ADVERTISEMENT

ಜಾಗೃತಿ ಮಾಸ | ಅಪೆಂಡಿಸಿಯಲ್‌ ಕ್ಯಾನ್ಸರ್‌ ಮುನ್ನೆಚ್ಚರಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 2:35 IST
Last Updated 3 ಸೆಪ್ಟೆಂಬರ್ 2022, 2:35 IST
.
.   

ಅಪೆಂಡಿಕ್ಸ್‌ ಕುರಿತುಬಹುತೇಕರಿಗೆ ತಿಳಿದಿದೆ. ಆದರೆ, ಅಪೆಂಡಿಸಿಯಲ್‌ ಕ್ಯಾನ್ಸರ್‌ ಬಗ್ಗೆ ತಿಳಿದಿರುವವರು ಬಹಳ ವಿರಳ. ಇದು ಸದ್ದಿಲ್ಲದೇ ದೇಹ ಪ್ರವೇಶಿಸುವ ಕ್ಯಾನ್ಸರ್‌ಗಳಲ್ಲೊಂದು.

‌ಅಂಪೆಂಡೈಸ್ ಎನ್ನುವುದು ಮನುಷ್ಯನ ದೇಹದ ಒಂದು ಅಂಗ. ಹೊಟ್ಟೆಯ ಕೆಳಗೆ ಬಲ ಭಾಗದಲ್ಲಿ ಕರುಳಿನಿಂದ ಬೆರಳಿನ ಆಕಾರದಲ್ಲಿ ಹೊರ ಬಂದಿರುವುದನ್ನು ಅಪೆಂಡಿಕ್ಸ್ ಎನ್ನುತ್ತಾರೆ. ಕೆಲವೊಮ್ಮೆ ಅಪೆಂಡಿಕ್ಸ್‌ನಲ್ಲಿ ದ್ರವದ ಹರಿವಿನ ಕೊರತೆ ಉಂಟಾಗಿ, ಅದರೊಳಗಿದ್ದಜೀವಕೋಶಗಳ ಮೇಲೆ ಪರಿಣಾಮ ಬೀರಿ, ಆ ಕೋಶಗಳು ಅನಿಯಂತ್ರಿತವಾಗಿ ಬೆಳೆದು, ಗಡ್ಡೆ ರೂಪಕ್ಕೆ ಪರಿವರ್ತನೆಯಾಗುತ್ತದೆ. ಇದನ್ನೇ ಅಪೆಂಡಿಸಿಯಲ್‌ ಕ್ಯಾನ್ಸರ್‌ (Appendiceal Cancer) ಎನ್ನುವುದು. ಈ ಗಡ್ಡೆ ಬೆಳೆಯುತ್ತಾ, ದೇಹದ ಇತರ ಭಾಗಗಳಿಗೆ ಹರಡುತ್ತದೆ. ಇದೊಂದು ಅಪರೂಪದ ಕ್ಯಾನ್ಸರ್ ಗಡ್ಡೆಯಾಗಿದ್ದು, 10 ಲಕ್ಷ ಜನರಲ್ಲಿ ಒಬ್ಬರು ಅಥವಾ ಇಬ್ಬರಲ್ಲಿ ಕಾಣಿಸಿ ಕೊಳ್ಳುತ್ತದೆ. 50 ರಿಂದ 55 ವರ್ಷ ವಯೋಮಾನದವರಲ್ಲಿ ಇದು ಹೆಚ್ಚಾಗಿ ಕಾಣಿಸಕೊಳ್ಳುತ್ತದೆ.

ಕ್ಯಾನ್ಸರ್ ವಿಧಗಳು
ಅಪೆಂಡಿಸಿಯಲ್‌ ಕ್ಯಾನ್ಸರ್‌ನಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ, ಅಡೆನೊಕಾರ್ಸಿನೋಮ, ನ್ಯೂರೋಎಂಡೋಕ್ರೈನ್ ಗೆಡ್ಡೆಗಳು ಮತ್ತು ಮ್ಯೂಕೋಸೆಲೆ. ಅಡೆನೊಕಾರ್ಸಿನೋಮಾ ಕ್ಯಾನ್ಸರ್‌ ಸಾಮಾನ್ಯ ಸ್ಕ್ಯಾನ್‌ ಪ್ರಕ್ರಿಯೆ ಮೂಲಕ ಪತ್ತೆಯಾಗುವುದಿಲ್ಲ. ಅದನ್ನು ಪತ್ತೆ ಮಾಡಲು ಸಿಟಿ ಸ್ಯಾನ್‌ ಅಥವಾ ಪೆಟ್‌ ಸ್ಕ್ಯಾನ್‌ ಮಾಡಿಸಬೇಕು. ಇದು ಅನ್ನನಾಳದ ಮೂಲಕ ಹಾದುಹೋಗುವ ನಾಳಗಳಲ್ಲಿ ಕಂಡು ಬರುವ ಕ್ಯಾನ್ಸರ್‌ನ ಒಂದು ವಿಧ.

ADVERTISEMENT

ಈ ಕ್ಯಾನ್ಸರ್‌ಗೆ ಕಾರಣವೇನು?
ಈ ಅಪೆಂಡಿಸಿಯಲ್‌ ಕ್ಯಾನ್ಸರ್‌ ಬರುವುದಕ್ಕೆ ಯಾವುದೇ ನಿಖರ ಕಾರಣಗಳಿಲ್ಲ. ಇದು ಅನುವಂಶಿಯವಾಗಿಯೂ ಬರುವ ಕ್ಯಾನ್ಸರ್‌ ಅಲ್ಲ. ಆದರೆ, ಅತಿ ಕಡಿಮೆ ನೀರು ಕುಡಿಯುವುದು, ಕಳಪೆ ಆಹಾರ ಸೇವಿಸುವುದು, ಮದ್ಯಪಾನ ಹಾಗೂ ಧೂಮಪಾನದ ವ್ಯಸನಿಗಳಲ್ಲಿ ಹೆಚ್ಚು ಕಂಡು ಬಂದಿರುವುದಾಗಿ ವರದಿಯಾಗಿದೆ.

ಅಪೆಂಡಿಸೈಟಿಸ್ ಆದಾಗ, ಕೆಳಗಿನ ಹೊಟ್ಟೆ ಅಥವಾ ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಹೊಟ್ಟೆ ನೋವು ಹೊಕ್ಕಳಿನ ಭಾಗದಿಂದ ಪ್ರಾರಂಭವಾಗಿ ನಿಧಾನವಾಗಿ ಕೆಳ ಭಾಗಕ್ಕೆ ವಿಸ್ತರಿಸುತ್ತದೆ. ಉರಿಯೂತ ಹೆಚ್ಚಾದಷ್ಟು ಹೊಟ್ಟೆ ನೋವು ಹೆಚ್ಚಾಗುತ್ತದೆ. ಇದನ್ನು ನಿರ್ಲಕ್ಷ್ಯಿಸಿದದೂ ಅದು ಕ್ಯಾನ್ಸರ್‌ಗೆ ತಿರುಗುವ ಸಾಧ್ಯತೆ ಇದೆ.

ಪ್ರಮುಖ ಲಕ್ಷಣಗಳು
ಇದ್ದಕ್ಕಿದ್ದಂತೆ ಹೊಟ್ಟೆಯ ಕೆಳಭಾಗದಲ್ಲಿ ಅಥವಾ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು. ಕೆಲವೊಮ್ಮೆ ಹೊಕ್ಕಳಿನ ಭಾಗದಲ್ಲಿ ನೋವು ಪ್ರಾರಂಭವಾಗಿ ನಿಧಾನವಾಗಿ ಹೊಟ್ಟೆಯ ಬಲ ಭಾಗದಲ್ಲಿ ಕೆಳ ಭಾಗಕ್ಕೆ ನೋವು ವಿಸ್ತರಿಸುವುದು. ಸೀನಿದಾಗ, ನಡೆದಾಗ, ಓಡಿದಾಗ, ಬಾಗಿದಾಗ, ಭಾರ ಎತ್ತಿದಾಗ ನೋವು ವಿಪರೀತವಾಗುವುದು. ವಾಕರಿಕೆ ಮತ್ತು ವಾಂತಿಯ ಲಕ್ಷಣಗಳು ಕಾಣಿಸಿಕೊಳ್ಳುವುದು. ಹಸಿವಾಗದಿರುವುದು, ಮಲಬದ್ಧತೆ ಅಥವಾ ವಿಪರೀತ ಭೇದಿ– ಇವೆಲ್ಲ ಅಪೆಂಡಿಯಸಿಸ್‌ ಕ್ಯಾನ್ಸರ್‌ನ ಲಕ್ಷಣಗಳು

ಮುನ್ನೆಚ್ಚರಿಕೆ ಏನು?
ಅಪೆಂಡಿಸಿಯಲ್ ಕ್ಯಾನ್ಸರ್‌ ಬರದಂತೆ ತಡೆಯಲು ಜೀವನ ಶೈಲಿ ಉತ್ತಮವಾಗಿಟ್ಟುಕೊಳ್ಳಬೇಕು. ಉತ್ತಮ ಆಹಾರ, ಸಾಕಷ್ಟು ನೀರು ಕುಡಿಯಬೇಕು. ಹೊಟ್ಟೆ ನೋವಿನಂತಹ ಸಮಸ್ಯೆ‌ಯಾದಾಗ ನಿರ್ಲಕ್ಷ್ಯ ಮಾಡಬಾರದು. ಎಲ್ಲದಕ್ಕಿಂತ ಮುಖ್ಯವಾಗಿ, ಮೇಲೆ ತಿಳಿಸಿದ ಅಪೆಂಡಿಕ್ಸ್‌ನ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆಪಡೆಯಬೇಕು.

ಚಿಕಿತ್ಸೆಯ ಆಯ್ಕೆಗಳು
ಯಾವ ವಿಧದ ಅಪೆಂಡಿಯಸಿಸ್‌ ಕ್ಯಾನ್ಸರ್ ತಗುಲಿದೆ ಎಂಬುದರ ಮೇಲೆ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.ಪ್ರಮುಖವಾಗಿ ಇದಕ್ಕೆ ಶಸ್ತ್ರಚಿಕಿತ್ಸೆ, ಕೀಮೊಥೆರಪಿ ಅಥವಾ ಪೆಪ್ಟೈಡ್ ರಿಸೆಪ್ಟರ್ ರೇಡಿಯೊನ್ಯೂಕ್ಲೈಡ್ ಥೆರಪಿ (PRRT) ಚಿಕಿತ್ಸೆಯ ಅಗತ್ಯವಿರುತ್ತದೆ.

ನ್ಯೂರೋಎಂಡೋಕ್ರೈನ್ ಟ್ಯೂಮರ್‌ಗಳಿಗೆ (NET) ಚಿಕಿತ್ಸೆ ನೀಡಲು ಪಿಆರ್‌ಆರ್‌ಟಿ (PRRT) ಚಿಕಿತ್ಸೆ ವಿಧಾನವನ್ನು ಬಳಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಕಿರಣ ನೀಡುವುದರಿಂದ ಕ್ಯಾನ್ಸರ್‌ ಗೆಡ್ಡೆಯನ್ನು ನಾಶಪಡಿಸಿ, ಅದರ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಶಸ್ತ್ರಚಿಕಿತ್ಸೆಯು ಕೆಲವೊಮ್ಮೆ ಹೈಪರ್‌ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕಿಮೊಥೆರಪಿ (HIPEC) ಅಥವಾ ಒತ್ತಡದ ಇಂಟ್ರಾ ಪೆರಿಟೋನಿಯಲ್ ಏರೋಸೋಲೈಸ್ಡ್ ಕಿಮೊಥೆರಪಿ (PIPAC) ಚಿಕಿತ್ಸೆಯೂ ಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.