ADVERTISEMENT

ಕ್ಯಾನ್ಸರ್‌ ಶಬ್ದದ ಭಯ ಬೇಡ ಬದುಕು ಒಪ್ಪಿಕೊಳ್ಳಿ...

ಶರತ್‌ ಹೆಗ್ಡೆ
Published 23 ಡಿಸೆಂಬರ್ 2019, 19:45 IST
Last Updated 23 ಡಿಸೆಂಬರ್ 2019, 19:45 IST
ಸಮರಾ ಮಹಿಂದ್ರ
ಸಮರಾ ಮಹಿಂದ್ರ   

ಕ್ಯಾನ್ಸರ್‌ ಎಂಬ ಶಬ್ದವೇ ಜನರನ್ನು ಭಯಕ್ಕೆ ತಳ್ಳುತ್ತದೆ. ಅರಿವಿನ ಕೊರತೆಯಿದು. ಅದು ಹೋಗಬೇಕು. ಬದುಕನ್ನು ಒಪ್ಪಿಕೊಳ್ಳಬೇಕು...

ಹೀಗೆನ್ನುತ್ತಾರೆ ಕೇರರ್‌ ಸಂಸ್ಥೆಯ ಸಂಸ್ಥಾಪಕಿ ಸಮರ ಮಹಿಂದ್ರ. ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಬದುಕಿನ ಸುಸ್ಥಿರತೆಗಾಗಿ ಸಂಸ್ಥೆ ಶ್ರಮಿಸುತ್ತಿದೆ. ವೈದ್ಯರ ಔಷಧಗಳ ಜತೆಗೆ ಜೀವನಶೈಲಿ, ಮಾನಸಿಕ ಸದೃಢತೆ, ಆಹಾರ ಪದ್ಧತಿ, ಯೋಗ, ಧ್ಯಾನ ಇತ್ಯಾದಿ ಸೇರಿದಂತೆ ಸಮಗ್ರ ಜೀವನ ವಿಧಾನದ ಮಾರ್ಗದರ್ಶನ ನೀಡುತ್ತಿದೆ. ಸಮರ ಅವರೊಂದಿಗಿನ ಮಾತುಕತೆಯ ಸಾರಾಂಶ ಇಲ್ಲಿದೆ.

ಏನಿದು ಕೇರರ್‌?
ವ್ಯಕ್ತಿಗತ ಆರೋಗ್ಯ ಕಾಳಜಿಯ ಸಮಗ್ರ ವಿನ್ಯಾಸ ರೂಪಿಸುತ್ತೇವೆ. ಆಯಾ ವ್ಯಕ್ತಿಯ ರೋಗದ ಸ್ವರೂಪ ಮತ್ತು ಹಂತಗಳಿಗೆ ಬೇಕಾದಂತೆ ಚಿಕಿತ್ಸೆಯ ಜತೆಗೆ ಜೀವನ ವಿಧಾನವನ್ನೂ ಕಲ್ಪಿಸಬೇಕಾಗುತ್ತದೆ. ಅದನ್ನು ನಮ್ಮ ತಂಡ ಮಾಡುತ್ತಿದೆ.

ADVERTISEMENT

ಕ್ಯಾನ್ಸರ್‌ ಪತ್ತೆಯಾದ ತಕ್ಷಣದ ಸನ್ನಿವೇಶದ ನಿರ್ವಹಣೆ ಹೇಗೆ?
ನಾವು ಪರಿಸ್ಥಿತಿಯನ್ನು ಹಾಗೇ ಸ್ವೀಕರಿಸಬೇಕು. ಅದರ ಭಾವ ತೀವ್ರತೆಯನ್ನು ಕಡಿಮೆ ಮಾಡುತ್ತೇವೆ. ಕ್ಯಾನ್ಸರ್‌ ಎಂದಾಕ್ಷಣ ಬದುಕು ಮುಗಿದು ಹೋಯಿತು ಎಂದರ್ಥ ಅಲ್ಲ. ಈ ಮನೋಭಾವ ಬದಲಾಗಬೇಕು. ಅದಕ್ಕಾಗಿ ಆಪ್ತ ಸಮಾಲೋಚನೆ, ವಿಡಿಯೋ ಕಥನಗಳ ಮೂಲಕ ಮಾಹಿತಿ, ಯೋಗ, ವ್ಯಾಯಾಮ ಈ ಎಲ್ಲ ಮಾರ್ಗಗಳ ಮೂಲಕ ಅವರನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಿಸುತ್ತೇವೆ. ಇಲ್ಲಿ ರೋಗಿಯ ಕುಟುಂಬದವರಿಗೆ ಮನವರಿಕೆ ಮಾಡುವುದೂ ಮುಖ್ಯ.

ನಿಮ್ಮ ವಿಧಾನದ ಗುರಿ ಏನು?
ವೈದ್ಯರ ಚಿಕಿತ್ಸೆಗೆ ನಾವು ಪೂರಕವಾಗಿರುತ್ತೇವೆ. ಔಷಧವನ್ನು ವೈದ್ಯರು ಸೂಚಿಸುತ್ತಾರೆ. ಆದರೆ, ಚಿಕಿತ್ಸೆಯ ನಂತರದ ಜೀವನ ವಿಧಾನದ ಬಗ್ಗೆ, ನೋವು ನಿಭಾಯಿಸುವ ಬಗ್ಗೆ, ಫಿಸಿಯೋಥೆರಪಿಯಂಥ ವಿಧಾನಗಳ ಬಗ್ಗೆ ತಿಳಿ ಹೇಳುತ್ತೇವೆ. ರೋಗಿ ಯಾವ ಹಂತದಲ್ಲಿದ್ದಾರೆ ಎಂಬುದನ್ನು ಗಮನಿಸುತ್ತೇವೆ. ಅವರು ಮೊದಲು ಚಿಕಿತ್ಸೆಯನ್ನು ಸ್ವೀಕರಿಸಬೇಕು. ಚಿಕಿತ್ಸೆ, ನಮ್ಮ ಮಾರ್ಗದರ್ಶನ ಎಲ್ಲವುಗಳ ಗುರಿ ಸಮಸ್ಯೆ ಪೀಡಿತರ ಜೀವನ ಗುಣಮಟ್ಟ ಸುಧಾರಣೆ ಒಂದೇ ಆಗಿದೆ.

ವಿಧಾನ ಅಳವಡಿಕೆ ಹೇಗೆ?
ನಾವು ಎಲ್ಲ ಪ್ರಮುಖ ಆಸ್ಪತ್ರೆಗಳ ಕ್ಯಾನ್ಸರ್‌ ತಜ್ಞರೊಂದಿಗೆ ಕಾರ್ಯಜಾಲ ಹೊಂದಿದ್ದೇವೆ. ಅವರಿಗೆ ಬಂದ ಪ್ರಕರಣಗಳ ನಿರ್ವಹಣೆ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಬಳಿಕ ರೋಗಿಯ ಬಳಿ ಹೋಗಿ ಅವರ ಸಮಗ್ರ ಸ್ಥಿತಿಗತಿ ಬಗ್ಗೆ ಅವಲೋಕಿಸುತ್ತೇವೆ. ಮುಂದೆ ಅವರಿಗೆ ಬೇಕಾದಂಥ ಜೀವನ ವಿಧಾನ ವಿನ್ಯಾಸ ಮಾಡುತ್ತೇವೆ. ಪೌಷ್ಟಿಕ ಆಹಾರ, ದಿನಚರಿಯಲ್ಲಿ ಬದಲಾವಣೆ, ಏನು ತಿನ್ನಬೇಕು/ ತಿನ್ನಬಾರದು ಎಂಬ ಮಾಹಿತಿ, ಕ್ಯಾನ್ಸರ್‌ ಜತೆಗೆ ಇತರ ರೋಗಗಳಿಂದ ಬಳಲುತ್ತಿದ್ದರೆ ಅವುಗಳ ನಿರ್ವಹಣೆ ಬಗೆಗೂ ತಿಳಿಹೇಳುತ್ತೇವೆ.

ಸಾಮಾನ್ಯವಾಗಿ ನಾವು ಮೂರರಿಂದ ಆರು ತಿಂಗಳ ಕಾಲ ರೋಗಿಗೆ ನಿರಂತರ ಸಲಹೆ ಕೊಡುತ್ತೇವೆ. ನೇರವಾಗಿ ಅಥವಾ ಆನ್‌ಲೈನ್‌ ಮೂಲಕವೂ ಅವರು ಸಲಹೆ ಪಡೆಯಬಹುದು. ಮುಂದೆ ಅವರೇ ನಿಭಾಯಿಸಬಹುದು. ಏಳುವರೆ ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದೇನೆ. 500ಕ್ಕೂ ಹೆಚ್ಚು ಪ್ರಕರಣಗಳನ್ನು ನಿಭಾಯಿಸಿದ್ದೇನೆ. ವೈದ್ಯರ ಚಿಕಿತ್ಸೆ ಮತ್ತು ನಮ್ಮ ಮಾರ್ಗದರ್ಶನದಿಂದ ಎಷ್ಟೋ ಜನ ಗುಣಮುಖರಾದ ಉದಾಹರಣೆಗಳೂ ಇವೆ.

ಇದೆಲ್ಲವೂ ದುಬಾರಿಯಲ್ಲವೇ?
ಕ್ಯಾನ್ಸರ್‌ ಚಿಕಿತ್ಸೆಯೇ ದುಬಾರಿ ಹೌದು. ಆದರೆ, ನಾವು ಸಾಧ್ಯವಾದಷ್ಟು ಕೈಗೆಟಕುವ ದರದಲ್ಲೇ ಸೇವೆ ಒದಗಿಸುತ್ತೇವೆ. ಹಣಕ್ಕಿಂತ ರೋಗಿಗೆ ಸಾಂತ್ವನ, ಜೀವನ ಕ್ರಮದ ಮೇಲೆ ಉತ್ತಮ ಪರಿಣಾಮವಾಗುವುದು ಮುಖ್ಯ.

ಕ್ಯಾನ್ಸರ್‌ ಕಾಳಜಿ ಬಂದದ್ದು ಹೀಗೆ...
2010ರಲ್ಲಿ ಕ್ಯಾನ್ಸರ್‌ ಕಾರಣದಿಂದಲೇ ನನ್ನ ತಾಯಿ ಮೃತಪಟ್ಟರು. ಅವರು ಆರೂವರೆ ವರ್ಷ ನರಳಿದ್ದನ್ನು ನೋಡಿದೆ. ಅಂದಿನಿಂದ ಕ್ಯಾನ್ಸರ್‌ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ವಿಶೇಷ ತರಬೇತಿ ಪಡೆದೆ.

ಜೀವನಶೈಲಿ ಬದಲಾಯಿಸಿಕೊಳ್ಳಿ
ಕ್ಯಾನ್ಸರ್‌ಗೆ ಇಂಥದ್ದೇ ಕಾರಣ ಎನ್ನಲಾಗುವುದಿಲ್ಲ. ತಂಬಾಕು, ಧೂಮಪಾನ ಒಂದು ಕಾರಣ ಅಷ್ಟೆ. ಬದಲಾದ ಜೀವನಶೈಲಿ, ಒತ್ತಡ, ನಿದ್ರಾಹೀನತೆ, ಆಹಾರಪದ್ಧತಿ, ಅತಿಯಾದ ಕೆಂಪು ಮಾಂಸ ಸೇವನೆ, ಮಾಲಿನ್ಯ ಎಲ್ಲವೂ ಕಾರಣವಾಗುತ್ತಿವೆ.

ಕ್ಯಾನ್ಸರ್‌ ಕಾಳಜಿ ಬಂದದ್ದು ಹೀಗೆ...
2010ರಲ್ಲಿ ಕ್ಯಾನ್ಸರ್‌ ಕಾರಣದಿಂದಲೇ ನನ್ನ ತಾಯಿ ಮೃತಪಟ್ಟರು. ಅವರು ಆರೂವರೆ ವರ್ಷ ನರಳಿದ್ದನ್ನು ನೋಡಿದೆ. ಅಂದಿನಿಂದ ಕ್ಯಾನ್ಸರ್‌ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ವಿಶೇಷ ತರಬೇತಿ ಪಡೆದೆ.

ಜೀವನಶೈಲಿ ಬದಲಾಯಿಸಿಕೊಳ್ಳಿ
ಕ್ಯಾನ್ಸರ್‌ಗೆ ಇಂಥದ್ದೇ ಕಾರಣ ಎನ್ನಲಾಗುವುದಿಲ್ಲ. ತಂಬಾಕು, ಧೂಮಪಾನ ಒಂದು ಕಾರಣ ಅಷ್ಟೆ. ಬದಲಾದ ಜೀವನಶೈಲಿ, ಒತ್ತಡ, ನಿದ್ರಾಹೀನತೆ, ಆಹಾರಪದ್ಧತಿ, ಅತಿಯಾದ ಕೆಂಪು ಮಾಂಸ ಸೇವನೆ, ಮಾಲಿನ್ಯ ಎಲ್ಲವೂ ಕಾರಣವಾಗುತ್ತಿವೆ.

ಯಾರಿವರು?
ಕ್ಯಾನ್ಸರ್‌ ಜೀವನಕ್ರಮ ವಿನ್ಯಾಸ, ವ್ಯಾಯಾಮ ತಜ್ಞರು, ಸಮಗ್ರ ಆರೋಗ್ಯ ಮತ್ತು ಕ್ಯಾನ್ಸರ್‌ ನಿಭಾಯಿಸುವಿಕೆಯ ತರಬೇತಿದಾರರಾಗಿದ್ದಾರೆ. ವಿದೇಶಗಳಲ್ಲೂ ಈ ಬಗ್ಗೆ ವಿಶೇಷ ತರಬೇತಿ ಪಡೆದ ಇವರು ಏಳೂವರೆ ವರ್ಷಗಳಿಂದ ಕ್ಯಾನ್ಸರ್‌ ಪೀಡಿತರಿಗೆ ನೆರವಾಗುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಕೇರರ್‌ ಸ್ಥಾಪಿಸಿ ತಜ್ಞರ ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಸಂಪರ್ಕ: ಮೊ. 9900016441
ಇಮೇಲ್‌: samara@carerforcancer.com, hello@carerforcancer.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.