ADVERTISEMENT

ಚೆಲುವೆಯ ಅಂದದ ಮೊಗಕೆ...

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 19:30 IST
Last Updated 24 ಜೂನ್ 2020, 19:30 IST
 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರೊನಾ ಸೋಂಕಿನಿಂದ ಉಂಟಾಗಿರುವ ಪರೋಕ್ಷ ಪರಿಣಾಮಗಳು ಹಲವು. ಇದು ಬ್ಯೂಟಿ ಪಾರ್ಲರ್‌ಗಳ ಮೇಲೂ ಪರಿಣಾಮ ಬೀರಿದೆ. ಸೌಂದರ್ಯ ರಕ್ಷಣೆ ಹೋಗಲಿ, ಕಚೇರಿಯಲ್ಲಿ, ಮನೆಯಲ್ಲಿ ನೀಟಾಗಿರುವ ಅಭ್ಯಾಸ ಮಾಡಿಕೊಂಡ ಯುವತಿಯರು ಈಗ ಬ್ಯೂಟಿ ಸಲೂನ್‌, ಸ್ಪಾಗೆ ಹೋಗಲು ಭಯಪಡುವುದರಿಂದ ತ್ವಚೆಯ ಸ್ವಚ್ಛತೆ, ಹೊಳಪು ಕಾಪಾಡಿಕೊಳ್ಳಲೂ ಹೆಣಗುತ್ತಿದ್ದಾರೆ. ಮನೆಯಿಂದಲೇ ಕಚೇರಿ ಕೆಲಸ ಮಾಡುವವರು ಮನೆಯಲ್ಲೇ ಇದ್ದರೂ ಕೂಡ ಎಣ್ಣೆಜಿಡ್ಡಿನ ಮುಖ, ಅದರಿಂದ ಉಂಟಾಗುವ ಮೊಡವೆ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯ. ಹಾಗಾದರೆ ಮನೆಯಲ್ಲೇ ಕೆಲವು ಸಾಮಗ್ರಿಗಳನ್ನು ಬಳಸಿ ಈ ಜಿಡ್ಡಿನಿಂದ ಪಾರಾಗಿ ಆರೋಗ್ಯಕರ ತ್ವಚೆ ಪಡೆಯುವುದು ಹೇಗೆ?

ಮೊದಲು ದಿನಕ್ಕೆ 7–8 ಲೋಟ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಮೊಡವೆ ನಿವಾರಣೆಗೆ, ಹೊಳೆಯುವ ತ್ವಚೆಗೆ ಪರಿಣಾಮಕಾರಿ. ಮುಖ ತೊಳೆಯುವಾಗ ಸೋಪ್‌ ಅಥವಾ ಯಾವುದೇ ಬ್ರ್ಯಾಂಡ್‌ನ ಹೆಚ್ಚು ಪ್ರಬಲವಾಗಿರುವ ಕ್ಲೆನ್ಸರ್‌ ಅಥವಾ ಫೇಸ್‌ ವಾಶ್‌ ಬಳಸಬೇಡಿ. ಇದು ಮೊಡವೆಯನ್ನು, ಮುಖದ ಮೇಲಿನ ಕಪ್ಪು ಚುಕ್ಕಿಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಲೋಳೆಸರದ ಜೆಲ್‌ ಬಳಸಿ ಇದನ್ನು ವೃತ್ತಾಕಾರವಾಗಿ ಮುಖದ ಮೇಲೆ ಒಂದೆರಡು ನಿಮಿಷ ಉಜ್ಜಿ ತಣ್ಣೀರಿನಿಂದ ತೊಳೆಯಿರಿ.

ಮನೆಯಲ್ಲಿ ಓಟ್ಸ್‌ ಇಟ್ಟುಕೊಳ್ಳುವುದು ಈಗ ಸಾಮಾನ್ಯ. ಈ ಓಟ್ಸ್‌ ಹೊಟ್ಟಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿ ಪೇಸ್ಟ್‌ ಮಾಡಿಕೊಳ್ಳಿ. ಇದಕ್ಕೆ ಕೆಲವು ಹನಿ ಹಾಲು, ಒಂದೆರಡು ಹನಿ ಜೇನುತುಪ್ಪ, ಚಿಟಿಕೆ ಅರಿಸಿನ ಸೇರಿಸಿ ಮುಖದ ಮೇಲೆ, ಬೇಕಿದ್ದರೆ ತೋಳಿಗೆ ನಯವಾಗಿ ಉಜ್ಜಿ. ಐದು ನಿಮಿಷ ಬಿಟ್ಟು ಮುಖ ತೊಳೆದರೆ ಜಿಡ್ಡಿನಿಂದ ಪಾರಾಗಬಹುದು.

ADVERTISEMENT

ಇನ್ನು ದೇಸಿ ಸ್ಕ್ರಬ್‌ ಬಳಸಬಹುದು. ಅಂದರೆ ಅಂಟುವಾಳ ಕಾಯಿಯ ಪುಡಿ ಅಥವಾ ಸೀಗೆಕಾಯಿ ಪುಡಿಯನ್ನು ತಣ್ಣೀರಿನಿಂದ ತೊಳೆದ ಒದ್ದೆ ಮುಖದ ಮೇಲೆ ಹಾಕಿ ವೃತ್ತಾಕಾರವಾಗಿ ಉಜ್ಜಿ. ಇದು ಸತ್ತ ಚರ್ಮದ ಪದರವನ್ನು ತೆಗೆದುಹಾಕಿ, ತ್ವಚೆಗೆ ಹೊಳಪು ನೀಡುತ್ತದೆ. ಇದನ್ನು ಫೇಸ್‌ ವಾಶ್‌ ಅಥವಾ ಸೋಪ್‌ ಬದಲು ಪ್ರತಿ ದಿನ ಬಳಸಬಹುದು. ಒಡೆದ ಪಾದಕ್ಕೂ ಈ ಪುಡಿಯನ್ನು ಹಾಕಿ ಉಜ್ಜಿದರೆ ಹಿಮ್ಮಡಿ ನಯವಾಗುವುದಲ್ಲದೇ, ಬೆರಳಿನ ಮಧ್ಯೆ ಬೆವರು ಮತ್ತು ಧೂಳು ಸೇರಿ ಉಂಟಾದ ಗಲೀಜು ತೊಲಗುತ್ತದೆ.

ಈಗಂತೂ ಬಹಳ ದಿನ ಇಟ್ಟು ಬಳಸಬಹುದು ಎಂದು ಆಲೂಗೆಡ್ಡೆಯನ್ನು ಮನೆಯಲ್ಲಿ ಶೇಖರಿಸುವುದು ರೂಢಿ. ಆಲೂಗೆಡ್ಡೆಯ ವೃತ್ತಾಕಾರವಾದ ಹೋಳನ್ನು ಮುಖದ ಮೇಲೆ ಉಜ್ಜಿ ಅಥವಾ ಇದನ್ನು ನಯವಾಗಿ ರುಬ್ಬಿ ಮುಖಕ್ಕೆ ಲೇಪಿಸಿ ಸ್ವಲ್ಪ ಹೊತ್ತು ಬಿಟ್ಟು ತೊಳೆದುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.