ADVERTISEMENT

ಅಶೋಕವನದ ಜೀವಸಂಜೀವಿನಿಗಳು

ಡಾ.ಗೀತಾ ಸತ್ಯ
Published 12 ಅಕ್ಟೋಬರ್ 2018, 19:30 IST
Last Updated 12 ಅಕ್ಟೋಬರ್ 2018, 19:30 IST
ಅಶೋಕಪುಷ್ಪ
ಅಶೋಕಪುಷ್ಪ   

ಕೆಲವು ಪುರಾಣಗಳ ಪ್ರಕಾರ ರಾವಣನಿಗೆ ವೈದ್ಯಶಾಸ್ತ್ರವೂ ಕರತಲಾಮಲಕವಾಗಿತ್ತಂತೆ! ಸೀತಾಮಾತೆಯಂತಹ ಪತಿಪರಾಯಣೆಯ ಮನವನ್ನು ಗೆಲ್ಲಲು ರಾವಣನು ಆಕೆಯ ತಂಗುವ ಏರ್ಪಾಡು ಅಶೋಕವನದಲ್ಲಿ ಮಾಡಿಸಿದ್ದನು. ಹೀಗೆ ಕವಿ ವಾಲ್ಮೀಕಿಯ ಮೂಲಕ ಅಶೋಕಮರಗಳು ಜನಮಾನಸಕ್ಕೆ ಪರಿಚಯವಾದವು. ಆಯುರ್ವೇದದ ಶಾಸ್ತ್ರಗ್ರಂಥಗಳು ಅಶೋಕಮರವನ್ನು ಮನಸಾರೆ ಕೊಂಡಾಡಿವೆ. ಅವುಗಳ ಅತಿ ಬಳಕೆ ಯುಗ ಆರಂಭಗೊಂಡಿತು. ಇಂದು ನಮ್ಮ ಕಾಡುಗಳಲ್ಲಿ ಅಶೋಕಮರಗಳಿಲ್ಲ. ಅಂತಹ ಅಶೋಕಮರದ ಹೆಸರಿನ ಒಂದು ಪ್ರದೇಶ ಗೋಕರ್ಣದ ಪರಿಸರದಲ್ಲಿದೆ. ಓಂ ಬೀಚ್ ಹಾದಿಯ ಗುಡ್ಡಗಳ ಇಳಿಜಾರು; ಅಲ್ಲಿದೆ ವೇದಶ್ರವ ಶರ್ಮರ ಜೀವ ಸಂಜೀವಿನಿಗಳ ಇರುನೆಲೆ ತೋಟ. ಬೆಳೆದು ನಿಂತ ಸುಮಾರು ನೂರೈವತ್ತು ಅಶೋಕದ ಮರಗಳ ತೋಪು.

ಮನೆ ಮದ್ದುಗಳ ಪಾಠ ಅಶೋಕದಿಂದಲೇ ಆರಂಭವಾಗಲಿ. ಐರೋಪ್ಯ ದೇಶಗಳಲ್ಲಿ ಆಯುಷ್ ಪದ್ಧತಿಗಳನ್ನು ಜನಪ್ರಿಯಗೊಳಿಸಲು ಏಕಾಂಗಿಯಾಗಿ ಹೋರಾಡುತ್ತಿರುವ ಭಾರತೀಯ ವೈದ್ಯೆ ಡಾ. ಅಮೀನಾ ಅಖ್ತರ್. ಆಕೆ ಯುನಾನಿ ವೈದ್ಯೆ. ಆದರೆ ಮಹಿಳೆಯರ ಋತುಸ್ರಾವದ ಎಂತಹ ಸಮಸ್ಯೆ ಇರಲಿ ನಾನು ಅಶೋಕೆ ಬಳಸಿ ವಾಸಿ ಮಾಡುವೆ ಎನ್ನುತ್ತಾರೆ ಡಾ. ಅಮೀನಾ. ಅದು ಅತಿಶಯದ ಮಾತಲ್ಲ. ಭದ್ರಾವತಿಯ ಖ್ಯಾತ ಅಲೋಪತಿ ವೈದ್ಯೆ ಹಾಗೂ ಲೇಖಕಿ ಡಾ. ವೀಣಾ ಭಟ್ ಅವರು ತಮ್ಮ ನರ್ಸಿಂಗ್ ಹೋಂಗೆ ಬರುವ ನೂರಕ್ಕೆ ನೂರು ಮಹಿಳೆಯರಿಗೆ ಗರ್ಭಕೋಶ ಕತ್ತರಿಸಿ ತೆಗೆಯುವ ಸಲಹೆ ಸುತರಾಂ ಕೊಡುವುದಿಲ್ಲ. ಸ್ವತಃ ಅಂತಹ ಸರ್ಜರಿ ತಾವೂ ನಡೆಸುವುದಿಲ್ಲ. ಅವರು ಬಳಸುವ ಏಕೈಕ ಸಂಜೀವಿನಿ ಅಶೋಕಮರದ ಚಕ್ಕೆಯ ವಿವಿಧ ರೂಪಾಂತರ. ಮೂಲತಃ ಉತ್ತರ ಕನ್ನಡ ಜಿಲ್ಲೆಯವರೇ ಆದ ಡಾ. ವೀಣಾ ಅವರಿಗೆ ಮನೆಮದ್ದು ಪಾಠಗಳು ಸ್ವತಃ ರಕ್ತಗತವಾಗಿವೆ. ಬಲಿತಮರದ ಚಕ್ಕೆಯ ಹಾಲು ಕಷಾಯ ಕುಡಿದ ನಮ್ಮ ತಾಯಂದಿರ, ಕಿಶೋರಿಯರ ಗರ್ಭಕೋಶದ ಆರೋಗ್ಯ ಹಿಂದಿನ ತಲೆಮಾರಿನಲ್ಲಿ ಗಟ್ಟಿ ಮುಟ್ಟಾಗಿತ್ತು. ಅಂತಹ ತುಂಬು ಕುಟುಂಬದ ಮನೆ ಮಗಳು ನಾನು. ನನ್ನಮ್ಮನ ಹದಿನೈದನೆಯ ಗರ್ಭವಾಸದ ಸಂಭ್ರಮ ನನ್ನದು. ಇಂದಿನ ದಿನಮಾನದ ದುಡಿಯುವ ಮಹಿಳೆಯರ ಏಕೈಕ ದುರ್ಭರ ಪ್ರಸಂಗ ಋತುಬಂಧ. ಅದೀಗ ಒಡಲಿನ ಕತ್ತರಿ ಚಾಕುವಿನ ಕೈಚಳಕಕ್ಕೆ ಇಂಬಾಗಿದೆ. ಅಷ್ಟೆ ವ್ಯಾಪಕವಾಗಿ ಇಂದು ಮೈನೆರೆವ ಕಿಶೋರಿಯರ ಪರಪಾಟಲು ದಿನೇ ದಿನೇ ಏರುಮುಖವಾಗುತ್ತಿದೆ. ಅಂತಹ ಸಮಸ್ಯೆಯ ತಡೆ ಮತ್ತು ಚಿಕಿತ್ಸೆಗೆ ಅಶೋಕವೃಕ್ಷವು ರಾಮಬಾಣ. ಅಶೋಕದ ನೆತ್ತರುರಂಗಿನ ಹೂವಿನ ಗೊಜ್ಜು, ತಂಬುಳಿಯ ಪರಿಚಯ ಹಿಂದಿನ ತಲೆಮಾರಿಗಿತ್ತು. ಅದರ ಬೀಜಗಳನ್ನು ತಾಂಬೂಲದೆಲೆ ಸಂಗಡ ಅಡಿಕೆಯಾಗಿ ಇಂದಿಗೂ ಶ್ರೀಲಂಕೆಯ ಮಂದಿ ಬಳಸುವರು.

ಅಶೋಕವನದ ನಿರ್ಮಾತೃ ಶರ್ಮರ ಮೊಮ್ಮಗ ಎರಡೂವರೆ ವರ್ಷದ ಮಧುಶ್ರವ. ತಾನೇ ತಾನಾಗಿ ತೋಟ ತುಂಬ ಬೆಳೆದ ಅಡಿ ಗಾತ್ರದ ನೆಲನೆಲ್ಲಿಯ ಗಿಡಗಳನ್ನು ಆತ ಗುರುತಿಸಬಲ್ಲ. ಅದರ ಕಹಿ ಎಲೆಗಳನ್ನು ಅನಾಮತ್ತಾಗಿ ಅಗಿದು ತಿನ್ನ ಬಲ್ಲ. ತಾತನಿಂದ ಅದನ್ನು ಬಲ್ಲವನಾತ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನೆಲನೆಲ್ಲಿಯ ಗಿಡದ ಬಳಕೆಯ ಬಗ್ಗೆ ನೊಬೆಲ್ ಪಾರಿತೋಷಕ ಪಡೆದ ವಿಜ್ಞಾನಿಯ ಬಗ್ಗೆ ಆತನಿಗೇನೂ ತಿಳಿಯದು. ಅಮ್ಮ ಆಯುರ್ವೇದ ವೈದ್ಯೆ ಸೌಮ್ಯಶ್ರೀ ಪತಂಜಲಿ ಕೊಡುವ ಕಹಿ ಕಷಾಯಕ್ಕಿಂತ ತೋಟದ ಸಹದೇವೀ ಸಹಿತ ಅಮೃತಬಳ್ಳಿ ಕಷಾಯಪಾನ ಪುಟಾಣಿ ಮಧುಶ್ರವನಿಗಿಷ್ಟವಂತೆ. ಆತನ ನೆಗಡಿಗೆ ವೇದಕಾಲದ ಸಹದೇವೀ ಕಷಾಯವೇ ಸಂಜೀವಿನಿ. ಆಯುರ್ವೇದ ಪ್ರಸಿದ್ಧ ಅಮೃತಬಳ್ಳಿಯೇ ಮನೆ ಮದ್ದು. ಜ್ವರ ತಡೆಯುವ ಸುಲಭ ಹಾದಿ. ಸುಮಾರು ಹತ್ತೆಕರೆ ಪ್ರದೇಶದ ಅಶೋಕೆಯ ಮಾನವ ನಿರ್ಮಿತ ಕಾಡು ಇದೀಗ ಮೂರೂವರೆ ದಶಕದಷ್ಟು ಹಳೆಯದು. ಅದು ಶರ್ಮರ ಪ್ರಯತ್ನ. ಅವರ ತಾತ ಗತಿಸಿದ ದೈವರಾತ ಶರ್ಮರು ರಮಣ ಮಹರ್ಷಿಗಳ ಸಮಕಾಲೀನರು.

ADVERTISEMENT

ಆಗುಂಬೆ, ಹೊಸನಗರ, ಕೊಡಚಾದ್ರಿಯ ನಿತ್ಯಹರಿದ್ವರ್ಣ ಕಾನನದಲ್ಲಿ ಮರ ಮಂಜಲ್ ಅಥವಾ ಮರದರಶಿನದ ಬಳ್ಳಿ ಎಂಬ ಔಷಧೀಯ ಸಸ್ಯ ಹಿಂದೆ ಇತ್ತು. ನೋಡ ನೋಡುತ್ತಿದ್ದಂತೆಯೇ ಅದು ತನ್ನ ಇರುನೆಲೆಯಲ್ಲಿ ಸಂಪೂರ್ಣವಾಗಿ ಸೂರೆಯಾಗಿದೆ. ಕಿರು ಬೆರಳಿನ ಗಾತ್ರದ ಬಳ್ಳಿ ಕೂಡ ಇಂದು ಕಾನನದಲ್ಲಿಲ್ಲ. ಅದರ ಉಪಯೋಗ ಬಲ್ಲಿರಾ? ಅದು ಅತ್ಯಂತ ಉಪಕಾರಿ ಸೌಂದರ್ಯವರ್ಧಕ. ಮುಖಕಾಂತಿಗೆ ಬಳಕೆಯಾಗುವ ಈ ಸಸ್ಯದ ಮಿತಿ ಮೀರಿದ ಕೊಯಿಲಿನ ಹಿಂದೆ ಅದರ ಐರೋಪ್ಯ ದೇಶಗಳ ಬೇಡಿಕೆ ಇತ್ತು. ಕಾಡು ಬರಿದಾದ ಬಳಿಕ ಮರ ಮಂಜಲ್ ಸಸ್ಯದ ಕೃಷಿಗೆ ಕೊಂಚ ಪ್ರಯತ್ನ ನಡೆದಿದೆ. ಅಂತಹ ಮರದರಶಿನದ ಭಾರೀ ಬಳ್ಳಿ ಅಶೋಕೆಯ ಸಂಜೀವಿನಿಯೇ ಸೈ. ಮುಖಕಾಂತಿ ಮಾತ್ರ ಅಲ್ಲ, ಕಣ್ಣಿನ ಸೌಂದರ್ಯ ಮತ್ತು ದೃಷ್ಟಿದೋಷ ನಿವಾರಕ ಮದ್ದು ರಸಾಂಜನಕ್ಕೆ ಈ ಬಳ್ಳಿ ಅತಿ ಅಗತ್ಯ. ಧಾತಕೀಕುಸುಮ ಎಂದರೆ ಹುಳಿಬರಿಸುವ ಮದ್ದುಗಳೆನಿಸಿದ ಆಸವಾರಿಷ್ಟಕ್ಕೆ ಅಗತ್ಯ ವಸ್ತು. ಅದಕ್ಕೆ ಧಾಯೀ ಎಂಬ ಹಿಂದಿ ಹೆಸರು. ಅಂದರೆ ತಾಯಿಗೆ ಸಮಾನ ಪದ. ಎದೆಹಾಲಿನಷ್ಟು ಪೋಷಕ ವಸ್ತುಗಳ ಆಗರವಿದು. ಪ್ರಿಯಾಲ ಎಂಬ ಮತ್ತೊಂದು ಮರ. ಅದರ ಪುಟಾಣಿ ಬೀಜವೇ ಚಿರೌಂಜಿ ಎಂಬ ಸುವಸ್ತು. ಅದನ್ನು ತ್ರಿದೋಷ ಶಾಮಕ ಮತ್ತು ಮಕ್ಕಳ ಚಿರಜೀವನದ, ತೂಕ ಹೆಚ್ಚಿಸುವ ಒಣಹಣ್ಣು ಎಂದು ಚರಕಸಂಹಿತೆ ಬಣ್ಣಿಸುತ್ತದೆ. ಅಂತಹ ಚಿರಜೀವನಕಾರಿ ಚಿರೌಂಜೀ ಮರಗಳು ಹತ್ತಾರು ಅಶೋಕವನದ ಸಂಪತ್ತು. ನೀಲಿ, ಕುಟಜದ ಎರಡು ಪ್ರಕಾರ, ಐದು ಬಗೆಯ ಬ್ರಾಹ್ಮಿ, ಶರಪುಂಖ, ದಶಮೂಲದ ಹತ್ತು ಸಸ್ಯಗಳು, ನೆಲಬೇವು – ಹೀಗೆ ಅಶೋಕವನದ ಸಸ್ಯ ಸಂಜೀವನಿ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸುಮಾರು ಐನೂರು ಸಸ್ಯ ವೈವಿಧ್ಯ ಇಲ್ಲಿದೆ.

‘ನಮ್ಮೂರ ಮಂದಾರ ಹೂವೇ’ ಚಲನಚಿತ್ರದ ಬಹುತೇಕ ಚಿತ್ರೀಕರಣದಲ್ಲಿ ಉತ್ತರ ಕನ್ನಡದ ಅನೇಕ ತಾಣಗಳು ಚಿತ್ರಿತ. ಆದರೆ ಮಂದಾರಹೂವು ಎಂದರೇನು – ಎಂದು ನಿಮಗೆ ತಿಳಿದಿರಲಿಕ್ಕಿಲ್ಲ. ವಿವಿಧ ಬಣ್ಣದ ಹೂವು ಬಿಡುವ ಮಂದಾರ ಮರಗಳಿಲ್ಲಿವೆ. ಅದರ ಎಳೆಯ ಹೂವು, ಕಾಯಿಯನ್ನು ಬಳಸಿ ಅಡುಗೆ ಮಾಡಲು ಸಾಧ್ಯ. ಇಂದಿನ ಹೊಸ ಸವಾಲು ಕಾಯಿಲೆ ಎನಿಸಿದ ಥೈರಾಯಿಡ್ ಏರಿಳಿತದ ರಾಮಬಾಣಮದ್ದು ಮಂದಾರ ಮರದ ತೊಗಟೆ!

ಧಾತಕೀಕುಸುಮ

ಅಗೋ ಅಲ್ಲಿದೆ ಸಂಜೀವಿನಿ ಸದೃಶ ಕದಂಬದ ಮರ. ನಮ್ಮ ರಾಜ್ಯವನ್ನು ಸಾವಿರ ವರ್ಷ ಆಳಿದ ಕದಂಬ ವಂಶದ ಸ್ಥಾಪಕನ ಹೆಸರು ಮಯೂರವರ್ಮ. ಆತನ ಮನೆಯ ಮುಂದೆ ಇಂತಹ ವಾಸ್ತು ಮರ ಇತ್ತಂತೆ. ಅದನ್ನು ದಿನವೂ ನೋಡಿ ಉತ್ತೇಜಿತನಾದ ಮಯೂರನು ತನ್ನ ಮಹತ್ವಾಕಾಂಕ್ಷೆಯ ರಾಜ್ಯ ಕಟ್ಟುವ ಕನಸು ನನಸಾಗಿಸಿಕೊಂಡನಲ್ಲ. ಅಂತಹ ಕದಂಬದ ಪುಷ್ಪ ಬಳಸಿ ‘ಕಾದಂಬರೀ’ ಎಂಬ ಮಾದಕ ಪಾನೀಯವನ್ನು ಹಿಂದೆ ತಯಾರಿಸುತ್ತಿದ್ದರು. ಕದಂಬದ ಹೂವು ಜೇನಿನ ಉತ್ತಮ ಮೂಲ. ಈ ಪ್ರದೇಶದಲ್ಲಿ ಈ ಹಿಂದೆ ಇಪ್ಪತ್ತು ಜೇನುಕುಟುಂಬಗಳನ್ನು ಸೇರಿಕೊಂಡ ಹಳೆಯ ಕಾಡು ಮಾವಿನ ಮರಗಳಿದ್ದವಂತೆ. ಅಂತಹ ಸಮೃದ್ಧ ಪರಿಸರವಿಂದು ಅಕೇಸಿಯಾ ಕಾಡುಗಳಾದ ಬಗ್ಗೆ ವೇದಶ್ರವ ಶರ್ಮರಿಗೆ ಅಪಾರ ದುಃಖವಿದೆ. ಇಂದು ಅವರ ಅಶೋಕವನದಲ್ಲಿ ಮೂರು ಜೇನುಕುಟುಂಬಗಳು ನೆಲೆಯಾಗಿವೆ. ಮಲಬಾರ್ ಹಾರ್ನ್‍ಬಿಲ್ ಅಥವಾ ಮುಂಗಟ್ಟೆ ಹಕ್ಕಿಗಳಿಗೆ ಈಚಲುಹಣ್ಣು ಬಹಳ ಪ್ರಿಯವಂತೆ. ಅಂತಹ ಹಲವು ಈಚಲು ಮರ ಬೆಳೆಯಲು ಬಿಟ್ಟ ಶರ್ಮರು ಮುಂಗಟ್ಟೆ ಹಕ್ಕಿಗಳಿಗೆ ಅನ್ನದಾತರಾಗಿದ್ದಾರೆ. ಅಂತೆಯೇ ಹತ್ತಾರು ನವಿಲುಗಳಿಗೆ ಹಾಗೂ ಉಳಿದ ಖಗಸಂತತಿಗೆ ಬಗೆ ಬಗೆಯ ಸಿಹಿ ಹಣ್ಣು, ಕಾಯಿ ನೀಡುವ ದಡಸಲ, ಬಿಕ್ಕೆ, ಬಾರೆ, ಬೋರೆ, ಪಂಚಪರ್ಣಿ, ಸಿಹಿ ಅಂಬಟೆ, ಬಕುಳ ಮರಗಳನ್ನು ಬೆಳೆಸಿದ್ದಾರೆ.

ವೇದಶ್ರವ ಶರ್ಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.