ADVERTISEMENT

ಕ್ಷೇಮ–ಕುಶಲ: ಆಟಿಸಂ ಮಕ್ಕಳಿಗೆ ಬೇಕು ಭರವಸೆಯ ಬೆಳಕು

ಡಾ.ಕುಶ್ವಂತ್ ಕೋಳಿಬೈಲು
Published 9 ಜೂನ್ 2025, 21:38 IST
Last Updated 9 ಜೂನ್ 2025, 21:38 IST
   

ಆಟಿಸಂ ಸಮಸ್ಯೆಯನ್ನು ಪತ್ತೆಹಚ್ಚುವುದಕ್ಕಿಂತ ಹೆಚ್ಚಿನ ಸವಾಲಿನ ಕೆಲಸವು ಆಟಿಸಂ ಸಮಸ್ಯೆಗೆ ಚಿಕಿತ್ಸೆ ನೀಡುವುದ್ದಾಗಿದೆ. ಆಟಿಸಂ ಸಮಸ್ಯೆಯನ್ನು ಶೀಘ್ರವಾಗಿ ಪತ್ತೆಹಚ್ಚಿ ಶಿಸ್ತುಬದ್ಧವಾಗಿ ಚಿಕಿತ್ಸೆ ನೀಡಿದರೆ ಅಂಥ ಮಕ್ಕಳಲ್ಲಿ ಉತ್ತಮ ಪ್ರಗತಿ ಸಾಧ್ಯವಿದೆ. ಅವರುಗಳು ಮುಂದೆ ಸಮಾಜಕ್ಕೆ ಹೊಂದಿಕೊಂಡು ಬದುಕುವಂಥ ವಾತಾವರಣವನ್ನು ಸೃಷ್ಟಿಸಬಹುದಾಗಿದೆ. ಹೆತ್ತವರಲ್ಲಿ ವಿವಿಧ ಸವಾಲುಗಳನ್ನು ಕೇಳಿ ಮತ್ತು ಬೆಳೆಯುವ ಮಕ್ಕಳನ್ನು ಗಮನಿಸಿ ಅವರ ಪ್ರತಿಕ್ರಿಯೆಗೆ ಅಂಕಗಳನ್ನು ನೀಡುವ ಮೂಲಕ ಆಟಿಸಂ ಪತ್ತೆ ಹಚ್ಚುವ ವಿವಿಧ ‘ಪ್ರಶ್ನೆಗಳ ಸರಮಾಲೆ’ಗಳು (Questionnaire) ಜನಪ್ರಿಯವಾಗಿದೆ. ಆಟಿಸಂ ಕೋಷನ್ಟ್ ಟೆಸ್ಟ್, ಸೋಶಿಯಲ್ ರೆಸ್ಪಾನ್ಸಿವ್ ಸ್ಕೇಲ್,  M-CHAT ಮುಂತಾದವನ್ನು ಬಳಸಿ ಆಟಿಸಂ ಕಾಯಿಲೆಯನ್ನು ಚಿಕ್ಕವಯಸ್ಸಿನಲ್ಲಿ ಪತ್ತೆಹಚ್ಚಬಹುದಾಗಿದೆ.

ತಮ್ಮ ಮಕ್ಕಳಲ್ಲಿ ಆಟಿಸಂ ಅಥವಾ ಕಲಿಕೆಯ ಸಮಸ್ಯೆಗಳು ಇವೆ ಎಂಬ ವಿಚಾರವನ್ನು ಒಪ್ಪಿಕೊಳ್ಳಲು ಗ್ರಾಮೀಣ ಭಾಗದಲ್ಲಿ ಹೆತ್ತವರು ಹಿಂದೇಟು ಹಾಕುತ್ತಾರೆ. ತಮ್ಮ ಕುಟುಂಬದಲ್ಲಿ ಎಲ್ಲರೂ ಮಾತನಾಡುವುದು ಕಡಿಮೆ ಅಥವಾ ತಡವಾಗಿ ಮಾತನಾಡಲು ಕಲಿತರೆಂಬ ಸಬೂಬು ನೀಡುವುದು ಸಹಜ‌‌. ಅವರು ಈ ಸಮಸ್ಯೆಗಳಿಗೆ ನಾಟಿ ಔಷಧ ಮತ್ತು ಪವಾಡಗಳ ಮೊರೆ ಹೋಗುತ್ತಾರೆ. ಈ ಕಾರಣದಿಂದಾಗಿ ಅಮೂಲ್ಯವಾದ ಸಮಯವು ವ್ಯರ್ಥವಾಗುವುದರ ಜೊತೆಗೆ ಚಿಕಿತ್ಸೆಯೂ ವಿಳಂಬವಾಗುತ್ತದೆ. ನಗರಗಳ ಸುಶಿಕ್ಷಿತ ಪೋಷಕರು ಚೆನ್ನಾಗಿರುವ ಮಕ್ಕಳಲ್ಲಿಯೂ ಸಮಸ್ಯೆಗಳನ್ನು ಹುಡುಕುತ್ತಾರೆ‌. ಬೆಳೆಯುವ ಮಕ್ಕಳಲ್ಲಿ ಭಾಷೆಯ ಜೊತೆಗೆ ಸಂವಾದ ಮತ್ತು ಸಂವಹನ ಕಲೆಗಳು ಒಂದೇ ರೀತಿಯದ್ದಾಗಿರುವುದಿಲ್ಲ. ಒಂದೆರಡು ತಿಂಗಳ ಅಂತರವಿರುವುದು ಸಹಜ. ಹೆಣ್ಣುಮಕ್ಕಳು ಸಂವಾದ ಮತ್ತು ಸಂವಹನ ಕಲೆಯಲ್ಲಿ ತುಸು ಮುಂದಿರುವುದು ಸಹಜ. ತಮ್ಮ ಮಕ್ಕಳ ಬೆಳವಣಿಗೆಯನ್ನು ಅದೇ ವಯಸ್ಸಿನ ಬೇರೆ ಮಕ್ಕಳ ಜೊತೆಗೆ ಹೊಂದಿಸಿ ನೋಡಿ ವೈದ್ಯರ ಬಳಿಗೆ ಓಡೋಡಿ ಬರುವ ಪೋಷಕರ ಸಂಖ್ಯೆ ನಗರಗಳಲ್ಲಿ ಹೆಚ್ಚಾಗಿದೆ‌. ಎರಡೂ ವಿಧದ ಪೋಷಕರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಏಕೆಂದರೆ ಸಮಸ್ಯೆಯಿರುವ ಮಕ್ಕಳನ್ನು ಪತ್ತೆಹಚ್ಚುವುದರ ಜೊತೆಗೆ ಸರಿಯಾದ ರೀತಿಯಲ್ಲಿ ಬೆಳೆಯುತ್ತಿರುವ ಮಕ್ಕಳ ಪೋಷಕರ ಆತಂಕವನ್ನು ಕಡಿಮೆ ಮಾಡುವುದು ಕೂಡ ವೈದ್ಯರ ಕರ್ತವ್ಯವಾಗಿದೆ.

ಪ್ರಾಡರ್ ವಿಲ್ಲಿ, ಡೌನ್, ಯ್ಯಾಂಜಲ್/// ಮ್ಯಾನ್ ಸಿನ್ಡ್ರೋಮ್ ಮುಂತಾದ ಅನುವಂಶೀಯ ಕಾಯಿಲೆಗಳಲ್ಲಿಯೂ ಆಟಿಸಂ ಕಂಡುಬರುತ್ತದೆ. ಆ ಕಾಯಿಲೆಗಳಲ್ಲಿ ಆಟಿಸಂ ಹೊರತಾಗಿ ಮಕ್ಕಳಿಗೆ ಬೇರೆ ಅಂಗಾಂಗಗಳ ಸಮಸ್ಯೆಗಳಿರುವುದರಿಂದ, ಆಟಿಸಂಗೆ ಒಳಗಾಗಿರುವ ಮಗುವಿಗೆ ಬೇರೆ ಯಾವುದಾದರು ಗಂಭೀರ ಸಿನ್ಡ್ರೋಮ್ ಇರುವ ಬಗ್ಗೆ ಗಮನಹರಿಸಬೇಕಾಗುತ್ತದೆ. ಆಟಿಸಂ ಬರಲು ಶೇಕಡ ಐವತ್ತು ಪ್ರತಿಶತ ಆನುವಂಶಿಕ ಕಾರಣಗಳಿರುವುದರಿಂದ ಈ ಮಾಹಿತಿಯನ್ನು ಹೆತ್ತವರ ಬಳಿ ಹಂಚಿಕೊಳ್ಳಬೇಕಾಗುತ್ತದೆ. ಏಕೆಂದರೆ ನಂತರ ಹುಟ್ಟಬಹುದಾದ ಮಕ್ಕಳಲ್ಲಿ ಆಟಿಸಂ ಬರುವ ಸಾಧ್ಯತೆ ಶೇಕಡ ಇಪ್ಪತ್ತರಷ್ಟಿರುತ್ತದೆ. ಮುಂದಿನ ಬಾರಿ ಗರ್ಭ ಧರಿಸುವ ಮೊದಲು ತಾಯಿಗೆ ಸೂಕ್ತ ಮಾರ್ಗದರ್ಶನದ ಅಗತ್ಯ ವೂ ಇರುತ್ತದೆ.

ADVERTISEMENT

ಆಟಿಸಂ ಸಮಸ್ಯೆಯಿರುವ ಮಕ್ಕಳ ಜೊತೆಗೆ ಒಡನಾಡಲು ಮತ್ತು ಅವರ ಭಾವನೆಗಳಿಗೆ ಸ್ಪಂದಿಸಲು ಹೆತ್ತವರಿಗೆ ಸೂಕ್ತ ತರಬೇತಿಯ ಅಗತ್ಯವಿರುತ್ತದೆ. ಭಾಷೆಯನ್ನು ಕಲಿಯುವುದರಲ್ಲಿ ಹಿಂದಿರುವ ಮಕ್ಕಳಿಗೆ ಭಾಷಾ ತರಬೇತಿ ತಜ್ಞರ ಸಹಾಯದ ಅಗತ್ಯವಿರುತ್ತದೆ. ಹೆತ್ತವರು ಇಂತಹ ಮಕ್ಕಳ ಜೊತೆಗೆ ತಾಳ್ಮೆಯಿಂದ ಒಡನಾಡಲು ಮನಃಶಾಸ್ತ್ರಜ್ಞರು ಹೆತ್ತವರಿಗೆ ಸೂಕ್ತ ತರಬೇತಿಯನ್ನು ನೀಡಬೇಕಾಗುತ್ತದೆ. ಇಂಥ ಮಕ್ಕಳು ತಮ್ಮ ದಿನನಿತ್ಯದ ಪ್ರಕ್ರಿಯೆಗಳನ್ನು ಇನ್ನೊಬ್ಬರ ಮೇಲೆ ಅವಲಂಬಿತವಾಗದೆ ಮಾಡಿಕೊಳ್ಳಲು ಸೂಕ್ತ ತರಬೇತಿಯನ್ನು ನೀಡಬೇಕಾಗುತ್ತದೆ. ಇಂತಹ ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಸುತ್ತಲಿನ‌ ಪರಿಸರಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವು ಕಡಿಮೆಯಿರುವುದರಿಂದ ಸಾಮಾನ್ಯ ಶಾಲೆಗಳಲ್ಲಿ ಇವರಿಗೆ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ.

ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಇರದು. ಈ ಕಾರಣ ಭಾರತದಲ್ಲಿರುವ ಸುಮಾರು ಇಪ್ಪತ್ತು ಲಕ್ಷ ಆಟಿಸಂ ಪೀಡಿತ ಮಕ್ಕಳು ಸರಿಯಾದ ತರಬೇತಿ ಸಿಗದೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎನ್ನಬಹುದು. ಹೆಚ್ಚಿನ ಆಟಿಸಂ ಮಕ್ಕಳು ಸಾಮಾನ್ಯ ಶಾಲೆಗಳಿಗೆ ಸೇರಿದ ನಂತರ ಕಲಿಕೆಯಲ್ಲಿ ಹಿಂದುಳಿಯುವ ಕಾರಣದಿಂದ ಅಥವಾ ಶಾಲೆಗೆ ಹೊಂದಿಕೊಳ್ಳಲಾಗದ ಕಾರಣದಿಂದ ಶಿಕ್ಷಣವನ್ನು ಕೈಬಿಡುತ್ತಾರೆ. ಮೆಟ್ರೊ ನಗರಗಳಲ್ಲಿ ಮತ್ತು ವಿದೇಶಗಳಲ್ಲಿ ಆಟಿಸಂ ಮಕ್ಕಳಿಗೆ ಸೂಕ್ತ ತರಬೇತಿ ನೀಡುವ ಕೇಂದ್ರಗಳಿವೆ. ಆಟಿಸಂ ಮಕ್ಕಳಿಗೆ ಔದ್ಯೋಗಿಕ ತರಬೇತಿಯನ್ನು ಸೂಕ್ತವಾಗಿ ನೀಡದರೆ ಅವರು ದೊಡ್ಡವರಾದ ನಂತರ ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ. ಆಟಿಸಂ ಸಮಸ್ಯೆಯಿರುವ ಮಕ್ಕಳಿಗೆ ಚಿಕಿತ್ಸೆ ಹಾಗೂ ತರಬೇತಿ ನೀಡುವ ಸೂಕ್ತ ತಂಡ ಮತ್ತು ವಾತಾವರಣ ಸಿಗಬೇಕು. ಆಗ ಈ ಮಕ್ಕಳ ಬಾಳು ಹಸನಾಗುವುದರಲ್ಲಿ ಸಂಶಯವಿಲ್ಲ. ಭಾರತದಲ್ಲಿ ಆಟಿಸಂ ಮಕ್ಕಳ ಒಳಿತಿಗಾಗಿ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.