ADVERTISEMENT

ಕೊರೊನಾ ಸಾಂತ್ವನ: ‘ಗರ್ಭಿಣಿ, ಬಾಣಂತಿಯರ ಮೇಲಿರಲಿ ವಿಶೇಷ ಕಾಳಜಿ’

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 21:30 IST
Last Updated 28 ಏಪ್ರಿಲ್ 2021, 21:30 IST
ಡಾ. ಗೀತಾ ಶಿವಮೂರ್ತಿ
ಡಾ. ಗೀತಾ ಶಿವಮೂರ್ತಿ   

‘ಕೋವಿಡ್ ಎರಡನೆ ಅಲೆಯಲ್ಲಿ ವೈರಾಣು ನಿರೀಕ್ಷೆಗೂ ಮೀರಿ ಹರಡುತ್ತಿದೆ. ಹಾಗಾಗಿ, ಮನೆಯಲ್ಲಿ ಗರ್ಭಿಣಿ ಅಥವಾ ಬಾಣಂತಿಯರಿದ್ದರೆ ಅವರ ಮೇಲೆ ವಿಶೇಷ ಕಾಳಜಿ ವಹಿಸಬೇಕು. ಜ್ವರ, ಕೆಮ್ಮಿನಂತಹ ಲಕ್ಷಣಗಳು ಕಾಣಿಸಿಕೊಂಡಲ್ಲಿ ಅಥವಾ ಉಸಿರಾಟದ ಸಮಸ್ಯೆ ಉಂಟಾದಲ್ಲಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದು, ಕೋವಿಡ್ ಪರೀಕ್ಷೆ ಮಾಡಿಸಬೇಕು.’

‘ಗರ್ಭಿಣಿಯರು ಹಾಗೂ ಬಾಣಂತಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇರಿಸಬೇಕು. ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೊರೊನಾ ಸೋಂಕು ಅಪಾಯ ಉಂಟುಮಾಡುವ ಸಾಧ್ಯತೆ ಹೆಚ್ಚು ಇರಲಿದೆ. ಹಾಗಾಗಿ, ಮನೆಯಲ್ಲಿಯೇ ನಿಗಾ ವ್ಯವಸ್ಥೆಗೆ ಒಳಪಡಬೇಕು. ಸೋಂಕು ತಗುಲಿದ ಬಳಿಕ ಚಿಕಿತ್ಸೆಯ ಬಗ್ಗೆ ಚಿಂತೆ ಮಾಡುವ ಬದಲು ಸೋಂಕಿತರಾಗದಂತೆ ಇರಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೊದಲನೇ ಅಲೆಗೆ ಹೋಲಿಸಿದಲ್ಲಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು ಕೂಡ ಸೋಂಕಿತರಾಗಿರುತ್ತಿದ್ದಾರೆ. ತಡವಾಗಿ ಆಸ್ಪತ್ರೆಗೆ ಬಂದಲ್ಲಿ ಸಮಸ್ಯೆ ಸಂಕೀರ್ಣ ಸ್ವರೂಪ ಪಡೆದುಕೊಳ್ಳಲಿದೆ.’

‘ಗರ್ಭಿಣಿಯರು ಹಾಗೂ ಬಾಣಂತಿಯರು ಅನಗತ್ಯವಾಗಿ ಮನೆಯಿಂದ ಹೊರಗಡೆ ಹೋಗಬಾರದು. ವೈದ್ಯರ ಸಲಹೆ ಪಡೆದೇ ಮಾತ್ರೆಗಳನ್ನು ಸೇವಿಸಬೇಕು. ಒಂದು ವೇಳೆ ಕೋವಿಡ್ ಪೀಡಿತರಾದರೂ ಸೋಂಕಿನ ತೀವ್ರತೆ ಅಷ್ಟಾಗಿ ಇರದಿದ್ದಲ್ಲಿ ಸಾಮಾನ್ಯ ಔಷಧವನ್ನೇ ನೀಡಲಾಗುತ್ತದೆ. ಬಿಸಿನೀರಿನ ಬಳಕೆ, ಪೌಷ್ಟಿಕ ಆಹಾರ ಸೇವನೆಗೆ ಸೂಚಿಸಲಾಗುತ್ತದೆ. ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಪ್ರತಿನಿತ್ಯ ಪರೀಕ್ಷೆ ಮಾಡಿಕೊಂಡು, ಏರಿಳಿತವನ್ನು ಗಮನಿಸಬೇಕು. ಎಲ್ಲ ಕೋವಿಡ್‌ ಪೀಡಿತರು ಆಸ್ಪತ್ರೆಗೆ ದಾಖಲಾಗಬೇಕಿಲ್ಲ. ಲಕ್ಷಣಗಳು ಅಷ್ಟಾಗಿ ಗೋಚರಿಸದಿದ್ದಲ್ಲಿ ಮನೆ ಆರೈಕೆಗೆ ಒಳಗಾಗಬಹುದು.’

ADVERTISEMENT

‌‘ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಅಥವಾ ಪ್ರತಿ ತಿಂಗಳ ತಪಾಸಣೆಗೆ ಹತ್ತಿರ ಆರೋಗ್ಯ ಕೇಂದ್ರಗಳಿಗೆ ತೆರಳುವುದು ಉತ್ತಮ. ಕೋವಿಡ್‌ ಲಸಿಕೆಯ ಪ್ರಯೋಗ ಗರ್ಭಿಣಿಯರು ಮತ್ತು ಬಾಣಂತಿಯರ ಮೇಲೆ ನಡೆದಿಲ್ಲ. ಹಾಗಾಗಿ, ಅವರಿಗೆ ಲಸಿಕೆ ನೀಡುತ್ತಿಲ್ಲ. ಎಲ್ಲ ರೀತಿಯಲ್ಲಿಯೂ ಸುರಕ್ಷತೆ ಇದ್ದಲ್ಲಿ ಅಂತರ ಕಾಯ್ದುಕೊಳ್ಳುವ ಮುಲಕ ತಾಯಿ ಮತ್ತು ಮಗು ಒಂದೇ ಕೋಣೆಯಲ್ಲೇ ಇರಬಹುದು. ಇಲ್ಲವಾದಲ್ಲಿ ಪ್ರತ್ಯೇಕವಾಗಿ ಇರಬೇಕಾಗುತ್ತದೆ.

‘ಒಂದು ವೇಳೆ ತಾಯಿ ಕೋವಿಡ್ ಪೀಡಿತರಾದರೂ ಮುಖಗವಸು ಧರಿಸುವ ಜತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಮಗುವಿಗೆ ಸ್ತನ್ಯಪಾನ ಮಾಡಿಸಬಹುದು. ತಾಯಿ ತೀವ್ರವಾದ ಅನಾರೋಗ್ಯಕ್ಕೆ ಒಳಗಾಗಿದ್ದಲ್ಲಿ ಬೇರೆ ವಿಧಾನಗಳ ಮೂಲಕ ಸ್ತನ್ಯಪಾನ ಮಾಡಿಸಬೇಕಾಗುತ್ತದೆ.’

-ಡಾ. ಗೀತಾ ಶಿವಮೂರ್ತಿ, ವಾಣಿವಿಲಾಸ ಆಸ್ಪತ್ರೆಯ ವೈದ್ಯ ಅಧೀಕ್ಷಕಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.