ADVERTISEMENT

ಸಂತಾನ ಭಾಗ್ಯಕ್ಕೆ ಹೊಸ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಮದುವೆಯಾಗಿ ದಶಕ ಕಳೆದರೂ ಮಕ್ಕಳಾಗಿಲ್ಲ, ಐ.ವಿ.ಎಫ್ (ಪ್ರಣಾಳ ಗರ್ಭಧಾರಣೆ) ಚಿಕಿತ್ಸೆ ಪದೇ ಪದೇ ವಿಫಲವಾಗುತ್ತಿದೆ. ಹಾಗಾದರೆ ಮಗುವನ್ನು ಪಡೆಯಬೇಕು ಎನ್ನುವ ನಮ್ಮ ಅಪೇಕ್ಷೆ ಈಡೇರುವುದೇ ಇಲ್ಲವೇ? ಎಲ್ಲರಂತೆ ಮಗುವನ್ನು ಆಡಿಸಿ, ಮುದ್ದಿಸಿ ತಾಯ್ತನ ಅನುಭವಿಸ ಬೇಕೆಂದು ಆಸೆ ಪಡುವುದೇ ತಪ್ಪೇ ಎಂದು ಮದುವೆಯಾಗಿ ದಶಕ ಕಳೆದರೂ ಸಂತಾನ ಭಾಗ್ಯ ಕಾಣದೇ ಪರಿತಪಿಸುವ ಅದೆಷ್ಟೋ ಮಹಿಳೆಯರಿದ್ದಾರೆ.

ಒತ್ತಡ, ಗರ್ಭಕೋಶ ತೊಂದರೆ, ಫೈಬ್ರಾಯಿಡ್, ದಂಪತಿಗಳಲ್ಲಿನ ವಿರಸ ಹಾಗೂ ತಡವಾಗಿ ವಿವಾಹವಾಗುವ ಕಾರಣದಿಂದ ಮಹಿಳೆಯರಲ್ಲಿ ಬಂಜೆತನ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಐ.ವಿ.ಎಫ್ ಚಿಕಿತ್ಸೆ ಮಹಿಳೆಯರಿಗೆ ವರದಾನವಾದರೂ, ಅನೇಕ ಕೊರತೆಗಳನ್ನು ಇದು ಹೊಂದಿದೆ. ಆದರೆ ಇದೀಗ ಈ ಚಿಕಿತ್ಸೆಯ ಸುಧಾರಿತ ಭಾಗವಾಗಿ ಎಂಬ್ರಿಯೋಸ್ಕೋಪ್ ಎಂಬ ನೂತನ ತಂತ್ರಜ್ಞಾನ ಬಂದಿದೆ.

ಸಂತಾನ ಭಾಗ್ಯಕ್ಕಾಗಿ ಚಿಕಿತ್ಸೆ ನೀಡುವಾಗ ಅಂಡಾಣುಗಳನ್ನು ವಿಶೇಷವಾದ, ನಿಯಂತ್ರಿತ ಪರಿಸರದಲ್ಲಿ ಇರಿಸಲಾಗುತ್ತದೆ. ಫಲಿತಗೊಂಡ ಆರೋಗ್ಯಪೂರ್ಣ ಅಂಡಾಣುಗಳನ್ನು ನಂತರ ಗರ್ಭದೊಳಗೆ ಅಳವಡಿಸಲಾಗುತ್ತದೆ. ಮುಂದೆ ಕೆಲವೊಮ್ಮೆ ಈ ಐ.ವಿ.ಎಫ್ ಚಿಕಿತ್ಸೆ ವಿಫಲವಾಗುವುದಕ್ಕೆ ಈ ವಿಧಾನದಲ್ಲಿ ಸರಿಯಾದ ಭ್ರೂಣಗಳ ಆಯ್ಕೆ ಮಾಡಲು ಇದ್ದ ತೊಡಕೇ ಕಾರಣ. ಇದೀಗ ಎಂಥ ಭ್ರೂಣವನ್ನು ಗರ್ಭದೊಳಗೆ ಸೇರಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ಎಂಬ್ರಿಯೋಸ್ಕೋಪ್ ವೈದ್ಯರಿಗೆ ನೆರವಾಗುತ್ತದೆ.


ಪ್ರಣಾಳದಲ್ಲಿ ಭ್ರೂಣದ ಬೆಳವಣಿಗೆ ಆರಂಭವಾದ ಕ್ಷಣದಿಂದ ಗರ್ಭಾಶಯಕ್ಕೆ ವರ್ಗಾಯಿಸುವವರೆಗೆ ನಿಮಿಷ ನಿಮಿಷಕ್ಕೂ ಭ್ರೂಣವನ್ನು ಗಮನಿಸಲು ಇದರಿಂದ ಸಾಧ್ಯ. ಚಿತ್ರ ಸೆರೆಹಿಡಿಯುವ ವ್ಯವಸ್ಥೆಯಿದ್ದು, ಭ್ರೂಣದ ಬಗ್ಗೆ ಅಗಾಧ ಮಾಹಿತಿ ದೊರೆಯುತ್ತದೆ. ಭ್ರೂಣದ ನಿರಂತರ ಬೆಳವಣಿಗೆಯನ್ನು ಸೆರೆಹಿಡಿಯ ಬಹುದಾದ್ದರಿಂದ ಅದರ ಮೇಲೆ ಸಂಪೂರ್ಣ ನಿಗಾ ಇಡಲು ಸಾಧ್ಯವಾಗುತ್ತದೆ.


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT