ನನ್ನ ಮಗಳಲ್ಲಿ ಯಾವುದನ್ನೂ ನಂಬದ ಗುಣ ಸ್ವಭಾವ ಬೆಳೆಯುತ್ತಿದೆ. ಏನು ಮಾಡಬೇಕು? ಎಲ್ಲರನ್ನೂ ಅನುಮಾನದ ದೃಷ್ಟಿಯಿಂದ ನೋಡುತ್ತಾಳೆ. ವಿನಾಕಾರಣ ಆತಂಕ ಪಡುತ್ತಾಳೆ. ಇದಕ್ಕೆ ಪರಿಹಾರವಿದೆಯೇ?
ಸಾಧಾರಣವಾಗಿ ನಾವೆಲ್ಲರೂ ಸಮಾಜದಲ್ಲಿ ಜನರು ಒಳ್ಳೆಯವರಾಗಿರುತ್ತಾರೆ ಎಂದು ನಂಬುತ್ತೇವೆ. ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವವರಾಗಿರುತ್ತಾರೆ ಎಂದು ಅಂದುಕೊಂಡಿರುತ್ತಾರೆ. ಪ್ರಾಕೃತಿಕವಾಗಿ ಮನುಷ್ಯ ಹಾಗೆಯೇ ಇದ್ದದ್ದು ಕೂಡಾ. ಅದನ್ನೇ ನಾವು ಪ್ರಾಣಿಗಳಲ್ಲೂ ಸಾಮಾನ್ಯವಾಗಿ ಕಾಣುತ್ತೇವೆ. ಹಾಗಾಗಿಯೇ ನಾವು ಹಂಚಿ ತಿನ್ನುವ, ಜೊತೆಯಾಗಿ ಕೆಲಸಗಳನ್ನು ಮಾಡುವ ನಡವಳಿಕೆಯನ್ನು ಕಾಣುತ್ತೇವೆ. ಇವುಗಳನ್ನು ನಾವು ಬುಡಕಟ್ಟು ಜನಾಂಗಗಳಲ್ಲೂ ಕಾಣಬಹುದು. ಅಲ್ಲಿ ಒಬ್ಬರು ಇನ್ನೊಬ್ಬರ ಬಗ್ಗೆ ಸಂಶಯ ಪಡುವುದಾಗಲೀ ಅಥವಾ ಒಬ್ಬರು ಇನ್ನೊಬ್ಬರನ್ನು ಕಾಲೆಳೆಯುವ ಕುಹಕಗಳಾಗಲೀ ಅಥವಾ ‘ತಾನು, ತನ್ನದು’ ಮುಂತಾದ ಅಹಂಕಾರೀ ಭಾವ ಇರುವುದಿಲ್ಲ. ಎಲ್ಲರೂ ಒಬ್ಬರಿಗೊಬ್ಬರು ಸಹಕಾರವನ್ನು ನೀಡುತ್ತಾ ಸಹಬಾಳ್ವೆಯ ಜೀವನವನ್ನು ನಡೆಸುವಲ್ಲಿ ನಂಬಿಕೆಯನ್ನು ಇಟ್ಟಿರುತ್ತಾರೆ.
ಆದರೆ ಮನುಷ್ಯನ ಲೋಭ, ಸ್ವಾರ್ಥ ಮನೋಭಾವದಿಂದ ಮಾತ್ರವಲ್ಲ ಕೆಲವು ಅಮಾನವೀಯ ಕುಕೃತ್ಯಗಳಿಂದಾಗಿ ಸಮಾಜವು ಸುರಕ್ಷಿತವಾಗಿ ಉಳಿದಿಲ್ಲ. ಒಂದು ವೇಳೆ ನಾವು ಬೆಳೆಯುವಾಗ ಇಂತಹ ಸಮಾಜವನ್ನೇ ನೋಡಿಕೊಂಡು ಬೆಳೆದರೆ, ಆವಾಗ ವ್ಯಕ್ತಿಗೆ ಸಮಾಜದ ಬಗ್ಗೆ ಅಪನಂಬಿಕೆ ಬೆಳೆಯುವ ಸಾಧ್ಯತೆ ಇರುತ್ತದೆ. ಅಥವಾ ಬಾಲ್ಯದ ಸಂದರ್ಭದಲ್ಲಿ ತಂದೆಯ ಲಭ್ಯತೆ ಇಲ್ಲದಿದ್ದಾಗಲೂ ವ್ಯಕ್ತಿಗೆ ಸಮಾಜದ ಕುರಿತು ಅಧೈರ್ಯ ಉಂಟಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣವೇನೆಂದರೆ, ಮನಃಶ್ಶಾಸ್ತ್ರೀಯವಾಗಿ ಹೇಳುವುದಾದರೆ, ಜಗತ್ತಿನ ಬೆಳಕನ್ನು ಕೊಡುವವಳು ತಾಯಿ, ಮತ್ತು ಜಗತ್ತನ್ನು ತೋರಿಸುವುದು ತಂದೆ. ಯಾವಾಗ ತಂದೆಯ ಆರೈಕೆ ಆ ಎಳವೆಯಲ್ಲಿ ಉತ್ತಮ ರೀತಿಯಲ್ಲಿ ಸಿಗುತ್ತದೋ ಆವಾಗ ಮಗುವಿಗೆ ತನ್ನ ಮೇಲೂ ನಂಬಿಕೆ ಬರುತ್ತದೆ. ತನ್ನ ರಕ್ಷಣೆಯ ಕುರಿತು ನಂಬಿಕೆ ಇರುತ್ತದೆ. ತನ್ಮೂಲಕ ಸಮಾಜದ ಕುರಿತು ನಂಬಿಕೆ ಮೂಡುತ್ತದೆ. ಆದರೆ ಯಾವಾಗ ಆ ವಯಸ್ಸಿನಲ್ಲಿ ಸಮಸ್ಯೆ ಉಂಟಾಗುತ್ತದೋ, ಆವಾಗ ಮಕ್ಕಳು ಸಮಾಜದ ಕುರಿತು ಸಂಶಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಾರೆ.
ಇವ್ಯಾವುವೂ ಕಾರಣಗಳಲ್ಲದಿದ್ದರೆ, ಆಕೆಯ ಮೇಲೆ ದೌರ್ಜನ್ಯ ನಡೆದಿರುವ ಸಾಧ್ಯತೆಯೂ ಇರಬಹುದು. ದಯವಿಟ್ಟು ಒಮ್ಮೆ ತಜ್ಞರನ್ನು ಭೇಟಿ ಮಾಡಿ ವಿಸ್ತಾರವಾಗಿ ವಿಚಾರಿಸಿ. ಸಮಸ್ಯೆಯ ಮೂಲ ಸಿಗಬಹುದು ಮತ್ತು ಅದನ್ನು ಪರಿಹರಿಸಲೂ ಸಾಧ್ಯವಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.