ADVERTISEMENT

ಸರಳ ಡಯೆಟ್‌ ಸಂಜನಾ ಫಿಟ್‌

ಚೇತನ ಚಿಲುಮೆ

ರಮೇಶ ಕೆ
Published 13 ಡಿಸೆಂಬರ್ 2013, 19:30 IST
Last Updated 13 ಡಿಸೆಂಬರ್ 2013, 19:30 IST

ಕನ್ನಡದ ರಿಯಾಲಿಟಿ ಶೋ ‘ಬಿಗ್‌ಬಾಸ್‌’ ನಂತರ ಜನಪ್ರಿಯತೆ ಗಳಿಸಿದ ನಟಿ ಸಂಜನಾ, ತಮ್ಮ ದೇಹದ ಫಿಟ್‌ನೆಸ್‌ಗಾಗಿ ಡಾನ್ಸ್ ಏರೋಬಿಕ್ಸ್‌ನ ಮೊರೆ ಹೋಗಿದ್ದಾರೆ. ನಿಯಮಿತ ವ್ಯಾಯಾಮ ಮತ್ತು ಸರಳ ಡಯೆಟ್ ಅವರ ಸಪೂರ ಮೈಕಟ್ಟಿನ ಗುಟ್ಟು. ವಾರಕ್ಕೆ ಮೂರರಿಂದ ನಾಲ್ಕು ದಿನ ಏರೋಬಿಕ್ಸ್‌ ಮಾಡುತ್ತಾರೆ.

ಬೆಂಗಳೂರಿ­ನವರಾದ ಸಂಜನಾ ತಮಿಳಿನ ‘ಒರು ಕಾದಲ್‌ ಸೀವೀರ್‌’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದವರು. ಬಳಿಕ ಕನ್ನಡದ ‘ಗಂಡ ಹೆಂಡತಿ’ ಸಿನಿಮಾ ಮೂಲಕ ಗಮನ ಸೆಳೆದ ನಟಿ. ಕನ್ನಡ ಅಲ್ಲದೇ ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿ­ರುವ ಸಂಜನಾ ತಮ್ಮ ಫಿಟ್‌ನೆಸ್‌ ಬಗ್ಗೆ ಹೀಗೆ ಹೇಳುತ್ತಾರೆ:

‘ನನ್ನದು ಸಿಂಪಲ್ ಡಯೆಟ್. ಜಿಡ್ಡಿನ ಅಂಶ ಇರುವ ತಿಂಡಿಗಳನ್ನು ತಿನ್ನಲ್ಲ. ಸಿಹಿಯಿಂದ ದೂರ. ಜಿಮ್‌ಗೆ ಹೋಗುವುದು, ಯೋಗ ಮಾಡುವುದೆಂದರೆ ಬೇಸರ.  ಹಾಗಾಗಿ ಏರೋಬಿಕ್ಸ್‌ ಮಾಡುತ್ತೇನೆ. ಜೊತೆಗೆ ಸೈಕ್ಲಿಂಗ್‌, ಡಾನ್ಸ್‌ ಮೂಲಕ ಏಕತಾನತೆ­ ಹೋಗಲಾ­ಡಿ­ಸಿ­ಕೊಳ್ಳುತ್ತೇನೆ. ಡಾನ್ಸ್‌ ಏರೋಬಿಕ್ಸ್‌ ಅನ್ನು ಆನಂದಿಸುವುದರ ಜೊತೆಗೆ ದೇಹದ ತೂಕವನ್ನೂ ಕಡಿಮೆ ಮಾಡಬಹುದು. ದಿನಕ್ಕೆ ಒಂದೂವರೆ ಗಂಟೆಯಂತೆ ವಾರಕ್ಕೆ ಮೂರು ದಿನ ಏರೋಬಿಕ್ಸ್‌ ಮಾಡುತ್ತೇನೆ. ಸಂಜೆ ವೇಳೆ ಮಾಡುವುದರಿಂದ ರೆಸ್ಟೋ­ರೆಂಟ್‌ಗಳಿಗೆ ಹೋಗಿ ತಿನ್ನುವುದು ತಪ್ಪುತ್ತದೆ. ಮನಸ್ಸನ್ನೂ ಹತೋಟಿ­ಯಲ್ಲಿ ಇಟ್ಟುಕೊಳ್ಳಬಹುದು.

ಅನ್ನ, ರೋಟಿ ಕಡಿಮೆ ತಿನ್ನುತ್ತೇನೆ. ಊಟದಲ್ಲಿ ತರಕಾರಿ ಹೆಚ್ಚಿ­ರಬೇಕು. ಫ್ರೈ ಮಾಡಿದ ಚಿಕನ್‌ ತಿನ್ನುವುದಿಲ್ಲ. ಬದಲಿಗೆ ಗ್ರಿಲ್ಡ್‌, ಹಬೆಯಲ್ಲಿ ಬೇಯಿ­ಸಿದ ಚಿಕನ್‌ ತಿನ್ನುತ್ತೇನೆ. ಬೆಳಿಗ್ಗೆ ಎದ್ದ ತಕ್ಷಣ ಗ್ರೀನ್‌ ಟೀ ಕುಡಿಯುತ್ತೇನೆ. ಮಾಮೂಲಿ ಟೀ, ಕಾಫಿ ಕುಡಿಯುವುದಿಲ್ಲ. ಸಕ್ಕರೆ ಬಳಕೆ ಕಡಿಮೆ.

ಜಿಮ್‌ ಅಥವಾ ಯೋಗ ಮಾಡುವು­ದಕ್ಕೆ ಆಗದಿದ್ದರೆ ಪ್ರತಿ ದಿನ 45 ನಿಮಿಷ ವಾಕ್‌ ಮಾಡಬೇಕು. ಬೆವರು ಬರುವವರೆಗೂ ನಡೆಯ­ಬೇಕು. ಚಳಿಗಾಲದಲ್ಲಿ ಚರ್ಮದ ಸೌಂದರ್ಯ ಕಾಪಾಡಿಕೊಳ್ಳಲು ಕ್ರೀಂ ಹೆಚ್ಚು ಹಚ್ಚಿಕೊಳ್ಳಬೇಕು. ಅದರಲ್ಲೂ ಬೇಬಿ ಆಯಿಲ್‌ ಉತ್ತಮ ಎನಿಸುತ್ತದೆ. ಸಂಜೆ ಏಳು ಗಂಟೆಯೊಳಗೆ ಊಟ ಮಾಡುತ್ತೇನೆ. ನಂತರ ಏನನ್ನೂ ತಿನ್ನುವುದಿಲ್ಲ.

ದಿನಕ್ಕೆ ಎರಡರಿಂದ ಮೂರು ಮೊಟ್ಟೆ ತಿನ್ನುತ್ತೇನೆ. ಮೀನಿನ ಖಾದ್ಯ­ವನ್ನೂ ತಿನ್ನುತ್ತೇನೆ. ಅನ್ನ ಹಾಗೂ ರೋಟಿ ತಿನ್ನದ ಕಾರಣ ವಾರಕ್ಕೆ ಏಳು ದಿನವೂ ಚಿಕನ್‌ ಬೇಕು. ವರ್ಷದ 365 ದಿನವೂ ನಮ್ಮ ಮನೆಯಲ್ಲಿ ಚಿಕನ್‌ ಮಾಡುತ್ತೇವೆ. ಪ್ರೊಟೀನ್‌ಗಾಗಿ ಅದನ್ನು ತಿನ್ನುತ್ತೇನೆ ಅಷ್ಟೇ. ಕೂದಲು ಬೆಳೆಯಲು, ಚರ್ಮದ ಆರೈಕೆಗೂ ಪ್ರೊಟೀನ್‌ ಅವಶ್ಯಕ.

‘ಬಿಗ್‌ಬಾಸ್‌’ ಜನಪ್ರಿಯತೆ
‘ಬಿಗ್‌ಬಾಸ್‌ ನಂತರ ಜನರ ಪ್ರೀತಿ, ಅವರು ನಮ್ಮನ್ನು ನೋಡುವ ಬಗೆ ಬದಲಾಯಿತು. ಇವರಲ್ಲೂ ಒಂದು ಜೀವನ ಇದೆ ಎಂಬುದು ಅವರಿಗೆ ಅರ್ಥವಾಗಿದೆ. ಬಿಗ್‌ಬಾಸ್‌ಗೆ ಧನ್ಯವಾದ’ ಎನ್ನುತ್ತಾರೆ ಸಂಜನಾ.

ಸದ್ಯಕ್ಕೆ ಆರು ಚಿತ್ರಗಳು ಇವರ ಕೈಯಲ್ಲಿವೆ. ಅಂದಹಾಗೆ ‘ಮಹಾನದಿ’ ನಂತರ ಸಂಜನಾ ಅವರ ತೆಲುಗಿನ ‘ಲವ್‌ ಯು ಬಂಗಾರಂ’, ಕನ್ನಡದ ‘ರೆಬೆಲ್‌’ ಹಾಗೂ ದರ್ಶನ್‌ ಅಭಿನಯದ ‘ಅಗ್ರಜ’  ಚಿತ್ರಗಳು ತೆರೆಕಾಣಲು ಸಿದ್ಧವಾಗಿವೆ. ತಮಿಳಿನ ‘ರೇಣುಗುಂಟ’ದ ರಿಮೇಕ್‌ ಚಿತ್ರ ‘ಮಂಡ್ಯ ಟು ಮುಂಬೈ’ ಹೆಸರಿನ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಅವರದು ಗಟ್ಟಿ ಪಾತ್ರವಂತೆ.

ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವ ಹವ್ಯಾಸವನ್ನು ಸಂಜನಾ ಬೆಳೆಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್‌ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾ­ರಂತೆ. ಅಲ್ಲದೆ ವಿದೇಶಗಳನ್ನು ಸುತ್ತುವ ಹಾಗೂ ಅಲ್ಲಿ ಐದರಿಂದ ಆರು ದಿನ ಉಳಿದುಕೊಂಡು ಶಾಪಿಂಗ್‌ ಮಾಡುವುದೆಂದರೆ ಇಷ್ಟವಂತೆ.

ನಿಮಗಿದೋ ಕಿವಿಮಾತು
ಮದ್ಯಪಾನ, ಧೂಮಪಾನದಂಥ ಹವ್ಯಾಸಗಳನ್ನು ಬಿಡಬೇಕು. ದಿನಕ್ಕೆ ಮುಕ್ಕಾಲು ಗಂಟೆಯಾದರೂ ಬೆವರು ಸುರಿಸಿ ದೇಹದ ಸೌಂದರ್ಯ ಕಾಪಾಡಿಕೊಳ್ಳಿ. ವಾರಕ್ಕೊಮ್ಮೆ ಅನ್ನ ತಿನ್ನಿ. ಸಾಂಬಾರಿನಲ್ಲಿ ಹೆಚ್ಚು ತರಕಾರಿ ಇರಲಿ. ಹೆಚ್ಚು ಜಿಡ್ಡಿನಂಶದ ಆಹಾರಕ್ಕೆ ಕಡಿವಾಣ ಹಾಕಿ. ಮಾಂಸ ಕಡಿಮೆ ತಿನ್ನಿ– ಇದು ಆರೋಗ್ಯ ಕಾಳಜಿ ಇರುವವರಿಗೆ ಸಂಜನಾ ಕಿವಿಮಾತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.