ADVERTISEMENT

ಪಿಸಿಓಎಸ್‌ನಿಂದ ಬಳಲುತ್ತಿರುವಿರೇ?

ಡಾ.ನಾಗಜ್ಯೋತಿ
Published 15 ಮೇ 2015, 19:30 IST
Last Updated 15 ಮೇ 2015, 19:30 IST

ಇತ್ತೀಚಿಗೆ ಅತಿ ಹೆಚ್ಚು ಮಹಿಳೆಯರಿಗೆ ಕಾಡುತ್ತಿರುವ ಸಾಮಾನ್ಯ ಸಮಸ್ಯೆಯೆಂಬಂತೆ ಆಗಿದೆ ಪಿಸಿಓಎಸ್‌. ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌. ಅಂಡಾಶಯದಿಂದ ಅಂಡಾಣುವು ಬಿಡುಗಡೆಯಾಗಿ ಗರ್ಭಕೋಶಕ್ಕೆ ಸಾಗಲು ಅಡಚಣೆ ಉಂಟು ಮಾಡುವ ಸನ್ನಿವೇಶಕ್ಕೆ ಪಿಸಿಓಎಸ್‌ ಎಂದು ಕರೆಯಲಾಗುತ್ತದೆ.
ಬಂಜೆತನದ ಕಾರಣಗಳನ್ನು ಪಟ್ಟಿ ಮಾಡಿದ್ದಲ್ಲಿ ಶೇ 30 ರಷ್ಟು ಬಂಜೆತನಕ್ಕೆ ಪಿಸಿಓಎಸ್‌ ಕಾರಣವಾಗಿರುತ್ತದೆ. ಇವರಲ್ಲಿ ಶೇ 73ರಷ್ಟು ಜನ ಮಹಿಳೆಯರಲ್ಲಿ ಅಂಡೋತ್ಪತ್ತಿಯೇ ಕಾಣುವುದಿಲ್ಲ.

ಸಂತಾನೋತ್ಪತ್ತಿಯ ಪ್ರಕ್ರಿಯೆಯಲ್ಲಿ ನಿಯಮಿತ ಋತುಚಕ್ರವು ಪ್ರಮುಖ ಅಂಶವಾಗಿದೆ. ಆದರೆ ಋತು ಚಕ್ರವಾಗಲು ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗಬೇಕು. ಹೀಗೆ ಬಿಡುಗಡೆಯಾದ ಅಂಡಾಣು ಗರ್ಭಕೋಶಕ್ಕೆ ಸಾಗಬೇಕು. ಸಾಗುವ ಮಧ್ಯದಲ್ಲಿ ಅಡೆತಡೆಯುಂಟಾದಾಗ ಆ ಅಡಚಣೆ ಹಾಗೂ ಅಂಡಾಣು ಸೇರಿ ಸಣ್ಣ ಸಣ್ಣ ಗಂಟುಗಳಾಗಲು ಆರಂಭವಾಗುತ್ತದೆ. ಇವನ್ನು ಪಿಸಿಓಎಸ್‌ ಎಂದು ಕರೆಯಲಾಗುತ್ತದೆ.

ಹಾರ್ಮೋನುಗಳ ಏರುಪೇರಿನಿಂದಾಗಿ ಋತು ಚಕ್ರವು ನಿಗದಿತವಾಗಿ ಅಥವಾ ನಿಯಮತಿ ಚಕ್ರದಲ್ಲಿ ನಡೆಯುವುದಿಲ್ಲ. ಪರಿಣಾಮ ಪಿಸಿಓಎಸ್‌ನಿಂದ ಬಳಲುವ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಬೇಡದ ಕೂದಲು ಬೆಳೆಯುತ್ತವೆ. ಇದಲ್ಲದೆ ಹೈಪರ್‌ ಇನ್ಸುಲಿನೆಮಿಯಾ ಪರಿಸ್ಥಿತಿಯೂ ಕಂಡು ಬರುತ್ತದೆ. ರಕ್ತದಲ್ಲಿ ಇನ್ಸುಲಿನ್‌ ಪ್ರಮಾಣ ಹೆಚ್ಚಿದ ಪರಿಣಾಮವಾಗಿ ಆಂಡ್ರೊಜೆನ್‌ ಸ್ರವಿಸುವಿಕೆ ಪ್ರಚೋದನೆಯಾಗುತ್ತದೆ. ಇದರ ಪರಿಣಾಮವಾಗಿ ಅಂಡಾಶಯದ ದ್ರವದಲ್ಲಿ ಕಡಿಮೆ ಪ್ರಮಾಣದ SHBG (Sex hormone binding globulin) ಉತ್ಪನ್ನವಾಗಿ ಪ್ರೊಟೆಸ್ಟೊಸ್ಟೀರಾನ್ ಎಂಬ ಹಾರ್ಮೋನಿನ ಪ್ರಮಾಣವು ಹೆಚ್ಚಾಗಲು ಕಾರಣವಾಗುತ್ತದೆ. ಹೀಗೆ ಹೆಚ್ಚಿರುವ ಆಂಡ್ರೊಜೆನ್ ಇಂದ ಆ ನಿರ್ದಿಷ್ಟ ಫಾಲಿಕಲ್‌ ಪಕ್ವವಾಗಿ ಓವರಿ ಆಗುವುದನ್ನು ತಡೆಗತ್ತದೆ.

ಪ್ರತಿ ತಿಂಗಳು ಋತುಚಕ್ರವು ನಿಯಮಿತವಾಗಿ ಸಾಗಲು ಮೆದುಳಿನ anterior pituitary ಇಂದ FSH ಮತ್ತು LH ಹಾರ್ಮೋನುಗಳ ಅವಶ್ಯಕ ಪ್ರಮಾಣದ ಬಿಡುಗಡೆ ಆಗಬೇಕು. ಇದನ್ನು ಮೆದುಳಿನ ಯೂಪೊಥಾಲಮಸ್‌ ನಿಯಂತ್ರಿಸುತ್ತದೆ. ಈ ಹಾರ್ಮೋನುಗಳು ಅಂಡಾಣುವಿನ ಬೆಳವಣಿಗೆ ಹಾಗೂ ಚಕ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದರೆ ಈ ಹಾರ್ಮೋನುಗಳ ಉತ್ಪತ್ತಿ ಹಾಗೂ ಬಿಡುಗಡೆಯಲ್ಲಿ ಏರುಪೇರಾದಾಗ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವಲ್ಲಿ ಹಾಗೂ ಋತುಚಕ್ರ ಸರಾಗವಾಗಿ ಸಾಗುವಲ್ಲಿ ಏರುಪೇರಾಗುತ್ತದೆ.

ತ್ರಿದೋಷ ಸಿದ್ಧಾಂತದ ಪ್ರಕಾರ ಪಿಸಿಓಎಸ್‌  ಕಫ ಪ್ರಕೃತಿಯ ಅಸಮತೋಲನವೆಂದು ಪರಿಗಣಿಸಬಹುದು. ವಾತ, ಪಿತ್ತ ಹಾಗು ಕಫ ಮೂವರು ಹೆಣ್ಣಿನ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಪ್ರಮುಖ ಹಾಗು ವಿಶಿಷ್ಟ ಪಾತ್ರವನ್ನು ನಿರ್ವಹಿಸುತ್ತದೆ. ಪಿಸಿಓಎಸ್‌ ಎಂಬುದು ಅನುವಂಶಿಕ ಹಾಗು ಪರಿಸರ ಅಂಶಗಳ ಸಂಯೋಜನೆಯಿಂದ ಕೂಡಿದ ಅಸ್ವಸ್ಥತೆ. ಬೊಜ್ಜು, ವ್ಯಾಯಾಮ ರಹಿತ ಜೀವನ, ಅನುವಂಶಿಕ ಅಂಶ ಮುಂತಾದುವುಗಳು PCOS  ಸಂಭವನೀಯತೆಯನ್ನು ಹೆಚ್ಚಿಸುತ್ತದೆ.

ಪಿಸಿಓಎಸ್‌  3 ಅಂಶಗಳು ಮೇಲೆ ಆಧರಿಸಿದೆ
1. ಹೆಚ್ಚಿನ ಆಂಡ್ರೋಜೆನ್ ಪ್ರಮಾಣ.
2. ಅಂಡಾಣು ಬಿಡುಗಡೆ ಆಗದೇ ಇರುವುದು
3. ಅಂಡನಾಳದಲ್ಲಿ ಅಡೆತಡೆ ಉಂಟಾಗುವುದು.
ಇದನ್ನು ನಾವು ಸ್ಕ್ಯಾನಿಂಗ್‌ ಹಾಗು ಹಾರ್ಮೋನು ಸಂಬಂಧಿಸಿದ ರಕ್ತ ಪರೀಕ್ಷೆ ಮೂಲಕ ಧೃಡೀಕರಿಸಬಹುದು. ಅಡ್ರೀನಲ್ ಹೈಪರ್ಪ್ಲೇಸಿಯ, ಹೈಪೊಥೈರಾಯ್ ಡಿಸಮ್, ಎಣ್ಡೊಮೆಟ್ರಿಯಲ್ ಹೈಪರ್ಪ್ಲೇಸಿಯ ಮುಂತಾದುವುಗಳು.

ಪಿಸಿಓಎಸ್‌ ಲಕ್ಷಣಗಳು
1.ಋತುಚಕ್ರದ ಅನಿಯಮಿತ ತೊಂದರೆಗಳು.
2.ಬಂಜೆತನ
3.ರಕ್ತದಲ್ಲಿ ಗಂಡು ಹಾರ್ಮೋನುಗಳ ಹೆಚ್ಚಿನ ಪ್ರಮಾಣ : ಮೊಡವೆ, ಬೇಡದ ಕೂದಲು ಹೆಚ್ಚಾಗಿ ಹುಟ್ಟುವುದು , ಋತು ಚಕ್ರದಲ್ಲಿ ಹೆಚ್ಚು ಅಥವ ಕಡಿಮೆ ರಕ್ತಸ್ರಾವ, ಕೂದಲು ಉದರುವಿಕೆ ಮುಂತಾದುವುಗಳು.
4. ಮೆಟಬಾಲಿಕ್ ಸಿನ್ ಡ್ರೋಮ್: ಬೊಜ್ಜು, ಇನ್ಸುಲಿನ್ ರೆಸಿಸ್ಟೆನ್ಸ್.

ಆಹಾರ ಕ್ರಮ
ಆಹಾರ ಕ್ರಮ ಹಾಗೂ ವ್ಯಾಯಾಮ ಬಹು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಯುವತಿಯರಲ್ಲಿ ಹೆಚ್ಚಿನ ಇನ್ಸುಲಿನ್ ಪ್ರಮಾಣವಿದ್ದು ತೂಕವನ್ನು ನಿರ್ವಹಿಸಲು ಕಷ್ಟಸಾಧ್ಯವಾಗುತ್ತದೆ. ಒಳ್ಳೆಯ ಆಹಾರ ಕ್ರಮ, ಸಕ್ರಿಯವಾದ ಜೀವನ ಶೈಲಿ, ಆರೋಗ್ಯಕರ ತೂಕ - ಇವುಗಳು PCOS ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಹೆಚ್ಚು ನಾರಿನ ಅಂಶ ಇರುವ ಆಹಾರ ಪದಾರ್ಥ ಗಳು, ಧಾನ್ಯಗಳು, ಸಕ್ಕರೆ ರಹಿತ ಪಾನೀಯಗಳು - ಇವುಗಳನ್ನು ಹೆಚ್ಚಾಗಿ ಉಪಯೋಗಿಸಬೇಕು.

ಪಿಸಿಓಎಸ್‌  ಪರಿಣಾಮ
ಪಿಸಿಓಎಸ್‌ ಜೊತೆ ಬೊಜ್ಜು ಇದ್ದಾಗ ಈ ಕೆಳಗೆ ವಿವರಿಸಿರುವ ರೋಗಗಳು ಕಾಣಿಸಿಕೊಳ್ಳಬಹುದು.
1. ಮಧುಮೇಹ,
2. ಅಧಿಕ ರಕ್ತದ ಒತ್ತಡ,
3.ಕೊಲೆಸ್ಟೀರಾಲ್ ಹಾಗು ಲಿಪಿಡ್ ಪ್ರಮಾಣದ ಅಸಮತೋಲನ ,
4. ಬಂಜೆತನ,
5. ಹೃದಯ ಸಂಬಂಧಿ ರೋಗಗಳು,
6.ನಿದ್ರಾಹೀನತೆ
7. ಖಿನ್ನತೆ ಮತ್ತು ಆತಂಕ ಪಡುವುದು,
8.ಅಸಹಜ ಗರ್ಭಾಶಯದ ರಕ್ತಸ್ರಾವ ಮುಂತಾದುವುಗಳು.

ಚಿಕಿತ್ಸಾ ವಿಧಾನಗಳು
ನಾವು ಮುಂಚೆಯೆ ಚರ್ಚಿಸುದ ಚಿಕಿತ್ಸೆಯ ಗುರಿಗಳು ಹಾಗು ಪ್ರಮುಖ ಅಂಶಗಳಿಂದ ಆರಂಭಿಸಬೇಕು. ಆಕ್ಯುಪಂಕ್ಷರ್‌ ಮೂಲಕ ಹೈಪರ್ ಇನ್ಸುಲಿನೇಮಿಯ ಹಾಗು ಇನ್ಸುಲಿನ್ ರೆಸಿಸ್ಟೆನ್ಸ್ ಅನ್ನು ಕಡಿಮೆ ಮಾಡಬಹುದು. ನಂತರ ಮೆದುಳಿನ anterior pituitary ಹಾಗು hypothalamus ನಿಂದ ಅವಶ್ಯಕ ಹಾರ್ಮೋನುಗಳ ಬಿಡುಗಡೆಯನ್ನು ನಿಯಂತ್ರಿಸ ಬಹುದು. ಈ ಪರಿಣಾಮವನ್ನು ತೀವ್ರಗೊಳಿಸಲು ಹರ್ಬಲ್ ಮೆಡಿಸನ್‌ಗಳು ಸಹಾಯಕವಾಗುತ್ತದೆ. ಅಂತಿಮವಾಗಿ, ಆಂಡ್ರೊಜೆನ್ ಪ್ರಮಾಣ ಕಡಿಮೆಯಾಗಿ, ಅಂಡಾಣುಗಳ ಉತ್ಪತ್ತಿ ಸಹಜವಾಗಿ ಬಂಜೆತನ ಹಾಗು ಅದರ ಜೊತೆಗೆ ಇರುವ ಇನ್ನಿತರ ಅಸ್ವಸ್ಥತೆಗಳು ಗುಣಹೊಂದುತ್ತದೆ.

ಇದರ ಜೊತೆಗೆ, ಅಹಾರ ಕ್ರಮ, ಯೋಗಾಸನ, ಪ್ರಾಣಾಯಾಮ, ಮತ್ತು ಎಲ್ಲಾ ಪ್ರಕೃತಿ ಚಿಕಿತ್ಸಾ ವಿಧಾನಗಳು ಪೂರಕವಾಗುತ್ತದೆ. ಸಿಸ್ಟ್‌ಗಳು ಚಯಾಪಚಯ ಕ್ರಿಯೆಯ ಮೂಲಕ ಹೊರಗೆ ಬರಬೇಕಾದರೆ ಅದು ತಿಂಗಳಿನ ಋತುಚಕ್ರದ ಮೂಲಕವೇ ಬರಬೇಕು. ಹೀಗಾಗಿ ಅದಕ್ಕೆ ಅನುಗುಣವಾದ ಪರಿಸರವನ್ನು ನಿರ್ಮಿಸುವ ಚಿಕಿತ್ಸೆಗಳನ್ನು ಕೊಡಬೇಕು. ಸಾಧಾರಣವಾಗಿ ಬೊಜ್ಜು ಕರಗಿಸುವುದಕ್ಕು PCOS ನಿಂದ ಬಂದ ಬೊಜ್ಜು ಕರಗಿಸುವ ಚಿಕಿತ್ಸಾ ವಿಧಾನಗಳು ಖಂಡಿತವಾಗಲು ಬೇರೆ ಪ್ರಕೃತಿ ಚಿಕಿತ್ಸಾ ವಿಧಾನಗಳನ್ನು ಅನುಸರಿಸಬೆಕಾಗುತ್ತದೆ, PCOS ಸಂಬಂಧಿಸಿದ ಎಲ್ಲಾ ಖಚಿತವಾದ ರೋಗ ಲಕ್ಷಣಗಳನ್ನು ತಿಳಿದುಕೊಂಡಾಗ ಚಿಕಿತ್ಸೆಯು ಸುಲಭ ಸಾಧ್ಯ.

ಮಾಹಿತಿಗೆ: 9880918603

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.