ಪ್ರಾತಿನಿಧಿಕ ಚಿತ್ರ
– ಸರಳಾ, ಬೆಂಗಳೂರು
ನಾನು ವಿಧವೆ. ಸರ್ಕಾರಿ ನೌಕರಿಯಲ್ಲಿ ಇದ್ದೇನೆ. ಸಹೋದ್ಯೋಗಿಯೊಬ್ಬರು ನನ್ನನ್ನು ಪ್ರೀತಿಸಿ, ನಂಬಿಸಿ ಮೋಸ ಮಾಡಿದರು. ನನ್ನ ಪೋನ್ ನಂಬರ್ ಬ್ಲಾಕ್ ಮಾಡಿದ್ದಾರೆ. ಎದುರಿಗೆ ಸಿಕ್ಕರೂ ಮಾತನಾಡುವುದಿಲ್ಲ. ಎರಡು ವರ್ಷದ ನಂತರ ಮತ್ತೆ ಸಂಪರ್ಕಕ್ಕೆ ಬರುತ್ತೇನೆ ಎಂದಿದ್ದಾರೆ. ಮೊದಲೇ ಜತೆಗಾರನ ಸುಖದಿಂದ ವಂಚಿತಳಾಗಿದ್ದೆ. ಈಗ ನೋಡಿದರೆ ಹೀಗಾಗಿದೆ. ಜೀವನ ಸಾಕೆನಿಸಿದೆ. ಅವರು ವಾಪಸ್ ಬರುತ್ತೇನೆ ಎಂದಿರುವುದನ್ನು ನಂಬಲೋ ಅಥವಾ ಎಲ್ಲವನ್ನೂ ಮರೆತು ಇರಲೋ ಎಂಬ ಗೊಂದಲ ಕಾಡುತ್ತಿದೆ. ಮರೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಹೊರಬರುವುದು ಹೇಗೆ?
ದುರದೃಷ್ಟವಶಾತ್ ನಿಮಗೆ ವೈಧವ್ಯ ಒದಗಿದ್ದರಿಂದ, ಈ ವಯಸ್ಸಿನಲ್ಲಿ ಸಹಜವಾಗಿ ಬೇಕಾಗುವಂತಹ ಸಾಂಗತ್ಯ, ಬಾಂಧವ್ಯ ಅಥವಾ ಅನುಬಂಧದ ಕೊರತೆಗಳು ಕಾಣಿಸಿಕೊಂಡಿವೆ. ಆದರೆ, ಇಂಥ ಪರಿಸ್ಥಿತಿಯಲ್ಲಿ ನೀವು ಭಾವನಾತ್ಮಕವಾಗಿ ಬಹಳ ಜಾಗರೂಕತೆಯಿಂದ ಬದುಕನ್ನು ನಿರ್ವಹಿಸಬೇಕಾಗುತ್ತದೆ. ಹೆಂಗಸೊಬ್ಬಳು ಒಂಟಿಯಾಗಿದ್ದಾಳೆ ಎಂದು ತಿಳಿದ ತಕ್ಷಣ, ಅನೇಕ ಗಂಡಸರು ತಮ್ಮ ತೀಟೆಯನ್ನು ತೀರಿಸಿಕೊಳ್ಳುವುದಕ್ಕೆ ಅದೊಂದು ಅವಕಾಶ ಎಂದು ತಿಳಿಯುತ್ತಾರೆ. ಸಾಧಾರಣವಾಗಿ ಒಬ್ಬಂಟಿಯಾಗಿ ಇರುವಂತಹವರಿಗೆ ಭಾವನಾತ್ಮಕವಾಗಿ ಏನೆಲ್ಲ ಬೇಕೋ ಅದನ್ನೆಲ್ಲ ಆರಂಭದಲ್ಲಿ ಒದಗಿಸಲು ಮುಂದಾಗುತ್ತಾರೆ. ಉದಾಹರಣೆಗೆ, ಹೆಚ್ಚಿನ ಸಮಯವನ್ನು ಕೊಡುವುದಕ್ಕೆ ಆರಂಭಿಸುತ್ತಾರೆ, ಕಾಳಜಿ ತೋರುತ್ತಾರೆ, ನನ್ನೊಂದಿಗೆ ಗಟ್ಟಿಯಾಗಿ ಜೊತೆಯಲ್ಲಿ ನಿಲ್ಲುವವರು ಒಬ್ಬರಿದ್ದಾರೆ ಅನ್ನುವಂತಹ ಭಾವನೆ ಮೂಡಿಸುತ್ತಾರೆ. ತನ್ಮೂಲಕ ಹೆಣ್ಣಿನ ದೌರ್ಬಲ್ಯಗಳನ್ನು ಅರ್ಥ ಮಾಡಿಕೊಂಡು, ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ.
ಮಧ್ಯ ವಯಸ್ಸಿನ ಒಂಟಿ ಹೆಣ್ಣಿಗೆ ಬಾಂಧವ್ಯದಲ್ಲಿ ಆಕರ್ಷಣೆ ಯಷ್ಟೇ ಇರುವುದಿಲ್ಲ. ಬದಲಾಗಿ, ಗೌರವ, ಜವಾಬ್ದಾರಿ, ಜೀವನದ ಗುರಿಗಳು ಮತ್ತು ಸ್ಥಿರತೆ ಮುಖ್ಯವಾಗಿರುತ್ತವೆ. ತನ್ನ ಜೊತೆ ಸಂಬಂಧ ಬೆಳೆಸುವಂತಹ ವ್ಯಕ್ತಿ ತನ್ನನ್ನು ಮದುವೆಯಾಗುವರೇ ಎನ್ನುವ ಪ್ರಶ್ನೆ ಆಕೆಯನ್ನು ಕಾಡುತ್ತಿರುತ್ತದೆ. ಅದನ್ನೇ ಅಸ್ತ್ರವನ್ನಾಗಿಸಿ ಅನೇಕ ಗಂಡಸರು ಆರಂಭದಲ್ಲಿ ‘ಮದುವೆಯಾಗುತ್ತೇನೆ’ ಎಂದು ಭರವಸೆ ನೀಡಿ, ಆಮೇಲೆ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ. ತಾನೆಲ್ಲೂ ಆ ರೀತಿಯ ಪ್ರಮಾಣವನ್ನು ಮಾಡಿಯೇ ಇಲ್ಲ ಎಂದು ವಾದಿಸುತ್ತಾರೆ. ಆಗ ಆಕೆಗೆ ಅದೊಂದು ದೊಡ್ಡ ಆಘಾತವಾಗುತ್ತದೆ.
ಮೊದಲಿಗೆ ಈ ಅಂಶಗಳನ್ನು ಅರ್ಥ ಮಾಡಿಕೊಳ್ಳಿ: ನೀವು ಇದ್ದಂಥ ಸಂಬಂಧದಲ್ಲಿ ನಿಜವಾಗಿಯೂ ಬದ್ಧತೆ ಎರಡು ಕಡೆಯಿಂದಲೂ ಇತ್ತೇ? ಇಲ್ಲ ಎಂದಾದರೆ, ಆ ಸಂಬಂಧಕ್ಕೆ ಜೀವನವನ್ನು ಬಲಿ ಕೊಡುವುದರಲ್ಲಿ ಅರ್ಥವಿದೆಯೇ?. ಇಲ್ಲಿ ಕೊಟ್ಟಿರುವ ಉದಾಹರಣೆಯ ಆಳವನ್ನು ಅರಿಯಲು ಪ್ರಯತ್ನಿಸಿ. ಒಂದು ಹಣ್ಣಿನ ಅಂಗಡಿಗೆ ಹೋಗಿ, ನಿಮಗೆ ಇಷ್ಟವಾದ ಹಣ್ಣನ್ನು ಬಹಳ ಆಸೆಯಿಂದ ಕೊಂಡುಕೊಳ್ಳುತ್ತೀರಿ. ಮನೆಗೆ ಬಂದು ನೋಡಿದಾಗ, ಅದು ಹಾಳಾಗಿರುವುದು ತಿಳಿಯುತ್ತದೆ. ಆಗ ನೀವು ಅದನ್ನು ಬಿಸಾಡಿ ಒಳ್ಳೆಯ ಹಣ್ಣನ್ನು ಆಯ್ದುಕೊಳ್ಳಲು ಮುಂದಾಗುವಿರೋ ನಾನು ಆಯ್ಕೆ ಮಾಡಿದ ಹಣ್ಣು ಚೆನ್ನಾಗಿರಲಿಲ್ಲ, ಹಾಗಾಗಿ ನಾನಿನ್ನು ಹಣ್ಣನ್ನೇ ತಿನ್ನುವುದಿಲ್ಲ ಅಂದುಕೊಳ್ಳುವಿರೋ ನನಗೆ ಆಯ್ಕೆ ಮಾಡುವುದಕ್ಕೇ ಬರುವುದಿಲ್ಲ ಎಂದುಕೊಂಡು ನಿಮ್ಮನ್ನೇ ನಿಂದಿಸಿಕೊಳ್ಳುವಿರೋ? ಬದುಕಿನಲ್ಲಿ ಸರಿಯಾದ, ಸಂದರ್ಭೋಚಿತವಾದ ಆಯ್ಕೆಯನ್ನು ಮಾಡುವ ಕೆಲಸ ನಮ್ಮದು. ಕೆಲವೊಮ್ಮೆ ಅವು ತಪ್ಪಾಗಿರಬಹುದು. ಆದರೆ ಅವುಗಳನ್ನು ಸರಿಪಡಿಸುವ ಹೊಣೆ ನಮ್ಮದೇ ಆಗಿರುತ್ತದೆ. ಹಾಗೆಂದು ಪದೇಪದೇ ತಪ್ಪು ಆಯ್ಕೆಗಳನ್ನೇ ಮಾಡುತ್ತಿದ್ದರೆ, ತಜ್ಞರ ಸಲಹೆ ಪಡೆಯುವುದು ಉತ್ತಮ.
ಜೀವನ ಅನ್ನುವಂತಹದ್ದು ಈ ಸಂಬಂಧಕ್ಕಷ್ಟೇ ಸೀಮಿತವಾಗಿ ಇರಬೇಕೇ ಅಥವಾ ಅದನ್ನು ನಮಗೆ ಬೇಕಾದಂತೆ ಹೊಸದಾಗಿ ಕಟ್ಟಿಕೊಳ್ಳುವ ಸಾಧ್ಯತೆ ಇದೆಯೇ? ಹೀಗೆ ಯೋಚಿಸುತ್ತಾ ಹೋದಾಗ, ಬಹುಶಃ ನಿಮಗೆ ನಿಮ್ಮ ಜೀವನದಲ್ಲಿ ತೆಗೆದುಕೊಳ್ಳ ಬೇಕಾದಂತಹ ನಿರ್ಧಾರಗಳು ಮತ್ತು ಆಯ್ಕೆಗಳ ಕುರಿತು ಸ್ಪಷ್ಟತೆ ಸಿಗಬಹುದು. ಭವಿಷ್ಯದಲ್ಲಿ ಅವರು ಮತ್ತೆ ಬರಬಹುದು ಎಂಬ ಕಾತರದಲ್ಲಿ ಚಾತಕಪಕ್ಷಿಯಂತೆ ಕಾಯುವ ಬದಲು, ಬದುಕಿನ ನೈಜತೆ ಅರ್ಥೈಸಿಕೊಂಡು, ನಿಮ್ಮನ್ನು ನೀವು ಪ್ರೀತಿಸಿ, ಗಡಿಬಿಡಿ ಇಲ್ಲದೆ, ಸೂಕ್ತ ವ್ಯಕ್ತಿಯನ್ನು ಕಂಡುಕೊಂಡು ಜೀವನ ಕಟ್ಟಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.