿಸಿಕೊಳ್ಳುವ ಇಂಧನವಾಗಿಯೂ ಕೆಲಸ ಮಾಡುತ್ತದೆ. ಇದು ಗಂಡ–ಹೆಂಡತಿ ಮಧ್ಯ ಮಾತ್ರವಲ್ಲ, ಒಡಹುಟ್ಟಿದವರು, ತಂದೆ–ತಾಯಿ–ಮಕ್ಕಳು, ಆಪ್ತ ಸ್ನೇಹಿತರು, ಆತ್ಮಸಂಗಾತಿ ಎಲ್ಲವರ ನಡುವೆಯೂ ಇಂಥದ್ದೊಂದು ಹಗುರುಗೊಳಿಸುವ ಜಗಳಕ್ಕೆ ಆಸ್ಪದ ಇರಲೇ ಬೇಕು. ಇಲ್ಲದಿದ್ದರೆ ಸಂಬಂಧಗಳು ದಿನಕಳೆದಂತೆ ಕೃತಕಗೊಳ್ಳುತ್ತಾ ಹೋಗುತ್ತವೆ. ಎಲ್ಲ ನೋವುಗಳನ್ನು, ಹತಾಶೆಗಳನ್ನು ನಮ್ಮೊಳಗೇ ಇಟ್ಟುಕೊಳ್ಳುತ್ತಾ ಕೊನೆಗೊಮ್ಮೆ ಅದು ಅಸಹಜವಾಗಿ ಸಿಡಿದುಬಿಡಬಹುದು. ಅದು ಅಪಾಯಕಾರಿ.

ಮನಸ್ಸು ಸದಾ ತನ್ನ ಹತಾಶೆಗಳನ್ನು ಹಂಚಿಕೊಳ್ಳಲು, ತನ್ನ ಸಿಟ್ಟು, ಆಕ್ರೋಶವನ್ನು ಚೆಲ್ಲಿಕೊಳ್ಳಲು ಒಂದು ಖಾಸಗೀ ಜಾಗವನ್ನು ಹುಡುಕುತ್ತಿರುತ್ತದೆ. ಕುಟುಂಬ ಅಂಥ ಒಂದು ಖಾಸಗೀ ಜಾಗ. ಅದು ಎಲ್ಲ ಒತ್ತಡಗಳಿಂದ ತಪ್ಪಿಸಿಕೊಂಡು ವಿಶ್ರಮಿಸಿಕೊಳ್ಳುವ ನಿಲ್ದಾಣ. ಅದು ನೆಮ್ಮದಿಯ ಚೈತನ್ಯ ತುಂಬಿಕೊಳ್ಳುವ ನಲುದಾಣ.

ಆದರೆ ಕುಟುಂಬದ ಭಾಗವಾಗಿರುವ ಎಲ್ಲರಿಗೂ ಈ ಎಚ್ಚರ ಇರುವುದು ಅಗತ್ಯ. ಆಗ ಸಣ್ಣ ಪುಟ್ಟ ಜಗಳಗಳು, ಹಗುರ ಮನಸ್ತಾಪಗಳು, ಭಿನ್ನಾಭಿಪ್ರಾಯಗಳು ಎಲ್ಲವೂ ಪರಸ್ಪರ ಹತ್ತಿರವಾಗುವ– ಬಂಧವನ್ನು ಇನ್ನಷ್ಟು ಆಪ್ತಗೊಳಿಸುವ ಸಂಗತಿಗಳೇ ಆಗುತ್ತವೆ.  ತನ್ನನ್ನು ಅರ್ಥಮಾಡಿಕೊಳ್ಳಬೇಕು ಎಂಬುದರೊಟ್ಟಿಗೆ ತಾನೂ ಇತರರನ್ನು ಅರ್ಥಮಾಡಿಕೊಳ್ಳಬೇಕು ಎಂಬ ಎಚ್ಚರ ಕುಟುಂಬವೆಂಬ ಗೂಡಿನ ಕಾವನ್ನು ಸದಾ ಕಾಪಿಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.