ಕಾರಣವಿಲ್ಲದೆ ಆಗಾಗ ಬೇಸರವಾಗುತ್ತದೆ. ಯಾವುದರಲ್ಲಿಯೂ ಆಸಕ್ತಿ ಇರದು. ವೈರಾಗ್ಯದಂಥ ಭಾವ. ಏನೂ ಕೆಟ್ಟದ್ದು ಸಂಭವಿಸದೇ ಇದ್ದರೂ ಬದುಕಿನಲ್ಲಿ ನಿರಾಸಕ್ತಿ ಮೂಡುತ್ತದೆ. ಇದು ಖಿನ್ನತೆ ಇರಬಹುದೇ? ಈ ಭಾವದಿಂದ ಹೊರಬರುವುದು ಹೇಗೆ?
ರಾಶಿ, ಮಲೇಬೆನ್ನೂರು
ಉ: ಜೀವನದ ವಿವಿಧ ಮಜಲುಗಳಲ್ಲಿ ವಿವಿಧ ಬಗೆಯ ಆಕಾಂಕ್ಷೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಿಗೆ ಬೇರೆ ಬೇರೆ ಮೂಲ ಕಾರಣಗಳಿರಬಹುದು. ಮೊದಲು ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದುದು ವೈರಾಗ್ಯ ಮತ್ತು ನಿರಾಸಕ್ತಿಯ ನಡುವಿನ ವ್ಯತ್ಯಾಸವನ್ನು. ಅವೆರಡೂ ಹೊರನೋಟಕ್ಕೆ ಒಂದೇ ಅನ್ನುವಂತೆ ಕಂಡರೂ ವಾಸ್ತವದಲ್ಲಿ ಒಂದೇ ಅಲ್ಲ!
ವೈರಾಗ್ಯವು ‘ರಾಗ’ಕ್ಕೆ (ಆಸಕ್ತಿ) ವಿರುದ್ಧವಾಗಿದೆ. ವೈರಾಗ್ಯ ಎಂದರೆ ನಿರ್ಲಿಪ್ತ ಮನೋಭಾವ, ಇಂದ್ರಿಯ ಸುಖದಿಂದ ವಿಮುಖರಾಗುವುದು. ವೈರಾಗ್ಯ ಸ್ವಭಾವದ ಮನುಷ್ಯನಿಗೆ ಭೌತಿಕ ಪ್ರಪಂಚದತ್ತ ಯಾವುದೇ ಆಕರ್ಷಣೆ ಇರುವುದಿಲ್ಲ. ವೈರಾಗ್ಯವು ನಿಸ್ಸಂದೇಹವಾಗಿ, ಮನಸ್ಸು ಇಂದ್ರಿಯಗಳ ಸುಳಿಯಲ್ಲಿ ಸಿಲುಕಿಕೊಳ್ಳದ ಮಾನಸಿಕ ಸ್ಥಿತಿಯಾಗಿದೆ. ಆಗ ಮನಸ್ಸು ಆತ್ಮದ ಕಡೆಗೆ, ದೇವರ ಕಡೆಗೆ ಚಲಿಸುತ್ತದೆ. ಈಗ ನಿಮ್ಮ ಮನಸ್ಸಿನಲ್ಲಿ ಇರುವುದು ವೈರಾಗ್ಯವೋ ನಿರಾಸಕ್ತಿಯೋ ಎಂಬುದನ್ನು ನೀವೇ ಪರೀಕ್ಷಿಸಿಕೊಳ್ಳಬೇಕು.
1. ನಿರಾಸಕ್ತಿ ಎಂಬುದು ಯಾವಾಗಿನಿಂದ ಶುರುವಾಯಿತು? ಘನಘೋರವಾದ ಘಟನೆಯೇ ನಿರಾಸಕ್ತಿಗೆ ಕಾರಣವಾಗಿ ರಬೇಕಾಗಿಲ್ಲ. ಕೆಲವೊಮ್ಮೆ ಸಣ್ಣ ಸಣ್ಣ ವಿಷಯಗಳೂ ಕಾಲಕ್ರಮೇಣ ಸೇರಿಕೊಂಡು, ಆಮೇಲೆ ಯಾವುದೋ ಒಂದು ಸಣ್ಣ ಘಟನೆಯೇ ನೆವವಾಗಿ ನಿರಾಸಕ್ತಿಯನ್ನು ಉಂಟುಮಾಡಿರಬಹುದು.
2. ನಿರಾಸಕ್ತಿಯ ಜೊತೆಗೆ ಯಾವ ರೀತಿಯ ಭಾವನೆಗಳು ನಿಮ್ಮೊಳಗೆ ಸ್ಫುರಿಸುತ್ತಿವೆ ಎಂಬುದನ್ನು ಗಮನಿಸಿ.
3. ನಿರಾಸಕ್ತಿ ಅನ್ನುವುದು ನಿಮ್ಮಲ್ಲೇ ಹುಟ್ಟಿಕೊಂಡದ್ದೋ ಅಥವಾ ಇನ್ಯಾರದ್ದೋ ಪ್ರಭಾವದಿಂದ ಆಗಿರುವುದೋ ಎಂಬುದನ್ನು ಕಂಡುಕೊಳ್ಳಿ. ಇವೆಲ್ಲಕ್ಕೂ ಉತ್ತರ ಸಿಕ್ಕಿದಾಗ ನಿಮಗೆ ನಿಮ್ಮ ನಿರಾಸಕ್ತಿಯ ಮೂಲ ಅರ್ಥವಾಗುತ್ತದೆ.
ಆಮೇಲೆ ಈ ರೀತಿಯ ಸ್ಥಿತಿಯಿಂದ ಹೊರಬರುವುದಕ್ಕೆ ಒಂದಷ್ಟು ಕ್ರಮಗಳನ್ನು ಕೈಗೊಳ್ಳಬೇಕು:
ಮೊದಲಿನಿಂದಲೂ ಇಷ್ಟವಿದ್ದ ಯಾವುದಾದರೂ ಹವ್ಯಾಸವನ್ನು ಗುರುತಿಸಿಕೊಳ್ಳಿ ಮತ್ತು ಪುನಃ ಅದರಲ್ಲಿ ತೊಡಗಿಕೊಳ್ಳಲು ಯತ್ನಿಸಿ.
ದೈನಂದಿನ ಚಟುವಟಿಕೆಗಳನ್ನು ಸರಿಪಡಿಸಿಕೊಳ್ಳಿ. ಸರಿಯಾದ ಸಮಯಕ್ಕೆ ನಿದ್ರಿಸಿ, ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ.
ಪ್ರತಿದಿನವೂ ತಪ್ಪದೇ ದೈಹಿಕ ವ್ಯಾಯಾಮ ಮಾಡಿ. ಆರಂಭದಲ್ಲಿ ಈ ಎಲ್ಲಾ ಚಟುವಟಿಕೆಗಳಲ್ಲಿ ತೊಡಗುವುದು ಸ್ವಲ್ಪ ಕಷ್ಟ ಎನಿಸಿದರೂ ನಿಮ್ಮನ್ನು ನೀವೇ ಪ್ರೇರೇಪಿಸಿಕೊಂಡು, ಪ್ರತಿ ಚಟುವಟಿಕೆಯನ್ನೂ ತಪ್ಪದೇ ಮಾಡಿ.
ಜೀವನದಲ್ಲಿ ಬಹಳ ಉತ್ಸುಕರಾಗಿ ಇದ್ದಂತಹ ಕಾಲದಲ್ಲಿ ನಿಮಗೆ ಖುಷಿ ಕೊಡುತ್ತಿದ್ದ ಚಟುವಟಿಕೆಗಳನ್ನು ಪುನರಾರಂಭಿಸಿ. ಹಾಗೆ ಮಾಡಿದಾಗ, ಜುಗುಪ್ಸೆ ಬಂದಿರುವ ಸ್ಥಿತಿಯಿಂದ ಉಲ್ಲಾಸದ ಕಡೆಗೆ ಮತ್ತೆ ವಾಲಬಹುದು. ಇಲ್ಲದಿದ್ದರೆ, ಈ ನಿರಾಸಕ್ತಿ ನಿಧಾನವಾಗಿ ಮುಂದುವರಿದು ಖಿನ್ನತೆಗೆ ಕಾರಣವಾಗಬಹುದು. ಹಾಗೆ ಆಗುವ ಮುನ್ನ ಎಚ್ಚರ ವಹಿಸಿ, ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.