ADVERTISEMENT

ಭಾರತದಲ್ಲಿ 65,000 ಜನರಿಗೆ ಒಬ್ಬರು ಕಣ್ಣಿನ ವೈದ್ಯರಿದ್ದಾರೆ: ಏಮ್ಸ್ ಸಮೀಕ್ಷೆ

ಪಿಟಿಐ
Published 7 ನವೆಂಬರ್ 2025, 7:57 IST
Last Updated 7 ನವೆಂಬರ್ 2025, 7:57 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿತ್ರ: ಗೆಟ್ಟಿ

ನವದೆಹಲಿ: ದೇಶದಲ್ಲಿ ಸರಾಸರಿ 65,000 ಜನರಿಗೆ ಕೇವಲ ಒಬ್ಬರು ನೇತ್ರ ತಜ್ಞರು ಮಾತ್ರ ಲಭ್ಯವಿದ್ದಾರೆ ಎಂದು ದೆಹಲಿಯ ಏಮ್ಸ್ (AIIMS) ನಡೆಸಿದ ಸಮೀಕ್ಷೆ ತಿಳಿಸಿದೆ.

ADVERTISEMENT

ದೇಶದಲ್ಲಿ 20,944 ಪೂರ್ಣಾವಧಿ ನೇತ್ರ ತಜ್ಞರು ಮತ್ತು 17,849 ನೇತ್ರ ತಜ್ಞರು (ಪ್ರಾಥಮಿಕ ಕಣ್ಣು ಪರೀಕ್ಷಕರು ) ದ್ವಿತೀಯ ಮತ್ತು ತೃತೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಭಾರತದಲ್ಲಿ ಕುರುಡುತನ ನಿವಾರಿಸಲು 2020ರ ವೇಳೆಗೆ 25,000 ನೇತ್ರ ತಜ್ಞರು ಮತ್ತು 48,000 ಆಸ್ಪತ್ರೆ ಆಧಾರಿತ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರಬೇಕು ಎಂಬ ಗುರಿ ಹೊಂದಲಾಗಿತ್ತು.

ಭಾರತದಲ್ಲಿ ಅಸ್ತಿತ್ವದಲ್ಲಿರುವ ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆಗಳಿಂದ ನೇತ್ರ ಸೇವೆಗಳನ್ನು ಒದಗಿಸಲು ಲಭ್ಯವಿರುವ ಮಾನವ ಸಂಪನ್ಮೂಲಗಳು (HR) ಮತ್ತು ಮೂಲ ಸೌಕರ್ಯವನ್ನು ನಿರ್ಧರಿಸುವ ವಿಷನ್ 2020 ಮಾನದಂಡಗಳ ಪ್ರಕಾರ, ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಗುರಿಗಳ ಸಾಧನೆಯನ್ನು ನಿರ್ಣಯಿಸಲು ಏಮ್ಸ್‌ನ ಡಾ. ರಾಜೇಂದ್ರ ಪ್ರಸಾದ್ ನೇತ್ರ ವಿಜ್ಞಾನ ಕೇಂದ್ರದ ಡಾ. ಪ್ರವೀಣ್ ವಸಿಷ್ಠ ಮತ್ತು ಅವರ ತಂಡದ ನೇತೃತ್ವದಲ್ಲಿ ಅಧ್ಯಯನವನ್ನು ನಡೆಸಲಾಗಿದೆ.

ಆರ್‌ಪಿ ಕೇಂದ್ರದ ಸಮುದಾಯ ನೇತ್ರ ವಿಜ್ಞಾನದ ಪ್ರಾಧ್ಯಾಪಕ ಮತ್ತು ಮೇಲ್ವಿಚಾರಕರಾಗಿರುವ ಡಾ. ಪ್ರವೀಣ್ ವಸಿಷ್ಠ ಅವರು, ‘ಭಾರತದಲ್ಲಿ ಕಣ್ಣಿನ ವೈದ್ಯರ ಲಭ್ಯತೆ ಕೊರತೆ ಎದ್ದು ಕಾಣುತ್ತಿರುವುದನ್ನು ಅಧ್ಯಯನವು ಎತ್ತಿ ತೋರಿಸಿದೆ’ ಎಂದು ಹೇಳಿದರು.

‘ದಕ್ಷಿಣ ಮತ್ತು ಪಶ್ಚಿಮ ಭಾರತದ ರಾಜ್ಯಗಳಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ಆದರೆ ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ತಜ್ಞ ವೈದ್ಯರ ತೀವ್ರ ಕೊರತೆಯಿದೆ’ ಎಂದಿದ್ದಾರೆ.

ಅಧ್ಯಯನದಲ್ಲಿ ಭಾಗವಹಿಸಿದ್ದ 8,790 ಕಣ್ಣಿನ ಚಿಕಿತ್ಸಾ ಸಂಸ್ಥೆಗಳಲ್ಲಿ 7,901 ಸಂಸ್ಥೆಗಳು ಪ್ರಶ್ನಾವಳಿಗಳನ್ನು ಪೂರ್ಣಗೊಳಿಸಿವೆ (ಪ್ರತಿಕ್ರಿಯೆ ದರ ಶೇ 89.9) ಎಂದು ಅವರು ಹೇಳಿದರು.

ಇಡೀ ದೇಶದಲ್ಲಿ ನೇತ್ರ ಚಿಕಿತ್ಸಾಲಯಗಳ ಲಭ್ಯತೆಯ ಅನುಪಾತ 1,64,536 ಜನಸಂಖ್ಯೆಗೆ ಒಂದರಷ್ಟು ಇದೆ. ಉತ್ತರ, ಪೂರ್ವ ಮತ್ತು ಈಶಾನ್ಯ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಇದರ ಲಭ್ಯತೆ ಉತ್ತಮವಾಗಿದೆ. ಹಾಗೂ 9 ಕೇಂದ್ರಾಡಳಿತ ಪ್ರದೇಶಗಳ ಪೈಕಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತೀ ಹೆಚ್ಚು ನೇತ್ರ ಚಿಕಿತ್ಸಾ ಕೇಂದ್ರಗಳಿವೆ ಎಂದು ಅಧ್ಯಯನ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.