ADVERTISEMENT

ನಿಮ್ಮ ಹೃದಯ - ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2012, 19:30 IST
Last Updated 29 ಜೂನ್ 2012, 19:30 IST
ನಿಮ್ಮ ಹೃದಯ - ಪ್ರಶ್ನೋತ್ತರ
ನಿಮ್ಮ ಹೃದಯ - ಪ್ರಶ್ನೋತ್ತರ   

ಕೃಷ್ಣ, ಬೆಂಗಳೂರು
 

ನನಗೆ 37 ವರ್ಷ, 68 ಕೆ.ಜಿ ತೂಕ, 5.6 ಅಡಿ ಎತ್ತರ ಇದ್ದೇನೆ, ಸಸ್ಯಾಹಾರಿಯಾಗಿದ್ದೇನೆ. ಕಳೆದ ಮಾರ್ಚ್ 25ರಂದು ವಾಕಿಂಗ್ ಮಾಡುತ್ತಿದ್ದಾಗ ಎದೆ ಉರಿ ಕಾಣಿಸಿಕೊಂಡಿದ್ದು, 31ರಂದು ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ನಾನು ಶಾಂತ ಸ್ವಭಾವದ ವ್ಯಕ್ತಿ. ಆನುವಂಶೀಯ ಕಾರಣ ಇಲ್ಲದಿದ್ದರೂ ನನಗೆ ಈ ರೀತಿಯ ಸಮಸ್ಯೆ ಹೇಗೆ ತಲೆದೋರಿತು ಎಂದು ಅರ್ಥವಾಗುತ್ತಿಲ್ಲ. ನಾನು ನನ್ನ ಜೀವನಕ್ರಮವನ್ನು ಬದಲಾಯಿಸಿಕೊಳ್ಳಬೇಕೇ? ಮುಂದಿನ ಪರೀಕ್ಷೆ ಮತ್ತು ಸಲಹೆಗಳಿಗೆ ತಮ್ಮನ್ನು ಭೇಟಿ ಮಾಡಲು ಅವಕಾಶವಿದೆಯೇ ದಯವಿಟ್ಟು ತಿಳಿಸಿ.

ತಮಗೆ ಯಾವುದೇ ದುಶ್ಚಟಗಳಿಲ್ಲ, ಆದರೂ ಕರೋನರಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಿಸಿಕೊಂಡಿರುವುದಾಗಿ ತಿಳಿಸಿದ್ದೀರಿ. ಇತ್ತೀಚೆಗೆ ಯಾವುದೇ ದುಶ್ಚಟ ಇಲ್ಲದವರಿಗೂ ವೃತ್ತಿಯ ಒತ್ತಡ / ಮಾನಸಿಕ ಒತ್ತಡದಿಂದ ಹೃದಯದ ಕಾಯಿಲೆ ಹೆಚ್ಚುತ್ತಿದೆ. ಬಹುಶಃ ನಿಮ್ಮಲ್ಲೂ ಇಂತಹ ಒತ್ತಡ ಇರಬಹುದು. ಭಾರತೀಯರಲ್ಲಿ ಶರೀರದ ತೂಕ ಸಾಮಾನ್ಯ ಪ್ರಮಾಣದಲ್ಲಿದ್ದವರಲ್ಲೂ/ ಕಡಿಮೆ ತೂಕ ಇರುವವರಲ್ಲೂ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ ಬರಬಹುದು. ಒಂದು ಬಾರಿ ಆಂಜಿಯೋಪ್ಲಾಸ್ಟಿ ಆದ ಮೇಲೆ ಜೀವನ ಪರ್ಯಂತ ಆಸ್ಪಿರಿನ್/ ಕ್ಲೋಪಿಡೋಗ್ರಿಲ್ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮಾತ್ರೆಗಳನ್ನು ತಪ್ಪದೇ ತೆಗೆದುಕೊಳ್ಳಬೇಕು. 

ಪ್ರತಿ ವರ್ಷ ಟಿಎಂಟಿ ಮಾಡಿಸುವ ಅವಶ್ಯಕತೆ ಇರುತ್ತದೆ. ತಾವು ಹಿಂದಿನಂತೆ ದಿನನಿತ್ಯದ ಕೆಲಸ ಮಾಡಬಹುದು, ಪ್ರಾಧ್ಯಾಪಕ ಹುದ್ದೆಯನ್ನು ಮುಂದುವರಿಸಬಹುದು. ತಮಗೆ ಬಂದಿರುವ ಈ ಕಾಯಿಲೆಯ ಬಗ್ಗೆ ಯೋಚನೆ ಬಿಡಬೇಕು. ಮಾನಸಿಕ ಒತ್ತಡವಿದ್ದಲ್ಲಿ, ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ತಮಗೆ ಈ ವಿಚಾರದಲ್ಲಿ ಇನ್ನೂ ಕೂಲಂಕಷವಾಗಿ ತಿಳಿದುಕೊಳ್ಳಬೇಕಾದರೆ ನಮ್ಮ ಆಸ್ಪತ್ರೆಗೆ ಭೇಟಿ ನೀಡಬಹುದು.

ರಮೇಶ ಜೋರಾಪುರ, ಧಾರವಾಡ
ನಾನು ಕಳೆದ ಏಪ್ರಿಲ್‌ನಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಆ ನಂತರ ಸ್ವಲ್ಪ ದಿನ ಚೆನ್ನಾಗಿಯೇ ಇದ್ದೆ. ಆದರೆ ಈಗ ಎದೆಯ ಮಧ್ಯಭಾಗದಲ್ಲಿ ಉರಿ, ಭಾರವಾದ ಹಾಗೆ ಹಾಗೂ ಹಿಚುಕಿದ ಹಾಗೆ ಆಗುತ್ತದೆ. ಬೆನ್ನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವಾಕಿಂಗ್ ಹೋದಾಗ ಈ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಒಮ್ಮಮ್ಮೆ ದೀರ್ಘವಾಗಿ ಉಸಿರು ತೆಗೆದುಕೊಳ್ಳಬೇಕು ಎನಿಸುತ್ತದೆ. ಏನು ಮಾಡಬೇಕು ತಿಳಿಸಿ.

ADVERTISEMENT

-ತಮಗೆ ಆಂಜಿಯೋಪ್ಲಾಸ್ಟಿ (PTCA - RCA) ಚಿಕಿತ್ಸೆ ಆಗಿದೆ ಎಂದು ತಿಳಿಸಿದ್ದೀರಿ. ಬೇರೆ ರಕ್ತನಾಳದಲ್ಲಿ ಶೇ 70 ಬ್ಲಾಕೇಜ್ ಇದೆ, ಜೊತೆಗೆ ಔಷಧಿಯನ್ನು ಸೂಚಿಸಿರುವಂತೆ ತೆಗೆದುಕೊಳ್ಳುತ್ತಿದ್ದರೂ ನಡೆಯುವಾಗ ಎದೆ ನೋವು ಬರುತ್ತಿರುವುದಾಗಿ ತಿಳಿಸಿದ್ದೀರಿ. ಅಂತಹ ನೋವು ಪುನಃ ಪುನಃ ಬರುತ್ತಿದ್ದರೆ, ಅದು ಹೃದಯಕ್ಕೆ ಸಂಬಂಧಪಟ್ಟ ಸೂಚನೆ ಆಗಿರುತ್ತದೆ.

ಅದಕ್ಕೆ ಈಗ ತಾವು ಟಿಎಂಟಿ ಟೆಸ್ಟ್ ಮಾಡಿಸಿ. ಅದರಲ್ಲಿ ಯಾವುದೇ ವ್ಯತ್ಯಾಸ ಇಲ್ಲದಿದ್ದಲ್ಲಿ ಭಯ ಪಡುವ ಅವಶ್ಯಕತೆ ಇಲ್ಲ.  ಪದೇ ಪದೇ ಎದೆ ನೋವು ಕಾಣಿಸಿಕೊಂಡರೆ ತಮಗೆ ಮತ್ತೆ ಆಂಜಿಯೋಗ್ರಾಮ್ ಮಾಡಿ ನೋಡಬೇಕಾಗುತ್ತದೆ.  ತಾವು ಬರುವಾಗ ಹಿಂದಿನ ಆಂಜಿಯೋಗ್ರಾಮ್ ಸಿ.ಡಿಯನ್ನು ತರಬೇಕು. ಈಗಾಗಲೇ ತಾವು ತೆಗೆದುಕೊಳ್ಳುತ್ತಿರುವ ಮಾತ್ರೆಯ ಜೊತೆಗೆ Tab. Embeta 50 mg ಅಥವಾ Prolomet 50 mg ಪ್ರತಿ ದಿನ ತಪ್ಪದೇ ತೆಗೆದುಕೊಳ್ಳಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.