ADVERTISEMENT

ಕಣ್ಣಿನ ಆರೋಗ್ಯ: ಕೆಂಗಣ್ಣ ಬೇನೆಗೆ ತ್ರಿಫಲೆಯ ಮದ್ದು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 0:47 IST
Last Updated 8 ಏಪ್ರಿಲ್ 2025, 0:47 IST
<div class="paragraphs"><p>ಕಣ್ಣಿನ ಆರೋಗ್ಯ: ಕೆಂಗಣ್ಣ ಬೇನೆಗೆ ತ್ರಿಫಲೆಯ ಮದ್ದು</p></div>

ಕಣ್ಣಿನ ಆರೋಗ್ಯ: ಕೆಂಗಣ್ಣ ಬೇನೆಗೆ ತ್ರಿಫಲೆಯ ಮದ್ದು

   

ಕಚೇರಿಯ ಕೆಲಸ ಮುಗಿಸಿ ಮರಳುತ್ತಿದ್ದ ರಾಜಣ್ಣ. ಅದ್ಯಾಕೋ ಬೈಕ್ ಸವಾರಿಯ ಇದಿರು ಗಾಳಿಗೆ ಕಣ್ಣೊಳಗೆ ಕಸ ಬಿದ್ದಂತಾಯಿತು. ಮನೆಗೆ ಬಂದೊಡನೆ ಕಣ್ಣು ಚುಚ್ಚಲಾರಂಭ. ಸ್ವಲ್ಪ ನೀರೊಸರತೊಡಗಿತು. ಉರಿ ಮತ್ತು ಬಿಳಿಗುಡ್ಡೆಯ ನೋವು ಕ್ರಮೇಣ ಹೆಚ್ಚಿತು. ಮುಂಜಾನೆ ಎದ್ದಾಗ ಎಡಗಣ್ಣಿನ ರೆಪ್ಪೆ ತೆಗೆಯಲಾಗದೆ ಮೆತ್ತಿಕೊಂಡಿತ್ತು. ಮುಂಜಾನೆ ಕನ್ನಡಿ ಮುಂದೆ ನಿಂತಾಗ ರಾಜಣ್ಣನ ಎಡಗಣ್ಣು ನಿಗಿನಿಗಿ ಕೆಂಡದಂತೆ ಕೆಂಪಡರಿತ್ತು. ಬಲಗಣ್ಣು ಸಹ ಚುಚ್ಚಲಾರಂಭ. ರಾಜಣ್ಣ ವೈದ್ಯರ ಬಳಿಗೋಡಿದ. ‘ಇದು ಮದ್ರಾಸ್ ಐ. ಬೇರೆಯವರಿಂದ ನಿಮಗೆ ಹರಡಿತೇನೋ’ ಎಂದ ವೈದ್ಯರು ಮಾತ್ರೆ, ಕಣ್ಣಿಗೆ ಬಿಂದುಮದ್ದನ್ನು ನೀಡಿದರು. ಹಿಂದಿನ ದಿನ ತನ್ನ ಕಚೇರಿಯ ಸಹೋದ್ಯೋಗಿಯೊಬ್ಬರು ಊಟದ ವೇಳೆ ಪದೇ ಪದೇ ಕರವಸ್ತ್ರದಿಂದ ಕಣ್ಣೊರಸಿಕೊಂಡದ್ದು ರಾಜಣ್ಣನಿಗೆ ನೆನಪಾಯಿತು. ಆತ ಕೊಟ್ಟ ಬಳುವಳಿ ಇದು ಎಂಬುದು ರಾಜಣ್ಣನಿಗೆ ಖಾತರಿಯಾಯ್ತು. 

ಎಲ್ಲ ಬಗೆಯ ಕಣ್ಣುಬೇನೆಯ ಮೂಲ ‘ಅಭಿಷ್ಯಂದ’ ಎನ್ನುತ್ತದೆ ಆಯುರ್ವೇದ. ಸ್ಯಂದ ಪ್ರಸ್ರವಣೇ – ಎಂದರೆ ಅತಿಯಾಗಿ ಸುರಿಯುವಕೆ. ಕಣ್ಣು ಒಂದೇ ಸಮನೆ ನೀರು ಸುರಿಸುವ ಕಾಯಿಲೆ ಇದು. ಹಾಗಾಗಿ ‘ಅಭಿಷ್ಯಂದ’ ಹೆಸರು. ಮೂಗು ಕಟ್ಟಿ, ಅಸಾಧ್ಯ ನವೆ, ನೋವು ಮತ್ತು ರೆಪ್ಪೆಯಾದಿಯಾಗಿ ಎಲ್ಲ ಕಡೆ ತೊಂಡೆಹಣ್ಣಿನ ಬಣ್ಣದ ಕಂಗೆಟ್ಟ ಸ್ಥಿತಿ ಒದಗುತ್ತದೆ. ನೋಡುವುದು ಬಿಡಿ, ಕಣ್ಣೇ ಬಿಡಲಾಗದ ಅವಸ್ಥೆ. ವೈರಾಣು ಜನಿತ ಮದ್ರಾಸ್ ಐ ಬಹುತೇಕ ಉಪಶಮನವಾಗಲು ಕನಿಷ್ಠ ಐದು ದಿನಗಳು ಅತ್ಯಗತ್ಯ. ದಿನದಿನವೂ ಪರಿಸ್ಥಿತಿ ಬಿಗಡಾಯಿಸುತ್ತಿಲ್ಲ ಎಂಬ ಖಾತರಿ ನಿಮಗಿರಲಿ. ಇತರ ರೋಗಗಳಿಂದ ತುಂಬಾ ತೊಂದರೆ ಅನುಭವಿಸುವವರಿಗೆ, ಹಿರಿ ಹರೆಯದ ಮಂದಿಗೆ ಕೊಂಚ ಎಚ್ಚರಿಕೆ ಅತ್ಯಗತ್ಯ. ವೈದ್ಯಕೀಯ ನೆರವನ್ನು ಖಂಡಿತ ಒದಗಿಸಬೇಕಾದೀತು.

ADVERTISEMENT

ಮರಗಳ ಎಲೆಗಳು ಉದುರಿ ಹೂ ಬಿಡುವ ಕಾಲವೇ ವಸಂತ. ಅಂತಹ ಹೂಗಳ ಪರಾಗ ಕಣದ ಒಗ್ಗದಿಕೆ (ಎಲರ್ಜಿ) ಸಹ ಕಣ್ಬೇನೆಯ ಕಾರಣ ಎನ್ನಲಾಗುತ್ತದೆ. ನೆಗಡಿಯಂತಹ ಸಮಸ್ಯೆಗೆ ಮೂಲ ಎಂಬ ಶೋಧ ಪ್ರಬಂಧಗಳಿವೆ. ಅಂತಹದೇ ಸಮಸ್ಯೆ ಮೂಗು, ಹಣೆ ಮತ್ತು ಕಣ್ಣು ಗುಡ್ಡೆಗಳಲ್ಲುಂಟಾಗುವ ಸಂದರ್ಭವೇ ‘ಕಂಜಕ್ಟಿವೈಟಿಸ್’ ಎಂದರೆ ‘ಅಭಿಷ್ಯಂದ’. ಇದು ಕೇವಲ ಅಲ್ಪಕಾಲದ ಕಿರಿಕಿರಿಯಷ್ಟೆ ಅಲ್ಲ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ, ಪರಿಹಾರ ಒದಗದಿದ್ದರೆ ದೀರ್ಘಕಾಲದ ಕೆಡುಕಿಗೆ ದಾರಿ.

‘ತ್ರಿಫಲಾ’ ಎಂಬ ಮೂರು ಹಣ್ಣುಗಳು ಒಟ್ಟಾಗಿ ಬಳಕೆಯಾಗುವ ಯೋಗ ಆಯುರ್ವೇದದಲ್ಲಿ ಪ್ರಸಿದ್ಧ. ಇದು ಪುಡಿರೂಪದಲ್ಲಿ ಲಭ್ಯ. ಇದಕ್ಕೆ ನೀರನ್ನು ಬೆರಸಿ ಕುದಿಸಿ ಕಷಾಯವನ್ನು ತಯಾರಿಸಿ. ಹತ್ತಾರು ಬಾರಿ ಕಣ್ಣು ತೊಳೆಯಿರಿ. ಅತ್ಯುತ್ತಮ ಫಲಿತಾಂಶ ನಿಶ್ಚಿತ. ಬಿಸಿನೀರನ್ನು ಕೂಡಿಸಿ ಸೇವಿಸಿದರೆ ಲಘು ಭೇದಿಯಾದೀತು. ಕಣ್ಣಿನದಷ್ಟೆ ಅಲ್ಲ, ಕರುಳಿನ ರೋಗಕ್ಕೆ ಸಹ ತ್ರಿಫಲೆ ಪುಡಿಯ ಸೇವನೆ ರಾಮಬಾಣ. ಅದರ ಘೃತ ಸಹ ಲಭ್ಯ. ಸೇವನೆ ಹಾಗೂ ರೆಪ್ಪೆ ಮೇಲಿನ ಲೇಪನದಿಂದ ಅಪಾರ ಫಲಿತಾಂಶ ಸಿಗುತ್ತದೆ.

ಅರಶಿನಪುಡಿ ಬೆರಸಿದ ನೇತ್ರಬಿಂದವನ್ನು ಬಳಸಿದರೆ ಲಾಭ. ಅರೆದ ಹಸಿ ಅರಶಿನ ಲೇಪದಿಂದ ಉರಿ ಆಗುತ್ತದೆ; ಆದರೆ ಸ್ರಾವ ದೂರ. ಹಾಲಿಗೆ ಅರಶಿನ ಪುಡಿ ಹಾಕಿ ನಿತ್ಯ ಕುಡಿದರೆ ರೋಗಪ್ರತಿಬಂಧಕ ಶಕ್ತಿ ಹೆಚ್ಚೀತು. ಜೇನಿನ ಬಳಕೆಯಿಂದ ಕಣ್ಣುರಿ ಖಂಡಿತ. ಪನ್ನೀರು ಬೆರಸಿ ಜೇನಿನ ತೀಕ್ಷ್ಣತೆ ಇಳಿಸಲಾದೀತು. ರೆಪ್ಪೆ ಮೇಲೆ ಹಚ್ಚಿ ಕೆಂಗಣ್ಣು ಪರಿಹಾರ ಕೂಡ ಸಾಧ್ಯ. ಜೇಷ್ಠಮಧು ಅಥವಾ ಅತಿಮಧುರ ಪುಡಿ ಲಭ್ಯ. ಅದರ ನಾನಾ ಬಗೆಯ ಬಳಕೆಯಿಂದ ಹಲವು ಬಗೆಯ ನೇತ್ರರೋಗಗಳನ್ನು ತಡೆಗಟ್ಟಬಹುದು.

ಮಸಾಲೆರಹಿತ ಸಾದಾ ಆಹಾರ ಸೇವನೆ, ವೈಯಕ್ತಿಕ ಶುಚಿತ್ವ. ದಿಂಬು ದಿರಸಿನ ಶಿಸ್ತು, ಸ್ವಚ್ಛತೆ, ಹಿತಮಿತದ ಸ್ನಾನದಿಂದ ರೋಗ ತಡೆ ಮತ್ತು ಉಲ್ಬಣತೆಗೆ ಕಡಿವಾಣ ಸಾಧ್ಯ. ನೆತ್ತಿಗೆ ತುಪ್ಪ ಮತ್ತು ತೆಂಗಿನೆಣ್ಣೆ ಬಿಸಿ ಬಿಸಿಯಾಗಿ ಹಚ್ಚಿರಿ. ಐದು ಮಿನಿಟಿನಲ್ಲಿ ಸ್ನಾನ ಮಾಡಿರಿ. ಇದರಿಂದ ಕಿವಿ, ಮೂಗು, ಗಂಟಲು ಮತ್ತು ಕಣ್ಣು ಬೇನೆಗಳಿಗೆ ಕಡಿವಾಣ! ಮಲಶೋಧನೆಯ ಸಂಗತಿ ಸಹ ಕಣ್ಣುರೋಗ ಮಾತ್ರ ಅಲ್ಲ, ಇತರ ರೋಗನಿಯಂತ್ರಣಕ್ಕೂ ಹೆದ್ದಾರಿ. ತ್ರಿಫಲದ ಸೇವನೆಯಿಂದ ಅಂತಹ ಪರಿಣಾಮ ಶತಸ್ಸಿಧ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.