ADVERTISEMENT

ಡಯಟಿಷಿಯನ್ ಇಲ್ಲ ಅಮ್ಮನ ‘ಕೈತುತ್ತೇ’ ಎಲ್ಲ

ವಿಕ್ರಂ ಕಾಂತಿಕೆರೆ
Published 11 ನವೆಂಬರ್ 2018, 19:30 IST
Last Updated 11 ನವೆಂಬರ್ 2018, 19:30 IST
ದಾಮಿನಿ ಗೌಡ
ದಾಮಿನಿ ಗೌಡ   

ನೀರಿನಲ್ಲಿ ಮೀನಿನ ಹೆಜ್ಜೆಗಳನ್ನು ಹುಡುಕಬಾರದು ಎಂಬ ಮಾತಿದೆ. ಹುಡುಕುವುದು ಸಾಧ್ಯವೂ ಅಲ್ಲ ಎಂಬುದು ವಾಸ್ತವ. ಆದರೆ ಕರ್ನಾಟಕದ ಚಿನ್ನದ ಮೀನು ದಾಮಿನಿ ಗೌಡ ಅವರು ಈಜುಕೊಳದಲ್ಲಿ ಮಾಡಿರುವ ಹೆಜ್ಜೆಗುರುತುಗಳು ಅವರ ಬಳಿ ಇರುವ ಪದಕಗಳ ಸಂಗ್ರಹದಲ್ಲಿ ಸ್ಪಷ್ಟವಾಗುತ್ತದೆ.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅವರು ಮಾಡಿರುವ ಸಾಧನೆ ಬೆರಗು ಮೂಡಿಸುತ್ತದೆ. ಗೆದ್ದ ಪದಕಗಳನ್ನು ಲೆಕ್ಕ ಹಾಕಲು ಕುಳಿತರೆ ಮುಗಿಯಲು ತಾಸುಗಳೇ ಬೇಕು. ಸಣ್ಣ ವಯಸ್ಸಿನಲ್ಲೇ (19 ವರ್ಷ) ಅಂತರರಾಷ್ಟ್ರೀಯ ಮಟ್ಟದಲ್ಲಿ ಪಡಿಯಚ್ಚು ಮೂಡಿಸಿರುವ ದಾಮಿನಿ ವೈಯಕ್ತಿಕ ಬದುಕಿನಲ್ಲಿ ಅಪ್ಪಟ ದೇಸಿ ಹೆಣ್ಣು.

ರಾಜ್ಯದ ಬಗ್ಗೆ ಮತ್ತು ದೇಶದ ಬಗ್ಗೆ ಮಾತನಾಡುವಾಗ ಅವರ ಮಾತು ಸವಿನುಡಿಯಾಗುತ್ತದೆ; ಸಿಹಿಗನ್ನಡವಾಗುತ್ತದೆ. ಆಹಾರದ ವಿಷಯದಲ್ಲೂ ಅಷ್ಟೇ, ಅವರ ಟೇಸ್ಟ್‌ ಇರುವುದು ದೇಸಿ ರೆಸಿಪಿಯಲ್ಲಿ. ಆರೋಗ್ಯಕ್ಕೆ ಉತ್ತಮವೆನಿಸುವ ಅಭ್ಯಾಸಗಳನ್ನು ಬೆಳೆಸಿಕೊಂಡರೆ ನಮಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು ಎಂಬುದು ಅವರ ಬದುಕಿನ ತತ್ವ.

ADVERTISEMENT

2006ರಲ್ಲಿ ಈಜುಕೊಳಕ್ಕೆ ಇಳಿದ ದಾಮಿನಿ ನಂತರ ಪಾಲ್ಗೊಂಡಿರುವ ಕೂಟಗಳು ಹತ್ತಾರು; ಗೆದ್ದ ಪದಕಗಳು ನೂರಾರು. ಬಟರ್‌ಫ್ಲೈ ಮತ್ತು ಫ್ರೀಸ್ಟೈಲ್‌ ಅವರ ಅಚ್ಚುಮೆಚ್ಚಿನ ವಿಭಾಗಗಳು. ಆದರೂ ಬಟರ್‌ಫ್ಲೈ ಹೆಚ್ಚು ಆಪ್ತ. 2016ರಲ್ಲಿ ಏಷ್ಯಾ ಈಜು ಚಾಂಪಿಯನ್‌ಷಿಪ್‌ ಮತ್ತು ದಕ್ಷಿಣ ಏಷ್ಯಾ ಕ್ರೀಡಾಕೂಟ ಸೇರಿದಂತೆ ರಾಷ್ಟ್ರೀಯ –ಅಂತರರಾಷ್ಟ್ರೀಯ ಮಟ್ಟದ ವಿವಿಧ ಸ್ಪರ್ಧೆಗಳ ಬಟರ್‌ಫ್ಲೈ ವಿಭಾಗಗಳಲ್ಲಿ ಅವರು ಗೆದ್ದ ಚಿನ್ನದ ಪದಕಗಳ ಸಂಖ್ಯೆ 10! ಗುವಾಹಟಿಯಲ್ಲಿ ನಡೆದಿದ್ದ ದಕ್ಷಿಣ ಏಷ್ಯಾ ಕ್ರೀಡಾಕೂಟದ ಈಜಿನಲ್ಲಿ ಮೂರು ದಾಖಲೆಗಳನ್ನು ಅವರು ಮುರಿದಿದ್ದರು.

ಸೋಲೊಪ್ಪದ ಛಲಗಾರ್ತಿ

‘ಪ್ರತಿಯೊಂದು ಸ್ಪರ್ಧೆಯ ಸಂದರ್ಭದಲ್ಲೂ ನನ್ನ ಅಮ್ಮ ತುಂಬ ಟೆನ್ಷನ್‌ನಲ್ಲಿರುತ್ತಾರೆ. ನಾನು ಸೋಲುತ್ತೇನೆ ಎಂಬುದು ಅವರ ಆತಂಕಕ್ಕೆ ಕಾರಣ. ಆದರೆ ನಾನಂತೂ ಸೋಲೊಪ್ಪಿಕೊಳ್ಳಲು ಸಿದ್ಧವಿಲ್ಲ. ಗೆದ್ದು ಬಂದು ಅವರನ್ನು ಸಮಾಧಾನಪಡಿಸುತ್ತೇನೆ’ ಎಂದು ದಾಮಿನಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಎಂಬಿಬಿಎಸ್‌ ಓದುತ್ತಿರುವ ಈ ಕ್ರೀಡಾಪಟು ಇತ್ತೀಚೆಗೆ ಕಾಣಿಸಿಕೊಂಡಿರುವ ತೋಳು ನೋವಿನ ಸಮಸ್ಯೆಗೂ ಎದೆಗುಂದಲಿಲ್ಲ. ನೋವು ಲೆಕ್ಕಿಸದೆ ಸ್ಪರ್ಧೆಗೆ ಧುಮುಕುವ ಅವರು ಪದಕಗಳನ್ನು ಕೊರಳಿಗೇರಿಸುತ್ತಲೇ ಇದ್ದಾರೆ.

ಇತ್ತೀಚೆಗೆ ನಡೆದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಈಜು ಸ್ಪರ್ಧೆಯಲ್ಲಿ ಗೆದ್ದ ಪದಕಗಳೇ ಅದಕ್ಕೆ ಸಾಕ್ಷಿ. ‘ಇದು ಗಂಭೀರ ಸ್ವರೂಪದ ‘ಗಾಯ’ವಲ್ಲ. ಆದರೆ ಚಿಕಿತ್ಸೆಯಿಂದ ಹೆಚ್ಚು ಪ್ರಯೋಜನ ಆಗಲಿಲ್ಲ. ಆದ್ದರಿಂದ ಇತ್ತೀಚೆಗೆ ಸಾಮರ್ಥ್ಯದ ಮೇಲೆ ಸ್ವಲ್ಪ ಪರಿಣಾಮ ಆಗಿದೆ. ಆದರೆ ನೋವು ಇದೆ ಎಂದು ಈಜಿನಿಂದ ದೂರ ಉಳಿಯಲು ನನಗೆ ಸಾಧ್ಯವಿಲ್ಲ’ ಎನ್ನುತ್ತಾರೆ ಅವರು.

ಶಿಕ್ಷಣ, ಕ್ರೀಡೆಯನ್ನು ಹೇಗೆ ಒಟ್ಟಿಗೆ ನಿಭಾಯಿಸಿಕೊಂಡು ಹೋದಿರಿ ಮತ್ತು ಹೋಗುತ್ತಿರುವಿರಿ?

ಸಮಯ ನಿರ್ವಹಣೆ ಮುಖ್ಯ. ಅದು ಇಲ್ಲದಿದ್ದರೆ ಏನೂ ಮಾಡಲಾಗದು. ಕ್ರೀಡೆಯಲ್ಲಿ ಅಭ್ಯಾಸ

ಮಾಡುವುದರ ಜೊತೆಯಲ್ಲೇ ಓದಲು ಸಮಯ ತೆಗೆ ದಿರಿಸಿಕೊಳ್ಳಬೇಕು. ಇದನ್ನು ಸಮರ್ಥವಾಗಿ ನಿರ್ವಹಿಸಿದರೆ ಎಲ್ಲವೂ ಸುಸೂತ್ರವಾಗುತ್ತದೆ. ನನಗೆ ಪೋಷಕರಿಂದ ಸಾಕಷ್ಟು ಪ್ರೋತ್ಸಾಹ ಸಿಗುತ್ತಿರುವುದರಿಂದ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ.

ಮೊದಲ ಬಾರಿ ರಾಜೀವಗಾಂಧಿ ವಿಶ್ವವಿದ್ಯಾಲಯದ ಪರವಾಗಿ ಸ್ಪರ್ಧೆಗೆ ಧುಮುಕಿದ್ದೀರಿ? ಹೇಗಿದೆ ಹೊಸ ಅನುಭವ?

ರಾಜೀವಗಾಂಧಿ ವಿಶ್ವವಿದ್ಯಾಲಯದವರಿಗೆ ನಾನು ಅಭಾರಿಯಾಗಿದ್ದೇನೆ. ಈ ವಿಶ್ವವಿದ್ಯಾಲಯದಲ್ಲಿ ಕ್ರೀಡೆಗೆ ಸಿಗುತ್ತಿರುವ ಪ್ರೋತ್ಸಾಹವನ್ನು ಮೆಚ್ಚಲೇ ಬೇಕು.

ಇತ್ತೀಚಿನ ನೀವು ಮಾಡಿರುವ ಸಾಧನೆಗಳ ಬಗ್ಗೆ ಏನು ಹೇಳಲು ಇಷ್ಟಪಡುತ್ತೀರಿ? ನಿಮ್ಮ ಸಾಮರ್ಥ್ಯವನ್ನು ಹೇಗೆ ವಿಶ್ಲೇಷಿಸುತ್ತೀರಿ?

ಭುಜದ ನೋವಿನಿಂದ ಸ್ವಲ್ಪ ತೊಂದರೆಯಾಗಿದೆ. ಆದರೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರುವುದು ಖುಷಿ ನೀಡಿದೆ. ಗೆದ್ದ ಪದಕಗಳ ಬಗ್ಗೆ ತುಂಬ ತೃಪ್ತಿ ಇದೆ.

ದಾಖಲೆಗಳನ್ನು ಮುರಿದಾಗ ಏನನಿಸುತ್ತದೆ? ಸಾಧನೆಗೆ ಫಲ ಸಿಕ್ಕಿತು ಅನಿಸುತ್ತದೆಯೇ?

ದಾಖಲೆಗಳನ್ನು ಮುರಿದಾಗ ಮತ್ತು ಮಹತ್ವದ ಕೂಟಗಳಲ್ಲಿ ಪದಕಗಳನ್ನು ಗೆದ್ದಾಗ ತುಂಬ ಸಂಭ್ರಮಿಸುತ್ತೇನೆ. ಇಷ್ಟು ವರ್ಷ ಹಾಕಿದ ಶ್ರಮಕ್ಕೆ ಫಲ ಸಿಕ್ಕಿತು ಎಂಬ ಭಾವನೆ ಮೂಡುತ್ತದೆ.

ನೀವು ಪಾಲ್ಗೊಳ್ಳುವ ಮುಂದಿನ ಮಹತ್ವದ ಕೂಟ ಯಾವುದು? ಭವಿಷ್ಯದ ಗುರಿ ಏನು?

ನಿರ್ಧಾರ ಮಾಡಿದ ಗುರಿ ಯಾವುದೂ ಇಲ್ಲ. ಎಷ್ಟು ವರ್ಷ ಸಾಧ್ಯವಾಗುತ್ತದೆಯೋ ಅಷ್ಟು ವರ್ಷ ಈಜಿನಲ್ಲಿ ಮುಂದುವರಿಯಬೇಕು. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಜೊತೆಗೆ ಓದನ್ನೂ ಮುಂದುವರಿಸಬೇಕು.

ಫಿಟ್‌ನೆಸ್‌ ಕಾಪಾಡಿಕೊಳ್ಳಲು ಏನು ಮಾಡುತ್ತೀರಿ? ನಿಮ್ಮ ಡಯಟಿಷಿಯನ್ ಯಾರು?

ಫಿಟ್‌ನೆಸ್ ಉಳಿಸಿಕೊಂಡಿದ್ದೇನೆ. ನನಗೆ ಯಾರೂ ಡಯಟಿಷಿಯನ್ ಇಲ್ಲ. ಎಲ್ಲವೂ ಅಮ್ಮನ ಮೇಲ್ನೋಟದಲ್ಲೇ ನಡೆಯುತ್ತದೆ. ಮನೆ ಆಹಾರ ಅಚ್ಚು ಮೆಚ್ಚು. ಹೊರಗಡೆ ಹೆಚ್ಚೇನೂ ತಿನ್ನುವುದನ್ನು ರೂಢಸಿಕೊಳ್ಳಲಿಲ್ಲ.

ಯಾವ ಆಹಾರ ಹೆಚ್ಚು ಇಷ್ಟಡುತ್ತೀರಾ?

ರಾಗಿ ಬಳಸಿ ಮಾಡಿದ ಆಹಾರವನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತೇನೆ. ವಾರದಲ್ಲಿ ನಾಲ್ಕು ದಿನ ಮಾಂಸಾಹಾರ ತಿನ್ನುತ್ತೇನೆ. ಆದರೆ ಅದರ ಜೊತೆಯಲ್ಲಿ ಸಸ್ಯಾಹಾರ ವಿಶೇಷವಾಗಿ ಸೊಪ್ಪು ಪದಾರ್ಥಗಳನ್ನು ತಪ್ಪದೆ ಸೇವಿಸುತ್ತೇನೆ.

ಮಾಂಸಾಹಾರದಲ್ಲಿ ಯಾವುದು ಹೆಚ್ಚು ತೆಗೆದುಕೊಳ್ಳುತ್ತೀರಾ?

ಸಮುದ್ರದ ಮೀನು ನನಗೆ ಇಷ್ಟ. ಮಾಂಸಾಹಾರ ಎಂದರೆ ನನ್ನ ಆಯ್ಕೆ ಅದುವೇ. ಚಿಕನ್ ಕೂಡ ತಿನ್ನುತ್ತೇನೆ. ಆದರೆ ಮಿತಿ ಮೀರುವುದಿಲ್ಲ. ಮಟನ್‌ ತಿನ್ನುವುದೇ ಇಲ್ಲ.

ಕ್ರೀಡಾಪಟುಗಳು ಕಟ್ಟುನಿಟ್ಟಾಗಿ ಡಯಟ್‌ ಪಾಲಿಸುತ್ತಿದ್ದರೂ ಕ್ರೀಡಾಕೂಟಗಳು ಇಲ್ಲದಿದ್ದಾಗ ಮತ್ತು ಸಂದರ್ಭ ಬಂದಾಗಲೆಲ್ಲ ಜಂಕ್ ಫುಡ್ ತಿನ್ನಲು ಇಷ್ಟಪಡುತ್ತಾರೆ. ಅಂಥವರಿಗೆ ನಿನ್ನ ಸಲಹೆ ಏನು?

ಜಂಕ್ ಫುಡ್ ತಿನ್ನಬಾರದು ಎಂದಲ್ಲ. ಆದರೆ ಸ್ವಯಂ ನಿಯಂತ್ರಣ ಇರಬೇಕು. ನಾನು ಕೂಡ ಜಂಕ್ ಫುಡ್ ತಿನ್ನುತ್ತೇನೆ, ಆದರೆ ಅದಕ್ಕೆ ಮಿತಿ ಹಾಕಿಕೊಂಡಿದ್ದೇನೆ, ಆಹಾರವೆಂದರೆ ಜಂಕ್‌ ಫುಡ್‌ ಎಂಬ ಭಾವನೆ ಇರಿಸಿಕೊಳ್ಳಬಾರದು; ಅದು ರೂಢಿಯಾಗಬಾರದು.

ರಾಜ್ಯದ ಮತ್ತು ಹೊರನಾಡಿನ ನಿಮ್ಮ ಪ್ರತಿಸ್ಪರ್ಧಿಗಳ ಬಗ್ಗೆ ಏನು ಹೇಳುಲು ಬಯಸುತ್ತೀರಾ? ಭಾರತದ ಈಜು ಕ್ರೀಡೆಯ ಕುರಿತು ನಿಮ್ಮ ಅಭಿಪ್ರಾಯವೇನು?

ಭಾರತದಲ್ಲಿ ಪುರುಷರ ಈಜು ತುಂಬ ಮುಂದುವರಿದಿದೆ. ಬಾಲಕಿಯರ ಮತ್ತು ಮಹಿಳಾ ವಿಭಾಗದಲ್ಲಿ ಇನ್ನಷ್ಟು ಉತ್ತಮ ಬೆಳವಣಿಗೆ ಆಗಬೇಕಿದೆ. ಸಾಧನೆ ಮಾಡು ತ್ತಿರುವವ ಕೆಲವೇ ಕೆಲವು ಮಂದಿ ಎಷ್ಟು ವರ್ಷ ಮುಂದುವರಿಯುತ್ತಾರೆ ಎಂಬುದರ ಮೇಲೆ ಈಜಿನ ಭವಿಷ್ಯ ನಿಂತಿದೆ.

ಓದಿನ ಉದ್ದೇಶಕ್ಕಾಗಿ ವಿದೇಶಕ್ಕೆ, ಹೆಚ್ಚಾಗಿ ಅಮೆರಿಕಕ್ಕೆ ಹೋಗುವ ಈಜುಪಟುಗಳ ಸಂಖ್ಯೆ ಹೆಚ್ಚಿದೆ. ಅಂಥವರನ್ನು ಇಲ್ಲೇ ಇರಿಸಿ, ನಮ್ಮಲ್ಲೇ ಸಾಧನೆ ಮಾಡುವಂತೆ ಪ್ರೇರೇಪಿಸಲು ಏನು ಮಾಡಬಹುದು?

ವಿದೇಶಕ್ಕೆ ಹೋಗಿ ತರಬೇತಿ ಪಡೆದರೆ ದೇಶಕ್ಕೇ ಒಳ್ಳೆಯದು. ಆದರೆ ಅವರು ವಾಪಸ್‌ ಬಂದು ಇಲ್ಲೇ ಸಾಧನೆ ಮಾಡಲು ಮುಂದಾಗಬೇಕು. ದೇಶಕ್ಕಾಗಿ ಸ್ಪರ್ಧಿಸಲು ಮನಸ್ಸು ಮಾಡಬೇಕು.

ಅಮ್ಮ–ಅಪ್ಪನ ಬಗ್ಗೆ ಏನು ಹೇಳುತ್ತೀರಾ? ಕುಟುಂಬದ ಇತರ ಸದಸ್ಯರು ಹೇಗೆ ಇದ್ದಾರೆ?

ಅಪ್ಪ–ಅಮ್ಮನೇ ನನಗೆ ಎಲ್ಲವೂ. ಈ ವರೆಗಿನ ಸಾಧನೆಗಳಿಗೆಲ್ಲ ಅವರೇ ಕಾರಣ. ಕುಟುಂಬದ ಇತ ರರಿಂದಲೂ ಬೆಂಬಲ, ಸಹಕಾರ ಸಿಗುತ್ತಿದೆ. ಆದ್ದರಿಂದ ಏನೇ ತೊಂದರೆ ಇಲ್ಲದೆ ಮುಂದುವರಿಯುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.