ADVERTISEMENT

ಆರೋಗ್ಯ: ಆಟಿಸಂಗೂ ಇದೆ ಉದ್ಯೋಗದ ನಂಟು

ಅಮೃತೇಶ್ವರಿ ಬಿ.
Published 19 ಆಗಸ್ಟ್ 2025, 1:30 IST
Last Updated 19 ಆಗಸ್ಟ್ 2025, 1:30 IST
   
ಮಗುವಿನಲ್ಲಿ ಆಟಿಸಂ ಕಾಣಿಸಿಕೊಳ್ಳಲು ನಮ್ಮ ಸುತ್ತಮುತ್ತಲ ವಾತಾವರಣ ಹಾಗೂ ಪರಿಸ್ಥಿತಿಗಳು ಹೇಗೆ ಪ್ರಭಾವ ಬೀರುತ್ತವೆ ಎಂದು ಈ ಮೊದಲಿನ ಅಧ್ಯಯನಗಳು ಹೇಳಿದ್ದವು. ಪ್ರಸ್ತುತ ಅಧ್ಯಯನವು ಪೋಷಕರ ಕೆಲಸದ ವಾತಾವರಣವನ್ನು ಮಗುವಿನ ಆಟಿಸಂ ಸಮಸ್ಯೆಯ ಜೊತೆಗೆ ತಾಳೆ ಹಾಕಿ ನೋಡಿದೆ. ಉದ್ಯೋಗಕ್ಕೂ ನಮ್ಮ ಮಕ್ಕಳ ಆರೋಗ್ಯಕ್ಕೂ ನಂಟಿದೆ.

ಆಟಿಸಂ ಕಾಯಿಲೆ ಬಗ್ಗೆ ನೀವೆಲ್ಲಾ ಕೇಳಿರಬಹುದು. ಇದು, ಒಬ್ಬ ವ್ಯಕ್ತಿ ತನ್ನೊಳಗೇ ಲೀನವಾಗಿರುವ, ಸಾಮಾಜಿಕವಾಗಿ ಬೆರೆಯಲಿಚ್ಛಿಸದ, ಮಾತು ಬಾರದ ಅಥವಾ ಬಂದರೂ ಇತರರೊಂದಿಗೆ ಸಂವಹಿಸಲು ಕಷ್ಟಪಡುವ, ಹಾಗೂ ಪುನರಾವರ್ತಿತ ವರ್ತನೆಗಳಿರುವ, ಮಿದುಳು ಹಾಗೂ ನರಕ್ಕೆ ಸಂಬಂಧಿಸಿದ ಕಾಯಿಲೆ. ಭಾರತದಲ್ಲಿ ನೂರು ಮಕ್ಕಳಲ್ಲಿ ಒಂದು ಮಗುವಿನಲ್ಲಿ ಆಟಿಸಂ ಕಾಣಿಸುತ್ತಿದೆ ಎನ್ನುತ್ತವೆ, ದತ್ತಾಂಶಗಳು.

ಆಟಿಸಂ ಸಾಮಾನ್ಯವಾಗಿ ಹುಟ್ಟಿನಿಂದಲೇ ಕಾಣಿಸಿಕೊಳ್ಳುತ್ತದೆ. ಕಾಯಿಲೆಯ ಮಟ್ಟ ಸಾಧಾರಣವಾಗಿದ್ದರೆ ಲಕ್ಷಣಗಳು ಸೌಮ್ಯವಾಗಿದ್ದು, ತೀವ್ರವಾಗಿದ್ದಾಗ ಹೆಚ್ಚು ಜಟಿಲವಾಗಿರುವವು. ಆಟಿಸಂ ಇರುವ ವ್ಯಕ್ತಿ ಕೆಲವೊಮ್ಮೆ ಮಾತು ಕಲಿತರೂ ಸಾಮಾನ್ಯರಂತೆ ಮಾತನಾಡದಿರಬಹುದು ಅಥವಾ ಮಾತು ಕಲಿಯುವುದೇ ನಿಧಾನವಾಗಬಹುದು. ನಿಧಾನವೆಂದರೆ ತೊದಲು ಮಾತನಾಡಲೂ ಸುಮಾರು ಹತ್ತಾರು ವರ್ಷಗಳೇ ಆಗಿಬಿಡುತ್ತದೆ. ಒಟ್ಟಾರೆ ಇದೊಂದು ನರಸಂಬಂಧಿ ದೌರ್ಬಲ್ಯಗಳ ಸಮೂಹವೆನ್ನಬಹುದು. ಕಾಯಿಲೆ ಬಹಳ ಗಂಭೀರವೆನಿಸಿದರೂ ಅದಕ್ಕೆ ಕಾರಣಗಳು ಮಾತ್ರ ಬಹಳ ಸಾಮಾನ್ಯ. ಇದುವರೆಗಿನ ಸಂಶೋಧನೆಗಳ ಪ್ರಕಾರ ಗರ್ಭಿಣಿತಾಯಿಯ ಮಾನಸಿಕ ಒತ್ತಡ, ಮಧುಮೇಹ, ಸ್ಥೂಲಕಾಯ, ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ದೌರ್ಬಲ್ಯ, ಪ್ರಸವದ ಸಮಯದಲ್ಲಿನ ಜಟಿಲತೆಗಳು – ಇವುಗಳೇ ಕಾರಣವಿರಬಹುದೆಂದು ತಿಳಿಯಲಾಗಿತ್ತು. ಆದರೆ ಈಗ ಹೊಸದೊಂದು ಕಾರಣವನ್ನು ಪತ್ತೆ ಮಾಡಿದ್ದಾರೆ. ಅದುವೇ, ಆಟಿಸಂ ಕಾಯಿಲೆಯಿರುವ ಮಗುವಿನ ತಂದೆತಾಯಿಗಳು ಕೆಲಸ ಮಾಡುವ ಜಾಗದಲ್ಲಿನ ರಾಸಾಯನಿಕಗಳು!

ಹೌದು. ಯಾವುದೇ ವ್ಯಕ್ತಿಯು ತಾನು ಕೆಲಸ ಮಾಡುವಲ್ಲಿ ಅಪಾಯಕಾರಿ ರಾಸಾಯನಿಕಗಳಿಗೆ ಹೆಚ್ಚೆಚ್ಚು ಒಡ್ಡಿಕೊಳ್ಳುತ್ತಿದ್ದಲ್ಲಿ ಅದು ಅವರನ್ನಷ್ಟೇ ಬಾಧಿಸದೆ ಮುಂದಿನ ಪೀಳಿಗೆಯನ್ನೂ ತೊಂದರೆಗೀಡುಮಾಡಬಲ್ಲದು. ಹೀಗೆಂದು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚೆಗಷ್ಟೆ ‘ಇಂಟರ್‌ ನ್ಯಾಷನಲ್ ಜರ್ನಲ್ ಆಫ್ ಹೈಜೀನ್ ಅಂಡ್ ಎನ್ವಿರಾನ್ಮೆಂಟಲ್ ಹೆಲ್ತ್’ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ADVERTISEMENT

ಆಟಿಸಂಗೆ ನಮ್ಮ ಸುತ್ತಮುತ್ತಲ ವಾತಾವರಣ ಹಾಗೂ ಪರಿಸ್ಥಿತಿಗಳು ಹೇಗೆ ಪ್ರಭಾವ ಬೀರುತ್ತವೆ ಎಂದು ಈ ಮೊದಲಿನ ಅಧ್ಯಯನಗಳು ಹೇಳಿದ್ದವು. ಆದರೆ ಪ್ರಸ್ತುತ ಅಧ್ಯಯನವು ಪೋಷಕರ ಕೆಲಸದ ವಾತಾವರಣವಕ್ಕೂ ಮಗುವಿನ ಆಟಿಸಂ ಸಮಸ್ಯೆಗೂ ಸಂಬಂಧ ಇದೆ ಎನ್ನುತ್ತದೆ, ಸಂಶೋಧಕರಾದ ಹರ್ಟ್ಸ್ ಪೀಚಿಯೋಟೊ.  ಆಟಿಸಂ ಕಾಯಿಲೆಯ ಬಗ್ಗೆ ತಿಳಿಯಲೆಂದೆ ಕ್ಯಾಲಿಫೋರ್ನಿಯಾದ ಯುಸಿ ಡೇವಿಸ್ ಎನ್ವಿರಾನ್ಮೆಂಟಲ್ ಹೆಲ್ತ್ ಸೈನ್ಸಸ್ ಸೆಂಟರ್ ಒಂದು ದೊಡ್ಡ ಅಧ್ಯಯನವನ್ನು ನಡೆಸಿದೆ. ಅದುವೇ CHARGE – ‘ಚೈಲ್ಡ್‌ಹುಡ್ ಆಟಿಸಂ ರಿಸ್ಕ್ಸ್ ಫ್ರಮ್ ಜೀನ್ಸ್ ಅ್ಯಂಡ್ ಎನ್ವಿರಾನ್ಮೆಂಟ್’. ಈ ‘CHARGE’ ಮತ್ತು ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಆಕ್ಯುಪೇಷನಲ್ ಸೇಫ್ಟಿ ಅಂಡ್ ಹೆಲ್ತ್’ – ಈ ಎರಡೂ ತಂಡಗಳು ಈಗಾಗಲೆ ಆಟಿಸಂ ಪತ್ತೆಯಾಗಿರುವಂತಹ ಸುಮಾರು ಐದುನೂರು ಕುಟುಂಬಗಳನ್ನು ಅಧ್ಯಯನ ಮಾಡಿವೆ.

ಕೈಗಾರಿಕಾ ಆರೋಗ್ಯತಜ್ಞರು, ಈ ಕುಟುಂಬಗಳ ತಂದೆ–ತಾಯಿಯರನ್ನು ಪರೀಕ್ಷೆ ಮಾಡಿ ಗರ್ಭಿಣಿಯಾಗುವ ಮೂರು ತಿಂಗಳ ಮೊದಲಿನಿಂದ ಮಗು ಹುಟ್ಟುವವರೆಗೂ, ಅವರವರ ಕೆಲಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಆ ಪೋಷಕರು ಸತತವಾಗಿ ತಮ್ಮ ದೇಹವನ್ನು ಒಡ್ಡಿಕೊಳ್ಳುತ್ತಿರುವ ಸುಮಾರು 16 ರಾಸಾಯನಿಕಗಳನ್ನು ಅಂದಾಜಿಸಿ ಪಟ್ಟಿ ಮಾಡಿದ್ದಾರೆ. ಆ ಪಟ್ಟಿಯಲ್ಲಿ ಪ್ಲಾಸ್ಟಿಕ್‌, ಕಾರಿನಲ್ಲಿ ಬಳಸುವ ದ್ರಾವಣಗಳು, ಕೀಟನಾಶಕಗಳು, ಔಷಧಗಳು ಹಾಗೂ ಇನ್ನಿತರೆ ರಾಸಾಯನಿಕಗಳು ಸೇರಿದ್ದವು. ಈ ದತ್ತಾಂಶವನ್ನು ನಂತರ ಮಕ್ಕಳ ಆಟಿಸಂ ತೀವ್ರತೆಯ ಮಾಪನದೊಂದಿಗೆ ಹೋಲಿಸಿ, ಅವರ ವರ್ತನೆ, ಅರಿವಿನ ಕೌಶಲಗಳು ಮತ್ತು ದಿನನಿತ್ಯದ ಕೌಶಲಗಳನ್ನು ಅಳೆದಿದ್ದಾರೆ. ಪಾಲಿ–ಇಥಿಲೀನ್, ಪಾಲಿಪ್ರೊಪೈಲೀನ್, ಪಾಲಿವಿನೈಲುಕ್ಲೋರೈಡುಗಳಂತಹ ಪ್ಲಾಸ್ಟಿಕ್‌ಗಳು ಹಾಗೂ ಪಾಲಿಮರ್‌ಗಳನ್ನು ಹೆಚ್ಚೆಚ್ಚು ಬಳಸಿದವರಲ್ಲಿ ಕಡಿಮೆ ಅರಿವಿನ ಮಟ್ಟದ ಜೊತೆಗೆ, ಹೊಂದಿಕೊಳ್ಳುವ ಕೌಶಲಗಳಲ್ಲಿ ಕೊರತೆ, ಹೈಪರ್ ಆಕ್ಟಿವಿಟಿ ಮತ್ತು ಸಾಮಾಜಿಕವಾಗಿ ದೂರವಿರುವಂತಹ ಲಕ್ಷಣಗಳು ಕಂಡುಬಂದಿವೆಯಂತೆ.

ಈ ರಾಸಾಯನಿಕಗಳಂತೂ ಗರ್ಭಚೀಲ ಹಾಗೂ ಬ್ಲಡ್ ಬ್ರೈನ್ ಬ್ಯಾರಿಯರ್ ಅನ್ನು ದಾಟಿ ನರಸಂಬಂಧಿ ಸಮಸ್ಯೆಗಳನ್ನೂ ತರಬಲ್ಲವಂತೆ. ಹೀಗಾಗಿಯೇ ಮಗುವು ತಡವಾಗಿ ಮಾತು ಕಲಿಯುವುದು, ಸಾಮಾಜಿಕವಾಗಿ ಬೆರೆಯದೆ ಒಬ್ಬಂಟಿಯಾಗಿರುವುದು, ಕಲಿಕೆಯಲ್ಲಿ ಹಿಂದುಳಿಯುವುದು, ನೆನಪಿನ ಶಕ್ತಿ ಕುಂದುವುದು ಮುಂತಾದ ತೊಂದರೆಗಳಿಗೆ ತುತ್ತಾಗುವುದು. ಹಾಗೆಯೇ, ಕ್ರಿಮಿ ನಾಶಕವಾಗಿ ಬಳಸುವ ಇಥಿಲೀನ್ ಡೈಯಾಕ್ಸೈಡ್ ರಾಸಾಯನಿಕವನ್ನು ಹೆಚ್ಚಾಗಿ ಬಳಸಿದವರ ಮಕ್ಕಳಲ್ಲಿ ದಿನನಿತ್ಯದ ಕೌಶಲಗಳಲ್ಲಿ ದುರ್ಬಲವಾಗಿದ್ದುದು ಕಂಡುಬಂದಿತ್ತಂತೆ. ಫೀನಾಲುಗಳೊಂದಿಗೆ ಹೆಚ್ಚಾಗಿ ಕೆಲಸ ಮಾಡಿದವರ ಮಕ್ಕಳಲ್ಲಿ ಆಟಿಸಂನ ಲಕ್ಷಣಗಳು ಜಟಿಲವಾಗಿರುತ್ತಿತ್ತು ಎನ್ನುತ್ತಾರೆ, ಹರ್ಟ್ಸ್.

ಈ ವಿಷಕಾರಿ ರಾಸಾಯನಿಕಗಳೆಲ್ಲವೂ ವಾಹನಗಳ ತಯಾರಿಕೆ, ಪಿವಿಸಿ ಪ್ಲಾಸ್ಟಿಕ್ ತಯಾರಿಕೆ, ಫುಡ್ ಪ್ಯಾಕೇಜಿಂಗ್ ಪ್ಲಾಸ್ಟಿಕ್‌, ಸೌಂದರ್ಯವರ್ಧಕಗಳು, ಫಾರ್ಮಾಸ್ಯುಟಿಕಲ್ಸ್ ಮುಂತಾದ ಕಡೆಗಳಲ್ಲಿ ಸಾಮಾನ್ಯ. ಈ ಜಾಗಗಳಲ್ಲಿ ಕೆಲಸ ಮಾಡುವವರ ದೇಹವನ್ನು ಈ ರಾಸಾಯನಿಕಗಳು ಸೇರುವ ಸಾಧ್ಯತೆ ಜಾಸ್ತಿ. ಮಗು ಹೊಟ್ಟೆಯಲ್ಲಿರುವ ಸಮಯದಲ್ಲಿ ಇಂತಹ ರಾಸಾಯನಿಕಗಳಿಗೆ ತೆರೆದುಕೊಂಡಾಗ ಮಾತ್ರ ಆಟಿಸಂ ಅಮರಿಕೊಂಡಿರುವುದಲ್ಲ; ತಂದೆ–ತಾಯಿಯಾಗುವವರು, ಮುಂಚಿನಿಂದಲೂ ತಮ್ಮ ವೃತ್ತಿಜೀವನದಲ್ಲಿ ಎಷ್ಟು ಪ್ರಮಾಣದಲ್ಲಿ ತಮ್ಮನ್ನು ಇಂತಹ ರಾಸಾಯನಿಕಗಳಿಗೆ ಒಡ್ಡಿಕೊಂಡಿದ್ದಾರೆ ಎನ್ನುವುದೂ ಭವಿಷ್ಯದಲ್ಲಿ ಅವರ ಮಗುವಿಗೆ ಆಟಿಸಂ ಕಾಣಿಸಿಕೊಳ್ಳುವಂತೆ ಮಾಡಿರುವುದು ಆತಂಕಕಾರಿ ವಿಷಯ. ಈ ರಾಸಾಯನಿಕಗಳು ಕಾಯಿಲೆಯ ತೀವ್ರತೆಯನ್ನೂ ಇಮ್ಮಡಿಗೊಳಿಸಬಹುದಂತೆ. ಆದರೆ ಇವು ಹೇಗೆ ಮಿದುಳಿನ ಬೆಳವಣಿಗೆಯನ್ನು ಪ್ರಭಾವಿಸಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಇನ್ನಷ್ಟು ಸಂಶೋಧನೆಗಳಾಗಬೇಕಿವೆ ಎನ್ನುತ್ತಾರೆ, ಸಂಶೋಧಕರು. ಕಾಯಿಲೆಯನ್ನು ನಿಖರವಾಗಿ ಅಧ್ಯಯನ ಮಾಡಲು, ತಾಯಿಯರಷ್ಟೇ ಅಲ್ಲದೆ ತಂದೆಯರ ಜೀವನಶೈಲಿಯನ್ನೂ ಅಧ್ಯಯನಕ್ಕೆ ಸೇರಿಸಿಕೊಳ್ಳಬೇಕು ಮತ್ತು ರಾಸಾಯನಿಕಗಳು ಭವಿಷ್ಯದಲ್ಲಿ ಹುಟ್ಟುವ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎನ್ನುತ್ತಾರೆ, ಸಂಶೋಧಕರಾದ ಹರ್ಟ್ಸ್ ಪೀಚಿಯೋಟೊ.

ನಮ್ಮ ಉದ್ಯೋಗದ ಸ್ಥಳಗಳು ನಮಗೆ ಅನ್ನವನ್ನು ಕೊಡುವ ಸ್ಥಳಗಳು ಹೌದು. ಆದರೆ ಇವು ನಮ್ಮ ಭವಿಷ್ಯದ ಸಂತತಿಯ ಅನಾರೋಗ್ಯಕ್ಕೂ ಕಾರಣವಾಗಬಲ್ಲ ಸ್ಥಳಗಳೂ ಆಗಬಲ್ಲವು ಎಂಬ ಆತಂಕಕಾರಿ ಸಂಗತಿ. ನಮ್ಮ ಆರೋಗ್ಯಕ್ಕೆ ಮಾರಕವಾಗಬಲ್ಲ ರಾಸಾಯನಿಕಗಳಿಂದ ನಾವು ಹೇಗೆ ದೂರವಾಗಿ ಜೀವನವನ್ನು ನಡೆಸಬಹುದು ಎಂಬುದರ ಬಗ್ಗೆ ಸಮಾಜ ಒಂದಾಗಿ ಯೋಚಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.