ADVERTISEMENT

ಕೊರೊನಾ ಬಗ್ಗೆ ಒಂದಷ್ಟು ತಿಳಿಯೋಣ: ನವಜಾತ ಶಿಶುಗಳಿಗೆ ಗೋಚರಿಸದ ಲಕ್ಷಣ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 21:01 IST
Last Updated 21 ನವೆಂಬರ್ 2020, 21:01 IST
ಡಾ. ಯೋಗೇಶ್ ಗುಪ್ತಾ
ಡಾ. ಯೋಗೇಶ್ ಗುಪ್ತಾ   

ಬೆಂಗಳೂರು: ಕೋವಿಡ್ ಪರೀಕ್ಷೆ ನಡೆಸಿದಾಗ, ನವಜಾತ ಶಿಶುಗಳು ಕೂಡ ಸೋಂಕಿತರಾಗುತ್ತಿರುವುದು ದೃಢಪಡುತ್ತಿದೆ. ಆದರೆ, ಬಹುತೇಕ ಶಿಶುಗಳಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದಾಗಿ ಅವುಗಳು ಬೇಗ ಚೇತರಿಸಿಕೊಳ್ಳುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಜ್ಯದಲ್ಲಿ ಎಲ್ಲ ವಯೋಮಾನದವರೂ ಕೋವಿಡ್ ಪೀಡಿತರಾಗುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ತಾಯಿಯ ಜತೆಗೆ ಶಿಶುವಿಗೂ ಜನಿಸಿದ 24 ಗಂಟೆಗಳಿಂದ 48 ಗಂಟೆ ಒಳಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಈ ಮೊದಲು ತಾಯಿ ಅಥವಾ ಮಗು ಕೋವಿಡ್ ಪೀಡಿತರಾಗಿದ್ದಲ್ಲಿ ಚೇತರಿಸಿಕೊಳ್ಳುವವರೆಗೂ ಪ್ರತ್ಯೇಕಿಸಲಾಗುತ್ತಿತ್ತು. ಸುರಕ್ಷಿತ ವಿಧಾನದಲ್ಲಿ ಸಂಗ್ರಹಿಸಿದ ಎದೆಹಾಲನ್ನು ಅಥವಾ ದ್ರವರೂಪದ ಆಹಾರವನ್ನು ಮಗುವಿಗೆ ನೀಡಲಾಗುತ್ತಿತ್ತು. ಆದರೆ, ಈಗ ಆರೋಗ್ಯ ಇಲಾಖೆಯು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಎದೆಹಾಲುಣಿಸಲು ಅವಕಾಶ ನೀಡಿದೆ.

ಕೋವಿಡ್‌ ಪೀಡಿತರಲ್ಲಿ ಶೇ 21.87 ರಷ್ಟು ಮಂದಿ 30ರಿಂದ 39 ವರ್ಷದೊಳಗಿನವರಾಗಿದ್ದಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ವಯೋಮಾನದವರು ಸೋಂಕಿತರಾಗಿದ್ದಾರೆ. ಶೇ 2.94 ರಷ್ಟು ಮಂದಿ 9 ವರ್ಷದೊಳಗಿನವರಾಗಿದ್ದಾರೆ. ಮೃತಪಟ್ಟವರಲ್ಲಿ ಶೇ 0.1ರಷ್ಟು ಮಂದಿ ಮಾತ್ರ (9 ವರ್ಷದೊಳಗಿನವರು) ಮಕ್ಕಳಾಗಿದ್ದಾರೆ. ಉಸಿರಾಟ ಸಂಬಂಧಿ ಸಮಸ್ಯೆಗಳು ನವಜಾತ ಶಿಶುಗಳು ಹಾಗೂ ಮಕ್ಕಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಕಾರಣ ಅವರಿಗೆ ಕಾಯಿಲೆ ಬೇಗ ವಾಸಿಯಾಗುತ್ತಿದೆ. ಆದರೆ, ಲಕ್ಷಣಗಳು ಇವರಲ್ಲಿ ಗೋಚರಿಸದ ಪರಿಣಾಮ ಕಾಯಿಲೆ ಗುರುತಿಸುವುದು ಸವಾಲಾಗಿದೆ ಎನ್ನುತ್ತಾರೆ ವೈದ್ಯರು.

ADVERTISEMENT

ಸುರಕ್ಷತೆಗೆ ಆದ್ಯತೆ ನೀಡಿ: ‘ನವಜಾತ ಶಿಶುಗಳಿಗೆ ಜನಿಸಿದ 24 ಗಂಟೆಗಳ ಬಳಿಕ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬಹುತೇಕ ಶಿಶುಗಳಿಗೆ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸುವುದಿಲ್ಲ. ಕೆಲ ಶಿಶುಗಳಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಲಿದೆ. ರಕ್ತದಲ್ಲಿನ ಆಮ್ಲಜನಕ ಪ್ರಮಾಣದಲ್ಲಿ ಕೂಡ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಮಗು ಚೇತರಿಸಿಕೊಳ್ಳುವವರೆಗೂ ಆಸ್ಪತ್ರೆಯಲ್ಲಿಯೇ ಆರೈಕೆ ಮಾಡಬೇಕಾಗುತ್ತದೆ’ ಎಂದು ಫೋರ್ಟಿಸ್ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ಯೋಗೇಶ್ ಗುಪ್ತಾ ತಿಳಿಸಿದರು.

‘ತಾಯಿ ಕೋವಿಡ್ ಪೀಡಿತೆಯಾಗಿದ್ದಲ್ಲಿ ಮಗುವನ್ನು ಎತ್ತಿಕೊಳ್ಳುವಾಗ ಕೈಗವಸು, ಮುಖಗವಸು ಸೇರಿದಂತೆ ಸುರಕ್ಷಾ ಸಾಧನಗಳನ್ನು ಧರಿಸಿರಬೇಕು. ಈ ಸಂದರ್ಭದಲ್ಲಿ ಬೇರೆಯವರಿಗೆ ಮಗುವನ್ನು ಸ್ಪರ್ಷಿಸಲು, ಎತ್ತಿಕೊಳ್ಳಲು ಅವಕಾಶ ನೀಡದಿರುವುದು ಉತ್ತಮ. ಕೋವಿಡ್ ಪೀಡಿತ ಮಹಿಳೆಗೆ ಜನಿಸುವ ಮಕ್ಕಳಲ್ಲಿ ಶೇ 2ರಿಂದ ಶೇ 5ರಷ್ಟು ಶಿಶುಗಳು ಮಾತ್ರ ಸೋಂಕಿತರಾಗುವ ಸಾಧ್ಯತೆಯಿದೆ ಎನ್ನುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ನವಜಾತ ಶಿಶುಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಎದೆಹಾಲು ಸಹಾಯಕ. ಹಾಗಾಗಿ ತಾಯಿ ಅಥವಾ ಮಗು ಸೋಂಕಿತರಾಗಿದ್ದರೂ ಎದೆಹಾಲು ಉಣಿಸುವುದನ್ನು ಮುಂದುವರಿಸಬೇಕು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.