
ಚಿತ್ರ: ಗೆಟ್ಟಿ
ದೇಶದಲ್ಲಿ ಹವಾಮಾನ ವೈಪರೀತ್ಯಕ್ಕೆ ಒಳಗಾಗುವ ಜಿಲ್ಲೆಗಳ ಮಕ್ಕಳು, ಕಡಿಮೆ ಹವಾಮಾನ ವೈಪರೀತ್ಯ ಉಂಟಾಗುವ ಜಿಲ್ಲೆಗಳ ಮಕ್ಕಳ ತೂಕಕ್ಕಿಂತ ಶೇ 25ರಷ್ಟು ಕಡಿಮೆ ತೂಕ ಹೊಂದಿರುತ್ತಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
‘ಹವಾಮಾನ ವೈಪರೀತ್ಯವು ಸಾರ್ವಜನಿಕರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ’ ಎಂಬುದರ ಕುರಿತು ನೆಡೆದ ಅಧ್ಯಯನದಲ್ಲಿ ಈ ಮಾಹಿತಿ ಹೊರಬಿದ್ದಿದೆ. ಹವಾಮಾನ ವೈಪರೀತ್ಯಕ್ಕೆ ಹೆಚ್ಚು ಒಳಗಾಗುವ ಜಿಲ್ಲೆಗಳ ಮಕ್ಕಳ ಬೆಳವಣಿಗೆ ಇತರೆ ಜಿಲ್ಲೆಗಳ ಮಕ್ಕಳ ಬೆಳವಣಿಗೆಗೆ ಹೋಲಿಸಿದರೆ ಕುಂಠಿತವಾಗಿರುತ್ತದೆ. ಇವರ ಆರೋಗ್ಯ ಕಳಪೆ ಮಟ್ಟದ್ದಾಗಿದೆ ಎಂದು 'PLOS one' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ತಿಳಿಸಿದೆ.
ದೆಹಲಿಯ ‘ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋತ್’ನ ಸಂಶೋಧಕರ ಪ್ರಕಾರ ‘ಭಾರತದ ಜನಸಂಖ್ಯೆಯ ಶೇ 80ರಷ್ಟು ಜನರು ಚಂಡಮಾರುತ, ಪ್ರವಾಹ ಹಾಗೂ ಬಿಸಿ ಗಾಳಿ ತೀವ್ರವಾಗಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಅಪಾಯಗಳು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ದುರ್ಬಲಗೊಳಿಸುತ್ತಿವೆ’ ಎಂದು ಹೇಳಿದ್ದಾರೆ.
2015ರಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಸೇರಿ ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿಯನ್ನು ಅಂಗೀಕರಿಸಿದವು. ಈ ಮೂಲಕ 2030ರ ವೇಳೆಗೆ ವಿಶ್ವದ ಜನರಲ್ಲಿ ಶಾಂತಿ, ನೆಮ್ಮದಿ ಹಾಗೂ ಸುಸ್ಥಿರ ಅಭಿವೃದ್ಧಿಯ ನೀಲಿನಕ್ಷೆ ಸಿದ್ದಪಡಿಸಿವೆ. ಬಡತನ ಕೊನೆಗೊಳಿಸುವುದು, ಲಿಂಗ ಸಮಾನತೆಯನ್ನು ಸಾಧಿಸುವುದು, ಶುದ್ಧ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಮಸ್ಯೆಗಳ ಸುಧಾರಣೆ ಸೇರಿದಂತೆ ಹತ್ತು ಹಲವು ಅಂಶಗಳನ್ನು ಸುಸ್ಥಿರ ಅಭಿವೃದ್ಧಿಯಲ್ಲಿ ಪಟ್ಟಿ ಮಾಡಲಾಗಿದೆ.
ಜಿಲ್ಲೆಗಳ ಹವಾಮಾನ ವೈಪರೀತ್ಯದ ಬಗ್ಗೆ ಮಾಹಿತಿ ಒದಗಿಸುವ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ’ಯ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು, ಹವಾಮಾನ ವೈಪರೀತ್ಯಕ್ಕೆ ಹೆಚ್ಚು ಗುರಿಯಾಗುವ ಜಿಲ್ಲೆಗಳಲ್ಲಿ ಅವಧಿಪೂರ್ವ ಹೆರಿಗೆಯ ಸಾಧ್ಯತೆ ಶೇ 38ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಮಕ್ಕಳ ತೂಕ ಮತ್ತು ಎತ್ತರದ ಮೇಲೆ ಪ್ರತಿಶತ 14ರಷ್ಟು ಕುಂಠಿತ ಕಾಣಬಹುದಾಗಿದೆ. ಹೆಚ್ಚುತ್ತಿರುವ ಹವಾಮಾನ ವೈಪರೀತ್ಯದ ನಡುವೆಯೂ ಆರೋಗ್ಯವನ್ನು ಕಾಪಾಡಬಹುದಾಗಿದೆ ಎಂದು ಅಧ್ಯಯನ ತಂಡವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.