ADVERTISEMENT

ಅಕ್ಷರ ದಾಮ್ಲೆ ಅವರ ಅಂತರಂಗ ಅಂಕಣ: ‘ವಯಸ್ಸಿನ ಭ್ರಾಂತಿ’ ನಿಮ್ಮನ್ನು ಕುಗ್ಗಿಸದಿರಲಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 23:30 IST
Last Updated 17 ಅಕ್ಟೋಬರ್ 2025, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಶ್ವೇತಾ, ಸೊಂಡೆಕೊಪ್ಪ

ಮಹಿಳೆಯರ ವಯಸ್ಸು ಕೇಳಬಾರದು ಎನ್ನುವ ನಾಣ್ಣುಡಿ ಇರುವುದೇನೋ ಸರಿ. ಆದರೆ ಕೆಲವು ಹೆಣ್ಣುಮಕ್ಕಳಲ್ಲಿ ಇದು ಮಿತಿಮೀರಿದ ಹಂತಕ್ಕೆ ಹೋಗಿರುತ್ತದೆ. ತಮಗಿಂತ ನಾಲ್ಕೈದು ವರ್ಷಗಳಷ್ಟೇ ದೊಡ್ಡವರಾದ ಮಹಿಳೆಯರನ್ನೂ ‘ನಿಮಗೆ ವಯಸ್ಸಾಯಿತಲ್ಲಾ’ ಎಂದು ಆಗಾಗ್ಗೆ ಹೇಳಿ ಮಾನಸಿಕವಾಗಿ ಅವರನ್ನು ಕುಗ್ಗಿಸುತ್ತಲೇ ಇರುತ್ತಾರೆ. ವಯಸ್ಸು ದೇಹಕ್ಕಷ್ಟೇ ಮನಸ್ಸಿಗಲ್ಲ ಎನ್ನುವ ವಾಸ್ತವವನ್ನು ಅರಿಯದ ಇಂತಹವರನ್ನು, ‘ವಯಸ್ಸಿನ ಭ್ರಾಂತಿ’ಯಿಂದ ಹೊರತರುವುದು ಹೇಗೆ?

ADVERTISEMENT

ಈ ಪ್ರಶ್ನೆಯನ್ನು ಓದಿದಾಗ ನನ್ನ ಮನಸ್ಸಿನಲ್ಲಿ ಮೂಡಿದ್ದು ಮೂರು ಪ್ರಶ್ನೆಗಳು:
1. ‘ವಯಸ್ಸಿನ ಭ್ರಾಂತಿ’ಯಲ್ಲಿರುವ ಮಹಿಳೆಯರನ್ನು ಅದರಿಂದ ಹೊರತರುವುದು ಹೇಗೆ?
2. ಅದಕ್ಕಿಂತಲೂ ಆಳವಾಗಿ ಕಾಡುತ್ತಿರುವುದು, ಅವರು ಮಾಡುವ ಹೇಳಿಕೆಗಳಿಂದ ಉಂಟಾಗಿರುವಂತಹ ಮಾನಸಿಕ ಕುಗ್ಗುವಿಕೆ ಮತ್ತು ಅದರಿಂದ ಹೊರಬರುವುದು ಹೇಗೆ ಎಂಬ ಪ್ರಶ್ನೆ.
3. ಮೂರನೆಯದಾಗಿ ‘ವಯಸ್ಸಾಯಿತು’ ಎಂಬುದು ಅವಹೇಳನಕಾರಿ ಅಥವಾ ಅಗೌರವಯುತವಾದಂತಹ ಮಾತು ಯಾಕಾಗಬೇಕು? ಅದು ನಿಮ್ಮ ಅನುಭವದ ಪ್ರತೀಕವಾಗಬಾರದೇಕೆ?

ಮೊದಲಿಗೆ, ನಿಮ್ಮ ಮುಖ್ಯ ಪ್ರಶ್ನೆಯನ್ನು ಭೇದಿಸಲು, ನಾನು ಎತ್ತಿರುವ ಕೊನೆಯ ಪ್ರಶ್ನೆಯಿಂದ ಆರಂಭಿಸೋಣ. ವಯಸ್ಸಾಗುವುದು ಒಂದು ಸಾಮಾನ್ಯ ಪ್ರಕ್ರಿಯೆ. ಹುಟ್ಟಿದ ಮಗು ದೊಡ್ಡದಾಗುವುದನ್ನು ನಾವು ಎಷ್ಟು ಸಂಭ್ರಮಿಸುತ್ತೇವೋ ಅಷ್ಟೇ ಮಧ್ಯವಯಸ್ಸಿನ ನಂತರ ಇಳಿವಯಸ್ಸಿನ ಕಡೆ ಬೆಳೆಯುವುದರ ಬಗ್ಗೆ ಹಲುಬುತ್ತೇವೆ. ಆದರೆ ಇವೆರಡೂ ಅದೇ ಬೆಳವಣಿಗೆಯ ಎರಡು ಮುಖಗಳು ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕು.

ಅವರು ಹೇಳುವಾಗ ಯಾವ ಧ್ವನಿಯಲ್ಲಿ ಬೇಕಾದರೂ ಹೇಳಲಿ, ಆದರೆ, ಅದನ್ನು ಪರಿಗಣಿಸುವುದು ನಮ್ಮ ಹತೋಟಿಯಲ್ಲಿರುವ ವಿಚಾರ. ಅವರ ಧ್ವನಿಯಲ್ಲಿ ಇರಬಹುದಾದ ಅಣಕವನ್ನು ಮನದಲ್ಲಿಟ್ಟುಕೊಂಡು ಕುಚೋದ್ಯಗಳಿಗೆ ಬಲಿಯಾಗುವುದರ ಹಿಂದೆ, ಅವರ ಪಾತ್ರಕ್ಕಿಂತ ನಮ್ಮ ಪಾತ್ರವೇ ಹೆಚ್ಚಿರುತ್ತದೆ. ಯಾಕೆಂದರೆ, ಅವರು ಒಂದು ಮಾತಿನಲ್ಲಿ ಹೇಳಿರುತ್ತಾರೆ. ಆದರೆ, ಅದನ್ನು ಹತ್ತುಸಾವಿರ ಮಾತುಗಳನ್ನಾಗಿ ಮಾಡುವುದು ನಮ್ಮ ಮನಸ್ಸು. ಹಾಗಾಗಿ, ಮೊದಲು ನಮ್ಮ ನಕಾರಾತ್ಮಕ ಯೋಚನೆಗಳನ್ನು ತಡೆಯುವುದು ಮುಖ್ಯ.

ಕೆಲವೊಮ್ಮೆ ಸ್ಥೂಲಕಾಯದವರನ್ನು ಕೂಡಾ ಜನ ಅಣಕಿಸುತ್ತಾರೆ. ಹಾಗೆಯೇ ನಮ್ಮಲ್ಲಿರುವ ಅನೇಕ ವಿಚಾರಗಳನ್ನು ಕುರಿತು ಜನ ನಗಬಹುದು, ವ್ಯಂಗ್ಯವಾಡಬಹುದು. ಆದರೆ, ಜನ ನಗುತ್ತಾರೆ ಎಂದ ಮಾತ್ರಕ್ಕೆ ನಾವು ಅಂತಹ ನಗೆಪಾಟಲಿನ ವಸ್ತುವಾಗಿ ಬಲಿಪಶುವಾಗಬೇಕೇ ಎಂಬುದನ್ನು ನಾವು ಮೊದಲಿಗೆ ಅರಿತುಕೊಳ್ಳಬೇಕು. ಇಲ್ಲದಿದ್ದರೆ, ಯಾರು ಏನೇ ಅಂದರೂ ಅದು ನಮಗೆ ಗಾಢವಾಗಿ ತಟ್ಟುತ್ತಲೇ ಇರುತ್ತದೆ. ಹಾಗಾಗಿ, ನಮ್ಮ ಐಡೆಂಟಿಟಿಯ ಕುರಿತು ನಮಗಿರುವ ಪರಿಕಲ್ಪನೆಯನ್ನು ಸ್ಪಷ್ಟ ಮಾಡಿಕೊಳ್ಳಬೇಕು.

ಹೀಗೆ ಮಾಡಿದಾಗ, ನಾನು ಎತ್ತಿದ ಎರಡನೆಯ ಪ್ರಶ್ನೆಗೆ ಉತ್ತರ ಸಿಗುತ್ತದೆ. ಅದೇನೆಂದರೆ, ನಮಗೆ ನಮ್ಮ ಐಡೆಂಟಿಟಿಯ ಕುರಿತು ಯಾವಾಗ ಸ್ಪಷ್ಟತೆ ಇಲ್ಲವೋ ಆಗ ನಾವು ಇತರರ ಮಾತುಗಳಿಂದ ಅಥವಾ ಹೇಳಿಕೆಗಳಿಂದ ಕುಗ್ಗುವ ಅಥವಾ ಹಿಗ್ಗುವ ಪರಿಪಾಟಕ್ಕೆ ತೊಡಗುತ್ತೇವೆ. ಒಂದು ವೇಳೆ ನಮಗೆ ನಮ್ಮ ಕುರಿತು ಸ್ಪಷ್ಟತೆ ಇದ್ದರೆ, ಆಗ ನಾವು ಈ ರೀತಿಯ ಯಾವುದೇ ಸಮಸ್ಯೆಗಳಿಗೆ ಒಳಗಾಗುವುದಿಲ್ಲ. ಜನ ಏನು ಮಾತನಾಡಿದರೂ ಅದು ನಿಮಗೆ ನಾಟುವುದಿಲ್ಲ. ಹಾಗಂತ, ಇತರರ ಮಾತುಗಳನ್ನು ನಿರ್ಲಕ್ಷಿಸಿ ಎಂದು ಅರ್ಥವಲ್ಲ. ಬದಲಾಗಿ, ಅವರ ಮಾತುಗಳನ್ನು ನಾವು ನಮ್ಮ ಬೆಳವಣಿಗೆಗೆ ಬಳಸಿಕೊಳ್ಳಬೇಕು. ಒಂದು ವೇಳೆ, ಯಾರದ್ದಾದರೂ ಟೀಕೆ - ಟಿಪ್ಪಣಿಗಳಲ್ಲಿ ಹುರುಳಿದ್ದರೆ, ಅವುಗಳ ಆಳಕ್ಕೆ ಹೋಗಿ, ನಿಮ್ಮನ್ನು ನೀವು ತಿದ್ದಿಕೊಳ್ಳಬಹುದು. ತನ್ಮೂಲಕ ನಿಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬಹುದು. ಒಂದು ವೇಳೆ ಹುರುಳಿಲ್ಲದಿದ್ದರೆ, ಅವರ ಮಾತುಗಳನ್ನು ಹಾಗೆಯೇ ಬಿಟ್ಟುಬಿಡಬಹುದು.

ಇದಕ್ಕೆ ಬುದ್ಧ ಒಂದು ಉತ್ತಮ ಉದಾಹರಣೆಯನ್ನು ಕೊಟ್ಟಿದ್ದಾನೆ. ಒಂದು ಬಾರಿ ಒಬ್ಬ ಬಂದು ಬುದ್ಧನನ್ನು ತುಂಬಾ ಅವಾಚ್ಯವಾಗಿ ಬೈಯ್ಯುತ್ತಾನೆ ಮತ್ತು ನಿಂದಿಸುತ್ತಾನೆ. ಬುದ್ಧ ಶಾಂತವಾಗಿ ಅವನ್ನೆಲ್ಲಾ ಕೇಳುತ್ತಾ ನಗುತ್ತಿರುತ್ತಾನೆ. ಆಗ ಆತ ಇನ್ನೂ ಕುಪಿತನಾಗಿ, ‘ನಿನಗೆ ನಾನು ಇಷ್ಟೊಂದು ಬೈದರೂ ನಾಟುವುದಿಲ್ಲವೇ’ ಎಂದು ಕೇಳುತ್ತಾನೆ. ಅದಕ್ಕೆ ಬುದ್ಧ ಸಮಾಧಾನದಿಂದ, ‘ನೀನು ಕೊಟ್ಟದ್ದನ್ನು ನಾನು ತೆಗೆದುಕೊಂಡರೆ, ಅದು ನನ್ನದಾಗುತ್ತದೆ. ಆದರೆ, ನಾನು ತೆಗೆದುಕೊಳ್ಳದೇ ಇದ್ದರೆ, ಅದು ನಿನ್ನ ಬಳಿಯೇ ಉಳಿದುಹೋಗುತ್ತದೆ. ಅಲ್ಲವೇ?’ ಅಂತ ಮರುಪ್ರಶ್ನೆ ಮಾಡಿದ. ಬೈಯ್ಯುತ್ತಿದ್ದವನು ‘ಹೌದು’ ಅಂದ. ಆಗ ಬುದ್ಧ ಹೇಳಿದ, ‘ಈಗಲೂ ಅಷ್ಟೇ! ನೀನು ಬೈದ ಬೈಗುಳವನ್ನು ನಾನು ತೆಗೆದುಕೊಳ್ಳಲೇ ಇಲ್ಲ. ಹಾಗಾಗಿ, ಅವು ಯಾವುವೂ ನನ್ನದಾಗಲೇ ಇಲ್ಲ. ಬದಲಾಗಿ ಅವು ನಿನ್ನ ಬಳಿಯೇ ಇವೆ’ ಅಂತ.

ಹೀಗೆ, ಇತರರು ನಮ್ಮ ಕುರಿತು ಏನು ಹೇಳುತ್ತಾರೋ ಅವನ್ನು ಸ್ವೀಕರಿಸಬೇಕೋ ಅಥವಾ ನಿರಾಕರಿಸಬೇಕೋ ಎಂಬುದು ನಮ್ಮ ಕೈಯಲ್ಲಿದೆ.

ಇನ್ನೀಗ ನೀವು ಕೇಳಿರುವ ಪ್ರಶ್ನೆ, ಇಂತಹವರನ್ನು ‘ವಯಸ್ಸಿನ ಭ್ರಾಂತಿ’ಯಿಂದ ಹೊರತರುವುದು ಹೇಗೆ?’ ಇದಕ್ಕೆ ನನ್ನ ಮರುಪ್ರಶ್ನೆ ಏನೆಂದರೆ, ಯಾಕೆ ಹೊರತರಬೇಕು ಮತ್ತು ಅವರನ್ನು ಹೊರತರುವ ಅಗತ್ಯ ಇರುವುದು ಯಾರಿಗೆ? ಯಾಕೆಂದರೆ, ಯಾರು ಹಾಗೆ ಮಾತನಾಡುತ್ತಿದ್ದಾರೋ ಅವರಿಗಂತೂ ತಮಗೆ ‘ವಯಸ್ಸಿನ ಭ್ರಾಂತಿ’ ಇದೆ ಎಂದು ಅನ್ನಿಸುತ್ತಿರುವುದಿಲ್ಲ. ಜೊತೆಗೆ, ಅವರಿಗೆ ಅವರ ಮಾತುಗಳಲ್ಲಿ ಏನೂ ತಪ್ಪು ಅಥವಾ ತೊಂದರೆ ಕಾಣಿಸುತ್ತಿರುವುದಿಲ್ಲ. ಹಾಗಿರುವಾಗ, ಅವರಿಗೆ ಅದರಿಂದ ಹೊರಗೆ ಬರಬೇಕು ಎಂಬ ಅರಿವೇ ಇರುವುದಿಲ್ಲ. ಹಾಗಿರುವಾಗ, ಅವರನ್ನು ಅದರಿಂದ ಹೊರತರುವುದು ಸಾಧ್ಯವಿಲ್ಲ. ಒಂದು ವೇಳೆ ನೀವು ಅದಕ್ಕೆ ಮುಂದಾದರೂ ಅದು ವ್ಯರ್ಥ ಪ್ರಯತ್ನವಾದೀತು ಅಥವಾ ಒಂದಷ್ಟು ಜಗಳಗಳಾಗಬಹುದು. ಹಾಗಿರುವಾಗ, ಯಾಕೆ ಅಂತಹ ವಿಚಾರಕ್ಕೆ ಕೈಹಾಕಬೇಕು?

ಹಾಗಾಗಿ, ಅವರನ್ನು ಸರಿಪಡಿಸುವ ಬದಲು, ಅವರು ಹೇಳಿದ ಕಾರಣದಿಂದಾಗಿ ಕುಗ್ಗುತ್ತಿರುವ ನಿಮ್ಮ ಮನಸ್ಸನ್ನು ಸರಿಪಡಿಸಿಕೊಳ್ಳಿ. ಸಮಸ್ಯೆ ತನ್ನಿಂದ ತಾನೇ ಬಗೆಹರಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.