ADVERTISEMENT

ಸುಖಸಂಸಾರಕ್ಕೆ ವಿವಾಹಪೂರ್ವ ಆಪ್ತಸಮಾಲೋಚನೆ

ಡಾ.ಎಸ್.ಎಸ್.ವಾಸನ್
Published 5 ಏಪ್ರಿಲ್ 2019, 19:30 IST
Last Updated 5 ಏಪ್ರಿಲ್ 2019, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿವಾಹ ಪೂರ್ವ ಸಮಾಲೋಚನೆ ಎಂಬುದು ನೀವು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾದ ವಿಷಯವಾಗಿದೆ. ಮದುವೆಗೆ ಮುನ್ನ ಸಾಕಷ್ಟು ಸಮಯ ಒಟ್ಟಾಗಿ ಕಳೆಯುತ್ತೀರಿ. ಕಳೆಯಬೇಕೆಂದು ಬಯಸಿಯೇ ಮದುವೆಗೂ ಮುನ್ನ ಸಾಕಷ್ಟು ಸಲ ಭೇಟಿಯಾಗುತ್ತೀರಿ. ಸಂಗಾತಿಯ ಅಭಿರುಚಿ, ಆಯ್ಕೆಗಳನ್ನು ಅರ್ಥ ಮಾಡಿಕೊಳ್ಳಲು ಸಹ ಪ್ರಯತ್ನಿಸುವಿರಿ. ಇದರೊಂದಿಗೆ ಸಮಾಲೋಚನೆಯ ಕುರಿತೂ ಯೋಚಿಸಿದರೆ ಸುಖೀದಾಂಪತ್ಯ ನಿಮ್ಮದಾಗುವಲ್ಲಿ ಯಾವುದೇ ಸಂಶಯವಿಲ್ಲ.

ಮದುವೆಯ ತಯಾರಿಗಳಲ್ಲಿ ಅತಿ ಹೆಚ್ಚು ಮುತುವರ್ಜಿಯಿಂದ ಪಾಲ್ಗೊಳ್ಳುವ ವಿಷಯವೆಂದರೆ ಮಧುಚಂದ್ರಕ್ಕೆ ಹೋಗುವುದೆಲ್ಲಿಗೆ ಎಂಬುದು. ಇದಕ್ಕಾಗಿ ನೀವು ಪ್ರವಾಸದ ಏಜೆಂಟರನ್ನು ಪ್ರಶ್ನಿಸುತ್ತೀರಿ. ಚರ್ಚಿಸುತ್ತೀರಿ. ಯಾವ ಸ್ಥಳ, ನಿಮ್ಮ ಬಜೆಟ್‌, ನಿಮ್ಮ ಆಯ್ಕೆ, ಅಭಿರುಚಿ, ಆಹಾರ, ಸಮಯ ಇವೆಲ್ಲವನ್ನೂ ಯೋಚಿಸಿಯೇ ನಿರ್ಧಾರಕ್ಕೆ ಬರುತ್ತೀರಿ. ಪ್ರವಾಸದ ಏಜೆಂಟ್‌ ಸಹ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ನೀಡಿ ಆ ಪ್ರವಾಸಕ್ಕೆ ನಿಮ್ಮನ್ನು ಅಣಿಗೊಳಿಸಿರುತ್ತಾನೆ. ಸಂತೋಷ ಹಾಗೂ ಸಂಭ್ರಮದ ಮಧುಚಂದ್ರ ನಿಮ್ಮದಾಗುವಲ್ಲಿ ಯಾವುದೇ ಸಂಶಯವೂ ಇರುವುದಿಲ್ಲ. ಹಾಗೆಯೇ ವಿವಾಹಪೂರ್ವ ಸಮಾಲೋಚನೆಯಲ್ಲಿಯೂ ವೃತ್ತಿಪರ ಸಮಾಲೋಚಕ ಈ ಪ್ರವಾಸಿ ಏಜೆಂಟ್‌ನ ಕಾರ್ಯ ನಿರ್ವಹಿಸುತ್ತಾರೆ.

ನಿಮ್ಮ ಇಬ್ಬರ ಆಯ್ಕೆ, ಪರಸ್ಪರ ಗೌರವ, ಭಾವನಾತ್ಮಕ ಅಂಶಗಳು, ಯಾವುದಕ್ಕೆ ಹೇಗೆ ಪ್ರತಿಕ್ರಿಯಿಸಬಹುದು? ಸಿಟ್ಟು, ಸಂಭ್ರಮ, ದೂರು, ದುಮ್ಮಾನ ಇವುಗಳ ಜೊತೆಗೆ ನಿಮ್ಮ ಆದಾಯ, ಉಳಿಕೆ ಹೀಗೆ ಪ್ರತಿಯೊಂದನ್ನೂ ನಿಮಗೆ ಮನವರಿಕೆ ಮಾಡಿಕೊಡಲಾಗುತ್ತದೆ.

ADVERTISEMENT

ಜಾಗತಿಕ ಅಂಕಿ ಅಂಶಗಳ ಪ್ರಕಾರ...
*
ಶೇ 44ರಷ್ಟು ಜೋಡಿಗಳು ಇದೀಗ ಮದುವೆಗೆ ಮುನ್ನವೇ ಆಪ್ತಸಮಾಲೋಚನೆಗೆ ಒಳಪಡಲು ಇಷ್ಟ ಪಡುತ್ತಾರೆ

* ಆಪ್ತಸಮಾಲೋಚನೆಗೆ ಒಳಪಟ್ಟವರಲ್ಲಿ ಶೇ30ರಷ್ಟು ಮದುವೆಗಳು ಸುದೀರ್ಘಕಾಲ ಬಾಳುತ್ತವೆ

* ಪ್ರತಿ ಜೋಡಿಯೂ ಮದುವೆಗೆ ಮುನ್ನ ಕನಿಷ್ಠವೆಂದರೂ 8 ಗಂಟೆ ಕಾಲ ಸಮಾಲೋಚನೆಗೆ ವಿನಿಯೋಗಿಸುತ್ತಾರೆ

ಸಂಗಾತಿಗಳ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ಪರಸ್ಪರ ಪರಿಣಾಮಕಾರಿಯಾಗಿ ಸಂವಹನ ನಡೆಸುವುದು ಹೇಗೆ ಎಂಬುದರ ಮೇಲೆ ವೃತ್ತಿಪರ ಸಮಾಲೋಚಕರು ಬೆಳಕು ಚೆಲ್ಲುತ್ತಾರೆ.

ವಿವಾಹಪೂರ್ವ ಸಮಾಲೋಚನೆ?
ಈ ಸಮಾಲೋಚನೆಯು ಇಬ್ಬರೂ ಸಂಗಾತಿಗಳು ಒಂದು ಆರೋಗ್ಯವಂತ ಬಾಂಧವ್ಯವನ್ನು ಬೆಳೆಸಿಕೊಳ್ಳುವ, ಉಳಿಸಿಕೊಳ್ಳುವ ಹಾಗೂ ಗಟ್ಟಿಗೊಳಿಸುವ ಬಗೆಯನ್ನು ಹೇಳಿಕೊಡುತ್ತಾರೆ. ಹೆಚ್ಚಾಗಿ ಈ ಬಾಂಧವ್ಯದಲ್ಲಿ ಬಿರುಕು ಬಾರದಂತೆ ನೋಡಿಕೊಳ್ಳಲಾಗುತ್ತದೆ. ಸುಸ್ಥಿರ, ತೃಪ್ತಿಕರ ಕೌಟುಂಬಿಕ ವಾತಾವರಣ ನಿರ್ಮಾಣ ಮಾಡುವಲ್ಲಿಯೂ ಸಹಾಯವಾಗುತ್ತದೆ. ವ್ಯಕ್ತಿಗಳ ದೌರ್ಬಲ್ಯಗಳನ್ನು ಗುರುತಿಸಿ, ಅವನ್ನು ಸ್ವೀಕರಿಸುವ ಬಗೆ, ನಿಭಾಯಿಸುವ ಬಗೆಯನ್ನೂ ಹೇಳಿಕೊಡಲಾಗುತ್ತದೆ. ಇದರಿಂದಾಗಿ ಭಿನ್ನಾಭಿಪ್ರಾಯಗಳೇ ದೊಡ್ಡದಾಗಿ, ಬಿರುಕುಗಳಾಗುವುದನ್ನು ತಡೆಯಬಹುದಾಗಿದೆ.

* ಆದಾಯ
* ಸಂವಹನ
*ನಂಬಿಕೆ ಹಾಗೂ ಮೌಲ್ಯಗಳು
* ಮದುವೆಯ ಸೂತ್ರಗಳು
*ಪ್ರೀತಿ, ಪ್ರೇಮ ಹಾಗೂ ಶೃಂಗಾರ
*ಮಕ್ಕಳು ಹಾಗೂ ಪಾಲಕತ್ವ
* ಕೌಟುಂಬಿಕ ಸಂಬಂಧಗಳು
* ನಿರ್ಧಾರ ಕೈಗೊಳ್ಳುವುದು
*ಕೋಪದ ನಿರ್ವಹಣೆ
* ಗುಣಮಟ್ಟದ ಸಮಯ ವಿನಿಯೋಗ
* ಈ ಎಲ್ಲ ಅಂಶಗಳನ್ನೂ ಸಮಾಲೋಚನೆಯಲ್ಲಿ ಚರ್ಚಿಸಲಾಗುತ್ತದೆ.

ಕಾರ್ಯನಿರ್ವಹಣೆ ಹೇಗೆ?
ಇಲ್ಲಿ ಸಮಾಲೋಚಕರು ಕೆಲವು ಸಣ್ಣ ಸಣ್ಣ ಭೇಟಿಗಳನ್ನು ಏರ್ಪಡಿಸುತ್ತಾರೆ. ಸಂಕ್ಷಿಪ್ತ ಸಂದರ್ಶನಗಳಾಗುತ್ತವೆ. ಕೆಲವೊಮ್ಮೆ ವೈಯಕ್ತಿಕವಾಗಿ, ಕೆಲವೊಮ್ಮೆ ಜೊತೆಯಾಗಿ. ಇನ್ನೂ ಕೆಲವೊಮ್ಮೆ ಒಂದಷ್ಟು ಚಟುವಟಿಕೆಗಳನ್ನು ನೀಡಲಾಗುತ್ತದೆ. ಈ ಚಟುವಟಿಕೆಗಳನ್ನು ಒಟ್ಟಾಗಿಯೂ ನಿರ್ವಹಿಸಲು ಕೇಳುತ್ತಾರೆ. ಪ್ರತ್ಯೇಕವಾಗಿ ನಿರ್ವಹಿಸುವಂಥ ಚಟುವಟಿಕೆಗಳನ್ನೂ ನೀಡುತ್ತಾರೆ.

ಇಬ್ಬರ ನಡುವಿನ ಹೊಂದಾಣಿಕೆಯ ಮಟ್ಟವನ್ನು ಗರಿಷ್ಠಮಿತಿಗೆ ಏರಿಸಲು ಇಂಥ ಚಟುವಟಿಕೆಗಳು ಸಹಾಯ ಮಾಡುತ್ತವೆ. ಸಮಾಲೋಚಕರು ಒಂದಷ್ಟು ಪ್ರಶ್ನಾವಳಿಯನ್ನೂ ನೀಡಬಹುದು. ಇವುಗಳ ಮೂಲಕ ಪರಸ್ಪರ ಇಬ್ಬರ ನಡುವೆ ಎಲ್ಲಿ ಭಿನ್ನಾಭಿಪ್ರಾಯ ಬರಬಹುದು ಎಂಬುದನ್ನು ಮೊದಲಿಗೇ ಅಂದಾಜಿಸಬಹುದಾಗಿದೆ. ಈ‍ಪ್ರಶ್ನೆಗಳು, ಚಟುವಟಿಕೆಗಳು ಸಂಗಾತಿಯನ್ನು ಸಂಪೂರ್ಣವಾಗಿ ಸ್ವೀಕರಿಸುವ ಮನೋಭಾವವನ್ನು ಹುಟ್ಟುಹಾಕುತ್ತದೆ.

ಈ ಸಂದರ್ಭದಲ್ಲಿಯೇ ಯಾವ ಕಾರಣಕ್ಕಾಗಿ ಇಬ್ಬರ ನಡುವೆ ಮುನಿಸು ಬರಬಹುದು. ಹೇಗೆ ನಿಭಾಯಿಸಬೇಕು, ಬಿರುಕು ಮೂಡಬಹುದು, ಅವನ್ನು ಹೇಗೆ ಬೆಸುಗೆ ಹಾಕಬೇಕು ಮುಂತಾದವುಗಳ ಬಗ್ಗೆಯೂ ಚರ್ಚಿಸಲಾಗುತ್ತದೆ.

ಇದರಿಂದಾಗಿ ಒಂದು ಬಾಂಧವ್ಯ ಆರಂಭವಾಗುವ ಮುನ್ನವೇ ಸಂಪೂರ್ಣವಾಗಿ ಸಿದ್ಧರಾಗಲು ಸಮಾಲೋಚಕರು ಸಹಾಯ ಮಾಡುತ್ತಾರೆ. ಪ್ರಾಯೋಗಿಕವಾಗಿ ಹೀಗೆ ಸಮಯವನ್ನು ವ್ಯಯ ಮಾಡಿಕೊಳ್ಳುವ ಬದಲು ಪರಸ್ಪರ ಅರಿವು ಇರುವುದರಿಂದ ಜಗಳಗಳು ಬರದಂತೆ ತಡೆಯಬಹುದಾಗಿದೆ. ಬಂದರೂ ಸಹನೀಯಗೊಳಿಸಬಹುದಾದ ಸಾಧ್ಯತೆಗಳು ಹೆಚ್ಚುತ್ತವೆ. ಈ ಎಲ್ಲ ಕಾರಣಗಳಿಂದ ವಿವಾಹ ಪೂರ್ವ ಸಮಾಲೋಚನೆ ಇತ್ತೀಚಿಗೆ ಜನಪ್ರಿಯವಾಗುತ್ತಿದೆ.

ಮುಂದಿನ ವಾರ: ಯಾವ ಬಗೆಯ ಸಮಾಲೋಚನೆಗಳಿವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.