ADVERTISEMENT

ಕೋವಿಡ್-19: ಬದಲಾಗದಿರಲಿ ಬೆಳಗಿನ ದಿನಚರಿ

ರೇಷ್ಮಾ
Published 31 ಆಗಸ್ಟ್ 2020, 19:30 IST
Last Updated 31 ಆಗಸ್ಟ್ 2020, 19:30 IST
ವ್ಯಾಯಮ (ಸಾಂಕೇತಿಕ ಚಿತ್ರ)
ವ್ಯಾಯಮ (ಸಾಂಕೇತಿಕ ಚಿತ್ರ)   

‘ಕೋವಿಡ್‌ – 19 ಆವರಿಸಿದಾಗಿನಿಂದ ನನ್ನ ಬೆಳಗಿನ ದಿನಚರಿಯೇ ಬದಲಾಗಿದೆ. ಮೊದಲೆಲ್ಲಾ ಬೆಳಗಿನ ಜಾವ ಬೇಗನೆ ಎದ್ದೇಳುತ್ತಿದ್ದೆ. ಹಲ್ಲುಜ್ಜಿ, ಲಘು ವ್ಯಾಯಾಮ ಮಾಡುತ್ತಿದ್ದೆ. ಇಂದು ಏನೇನು ಮಾಡಬೇಕು ಎಂದು ಯೋಜನೆ ರೂಪಿಸುತ್ತಿದ್ದೆ. ಅಡುಗೆಮನೆಯ ಕೆಲಸ ಮುಗಿಸಿ, ಗಂಡ–ಮಕ್ಕಳನ್ನು ಅಣಿ ಮಾಡಿ ಕಚೇರಿಗೆ ತೆರಳುತ್ತಿದ್ದೆ. ಆದರೆ ಈಗ ಹಾಗಿಲ್ಲ. ಎಲ್ಲವೂ ಬದಲಾಗಿದೆ. ಈಗ 9 ರಿಂದ 10 ಗಂಟೆ ನಿದ್ದೆ. ಎದ್ದ ಕೂಡಲೇ ಲ್ಯಾಪ್‌ಟಾಪ್ ನೋಡುವುದು ಇದೇ ಆಗಿದೆ. ಇದರಿಂದ ಮಾನಸಿಕವಾಗಿಯೂ ಸ್ಥಿರತೆ ಇಲ್ಲದಂತಾಗಿದೆ’ ಎಂಬುದು ಕಂಪನಿಯೊಂದರಲ್ಲಿ ಎಚ್‌ಆರ್‌ ಕನ್ಸಲ್ಟೆಂಟ್‌ ಆಗಿರುವ ಮಾನಸಿ ಅಭಿಪ್ರಾಯ.

ಕೋವಿಡ್‌ ಕಾರಣದಿಂದ ಮನೆಯಿಂದಲೇ ಕೆಲಸ ಮಾಡಲು ಆರಂಭಿಸಿ ಅರ್ಧ ವರ್ಷವೇ ಕಳೆಯಿತು. ಆದರೂ ನಾವು ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಬೆಳಗಿನ ದಿನಚರಿಯಂತೂ ಸಂಪೂರ್ಣವಾಗಿ ಬದಲಾಗಿದೆ. ಅದು ಮೊದಲಿನಂತಾಗಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ ಎಂಬುದು ಮನೆಯಿಂದಲೇ ಕೆಲಸ ಮಾಡುವ ಹಲವರ ಗೋಳು. ಆದರೆ ಇದು ನಮ್ಮ ಕೆಲಸ, ಮಾನಸಿಕ ಹಾಗೂ ದೈಹಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡಿದೆ.

ಬೆಳಗಿನ ದಿನಚರಿ ಎಂಬುದು ಉಸಿರಾಟದಷ್ಟೇ ಮುಖ್ಯ. ಆದರೆ ಬೆಳಗಿನ ದಿನಚರಿಯಲ್ಲಾದ ಬದಲಾವಣೆಯು ಕೇವಲ ನಮ್ಮ ದೈಹಿಕ ಸ್ಥಿತಿಗತಿಯ ಮೇಲೆ ಮಾತ್ರವಲ್ಲ, ಸಮಯದ ಗಡುವಿನ ಮೇಲೂ ಪರಿಣಾಮ ಬೀರಿದೆ. ಇಮೇಲ್ ಪರಿಶೀಲನೆ, ಊಟದ ವಿರಾಮ, ಮಧ್ಯಾಹ್ನದ ಮೀಟಿಂಗ್, ಕೆಲಸ ಮುಗಿದ ತಕ್ಷಣ ಮನೆಗೆ ಮರಳುವುದು ಈ ಎಲ್ಲಾ ಕ್ರಮಗಳು ಈಗ ಬದಲಾಗಿವೆ.

ADVERTISEMENT

‘ಮೊದಲೆಲ್ಲಾ ಕೆಲಸ ನಮ್ಮ ಹಿಡಿತದಲ್ಲಿತ್ತು. ಆದರೆ ಮನೆಯಿಂದಲೇ ಕೆಲಸ ಮಾಡಲು ಆರಂಭಿಸಿದಾಗಿನಿಂದ ಕೆಲಸವೇ ನಮ್ಮನ್ನು ಆಳುತ್ತಿದೆ’ ಎಂಬುದು ಎಂಜಿನಿಯರ್‌ ಸುಹಾಸ್ ಅವರ ಅಭಿಪ್ರಾಯ.

ಆದರೆ ಮನೆಯಿಂದಲೇ ಕೆಲಸ ಮಾಡುವಾಗಲೂ ತಪ್ಪದೇ ಬೆಳಗಿನ ದಿನಚರಿಯನ್ನು ಪಾಲಿಸುವುದು ಅತೀ ಅಗತ್ಯ. ಹಾಗಾದರೆ ಬೆಳಗಿನ ದಿನಚರಿಯನ್ನು ಪಾಲಿಸುವುದರಿಂದ ಆಗುವ ಲಾಭವೇನು?

ಉತ್ಪಾದಕತೆ ಹೆಚ್ಚುತ್ತದೆ

ನಮಗೆ ನಿಜವಾಗಿಯೂ ಬೆಳಗಿನ ದಿನಚರಿಯ ಅನುಕರಣೆ ಅವಶ್ಯವಿದೆಯೇ ಎಂಬ ಪ್ರಶ್ನೆ ಕೇಳಿದರೆ ಹಲವರು ಹೌದು ಎಂಬ ಉತ್ತರ ನೀಡುತ್ತಾರೆ. ಇದರಿಂದ ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ದೃಢವಾಗಿ ಶಿಸ್ತಿನಿಂದ ಇರಬಹುದು ಎಂಬುದು ಅವರ ಅಭಿಪ್ರಾಯ. ಬೆಳಗಿನ ದಿನಚರಿ ಬದುಕಿಗೆ ಶಿಸ್ತನ್ನು ನೀಡುತ್ತದೆ. ಇದರಿಂದ ಉತ್ಪಾದಕತೆಯೂ ಹೆಚ್ಚುತ್ತದೆ ಎಂಬುದು ಉದ್ಯೋಗಿಗಳ ಅಭಿಮತ.

ಮಾನಸಿಕ ಶಾಂತಿ

ಬೆಳಗಿನ ದಿನಚರಿಯು ನಮ್ಮನ್ನು ನಿಯಂತ್ರಣದಲ್ಲಿರಿಸುತ್ತದೆ. ಅದರಿಂದ ಮಾನಸಿಕ ಶಾಂತಿ ಸಿಗುತ್ತದೆ. ಆ ಕಾರಣಕ್ಕೆ ಮೊದಲಿನಂತೆ ಕಚೇರಿಗೆ ಹೋಗುವಾಗ ರೂಢಿಸಿಕೊಂಡಿದ್ದ ದಿನಚರಿಯನ್ನು ಈಗಲೂ ಪಾಲಿಸಬೇಕು. ಮನೆಯಲ್ಲೇ ಇದ್ದರೂ ಕಚೇರಿಗೆ ಹೋಗುವಂತೆ ಚೆನ್ನಾಗಿ ಡ್ರೆಸ್ ಮಾಡಿಕೊಂಡು ರೆಡಿ ಆಗಬೇಕು. ಒಟ್ಟಾರೆ ಬೆಳಗಿನಿಂದ ಸಂಜೆಯವರೆಗೆ ವ್ಯವಸ್ಥಿತವಾಗಿ ಸಮಯಪಾಲನೆ ಮಾಡಬೇಕು.

ಮೌಲ್ಯಯುತ ಸಮಯ ಕಳೆಯಲು ಸಹಕಾರಿ

ಮನೆಯಿಂದಲೇ ಕೆಲಸ ಮಾಡುವ ಅವಕಾಶವು ಮನೆಯವರ ಜೊತೆ ಹೆಚ್ಚು ಸಮಯ ಕಳೆಯಲು ಸಂದರ್ಭ ಒದಗಿಸಿದೆ.

ಹಾಗಾಗಿ ಇದೊಂದು ಖುಷಿಯ ವಿಚಾರ ಎಂದುಕೊಂಡು ಆದಷ್ಟು ಮನೆಯವರ ಜೊತೆ ಸಂತಸದಿಂದ ಇರಬೇಕು. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿಯವರೆಗೆ ಎಷ್ಟು ಹೊತ್ತು ಮನೆಯವರ ಜೊತೆ ಸಮಯ ಕಳೆಯಬೇಕು ಎಂಬುದಕ್ಕೂ ಸಮಯ ನಿಗದಿ ಮಾಡಿಕೊಳ್ಳಿ.

ಉಲ್ಲಸಿತರಾಗಿರಬಹುದು

ಧ್ಯಾನ, ವ್ಯಾಯಾಮದಂತಹ ಅಭ್ಯಾಸದ ರೂಢಿಯನ್ನು ಈಗಲೂ ಮುಂದುವರಿಸಬೇಕು. ಬಿಡುವಿನ ವೇಳೆಯನ್ನು ಅದಕ್ಕಾಗಿ ಮೀಸಲಿಡಬಹುದು. ಇದರಿಂದ ನಮ್ಮ ದೈನಂದಿನ ಬದುಕು ಯಾವ ರೀತಿ ಬದಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಜೊತೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚು ಉಲ್ಲಸಿತರಾಗಿರಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.