ADVERTISEMENT

ಅರಿವು, ನಿಯಂತ್ರಣವೇ ಕ್ಯಾನ್ಸರ್‌ಗೆ ಪ್ರಥಮ ಔಷಧ

ಪ್ರಜಾವಾಣಿ ವಿಶೇಷ
Published 1 ಫೆಬ್ರುವರಿ 2019, 19:31 IST
Last Updated 1 ಫೆಬ್ರುವರಿ 2019, 19:31 IST
   

ಮಾರಣಾಂತಿಕ ಕಾಯಿಲೆ ಕ್ಯಾನ್ಸರ್‌ಗೆ ವರ್ಷಕ್ಕೆ ಲಕ್ಷಾಂತರ ಜನರು ಬಲಿಯಾಗುತ್ತಿದ್ದಾರೆ. ಈ ರೋಗ ಒಂದು ರೀತಿಯ ಪಿಡುಗಿನಂತೆ ಕಾಣಿಸಿಕೊಳ್ಳುತ್ತಿದ್ದು, ಕಾಯಿಲೆ ಬರುವುದಕ್ಕಿಂತ ಮುನ್ನವೇ ಎಚ್ಚರಿಕೆ ವಹಿಸುವುದು ಒಳಿತು ಎನ್ನುತ್ತಾರೆ ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಸಂಶೋಧನ ಸಂಸ್ಥೆಯ ತಜ್ಞ ವೈದ್ಯ ಡಾ.ಬಿ.ಎಸ್‌.ಶ್ರೀನಾಥ್‌. ‘ವಿಶ್ವ ಕ್ಯಾನ್ಸರ್‌ ದಿನ’ (ಫೆ.4)ದ ಹಿನ್ನೆಲೆಯಲ್ಲಿ ಅವರೊಂದಿಗೆ ಮಾತುಕತೆ.

ಕ್ಯಾನ್ಸರ್‌ ಗುಣಪಡಿಸುವ ಕಾಯಿಲೆಯೇ?

ಬಹಳಷ್ಟು ಕ್ಯಾನ್ಸರ್‌ ರೋಗಗಳಿಗೆ ಚಿಕಿತ್ಸೆ ಇದೆ. ಗುಣಪಡಿಸಬಹುದು. ಆದರೆ ಕೆಲವು ಕ್ಯಾನ್ಸರ್‌ಗಳಿಗೆ ಇನ್ನೂ ಸರ್ಮಪಕವಾದ ಔಷಧಗಳು ಲಭ್ಯವಿಲ್ಲ. ಕ್ಯಾನ್ಸರ್ ರೋಗಕ್ಕೆ ಹಲವು ಬಾರಿ ಗುಣವಾಗುವ ಔಷಧಗಳು ಇದ್ದರೂ ರೋಗಿಗಳು ಬಹಳ ವಿಳಂಬ ಮಾಡಿ ಬರುವುದರಿಂದ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಕ್ಯಾನ್ಸರ್‌ ರೋಗಗಳು ನಾಲ್ಕನೇ ಹಂತದಲ್ಲಿದ್ದರೂ ಗುಣಪಡಿಸಬಹುದು. ಆದ್ದರಿಂದ ಕಾಯಿಲೆ ಗುಣವಾಗುವುದು ನಾವು ಯಾವ ಹಂತದಲ್ಲಿ ರೋಗವನ್ನು ಕಂಡು ಹಿಡಿಯುತ್ತೇವೆ ಎನ್ನುವುದನ್ನು ಅವಲಂಬಿಸಿದೆ.

ADVERTISEMENT

ಕ್ಯಾನ್ಸರ್‌ನ ಮುನ್ಸೂಚನೆ ಗುರುತಿಸುವುದು, ಹಂತಗಳನ್ನು ಪತ್ತೆ ಮಾಡುವುದು ಹೇಗೆ ?

ಕ್ಯಾನ್ಸರ್‌ ಕಾಯಿಲೆ ಹರಡುವುದು ನಮ್ಮ ದೇಹದೊಳಗಿನ ಕೋಶಗಳಿಂದಲೇ ಹೊರತು, ಹೊರಗಿನ ಕ್ರಿಮಿ, ಕೀಟಗಳಿಂದಲ್ಲ. ನಮ್ಮ ಶರೀರದಲ್ಲಿರುವ ಕೋಶಗಳು ವ್ಯತ್ಯಾಸಗೊಂಡು ಕ್ಯಾನ್ಸರ್ ಕೋಶಗಳಾಗಿ ಪರಿವರ್ತನೆಯಾಗುತ್ತವೆ. ಅದು ನಮ್ಮ ಶರೀರದಿಂದಲೇ ಉತ್ಪತ್ತಿಯಾದ ಕಾರಣ, ಅದನ್ನು ಪತ್ತೆ ಮಾಡುವುದು ಕಷ್ಟ.

ಕ್ಯಾನ್ಸರ್ ರೋಗವು ಶರೀರದಲ್ಲಿ ಹುಟ್ಟುವಾಗ ಹಲವು ಮುನ್ಸೂಚನೆಗಳನ್ನು ನಾವು ಗಮನಿಸಬಹುದು. ಶರೀರದ ಯಾವುದೇ ಭಾಗದಲ್ಲಿ ಒಂದು ಮಚ್ಚೆ ದೊಡ್ಡದಾಗುತ್ತಿದ್ದರೆ, ಸ್ತನದಲ್ಲಿ ಅಥವಾ ಬೇರೆ ಭಾಗದಲ್ಲಿ ಗೆಡ್ಡೆಗಳನ್ನು ಅಥವಾ ಗಂಟುಗಳನ್ನು ನೋಡಿದರೆ ಮತ್ತು ಶರೀರದ ಯಾವ ಅಂಗದಿಂದಾಗಲಿ ರಕ್ತಸ್ರಾವವಾದರೆ, ಮನುಷ್ಯನ ತೂಕದಲ್ಲಿ ವಿನಾಕಾರಣ ಕಡಿಮೆಯಾದರೆ, ವಾಸಿಯಾಗದಿರುವ ಕೆಮ್ಮು, ಆಹಾರ ನುಂಗಲು ಕಷ್ಟವಾಗುವುದು ಇತ್ಯಾದಿ ಮುನ್ಸೂಚನೆಗಳನ್ನು ಕ್ಯಾನ್ಸರ್ ರೋಗ ತಿಳಿಸುತ್ತದೆ. ಇದನ್ನು ನಿರ್ಲಕ್ಷಿಸಬಾರದು. ತಕ್ಷಣ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.

ಕ್ಯಾನ್ಸರ್‌ ರೋಗಕ್ಕೆ ಬದಲಾಗಿರುವ ಜೀವನ ಶೈಲಿ, ಅಪೌಷ್ಟಿಕ/ ಕಲಬೆರಕೆ ಆಹಾರ ಕಾರಣ ಎನ್ನುತ್ತಾರೆ. ಹೇಗೆಂದು ಸ್ವಲ್ಪ ನಿರ್ದಿಷ್ಟವಾಗಿ ಹೇಳಬಹುದೇ?

ನಮ್ಮ ಜೀವನಶೈಲಿಯಲ್ಲಿ ಶಿಸ್ತಿಲ್ಲ. ತಿನ್ನುವ ಆಹಾರವೂ ಕಲಬೆರಕೆಯಾಗುತ್ತಿದೆ. ಸಂಶೋಧನೆಯ ಪ್ರಕಾರ ಶೇ 20ರಷ್ಟು ಕ್ಯಾನ್ಸರ್ ಸಂಭವಿಸುವುದಕ್ಕೆ ಸೇವಿಸುತ್ತಿರುವ ಆಹಾರವೇ ಕಾರಣ. ತಿನ್ನಬಾರದ ಆಹಾರ ತಿನ್ನುವುದು, ಸೇವಿಸಬೇಕಾದ ಪೌಷ್ಟಿಕ ಆಹಾರ

ಡಾ.ಬಿ.ಎಸ್‌.ಶ್ರೀನಾಥ್‌

ಕೈಬಿಟ್ಟಿರುವುದು ಕ್ಯಾನ್ಸರ್‌ಗೆ ಕಾರಣವಾಗಿದೆ. ತರಕಾರಿ ಮತ್ತು ಹಣ್ಣುಗಳನ್ನು ಬೆಳೆಸುವಾಗ ಉಪಯೋಗಿಸುವ ರಾಸಾಯನಿಕ ಕೀಟನಾಶಕಗಳು ಪರೋಕ್ಷವಾಗಿ ಕ್ಯಾನ್ಸರ್ ರೋಗಕ್ಕೆ ಕಾರಣ. ಬಾರ್ಬಿಕ್ಯುನಿಂದ ಮಾಡಿರುವ ಮಾಂಸ ಕೂಡ ಕ್ಯಾನ್ಸರ್ ಕಾರಕ. ಬೂಸಲು ಬಂದಿರುವ ಉಪ್ಪಿನಕಾಯಿ ಹಾಗೂ ಕೊಳೆತಿರುವ ಪದಾರ್ಥಗಳಿಂದ ಕ್ಯಾನ್ಸರ್ ಬರುವ ಸಂಭವ ಹೆಚ್ಚು. ವಿಟಮಿನ್ ಅನ್ನಾಂಗಗಳು ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಅನ್ನಾಂಗಗಳನ್ನು ಆಹಾರದಲ್ಲಿ ಸೇವಿಸಬೇಕು.

ಕ್ಯಾನ್ಸರ್‌ ಅನುವಂಶೀಯವಾಗಿ ಬರುತ್ತದೆ ಎನ್ನುವ ಮಾತಿದೆ. ಅದು ಎಷ್ಟು ಸರಿ?

ನೂರು ಕ್ಯಾನ್ಸರ್‌ ರೋಗಿಗಳಲ್ಲಿ, ನಾಲ್ಕರಿಂದ ಏಳು ಮಂದಿ ಮಾತ್ರ ಅನುವಂಶೀಯ ಕ್ಯಾನ್ಸರ್‌ ರೋಗಿಗಳಾಗಿರುತ್ತಾರೆ. ಇದು
ಅನುವಂಶೀಯ ಎಂದರೆ ತಾಯಿಯಿಂದ ಮಕ್ಕಳಿಗೆ ಬರತಕ್ಕಂತ ಕ್ಯಾನ್ಸರ್. ಇನ್ನು, ಒಂದೇ ಸಂಸಾರದಲ್ಲಿ ಕುಟುಂಬದ ಸದಸ್ಯರಲ್ಲಿ ಬೇರೆ ಬೇರೆ ವಿಧವಾದ ಕ್ಯಾನ್ಸರ್ ಬರಬಹುದು. ಇದಕ್ಕೆ ಕ್ಯಾನ್ಸರ್ ಪ್ರೋನ್ ಫ್ಯಾಮಿಲಿ ಎಂದು ಕರೆಯುತ್ತೇವೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಕ್ಯಾನ್ಸರ್ ಕ್ಲಸ್ಟರ್ ಫ್ಯಾಮಿಲಿ’ ಎನ್ನುತ್ತಾರೆ. ಇಂಥ ಕುಟುಂಬದಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಬಂದಿದ್ದರೆ, ಉಳಿದವರಿಗೆ ಬೇರೆ ಬೇರೆ ಕ್ಯಾನ್ಸರ್ ಬಂದಿರುವ ಉದಾಹರಣೆಗಳಿವೆ.

ಕ್ಯಾನ್ಸರ್‌ ರೋಗ ಬಂದವರನ್ನು ಮಧುಮೇಹದ ರೀತಿ ದೀರ್ಘಕಾಲ ಜತೆಯಲ್ಲಿಟ್ಟುಕೊಂಡೇ ಜೀವಿಸುವಂತೆ ಮಾಡಬಹುದೆ ? ಅಥವಾ ಕ್ಯಾನ್ಸರ್ ರೋಗಿಗಳ ಜೀವಿತಾವಧಿ ಹೆಚ್ಚಿಸಬಹುದೆ?

ಹಿಂದೆ ಕ್ಯಾನ್ಸರ್ ಬಂದಾಗ, ಬಹು ಬೇಗನೆ ರೋಗಿಗಳು ಸಾವಿಗೀಡಾಗುತ್ತಿದ್ದರು. ಈಗ ದೀರ್ಘಕಾಲ ಬದುಕಿರುತ್ತಾರೆ. ಹಲವು ಹೊಸ ಔಷಧಗಳು ಅವರಿಗೆ ಹೆಚ್ಚು ವರ್ಷ ಬದುಕಲು ಸಾಧ್ಯ ಮಾಡಿಕೊಡುತ್ತದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ, ಆ ಹಣ್ಣು ತಿಂದರೆ, ಈ ಆಹಾರ ತಿಂದರೆ, ಯೋಗ, ಪ್ರಾಣಾಯಾಮ ಮಾಡಿದರೆ ಕ್ಯಾನ್ಸರ್ ನಿವಾರಣೆಯಾಗುತ್ತದೆ ಎಂದೆಲ್ಲ ಪ್ರಚಾರವಾಗುತ್ತಿದೆ. ಇದು ಎಷ್ಟು ಸತ್ಯ?

ಕ್ಯಾನ್ಸರ್‌ ಮನುಷ್ಯನನ್ನು ಖಿನ್ನತೆಗೆ ತಳ್ಳುವಂತಹ ಕಾಯಿಲೆ. ಈ ರೋಗ ಬಂದವನು ಬದುಕುವುದಕ್ಕಾಗಿ ಯಾರು ಏನು ಹೇಳಿದರೂ ಪಾಲಿಸುತ್ತಾನೆ. ಒಟ್ಟಾರೆ ತಾನು ಬದುಕಬೇಕು. ಹೀಗಾಗಿ ಅನೇಕರು ತಮ್ಮ ವೈಯಕ್ತಿಕ ಅನುಭವದೊಂದಿಗೆ ಇಂಥ ಸಲಹೆ ನೀಡುತ್ತಾರೆ. ಕೆಲವು ಕಡೆ ಹಾಲು, ಟೊಮೆಟೊ, ಗೆಣಸು ತಿನ್ನಬೇಡಿ ಎಂತಾರೆ. ಸಕ್ಕರೆ ತಿಂದರೆ ಕ್ಯಾನ್ಸರ್ ಬರುತ್ತೆ ಎಂತಾರೆ. ಇಂಥವಕ್ಕೆ ಆಧಾರವಿಲ್ಲ. ಸತ್ಯವೂ ಅಲ್ಲ. ಇದನ್ನು ನಾನು ನಂಬುವುದಿಲ್ಲ.

ಅರಿಸಿನ ಪುಡಿ ಮತ್ತು ಗೋಧಿಹುಲ್ಲಿನ ರಸದಿಂದ ಕ್ಯಾನ್ಸರ್ ಗುಣವಾಗುತ್ತದೆ ಎಂದೂ ಪ್ರಚಾರದಲ್ಲಿದೆ, ಇದು ನಿಜವೇ?

ಅರಿಸಿನದಿಂದ ಕ್ಯಾನ್ಸರ್‌ ನಿಯಂತ್ರಣಕ್ಕೆ ಬರುತ್ತದೆ ಎಂಬುದರ ಬಗ್ಗೆ ಸಾಕಷ್ಟು ಸಂಶೋಧನೆ ಆಗಿದೆ. ಕ್ಯಾನ್ಸರ್‌ ಕಡಿಮೆಯಾಗಿರುವ ಉದಾಹಣೆಗಳೂ ಇವೆ. ಅರಿಸಿನಯುಕ್ತ ಮಾತ್ರೆಗಳನ್ನು ರೋಗಿಗಳಿಗೆ ಕೊಡುತ್ತಿದ್ದಾರೆ. ಆದರೆ, ಇದು ಇಂಥ ಕ್ಯಾನ್ಸರ್‌ಗೆ, ಇಷ್ಟು ಉಪಯೋಗವಾಗುತ್ತದೆ ಎಂಬುದಕ್ಕೆ ಆಧಾರ ಇಲ್ಲ. ಬಹುಶಃ ಪರೋಕ್ಷ ಲಾಭ ಇರಬಹುದು. ಕ್ಯಾನ್ಸರ್‌ ನಿಯಂತ್ರಣಕ್ಕೆ ಪಥ್ಯ ಬೇಕಾಗಿಲ್ಲ. ಆರೋಗ್ಯಪೂರ್ಣ ಆಹಾರ ಸೇವನೆಯೊಂದೇ ಪರಿಹಾರ.

ಕಿಮೋಥೆರಪಿ ಚಿಕಿತ್ಸೆ ಬಗ್ಗೆ ಕ್ಯಾನ್ಸರ್ ಪೀಡಿತರಲ್ಲಿ ತುಂಬಾ ಭಯವಿದೆ. ತುಂಬಾ ಸುಸ್ತಾಗುತ್ತದೆ ಎನ್ನುತ್ತಾರೆ. ಇದು ಮಾನಸಿಕವೋ, ದೈಹಿಕ ದಣಿವೋ? ಇದಕ್ಕೆ ಪರ್ಯಾಯವಿಲ್ಲವೇ ?

ಎರಡೂ ಹೌದು. ಕಿಮೊಥೆರಪಿಯಿಂದ ದೇಹದಲ್ಲಿರುವ ಕ್ಯಾನ್ಸರ್‌ ಕೋಶಗಳು ಹೇಗೆ ನಾಶವಾಗುತ್ತದೆಯೋ ಹಾಗೆ, ಆರೋಗ್ಯ ಪೂರ್ಣ ಕೋಶಗಳೂ ತೊಂದರೆಗೀಡಾಗುತ್ತವೆ. ಸಹಜವಾಗಿ ರೋಗಿ ನಿಶ್ಯಕ್ತನಾಗುತ್ತಾನೆ. ಜತೆಗೆ ಈ ವೇಳೆ ವೇಳೆ ಆಹಾರ ಸೇರುವುದಿಲ್ಲ. ಹೀಗಾಗಿ ಸುಸ್ತು ಹೆಚ್ಚಾಗುತ್ತದೆ. ಹಾಗಿದ್ದರೂ ರೋಗವನ್ನು ಗುಣಮಾಡಬೇಕಾದರೆ ಕಿಮೋಥೆರಪಿ ತೆಗೆದುಕೊಳ್ಳುವುದು ಅನಿವಾರ್ಯ. ಇತ್ತೀಚೆಗೆ ಕೆಲವು ಕಾಯಿಲೆಗಳಿಗೆ ‘ಟಾರ್ಗೆಟೆಡ್ ಥೆರಪಿ / ಇಮ್ಯೂನೊ ಥೆರಪಿ ’ ಎಂಬ ಚಿಕಿತ್ಸಾ ವಿಧಾನ ನೊಡುತ್ತಿದ್ದೇವೆ. ಇದರಿಂದ ಹಲವಾರು ರೋಗಿಗಳಿಗೆ ಬಹಳ ಗುಣವಾಗುತ್ತಿದೆ. ಆದರೆ, ಅದು ತುಂಬಾ ದುಬಾರಿ.

ದುಶ್ಚಟಗಳಿಂದ ಕ್ಯಾನ್ಸರ್ ಬರುತ್ತದೆ ನಿಜ. ಆದರೆ, ಚಟಗಳಿಲ್ಲದವರೂ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರಲ್ಲಾ ?

ದುಶ್ಚಟ ಮಾತ್ರವಲ್ಲ, ಅಶಿಸ್ತಿನ ಜೀವನಶೈಲಿ ಹೊಂದಿದ್ದವರಿಗೂ ಕ್ಯಾನ್ಸರ್ ಬರಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಈ ರೋಗ ತಗಲುವ ಸಾಧ್ಯತೆ ಇದೆ. ಸಾಮಾನ್ಯವಾಗಿ ವಯಸ್ಸು ಹೆಚ್ಚಾದ ನಂತರ ಕ್ಯಾನ್ಸರ್‌ ಪೀಡಿತರಾಗುವವರೇ ಹೆಚ್ಚು. ಕಾರಣ; ವಯಸ್ಸಾದಂತೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ದೇಹದಲ್ಲಿರುವ ಕೋಶಗಳಲ್ಲಿ ಕ್ಯಾನ್ಸರ್ ಹರಡುವ ಕೋಶಗಳ ವಿರುದ್ಧ ಹೋರಾಡುವ ಶಕ್ತಿ ಇರುವುದಿಲ್ಲ. ಹೀಗಾಗಿ ಕ್ಯಾನ್ಸರ್ ಬರುತ್ತದೆ. ಕ್ಯಾನ್ಸರ್‌ ಹೀಗೆ ತಗಲುತ್ತದೆ ಎಂದು ಹೇಳುವುದು ಕಷ್ಟ.

ವಿಶ್ವ ಕ್ಯಾನ್ಸರ್‌ ದಿನದಂದು ನಿಮ್ಮ ಸಂದೇಶವೇನು ?

ಜೀವನದ ಶೈಲಿ, ಪೌಷ್ಟಿಕ ಆಹಾರದ ಬಗ್ಗೆ ಗಮನಕೊಡಿ. ದುಶ್ಚಟಗಳಿಂದ ದೂರವಿರಿ. ರಾಸಾಯನಿಕರಹಿತ ತರಕಾರಿ, ಹಣ್ಣುಗಳನ್ನು ಯಥೇಚ್ಚವಾಗಿ ತಿನ್ನಿ. ಅನುಮಾನ ಬಂದರೆ ಪರೀಕ್ಷೆ ಮಾಡಿಸಿ. ಪ್ರತಿ ವರ್ಷ ಆರೋಗ್ಯ/ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಿ. ಮೊದಲೇ ರೋಗ ಪತ್ತೆಯಾದರೆ ಚಿಕಿತ್ಸೆ ಸುಲಭ. ನಮ್ಮಲ್ಲಿಗೆ ಬರುವ ಅನೇಕ ರೋಗಿಗಳಲ್ಲಿ, ರೋಗ ತಗುಲಿ ಒಂದೂವರೆ ವರ್ಷವಾಗಿರುತ್ತದೆ. ರೋಗ ಉಲ್ಬಣವಾಗಿರುತ್ತದೆ. ಹಾಗಾಗಿ ಆರಂಭದಲ್ಲೇ ರೋಗ ಪತ್ತೆಯಾದರೆ, ಚಿಕಿತ್ಸೆ ಸುಲಭ. ಖರ್ಚು ಕಡಿಮೆ. ಗುಣಮುಖರಾಗುವುದು ಖಚಿತ.

ರೋಗದ ಪರೀಕ್ಷೆ

ಕ್ಯಾನ್ಸರ್ ಹಳ್ಳಿ–ಪಟ್ಟಣದ ತಾರತಮ್ಯವಿಲ್ಲದೇ ಹಬ್ಬುತ್ತಿದೆ. ಶ್ರೀ ಶಂಕರ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಈ ರೋಗದ ಬಗ್ಗೆ ಅರಿವು ಮೂಡಿಸುವಲ್ಲಿ ಕಾರ್ಯೋನ್ಮುಖವಾಗಿದೆ. ಆಸ್ಪತ್ರೆಯ 40 ಸಿಬ್ಬಂದಿ ಚಿಕ್ಕಬಳ್ಳಾಪುರ,ಗೌರಿಬಿದನೂರು ತಾಲ್ಲೂಕಿನಲ್ಲಿ ಕ್ಯಾನ್ಸರ್ ಜಾಗೃತಿ ಮೂಡಿಸುವ ಜತೆಗೆ, ರೋಗ ಪರೀಕ್ಷೆ ಮಾಡಿ, ಚಿಕಿತ್ಸೆ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.