
ಬ್ರೈನ್ ಟ್ಯೂಮರ್
ಬ್ರೈನ್ ಟ್ಯೂಮರ್ ಎನ್ನುವುದು ಮೆದುಳಿನೊಳಗೆ ಅಥವಾ ತಲೆಯ ಬುರುಡೆಯೊಳಗೆ ಬೆಳೆಯುವ ಜೀವಕೋಶಗಳ ಅಸಹಜ ಬೆಳವಣಿಗೆಯಾಗಿದೆ. ಕ್ಯಾನ್ಸರ್ ಜೀವಕೋಶಗಳು ನಿಯಂತ್ರಣ ಮೀರಿ ಬೆಳೆದು ಗಡ್ಡೆಯಂತಾಗಿ ಮೆದುಳಿನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತವೆ. ಇವುಗಳಲ್ಲಿ ಪ್ರೈಮರಿ ಟ್ಯೂಮರ್ ಎಂದರೆ ಮೆದುಳಿನಲ್ಲಿ ಆರಂಭವಾಗುವ ಗಡ್ಡೆ. ಇನ್ನೊಂದು ಸೆಕೆಂಡರಿ ಟ್ಯೂಮರ್ ಎಂದರೆ ದೇಹದ ಬೇರೆ ಭಾಗದಲ್ಲಿ ಬೆಳೆದು ಮೆದುಳಿಗೆ ಹರಡುವ ಗಡ್ಡೆಯಾಗಿದೆ.
ಎಲ್ಲಾ ಬ್ರೈನ್ ಟ್ಯೂಮರ್‌ಗಳು ಕ್ಯಾನ್ಸರ್ ಗಡ್ಡೆಗಳೆಂದು ಹೇಳಲು ಸಾಧ್ಯವಿಲ್ಲ. ಕ್ಯಾನ್ಸರ್ ಕಾರಕವಲ್ಲದ ಗಡ್ಡೆಗಳು ಕೂಡ ಉಂಟಾಗಬಹುದು. ಇಂತಹ ಗಡ್ಡೆಗಳು ಕೂಡ ಅಪಾಯಕಾರಿ ಸಮಸ್ಯೆಯನ್ನು ಸೃಷ್ಟಿಸುತ್ತವೆ. ತಲೆಯ ಬುರುಡೆ (ಸ್ಕಲ್) ಮುಚ್ಚಿರುವ ಅಂಗವಾಗಿರುವುದರಿಂದ ಯಾವುದೇ ಅಸಹಜ ಬೆಳವಣಿಗೆಯು ಮೆದುಳಿನ ಮೇಲೆ ಒತ್ತಡ ಬೀರುತ್ತದೆ.
ಬ್ರೈನ್ ಟ್ಯೂಮರ್ ಲಕ್ಷಣಗಳೇನು?
ಟ್ಯೂಮರ್ (ಗಡ್ಡೆ)ಯ ಗಾತ್ರ, ವಿಧ ಹಾಗೂ ಯಾವ ಭಾಗದಲ್ಲಿ ಟ್ಯೂಮರ್ ರಚನೆಯಾಗಿದೆ ಎಂಬುದರ ಮೇಲೆ ಲಕ್ಷಣಗಳು ಬದಲಾಗುತ್ತವೆ. ಕೆಲವು ಸಾಮಾನ್ಯವಾಗಿ ಗೋಚರಿಸುವ ಅಂಶಗಳೆಂದರೇ, ಪದೇ ಪದೇ ಕಾಡುವ ತೀವ್ರ ತಲೆನೋವು. ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿನ ತಲೆನೋವು. ಕಾರಣವಿಲ್ಲದೇ ಕಾಡುವ ವಾಕರಿಕೆ ಮತ್ತು ವಾಂತಿ ಸಮಸ್ಯೆ. ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ, ಕಣ್ಣು ಮಂಜಾಗುವುದು ಅಥವಾ ವಸ್ತುಗಳು ಎರಡು ಗೋಚರಿಸುವುದು, ಹಠಾತ್ ಸೆಳೆತ, ನಡೆದಾಡಲು ಹಾಗೂ ಬ್ಯಾಲೆನ್ಸ್ ಮಾಡುವಲ್ಲಿ ಸಮಸ್ಯೆ, ವ್ಯಕ್ತಿತ್ವದಲ್ಲಿ ಬದಲಾವಣೆ, ಮರೆವು, ಗೊಂದಲ, ಮಾತನಾಡಲು ಕಷ್ಟ, ಕೈ ಮತ್ತು ಕಾಲುಗಳಲ್ಲಿ ಅಶಕ್ತತೆ ಇವು ಬ್ರೈನ್ ಟ್ಯೂಮರ್‌ನ ಸಾಮಾನ್ಯ ಲಕ್ಷಣಗಳಾಗಿವೆ.
ಈ ಲಕ್ಷಣಗಳು ಬೇರೆ ರೀತಿಯ ಆರೋಗ್ಯ ಸಮಸ್ಯೆಯಲ್ಲೂ ಕಾಣಿಸಿಕೊಳ್ಳಬಹುದು. ಆದರೆ ನಿರಂತರವಾಗಿ ಇಂತಹ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಮುಖ್ಯ. ಶೀಘ್ರ ಸಮಸ್ಯೆ ಪತ್ತೆ ರೋಗ ಗುಣಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಬ್ರೈನ್ ಟ್ಯೂಮರ್ ಪತ್ತೆ ಹಚ್ಚುವುದು ಹೇಗೆ?
ರೋಗ ಪತ್ತೆಹಚ್ಚುವ ಪ್ರಕ್ರಿಯೆಯು ನರವೈಜ್ಞಾನಿಕ ಪರೀಕ್ಷೆಯೊಂದಿಗೆ ಆರಂಭವಾಗುತ್ತದೆ. ವ್ಯಕ್ತಿಯ ಬಲ, ಚಲನೆಯಲ್ಲಿ ಸಮನ್ವಯತೆ, ರಿಫ್ಲೆಕ್ಸ್‌ಸ್‌ಗಳ ಪರೀಕ್ಷೆ ನಡೆಸಲಾಗುತ್ತದೆ. ಟ್ಯೂಮರ್‌ನ ಸಾಧ್ಯತೆ ಕಂಡುಬಂದಲ್ಲಿ ಮೆದುಳಿನ ಎಮ್‌ಆರ್‍ಐ ಅಥವಾ ಸಿಟಿ ಸ್ಕ್ಯಾನ್ ನಡೆಸಲಾಗುತ್ತದೆ. ಕೆಲವು ಸಂದರ್ಭದಲ್ಲಿ ಗಡ್ಡೆಯು ಕ್ಯಾನ್ಸರ್ ಕಾರಕವೇ ಎಂದು ತಿಳಿಯಲು ಬಯಾಪ್ಸಿ ಕೂಡ ನಡೆಸಲಾಗುತ್ತದೆ.
ಬ್ರೈನ್ ಟ್ಯೂಮರ್ ಗುಣಪಡಿಸಲು ಸಾಧ್ಯವೇ?
ಕೆಲವು ಬ್ರೈನ್ ಟ್ಯೂಮರ್‌ಗಳು ಅದರಲ್ಲೂ ಕ್ಯಾನ್ಸರ್ ಕಾರಕವಲ್ಲದ ಗಡ್ಡೆಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಬಹುದು ಹಾಗೂ ಇಂತಹ ಗಡ್ಡೆಗಳು ಮರುಕಳಿಸದಂತೆ ತಡೆಯಬಹುದು. ಇನ್ನು ಕ್ಯಾನ್ಸರ್ ಗಡ್ಡೆಗಳ ಚಿಕಿತ್ಸೆ ಬಹಳ ಸವಾಲಿನದ್ದಾಗಿರುತ್ತದೆ. ಆದರೆ ಆಧುನಿಕ ಚಿಕಿತ್ಸಾ ವಿಧಾನಗಳು ರೋಗಿಯ ಜೀವನ ಗುಣಮಟ್ಟ ಸುಧಾರಿಸುವಲ್ಲಿ ನೆರವಾಗುತ್ತಿವೆ.
ಚಿಕಿತ್ಸೆಯ ಆಯ್ಕೆಗಳು ಯಾವವು?
•ಟ್ಯೂಮರ್‌ಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವುದು
•ರೇಡಿಯೇಶನ್ ಥೆರಪಿ ಮೂಲಕ ಕ್ಯಾನ್ಸರ್ ಜೀವಕೋಶಗಳನ್ನು ನಾಶ ಮಾಡುವುದು
•ಡ್ರಗ್ಸ್ ಬಳಕೆಯಿಂದ ಕೀಮೊಥೆರಪಿ ಮೂಲಕ ಕ್ಯಾನ್ಸರ್ ಜೀವಕೋಶಗಳನ್ನು ಗುರಿಯಾಗಿಸುವುದು
•ನಿರ್ದಿಷ್ಟ ಕ್ಯಾನ್ಸರ್ ಸೆಲ್‌ಗಳ ಮೇಲೆ ಟಾರ್ಗಟೆಡ್ ಥೆರಪಿ ಮತ್ತು ಇಮ್ಯುನೊಥೆರಪಿ ಮೂಲಕ ದಾಳಿ ಮಾಡುವುದು
•ಜೀವನದ ಗುಣಮಟ್ಟ ಸುಧಾರಿಸಲು ನ್ಯೂರೊ ಪುನಶ್ಚೇತನ ಕೈಗೊಳ್ಳುವುದು.
(ಲೇಖಕರು: ಡಾ. ಅನ್ಮೋಲ್ ನಾಗರಾಜ್, ಸೀನಿಯರ್ ಕನ್ಸಲ್ಟೆಂಟ್ - ನರ ಶಸ್ತ್ರಚಿಕಿತ್ಸೆ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ, ಮಣಿಪಾಲ್ ಆಸ್ಪತ್ರೆ ಯಶವಂತಪುರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.