ADVERTISEMENT

ಬಾಲ್ಯದಲ್ಲೇ ಸ್ಥೂಲಕಾಯ; ದಕ್ಷಿಣ ಏಷ್ಯಾ ಮಕ್ಕಳನ್ನು ಕಾಡುತ್ತಿರುವ ಬೊಜ್ಜು: ಅಧ್ಯಯನ

ಪಿಟಿಐ
Published 11 ಏಪ್ರಿಲ್ 2025, 13:54 IST
Last Updated 11 ಏಪ್ರಿಲ್ 2025, 13:54 IST
   

ನವದೆಹಲಿ: ಮಗು ಗರ್ಭದಲ್ಲಿರುವಾಗಲೇ ಉಂಟಾಗುವ ಕೆಲವೊಂದು ಬದಲಾವಣೆಗಳಿಂದ ಸ್ಥೂಲಕಾಯ ಹಾಗೂ ತೂಕ ಹೆಚ್ಚಳದಂತ ಸಮಸ್ಯೆಯು ದಕ್ಷಿಣ ಏಷ್ಯಾದ ಮಕ್ಕಳಲ್ಲಿ ವ್ಯಾಪಕವಾಗಿದೆ ಎಂದು ಅಧ್ಯಯನವೊಂದು ಹೇಳಿದೆ.

ಜರ್ನಲ್ ಆಫ್‌ ದಿ ಅಮೆರಿಕನ್‌ ಮೆಡಿಕಲ್ ಅಸೋಸಿಯೇಷನ್‌ ನಡೆಸಿದ ಈ ಅಧ್ಯಯನದಲ್ಲಿ ಸುಮಾರು 900 ಮಕ್ಕಳು ಪಾಲ್ಗೊಂಡಿದ್ದರು. ಬದುಕಿನ ಮೊದಲ ಮೂರು ವರ್ಷಗಳಲ್ಲಿ ಸ್ಥೂಲಕಾಯವನ್ನು ತಗ್ಗಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಂಶೋಧಕರ ತಂಡ ಅಧ್ಯಯನ ನಡೆಸಿದೆ.

ಸ್ತನಪಾನವನ್ನು ಕನಿಷ್ಠ ಒಂದು ವರ್ಷಗಳ ಕಾಲ ಕುಡಿದ ಮಕ್ಕಳು ದೈಹಿಕವಾಗಿ ಚುರುಕು, ಮೊಬೈಲ್ ಅಥವಾ ಟಿ.ವಿ. ನೋಡುವುದು ಕಡಿಮೆ ಮತ್ತು ಸ್ಥೂಲಕಾಯರಾಗುವುದೂ ಕಡಿಮೆ ಎಂದು ಈ ತಂಡ ಕಂಡುಕೊಂಡಿದೆ.

ADVERTISEMENT

‘ದಕ್ಷಿಣ ಏಷ್ಯಾದ ಮಕ್ಕಳಲ್ಲಿ ಅತ್ಯಂತ ತೆಳುವಾದ ಕೊಬ್ಬಿನ ಪದರವಿದ್ದು ಇವರಿಗೆ ಸ್ಥೂಲಕಾಯಿಗಳಿಗೆ ಬಳಸುವ ಬಾಡಿ ಮಾಸ್ ಇಂಡೆಕ್ಸ್‌ (BMI) ಸರಿಯಾದ ಮಾಹಿತಿ ನೀಡದು. ದಕ್ಷಿಣ ಏಷ್ಯಾದ ನವಜಾತ ಶಿಶುಗಳು ಕಡಿಮೆ ದೇಹ ತೂಕ ಹೊಂದಿರುತ್ತಾರೆ ಎಂದು ಈಗಾಗಲೇ ಹೇಳಲಾಗಿದೆ. ಆದರೆ, ತೆಳು ಪದರದ ಕೊಬ್ಬಿನಂಶ ಇರುವ ಅಧಿಕ ದೇಹ ಬೊಜ್ಜಿನಂಶ ಹೊಂದಿರುವುದನ್ನೂ ತಜ್ಞರು ಪತ್ತೆ ಮಾಡಿದ್ದಾರೆ. ಬಿಳಿ ಯುರೋಪಿಯನ್ನರು ಮತ್ತು ವಲಸೆ ಬಂದ ನಾಲ್ಕನೇ ತಲೆಮಾರಿನವರಲ್ಲಿ ಸ್ಥೂಲಕಾಯ ಸಮಸ್ಯೆ ಕಂಡುಬಂದಿದೆ’ ಎಂದು ಕೆನಡಾದ ಮೆಕ್‌ಮಾಸ್ಟರ್ ವಿಶ್ವವಿದ್ಯಾಲಯದ ಸಹಾಯ ಪ್ರಾಧ್ಯಾಪಕ ಸ್ಯಾಂಡಿ ಅಝಾಬ್ ಹೇಳಿದ್ದಾರೆ.‌

‘ಕೆಲ ನಿರ್ದಿಷ್ಟ ಅಂಶಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಹೆಚ್ಚಾಗಿ ಬಿಳಿ ಯುರೋಪಿಯನ್‌ ಕುಟುಂಬದವರನ್ನೇ ಇದರಲ್ಲಿ ಒಳಗೊಳ್ಳಲಾಗಿತ್ತು. ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದ್ದು, ಅದರಲ್ಲಿ ಇತರೆ ಜನಾಂಗೀಯ ಗುಂಪುಗಳನ್ನು ಒಳಗೊಂಡ ಅಧ್ಯಯನ ನಡೆಸಿದಲ್ಲಿ ಇನ್ನೂ ಹೆಚ್ಚಿನ ಅಂಶಗಳು ಬೆಳಕಿಗೆ ಬರಲಿವೆ’ ಎಂದಿದ್ದಾರೆ.

ಆರೋಗ್ಯವಂತ ಆಹಾರಗಳಾದ ಕೋಳಿ ಮಾಂಸ, ಮೊಟ್ಟೆ, ಹಣ್ಣು, ಹಣ್ಣುಗಳು, ಮೀನು ಹಾಗೂ ಇತರ ಸಮುದ್ರ ಖಾದ್ಯಗಳು, ಪೂರಿ, ಇಡ್ಲಿ ಮತ್ತು ದೋಸೆಯಂತ ತಿನಿಸುಗಳನ್ನು ಗರ್ಭಾವಸ್ಥೆಯ ಸಂದರ್ಭದಲ್ಲಿ ಸೇವಿಸುವುದರಿಂದ ಇಂಥ ಸ್ಥೂಲಕಾಯ ಸಮಸ್ಯೆಯನ್ನು ಪರಿಹರಿಸಬಹುದು ಎಂದೂ ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.