ADVERTISEMENT

ಕೋವಿಡ್‌ 19| ಮಕ್ಕಳಿಗೂ ಇರಲಿ ಆರೋಗ್ಯಕರ ಜೀವನಶೈಲಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 19:30 IST
Last Updated 8 ಜುಲೈ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರೊನಾ ಸೋಂಕು ದಿನೇ ದಿನೇ ವಿಶ್ವವ್ಯಾಪಿ ಹರಡುತ್ತಲೇ ಇದೆ. ವಿಶ್ವದಾದ್ಯಂತ ಐದು ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಕೊರೊನಾ ವ್ಯಾಪಿಸಿದ ಕಾರಣದಿಂದ ಲಾಕ್‌ಡೌನ್ ಹೇರಲಾಗಿತ್ತು. ಈಗೀಗ ಲಾಕ್‌ಡೌನ್‌ ಸಡಿಲಗೊಳಿಸಿದ್ದರೂ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊರಗಡೆ ಓಡಾಡುವುದು ಕಷ್ಟವಾಗಿದೆ. ಆದರೂ ದೊಡ್ಡವರು ಕಚೇರಿ, ಕೆಲಸ ಎಂದು ಹೊರಗಡೆ ಹೋಗಿ ಬಂದು ಮಾಡುತ್ತಿದ್ದಾರೆ. ಆದರೆ ಮಕ್ಕಳ ಕತೆ ಹೀಗಲ್ಲ. ಇನ್ನೂ ಶಾಲೆಗಳು ಆರಂಭವಾಗಿಲ್ಲ. ಇನ್ನೂ ಕೆಲವು ದಿನಗಳು ಮನೆಯ ಒಳಗೆ ಇರುವುದು ಅನಿವಾರ್ಯವಾಗಿದೆ.

ಮಕ್ಕಳು ಹೊರಗಡೆ ಹೋಗದೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದಾರೆ. ಮನೆಯೊಳಗೆ ಮಕ್ಕಳನ್ನು ಬಂಧಿಸಿರುವುದು ಮಕ್ಕಳಿಗೂ ಕಷ್ಟ, ಅವರನ್ನು ನಿಭಾಯಿಸುವ ಪೋಷಕರಿಗೂ ಕಷ್ಟ. ಒಳಗೇ ಇದ್ದೂ ಇದ್ದು ಮಕ್ಕಳಿಗೆ ದೈಹಿಕ ಚಟುವಟಿಕೆಯೇ ಇಲ್ಲದಂತಾಗಿದೆ. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿರಬಹುದು. ಆ ಕಾರಣಕ್ಕೆ ಮನೆಯೊಳಗೆ ಮಕ್ಕಳನ್ನು ಕ್ರಿಯಾಶೀಲರಾಗಿ ಇರುವಂತೆ ನೋಡಿಕೊಳ್ಳಬೇಕು. ಅವರು ತಿನ್ನುವ ಆಹಾರದ ಮೇಲೂ ನಿಗಾ ವಹಿಸಬೇಕು. ಲಾಕ್‌ಡೌನ್ ಅವಧಿಯಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಂಡು ಮಾನಸಿಕವಾಗಿ ಕ್ರಿಯಾಶೀಲರಾಗಿ ಇರುವಂತೆ ನೋಡಿಕೊಳ್ಳಲು ಈ ಕೆಳಗಿನ ಮಾರ್ಗಗಳನ್ನು ಅನುಸರಿಸಬಹುದು.

ಜಂಕ್‌ ಹಾಗೂ ಸಂಗ್ರಹಿತ ಆಹಾರಗಳಿಂದ ದೂರವಿರಿಸಿ

ADVERTISEMENT

ಒಮ್ಮೆಲೇ ಲಾಕ್‌ಡೌನ್‌ ಘೋಷಿಸಿದಾಗ ನೂಡಲ್ಸ್‌, ಬಿಸ್ಕತ್ತು ಹಾಗೂ ಸಿದ್ಧ ಉತ್ಪನ್ನಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತೀರಿ. ಆ ಸಮಯಕ್ಕೆ ಯಾವುದು ಸಿಗುತ್ತದೋ ಅದೇ ನಮ್ಮ ಮನೆಯ ಅಡುಗೆಮನೆ ಸೇರಿರುತ್ತದೆ. ಈಗ ಹಾಗಿಲ್ಲ. ಲಾಕ್‌ಡೌನ್‌ನಿಂದ ಕೊಂಚ ಬಿಡುವು ಸಿಕ್ಕಿದೆ. ಆ ಕಾರಣಕ್ಕೆ ಕುಟುಂಬದವರ ಅದರಲ್ಲೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ತಾಜಾ ಆಹಾರ ಪದಾರ್ಥಗಳನ್ನೇ ಸೇವಿಸಿ. ಜಂಕ್ ಹಾಗೂ ಸಂಗ್ರಹಿತ ಆಹಾರ ಪದಾರ್ಥಗಳಿಂದ ಸಾಧ್ಯವಾದಷ್ಟು ದೂರ ಇರುವುದು ಉತ್ತಮ. ಅವುಗಳ ಬದಲು ಮಕ್ಕಳು ಹಸಿವು ಎಂದಾಗ ತಾಜಾ ಹಣ್ಣು ಹಾಗೂ ಹಣ್ಣಿನ ಜ್ಯೂಸ್ ಕೊಡಿ. ಇದರಿಂದ ಹಸಿವೂ ನೀಗುತ್ತದೆ. ಆರೋಗ್ಯವು ಕೆಡುವುದಿಲ್ಲ.

ಯೋಗ, ಧ್ಯಾನ ಅಭ್ಯಾಸ ಮಾಡಿಸಿ

ಈಗ ಮಕ್ಕಳು ಶಾಲೆ ಹಾಗೂ ಮನೆಯಲ್ಲಿ ಹೊರಗಡೆ ಆಟವಾಡುವುದು ನಿಂತಿದೆ. ಆ ಕಾರಣಕ್ಕೆ ಮಕ್ಕಳಿಗೆ ದೈಹಿಕ ಚಟುವಟಿಕೆಯೇ ಇಲ್ಲದಂತಾಗಿದೆ. ಹಾಗಾಗಿ ಪ್ರತಿನಿತ್ಯ ಯೋಗ ಹಾಗೂ ವ್ಯಾಯಾಮ ಮಾಡುವುದನ್ನು ಅಭ್ಯಸಿಸಿ. ಪ್ರಾಣಾಯಾಮಗಳನ್ನು ಹೇಳಿಕೊಡಿ. ಧ್ಯಾನ ಮಾಡುವುದನ್ನು ರೂಢಿಸಿ. ಇದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ಸ್ಕ್ರೀನ್ ಸಮಯ ನಿಗದಿಪಡಿಸಿ

ಲಾಕ್‌ಡೌನ್ ಕಾರಣದಿಂದ ಹೊರಗೆ ಹೋಗಲಾಗದೇ ಮಕ್ಕಳು ಹಟ ಮಾಡುವುದು ಸಾಮಾನ್ಯ. ಆಗ ಕೈಯಲ್ಲೇ ಮೊಬೈಲ್ ಕೊಟ್ಟು ಅಥವಾ ಟಿವಿ ಆನ್‌ ಮಾಡಿ ಟಿವಿ ಮುಂದೆ ಕೂರಿಸಿ ಸಮಾಧಾನ ಪಡಿಸಿರುತ್ತೀರಿ. ಮಕ್ಕಳೂ ಅದನ್ನೇ ನೆಚ್ಚಿಕೊಂಡಿರುತ್ತಾರೆ. ಸದಾ ಟಿವಿ ನೋಡುವುದು, ಮೊಬೈಲ್ ನೋಡುವುದರಲ್ಲಿ ಮುಳುಗಿರುತ್ತಾರೆ. ಆದರೆ ಮಕ್ಕಳಿಗೆ ಗ್ಯಾಜೆಟ್‌ಗಳನ್ನು ನೋಡಲು ಸಮಯ ನಿಗದಿಪಡಿಸುವುದು ತುಂಬಾ ಮುಖ್ಯ. ಇದರಿಂದ ಮಕ್ಕಳ ಕಣ್ಣಿನ ಆರೋಗ್ಯವಲ್ಲದೇ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.

ಸರಿಯಾದ ಸಮಯಕ್ಕೆ ನಿದ್ದೆ ಮಾಡಿಸಿ

ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸ್ಥಿರವಾಗಿರಲು ಸರಿಯಾದ ಅವಧಿಯ ನಿದ್ದೆ ತುಂಬಾ ಮುಖ್ಯ. ದಿನದಲ್ಲಿ ಕನಿಷ್ಠ 8 ಗಂಟೆಗಳ ಕಾಲ ನಿದ್ದೆ ಅಗತ್ಯ. ಪ್ರತಿನಿತ್ಯ ಮಲಗಲು ಒಂದು ಸಮಯ ನಿಗದಿ ಪಡಿಸಿ. ಅದೇ ಸಮಯಕ್ಕೆ ಪ್ರತಿದಿನ ನಿದ್ದೆ ಮಾಡುವಂತೆ ನೋಡಿಕೊಳ್ಳಿ. ಹಾಸಿಗೆಯಲ್ಲಿ ಮಕ್ಕಳು ಯಾವುದೇ ಗ್ಯಾಜೆಟ್‌ಗಳನ್ನು ಉಪಯೋಗಿಸದಂತೆ ನೋಡಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.