ADVERTISEMENT

ಆರೋಗ್ಯ: ತಲೆನೋವಿಗೆ ಹತ್ತಾರು ತಲೆಗಳು.. ಡಾ. ಕವಿತಾ ಬಿ. ಎಸ್ ಲೇಖನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 22:41 IST
Last Updated 4 ಆಗಸ್ಟ್ 2025, 22:41 IST
<div class="paragraphs"><p>ಆರೋಗ್ಯ: ತಲೆನೋವಿಗೆ ಹತ್ತಾರು ತಲೆಗಳು.. ಡಾ. ಕವಿತಾ ಬಿ. ಎಸ್ ಲೇಖನ</p></div>

ಆರೋಗ್ಯ: ತಲೆನೋವಿಗೆ ಹತ್ತಾರು ತಲೆಗಳು.. ಡಾ. ಕವಿತಾ ಬಿ. ಎಸ್ ಲೇಖನ

   

ತಲೆನೋವಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಚರಕ–ಸುಶ್ರುತರ ಕಾಲದಲ್ಲಿಯೇ ಅನೇಕ ವಿಧವಾದ ತಲೆನೋವುಗಳನ್ನು ಉಲ್ಲೇಖಿಸಿ ಅವುಗಳಿಗೆ ಚಿಕಿತ್ಸಾ ಕ್ರಮಗಳನ್ನೂ ಹೇಳಲಾಗಿದೆ. ಆಯುರ್ವೇದದಲ್ಲಿ ತಲೆನೋವನ್ನು ‘ಶಿರಶೂಲ’, ‘ಶಿರೋರೋಗ’, ‘ಶಿರೋರುಕ್’ ಎಂದು ಹೇಳಲಾಗಿದೆ. ತಲೆನೋವಿಗೆ ವಾತ, ಪಿತ್ತ, ಕಫ ಹಾಗೂ ರಕ್ತದೋಷಗಳೇ ಕಾರಣ.

ವಾತಜ ಶಿರೋರೋಗ: ವಾತದೋಷವು ಕೆರಳುವುದರಿಂದ ಉಂಟಾಗುವ ಇದರ ಲಕ್ಷಣಗಳೆಂದರೆ, ಕಾರಣವಿಲ್ಲದೆ ತೀವ್ರವಾದ ತಲೆನೋವು, ರಾತ್ರಿಯ ಸಮಯದಲ್ಲಿ ನೋವು ಹೆಚ್ಚಾಗುತ್ತದೆ.

ADVERTISEMENT

ಪಿತ್ತಜ ಶಿರೋರೋಗ: ಪಿತ್ತದೋಷವು ಉಲ್ಬಣಗೊಳ್ಳುವುದರಿಂದ ಹಾಗೂ ಕಲುಷಿತಗೊಳ್ಳುವ ಪಿತ್ತ ಇದಕ್ಕೆ ಕಾರಣ.

ರಕ್ತಜ ಶಿರೋರೋಗ: ರಕ್ತದೋಷ ಹಾಗೂ ಪಿತ್ತದೋಷಗಳು ಕಾರಣ. ತಲೆಯನ್ನು ಸ್ಪರ್ಶಿಸುವುದು ಕೂಡ ಸಹಿಸಲು ಆಗದಷ್ಟು ತಲೆನೋವು ಇದರ ಲಕ್ಷಣ.

ಕಫಜ ಶಿರೋರೋಗ: ಕಫದ ದೋಷದ ಕೆರಳುವಿಕೆಯಿಂದ ಉಂಟಾಗುವ ಈ ತಲೆ ನೋವಿನಲ್ಲಿ ತಲೆಯು ಭಾರವಾಗುವಿಕೆ, ಕಫಾವೃತದ ಅನುಭವ, ಶೀತ, ಕಣ್ಣಿನ ಸುತ್ತ ಊತ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಸನ್ನಿಪಾತಜ ಶಿರೋರೋಗ: ತ್ರಿದೋಷಗಳ ಕೆರಳುವಿಕೆಯಿಂದ ಹಾಗೂ ಕಲುಷಿತಗೊಳ್ಳುವ ದೋಷಗಳಿಂದ ಉಂಟಾಗುತ್ತದೆ. ಮೇಲಿನ ಮೂರೂ ದೋಷಗಳಿಂದಾಗುವ ಎಲ್ಲ ಗುಣಲಕ್ಷಣಗಳನ್ನೂ ಹೊಂದಿರುತ್ತದೆ.

ರಕ್ತಜ ಶಿರೋರೋಗ: ರಕ್ತದೋಷ ಹಾಗೂ ಪಿತ್ತದ ಕಾರಣದಿಂದ ಬರುತ್ತದೆ. ಜೊತೆಗೆ ಪಿತ್ತಜ ರೋಗದ ಲಕ್ಷಣಗಳನ್ನು ಹೊಂದಿರುತ್ತದೆ.

ಕ್ಷಯಜ ಶಿರೋರೋಗ: ಸಾಮಾನ್ಯ ಪ್ರಮಾಣದಲ್ಲಿರಬೇಕಾದ ರಕ್ತ, ಮಾಂಸ, ಕಫ ಮತ್ತು ವಾತವು ಶಿರೋಭಾಗದಲ್ಲಿ ಅಗತ್ಯಕ್ಕಿಂತ ಕಡಿಮೆಯಾಗುವುದರಿಂದ ತೀವ್ರವಾದ ತಲೆನೋವು ಶಿರೋಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ನಿವಾರಣೆ ಮಾಡುವುದು ತುಂಬಾ ಕಷ್ಟ. ಈ ನೋವು ಬಂದಾಗ ರೋಗಿಯು ತೀವ್ರವಾದ ತಲೆಬಿಸಿಯಾಗುವಿಕೆಯನ್ನು ಅನುಭವಿಸುತ್ತಾನೆ; ಕಣ್ಣು ಮತ್ತು ಮೂಗಿನಿಂದ ಹೊಗೆಯು ಬರುತ್ತಿರುವಂತಹ ಅನುಭವವಾಗುತ್ತದೆ.

ಕ್ರಿಮಿಜ ಶಿರೋರೋಗ: ಸೂಕ್ಮಜೀವಿಗಳ ಸೋಂಕಿನಿಂದ ಇದು ಉಂಟಾಗುತ್ತದೆ. ಅತ್ಯಂತ ತೀವ್ರವಾದ ಹಾಗೂ ಚುಚ್ಚುವಂತಹ ತಲೆನೋವು, ತಲೆಯನ್ನು ಒಳಗಿನಿಂದ ಕೊರೆಯುತ್ತಿರುವಂತಹ ಅನುಭವ, ತಲೆಯಲ್ಲಿ ನಾಡಿಬಡಿತ ಹೆಚ್ಚಾದಂತೆ ಅನ್ನಿಸತೊಡಗಿ ಕಫಮಿಶ್ರಿತವಾದ ಮೂಗು ಸೋರುವಿಕೆ ಕಂಡು ಬರುತ್ತದೆ.

ಸೂರ್ಯಾವರ್ತ ಶಿರೋರೋಗ: ಶಿರೋಭಾಗದಲ್ಲಿ ಸಂಗ್ರಹವಾಗುವ ಕಫವು ವಾತಾವರದ ಶಾಖಕ್ಕೆ ದ್ರವೀಕರಣಗೊಂಡು ಹರಿಯಲು ಪ್ರಾರಂಭಿಸುವುದರಿಂದ ಈ ರೀತಿಯ ತಲೆನೋವು ಬರುತ್ತದೆ. ಮುಖ್ಯವಾಗಿ ಸೂರ್ಯೋದಯವಾಗುವಾಗ ಪ್ರಾರಂಭವಾಗುವ ತಲೆನೋವು ತಾಪವು ತೀವ್ರಗೊಳ್ಳುತ್ತಾ ಹೋಗಿ ಕೊನೆಗೆ ಸೂರ್ಯಾಸ್ತವಾಗುವಾಗ ಕಡಿಮೆಯಾಗುತ್ತದೆ.

ಅನಂತಾವರ್ತ: ತ್ರಿದೋಷಗಳು ಉಲ್ಬಣಾವಸ್ಥೆಯನ್ನು ತಲುಪಿದಾಗ ಹಾಗೂ ಕುಪಿತಗೊಂಡಾಗ ಉಂಟಾಗುವ ಈ ನೋವು ಸಾಮಾನ್ಯವಾಗಿ ಕತ್ತಿನ ಹಿಂಭಾಗದಲ್ಲಿ ಕಂಡುಬರುತ್ತದೆ. ಇದು ನಿಧಾನವಾಗಿ ಕಣ್ಣುಗಳು, ಹುಬ್ಬು ಹಾಗೂ ಕೆನ್ನೆಯ ಭಾಗದಲ್ಲಿ ಹರಡಿಕೊಂಡು, ಎದೆಬಡಿತದಂತಹ ನೋವನ್ನು ಉಂಟುಮಾಡುತ್ತದೆ.

ಅರ್ಧಾವಭೇದಕ ಶಿರೋರೋಗ: ಅತಿಯಾದ ಒಣ ಆಹಾರವನ್ನು ತಿನ್ನುವುದರಿಂದ, ಪದೇಪದೇ ಆಹಾರ ತಿನ್ನುವುದರಿಂದ, ಈ ಮೊದಲು ತಿಂದ ಆಹಾರವು ಪೂರ್ತಿಯಾಗಿ ಜೀರ್ಣವಾಗುವ ಮೊದಲೇ ಮತ್ತೆ ಆಹಾರ ತಿನ್ನುವುದರಿಂದ, ಹಿಮಪಾತ ಮತ್ತು ಕೊರೆವ ಚಳಿಗೆ ಮೈಯೊಡ್ಡುವುದು, ಅತಿಯಾದ ಮೈಥುನ ಮತ್ತು ದೈಹಿಕ ವ್ಯಾಯಾಮ, ನೈಸರ್ಗಿಕ ವೇಗಗಳನ್ನು ತಡೆಹಿಡಿಯುವುದು ಮೊದಲಾದ ಕಾರಣಗಳಿಂದ ಈ ತಲೆನೋವು ಕಾಣಿಸಿಕೊಳ್ಳುತ್ತದೆ. ಅತಿಯಾದ ವಾತದೋಷದ ಹೆಚ್ಚಳದಿಂದಾಗಿ ಶಿರೋಭಾಗದ ಎದ ಮತ್ತು ಬಲಭಾಗದಲ್ಲಿ ತೀವ್ರವಾದ ನೋವಿರುತ್ತದೆ.

ಶಂಖಕ: ಉಲ್ಬಣಗೊಂಡ ಮತ್ತು ಕುಪಿತಗೊಂಡ ರಕ್ತ, ಪಿತ್ತ ಮತ್ತು ವಾತದಿಂದಾಗಿ ತಲೆಯಲ್ಲಿ ಜುಮ್ಮೆನಿಸುವ ನೋವು ಕಾಣಿಸಿಕೊಳ್ಳುತ್ತದೆ. ಕಣ್ಣಿನ ಪಕ್ಕ ಹಾಗೂ ಕಿವಿಗಳ ಮೇಲ್ಭಾಗದಲ್ಲಿ ಅತಿಯಾದ ನೋವು ಹಾಗೂ ಉರಿಯೂತದಿಂದ ಕೂಡಿರುತ್ತದೆ. ಇದರ ತೀವ್ರತೆಯು ಕತ್ತು ಮತ್ತು ತಲೆಯ ಭಾಗದಲ್ಲಿ ವಿಷದಂತೆ ತೀಕ್ಷ್ಣವಾಗಿ ಹರಡಿ ಮೂರೇ ದಿನಗಳಲ್ಲಿ ರೋಗಿಯ ಪ್ರಾಣಕ್ಕೇ ಅಪಾಯವನ್ನು ಒಡ್ಡಬಹುದು.

ಇವುಗಳೊಂದಿಗೆ ಆಧುನಿಕ ಜೀವನಶೈಲಿ, ಕೆಲಸದ ಒತ್ತಡ, ಅತಿಯಾದ ಹುಳಿಪದಾರ್ಥ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ, ಅನಿಯಮಿತ ಆಹಾರಸೇವನೆ, ಜೀರ್ಣವಾಗುವ ಮೊದಲೇ ಮತ್ತೆ ಮತ್ತೆ ಆಹಾರಸೇವನೆ, ನೈಸರ್ಗಿಕ ವೇಗಗಳ ತಡೆಹಿಡಿಯುವುಕೆ ಹಾಗೂ ಬಳಲುವಿಕೆ ಮೊದಲಾದವುಗಳು ಅನೇಕ ಬಗೆಯ ತಲೆನೋವಿಗೆ ಕಾರಣಗಳಾಗಿವೆ.

ಚಿಕಿತ್ಸಾ ಕ್ರಮಗಳು

ನಿದಾನ ಪರಿವರ್ಜನ ಕ್ರಮ: ತಲೆನೋವಿಗೆ ಕಾರಣಗಳಾಗಿರುವ ಜೀವನಶೈಲಿ ಮತ್ತು ಆಹಾರಕ್ರಮಗಳನ್ನು ತ್ಯಜಿಸುವುದು, ನಿದ್ರಾಹೀನತೆ ಮತ್ತು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವುದು.

ಸಂಶೋಧನಾ ಚಿಕಿತ್ಸೆಗಳು: ನಶ್ಯ, ಶಿರೋವಿರೇಚನ, ವಿರೇಚನ, ಬಸ್ತಿ, ರಕ್ತಮೋಕ್ಷಣಗಳಂತಹ ಕ್ರಮಗಳು ತಲೆನೋವಿಗೆ ಪರಿಹಾರಗಳಾಗಿವೆ.

ಸಂಶಮನ ಚಿಕಿತ್ಸಾ ಕ್ರಮ: ಸ್ನೇಹ, ಸ್ವೇದನ, ಉಪನಾಹ, ಧೂಮಪಾನ ಲೇಪ ಮೊದಲಾದ ಕ್ರಮಗಳಿಂದ ಪರಿಹಾರ. 

ಯೋಗ–ಪ್ರಾಣಾಯಾಮ: ಪ್ರಾಣಾಯಾಮ, ಯೋಗ ಮತ್ತು ಧ್ಯಾನಗಳಿಂದ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವುದು.

ಔಷಧಗಳ ಸೇವನೆ: ಶಿರಶೂಲ ವಜ್ರರಸ, ಲಕ್ಷ್ಮಿವಿಳಾಸ ರಸ, ಕಾಮದುಗಾರಸ ಮೊದಲಾದ ಔಷಧಗಳನ್ನು ವೈದ್ಯರ ಸಲಹೆಯೊಂದಿಗೆ ನಿಯಮಿತವಾಗಿ ಸೇವಿಸುವುದರಿಂದ ತಲೆನೋವಿಗೆ ಪರಿಹಾರವನ್ನು ಪಡೆಯಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.