ADVERTISEMENT

ಕೊರೊನಾ ಒಂದಷ್ಟು ತಿಳಿಯೋಣ: ರೋಗನಿರೋಧಕ ಶಕ್ತಿ ವೃದ್ಧಿಸುವ ಸಸ್ಯಗಳು

ಕೊರೊನಾ ಒಂದಷ್ಟು ತಿಳಿಯೋಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 19:31 IST
Last Updated 28 ಅಕ್ಟೋಬರ್ 2020, 19:31 IST
ಡಾ. ಪ್ರಕಾಶ್ ಎಲ್. ಹೆಗಡೆ
ಡಾ. ಪ್ರಕಾಶ್ ಎಲ್. ಹೆಗಡೆ   

ಬೆಂಗಳೂರು: ಕೋವಿಡ್‌ಗೆ ಈವರೆಗೂ ನಿರ್ದಿಷ್ಟ ಔಷಧ ಸಂಶೋಧಿಸಲ್ಪಟ್ಟಿಲ್ಲ. ಹಾಗಾಗಿ ಅಮೃತಬಳ್ಳಿ ಸೇರಿದಂತೆ ಔಷಧ ಗುಣಗಳುಳ್ಳ ಸಸ್ಯಗಳ ಎಲೆ, ಕಾಂಡ ಸೇರಿದಂತೆ ವಿವಿಧ ಭಾಗಗಳು ಹಾಗೂ ಅವುಗಳಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಇದರಿಂದ ವೈರಾಣುವನ್ನು ಸುಲಭವಾಗಿ ಎದುರಿಸಲು ಸಾಧ್ಯ.

ಕೋವಿಡ್‌ ವಿರುದ್ಧದ ಸಮರದಲ್ಲಿ ಆಯುರ್ವೇದದ ಉತ್ಪನ್ನಗಳು ಪ್ರಮುಖ ಪಾತ್ರವಹಿಸಲಿವೆ ಎಂದು ತಿಳಿಸಿರುವ ಆಯುಷ್ ಇಲಾಖೆ, ಅರಿಶಿನ, ಜೀರಿಗೆ, ಬೆಳ್ಳುಳ್ಳಿ ಸೇರಿದಂತೆ ವಿವಿಧ ಪದಾರ್ಥಗಳನ್ನು ಹೆಚ್ಚು ಬಳಕೆ ಮಾಡುವಂತೆ ಸೂಚಿಸಿದೆ.

ಇದಕ್ಕೆ ಪೂರಕ ಎಂಬಂತೆ ಹಾಸನದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರಕಾಶ್ ಎಲ್. ಹೆಗಡೆ ಅವರು ಕೂಡ ಔಷಧ ಗುಣಗಳಿರುವ ವಿವಿಧ ಸಸ್ಯಗಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿವೆ ಎಂದು ಪ್ರತಿಪಾದಿಸುತ್ತಾರೆ.

ADVERTISEMENT

‘ರೋಗ ಹರಡುವಿಕೆ ಅಥವಾ ವ್ಯಾಧಿಯ ತೀವ್ರತೆಯನ್ನು ಹಿಮ್ಮೆಟ್ಟಿಸಿ ನಿಲ್ಲುವುದು ವ್ಯಕ್ತಿಯಲ್ಲಿ ಇರುವ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಿರುತ್ತದೆ. ಈ ಬಗ್ಗೆ ಆಯುರ್ವೇದದ ಹಲವು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ರೋಗದ ಉತ್ಪತ್ತಿಗೆ ಕಾರಣವಾಗುವ ವೈರಾಣುಗಳಿಗಿಂತ ವ್ಯಕ್ತಿಯ ದೇಹದಲ್ಲಿ ಹೆಚ್ಚಿನ ಬಲವಿದ್ದಾಗ ಸಹಜವಾಗಿ ರೋಗಾಣುಗಳಿಗೆ ವ್ಯಾಧಿಯನ್ನು ಉತ್ಪತ್ತಿ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಅವರು ವಿವರಿಸುತ್ತಾರೆ.

‘ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ತಡೆಗಟ್ಟುವುದು ಜಾಣತನ. ಸಮತೋಲಿತ ಆಹಾರ ಸೇವನೆ, ಉತ್ತಮವಾದ ಜೀವನಶೈಲಿ, ಶಿಸ್ತುಬದ್ಧ ದೈನಂದಿನ ಕಾರ್ಯಚಟುವಟಿಕೆಗಳ ಜೊತೆಗೆ ಸುಲಭವಾಗಿ ದೊರೆಯುವ ಔಷಧ ಸಸ್ಯಗಳ ಬಳಕೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು’ ಎಂದರು.

ಔಷಧ ಸಸ್ಯಗಳ ಬಳಕೆ ಹೇಗೆ?

lಅಮೃತಬಳ್ಳಿಯ ಕಾಂಡದ ರಸಕ್ಕೆ ನೀರನ್ನು ಸೇರಿಸಿ, ಸಣ್ಣ ಬೆಂಕಿಯಲ್ಲಿ ಕುದಿಸಬೇಕು. ಅದನ್ನು ದಿನಕ್ಕೆ ಎರಡು ಬಾರಿ 40ರಿಂದ 60 ಮಿಲಿಯಷ್ಟನ್ನು ಸೇವಿಸಬೇಕು

lಅಮೃತಬಳ್ಳಿಯ ನಾಲ್ಕು ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿದು ರಸವನ್ನು ನುಂಗಬೇಕು

l3 ಗ್ರಾಂನಷ್ಟು ನೆಲ್ಲಿಕಾಯಿಯ ಪುಡಿಯನ್ನು ನೀರಿನೊಂದಿಗೆ ಪ್ರತಿನಿತ್ಯ ಎರಡು ಬಾರಿ ಸೇವಿಸಬೇಕು

lಸಕ್ಕರೆ ಕಾಯಿಲೆಯಿರುವವರು ನೆಲ್ಲಿಕಾಯಿ ಮತ್ತು ಅರಿಶಿನ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ, 5 ಗ್ರಾಂನಷ್ಟು ಪುಡಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು

l5 ಗ್ರಾಂ ಅಶ್ವಗಂಧ ಬೇರಿನ ಚೂರ್ಣವನ್ನು ಬಿಸಿ ಹಾಲಿನೊಂದಿಗೆ ದಿನನಿತ್ಯ ಸೇವಿಸಬೇಕು

l5 ಗ್ರಾಂ ಅಶ್ವಗಂಧ ಬೇರಿನ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ, ದಿನಕ್ಕೆ ಎರಡುಬಾರಿ ಸೇವಿಸಬೇಕು

lಅಶ್ವಗಂಧದ ಚೂರ್ಣವನ್ನು ಹಾಲಿನಲ್ಲಿ ಕುದಿಸಿ, ತುಪ್ಪ ಮತ್ತು ಕಲ್ಲುಸಕ್ಕರೆಯೊಂದಿಗೆ ಸೇವಿಸಬೇಕು

l5 ಮಿಲಿಯಷ್ಟು ತುಳಸಿ ಎಲೆಯ ರಸವನ್ನು ಕಾಲು ಚಮಚ ಜೇನುತುಪ್ಪದೊಂದಿಗೆ ದಿನಕ್ಕೆ 2-3ಬಾರಿ ಸೇವಿಸಬೇಕು

l5 ಮಿಲಿಯಷ್ಟು ತುಳಸಿ ರಸದೊಂದಿಗೆ ಎರಡು ಚಿಟಕಿ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಸೇವಿಸಬೇಕು

l3 ಗ್ರಾಂ ತುಳಸಿಯ ಪುಡಿಯನ್ನು ನೀರಿನ ಜತೆಗೆ ದಿನನಿತ್ಯ ಸೇವಿಸಬೇಕು

lಕಾಲು ಚಮಚ ಅರಿಶಿನ ಪುಡಿಯನ್ನು ಬೆಚ್ಚಗಿನ ಹಾಲಿನೊಂದಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು

lಬೆಳಿಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಕಾಲು ಚಮಚದಷ್ಟು ಅರಿಶಿನ ಪುಡಿಯನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.