ADVERTISEMENT

ಕ್ಷೇಮ–ಕುಶಲ: ತಲೆಹೊಟ್ಟಿನ ಗುಟ್ಟು ರಟ್ಟು

ಡಾ.ವಿಜಯಲಕ್ಷ್ಮಿ ಪಿ.
Published 9 ಫೆಬ್ರುವರಿ 2026, 23:30 IST
Last Updated 9 ಫೆಬ್ರುವರಿ 2026, 23:30 IST
   

ತಲೆಹೊಟ್ಟು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ತಲೆಯ ಚರ್ಮದ ಸಿಪ್ಪೆ ಸುಲಿಯುವಿಕೆಯಿಂದ ಗುರುತಿಸಲ್ಪಡುತ್ತದೆ. ಇದು ಹೆಚ್ಚಾಗಿ ನೆತ್ತಿಯ ಮೇಲಿನ ಚರ್ಮದ ಕೋಶಗಳ ಉದುರುವಿಕೆಯಿಂದ ಉಂಟಾಗುತ್ತದೆ. ಕೂದಲು ಮತ್ತು ಬಟ್ಟೆಗಳ ಮೇಲೆ ಬಿಳಿ ಅಥವಾ ಬೂದು ಬಣ್ಣದ ಪದರಗಳು ಅಥವಾ ಪುಡಿಗಳ ಉದುರುವಿಕೆಯಿಂದ ಈ ತಲೆಹೊಟ್ಟಿನ ಸಮಸ್ಯೆಯನ್ನು ಗುರುತಿಸಬಹುದು.  ತಲೆಯಲ್ಲಿ ಅತಿಯಾದ ನವೆಯ ಸಮಸ್ಯೆ ಇದ್ದು, ತಲೆಯ ಕೇಶಭೂಮಿ ಒರಟಾಗಿ, ಒಡೆಯುತ್ತದೆ. ಕೆಲವೊಮ್ಮೆ ಕೂದಲು ಉದುರಲೂ
ಕಾರಣವಾಗುತ್ತದೆ. ತಲೆಹೊಟ್ಟು ಕೆಲವೊಮ್ಮೆ ಕಫ, ವಾತಗಳ ವಿಕೃತಿಯಿಂದಲೂ, ಕೆಲವೊಮ್ಮೆ ರಕ್ತಪಿತ್ತಗಳ ವಿಕೃತಿಯಿಂದಲೂ ಉತ್ಪನ್ನವಾಗುತ್ತದೆ.

ಆಗಾಗ ಕಾಡುವ ಕೆಮ್ಮು, ದಮ್ಮು, ನೆಗಡಿಗಳಿಗೆ ಸರಿಯಾದ ಚಿಕಿತ್ಸೆ ಮಾಡದಿರುವುದರಿಂದ, ಇವುಗಳ ಉತ್ಪತ್ತಿಗೆ ಕಾರಣವಾದ ದೋಷಗಳು, ಕಾಲಾಂತರದಲ್ಲಿ ತಲೆಯ ಚರ್ಮದಲ್ಲಿ ಆಶ್ರಯ ಪಡೆದು, ಹೊಟ್ಟನ್ನು ಉತ್ಪತ್ತಿ ಮಾಡುತ್ತವೆ. ಕಫವು ಹೆಚ್ಚಿರುವ ಸಂದರ್ಭಗಳಲ್ಲಿ ತಲೆಯಲ್ಲಿ ಅಧಿಕವಾದ ಜಿಡ್ಡು ಉಂಟಾಗುತ್ತದೆ. ಹಾಗೆ ಆದಾಗ ಕೂದಲಿನ ಬುಡದ ಗ್ರಂಥಿಗಳಿಂದ ಸ್ರವಿಸುವ ಎಣ್ಣೆಯ ಪ್ರಮಾಣ ಹೆಚ್ಚಾಗಿ, ಶಿಲೀಂಧ್ರಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಈ ಶಿಲೀಂಧ್ರಗಳು ಸ್ರವಿಸುವ ಜಿಡ್ಡನ್ನೇ ತಿಂದು ಬೆಳೆದು ತಲೆಯ ಚರ್ಮವನ್ನು ಒಡೆದು ನವೆ ಉಂಟು ಮಾಡುತ್ತವೆ.

ವಾಯುವಿನ ವಿಕೃತಿಯಿಂದ ಉತ್ಪನ್ನವಾಗುವ ನೆಗಡಿ, ತಲೆನೋವು, ಕಿವಿನೋವು, ಒಣಕೆಮ್ಮಿಗೆ ಸರಿಯಾದ ಸಂಪೂರ್ಣ ಚಿಕಿತ್ಸೆ ಆಗದಿದ್ದರೆ, ಅತಿ ಬಿಸಿನೀರಿನಿಂದ ಸ್ನಾನ ಮಾಡಿದರೆ, ಅತಿ ತಂಪಾದ ವಾತಾವರಣದಲ್ಲಿದ್ದರೆ, ತೀಕ್ಷ್ಣವಾದ ರಾಸಾಯನಿಕಗಳಿಂದ ತಯಾರಿಸಿದ ಶ್ಯಾಂಪೂ ಮತ್ತು ಇತರ ಕೇಶಸಾಧನಗಳನ್ನು ಬಳಸಿದರೆ ತಲೆಯ ಚರ್ಮವು ಒಣಗಿದಂತಾಗಿ, ಪುಡಿಯ ರೂಪದಲ್ಲಿ ಉದುರುತ್ತದೆ. ಇದು ಹೆಚ್ಚಾದರೆ ಕೂದಲಿನ ಬುಡದಲ್ಲಿ ನೋವು ಉಂಟಾಗುತ್ತದೆ.

ADVERTISEMENT

ಕೆಲವೊಮ್ಮೆ ತಲೆಹೊಟ್ಟು ವಿವಿಧ ಚರ್ಮರೋಗಗಳಾದ, ಸೋರಿಯಾಸಿಸ್, ಎಕ್ಝೀಮಾ, ಡರ್ಮಟೈಟಿಸ್ ರೋಗಗಳ ಲಕ್ಷಣವಾಗಿರುತ್ತದೆ. ಆಗ ವೈದ್ಯರ ಸೂಕ್ತ ಸಲಹೆಯಂತೆ ಸರಿಯಾದ ಚಿಕಿತ್ಸೆಯನ್ನು, ಸಂಪೂರ್ಣವಾಗಿ ತೆಗೆದುಕೊಳ್ಳಬೇಕು. ಇದನ್ನು ಗಮನಿಸದೆ, ಉದಾಸೀನ ಮಾಡಿದಲ್ಲಿ, ಇದು ಮಹಾವ್ಯಾಧಿಯಾಗಿ ತೊಂದರೆ ಉಂಟುಮಾಡಬಹುದು.

ಅತಿಯಾಗಿ ಕ್ಷಾರೀಯ ಪದಾರ್ಥಗಳನ್ನು, ಕ್ಷಾರೀಯ ದ್ರವಗಳನ್ನು ಸೇವಿಸುವುದರಿಂದ, ಅತಿಯಾದ ಮದ್ಯಪಾನ, ವಿರುದ್ಧಾಹಾರಗಳ ಸೇವನೆ, ಅತಿಯಾದ ಉಪವಾಸ, ವಿಪರೀತ ಮಸಾಲೆ, ಖಾರ, ಕರಿದ ಪದಾರ್ಥಗಳ ಸೇವನೆಯಿಂದ, ಮಾನಸಿಕ ಒತ್ತಡ, ಅತಿಯಾದ ಸಿಟ್ಟು, ದ್ವೇಷಗಳು ರಕ್ತ ಮತ್ತು ಪಿತ್ತಗಳಲ್ಲಿ ದೋಷ ಉಂಟು ಮಾಡಿ, ತಲೆಹೊಟ್ಟು ಉತ್ಪತ್ತಿಯಾಗುವಂತೆ ಮಾಡುತ್ತವೆ.

ಈ ತಲೆಹೊಟ್ಟು ಉಂಟುಮಾಡುವ ಶಿಲೀಂಧ್ರಗಳು ತಲೆಯ ಚರ್ಮಭಾಗದಲ್ಲಿ ಆಶ್ರಯ ಪಡೆಯುವುದರಿಂದ ಚರ್ಮ ಕೆಂಪಾಗುವುದು, ತುರಿಕೆ ಮತ್ತು ಸಿಪ್ಪೆ ಸುಲಿಯುವುದು, ಸಣ್ಣ ಗುಳ್ಳೆಗಳೇಳುವಂಥ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಆದಷ್ಟು ತಲೆಹೊಟ್ಟಿಗೆ ಕಾರಣವಾಗುವ ಅಂಶಗಳಿಂದ ದೂರವಿರಬೇಕು. ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕು. ರಕ್ತ ಮತ್ತು ಪಿತ್ತ ದೋಷಗಳಿಗೆ ಸೂಕ್ತ ಚಿಕಿತ್ಸೆಯನ್ನು ವೈದ್ಯರ ಸಲಹೆಯಂತೆ ಪಡೆಯಬೇಕು. ಪೋಷಕಾಂಶಗಳ ಕೊರತೆಯಿಂದ ತಲೆಹೊಟ್ಟಿನ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಆಹಾರದಲ್ಲಿ ವಿಶೇಷವಾಗಿ ಸತು, ‘ಬಿ’ ಜೀವಸತ್ವಗಳು, ಕೊಬ್ಬು, ಕ್ಯಾಲ್ಸಿಯಂ ಇರುವಂತೆ ನೋಡಿಕೊಳ್ಳಬೇಕು. ಆಗ ಕೂದಲಿನ ಬುಡಕ್ಕೆ ಬೇಕಾದ ಪೋಷಣೆಯನ್ನು ಈ ಜೀವಸತ್ವಗಳು ಮಾಡುತ್ತವೆ. ಅಷ್ಟೆ ಅಲ್ಲದೇ, ಸಕಾಲದಲ್ಲಿ, ಪೋಷಕಾಂಶಯುಕ್ತವಾದ ಆಹಾರಸೇವನೆ ಮಾಡುವುದರಿಂದಲೂ ತಲೆಹೊಟ್ಟಿನ ತೊಂದರೆ ನಿವಾರಣೆಯಾಗುತ್ತದೆ.

ಅತಿಯಾದ ಮಾನಸಿಕ ಒತ್ತಡ, ರಾತ್ರಿ ಜಾಗರಣೆ, ಹಗಲು ಅತಿಯಾದ ನಿದ್ರೆ, ರಾತ್ರಿ ತಡವಾಗಿ ಮಲಗುವುದು.. ಇವು ನೇರ ಕಾರಣವಲ್ಲದಿದ್ದರೂ, ಈಗಾಗಲೇ ಇರುವ ತಲೆಹೊಟ್ಟಿನ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು ಅಥವಾ ಚರ್ಮರೋಗಕ್ಕೆ ಕಾರಣವಾಗಬಹುದು.

ಪ್ರೌಢಾವಸ್ಥೆಯಲ್ಲಿ ಅಥವಾ ಕೆಲವು ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ಹಾರ್ಮೋನುಗಳಲ್ಲಿ ಉಂಟಾಗುವ ಏರಿಳಿತಗಳು ತಲೆ ಬುಡದಲ್ಲಿ ಎಣ್ಣೆಯ ಉತ್ಪಾದನೆಯನ್ನು ಹೆಚ್ಚಿಸಬಹುದು. ಇದರ ಬಗ್ಗೆಯೂ ಗಮನ ಹರಿಸುವುದು ಒಳಿತು. ಕೆಲವರಿಗೆ ಆನುವಂಶೀಯವಾಗಿ ಹೆಚ್ಚು ಎಣ್ಣೆಯುಕ್ತ ನೆತ್ತಿ ಅಥವಾ ಒಣಚರ್ಮದ ನೆತ್ತಿ ಇರುತ್ತದೆ. ಅಂತಹವರಿಗೆ ಸಹಜವಾಗಿ ತಲೆಹೊಟ್ಟು ಬರುವ ಸಾಧ್ಯತೆ ಹೆಚ್ಚು. ಇದನ್ನು ನಿತ್ಯಾಭ್ಯಂಗದಿಂದ ತಡೆಗಟ್ಟಬಹುದು.

ಎಳ್ಳೆಣ್ಣೆಗೆ ಸಾಸಿವೆ, ಜೀರಿಗೆ ಮತ್ತು ಓಮ ಕಾಳನ್ನು ಹಾಕಿ ಒಗ್ಗರಣೆ ಮಾಡಿ, ಆ ಎಣ್ಣೆಯನ್ನು ನಿತ್ಯವೂ ತಲೆಗೆ ಹಚ್ಚುವುದರಿಂದ ತಲೆ ಹೊಟ್ಟು ಬರುವುದನ್ನು ತಡೆಗಟ್ಟಬಹುದು.

ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಂಡರೆ ಅದಕ್ಕೆ ಪ್ರಾರಂಭದಲ್ಲಿಯೇ ಚಿಕಿತ್ಸೆ ಮಾಡದಿದ್ದರೆ ಕೂದಲು ಉದುರುವುದು, ಮೊಡವೆ ಮುಂತಾದ ಸಮಸ್ಯೆಗಳು ಕಂಡುಬರಬಹುದು.

ತಲೆಗೆ ಎಣ್ಣೆ ಹಚ್ಚದೆ ಇರುವುದೂ ತಲೆಹೊಟ್ಟಿನ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಆಯುರ್ವೇದವು ಎಲ್ಲರಿಗೂ ನಿತ್ಯಾಭ್ಯಂಗವನ್ನೇ ವಿಧಿಸುತ್ತದೆ.

ಸಮಯಾಭಾವವಿದ್ದಾಗ ಕಡೇಪಕ್ಷ ತಲೆ, ಕಿವಿ, ಅಂಗಾಲಿಗಾದರೂ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ತಲೆಹೊಟ್ಟು ನಿವಾರಣೆಗೆ ಹೀಗೆ ಮಾಡಿ..

* ತಲೆಹೊಟ್ಟು ನಿವಾರಣೆಯಲ್ಲಿ ಮೊಸರು ಮಹತ್ವದ ಪಾತ್ರವಹಿಸುತ್ತದೆ. ಆದ್ದರಿಂದ 15 ದಿನಕ್ಕೊಮ್ಮೆ ತಲೆಗೆ ಮೊಸರನ್ನು ಹಚ್ಚಿ ಒಂದು ಗಂಟೆ ಬಿಟ್ಟು ತಲೆಸ್ನಾನ ಮಾಡಿ. ಇದರಿಂದ ಹೊಟ್ಟು ನಿವಾರಣೆಯಾಗುವುದಷ್ಟೇ ಅಲ್ಲ, ಕೂದಲೂ ಕಾಂತಿಯುತವಾಗುತ್ತದೆ.

* ಮೆಂತ್ಯವನ್ನು ರಾತ್ರಿ ನೆನೆಸಿಟ್ಟು, ಬೆಳಿಗ್ಗೆ ಅದನ್ನು ರುಬ್ಬಿ ತಲೆಗೆ ಹಚ್ಚಿಕೊಂಡು ಎರಡು ಗಂಟೆ ಕಾಲ ಬಿಟ್ಟು ನಂತರ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

* ಮನಸ್ಸು ಒತ್ತಡದಿಂದ ಇರದಂತೆ ನೋಡಿಕೊಳ್ಳಿ. ದಿನವೂ ಯೋಗಾಸನ, ಧ್ಯಾನ, ಪ್ರಾಣಾಯಾಮಗಳನ್ನು ಮಾಡುವುದು ಒಳ್ಳೆಯದು.

* ತಲೆಗೆ ಸ್ನಾನ ಮಾಡಿದ ನಂತರ ತಲೆಯನ್ನು ಚೆನ್ನಾಗಿ ಒಣಗಿಸಿ ಹೊರಕ್ಕೆ ಹೋಗುವುದು ಒಳ್ಳೆಯದು. ಒದ್ದೆ ಕೂದಲಿಗೆ ದೂಳು ಸೇರುವುದೂ ತಲೆಹೊಟ್ಟಿಗೆ ಕಾರಣವಾಗುತ್ತದೆ.

* ಹೆಚ್ಚು ರಾಸಾಯನಿಕಗಳಿಂದ ಕೂಡಿದ ಶ್ಯಾಂಪೂಗಳು, ಕೃತಕ ಬಣ್ಣಗಳು, ಕೃತಕ ಸಾಧನಗಳನ್ನು ಬಳಸಿ ಮಾಡುವ ಕೇಶವಿನ್ಯಾಸಗಳು, ತಲೆಯ, ಕೂದಲಿನ ಮತ್ತು ನರಗಳ ಆರೋಗ್ಯವನ್ನು ಹಾಳು ಮಾಡುತ್ತವೆ; ಚರ್ಮಕ್ಕೂ ಹಾನಿಕಾರಕ. ಅವುಗಳಿಂದ ದೂರವಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.