ADVERTISEMENT

PV Web Exclusive | ದೀವಳಿಗೆಯ ಖಾದ್ಯ

ಸುಮಾ ಬಿ.
Published 14 ನವೆಂಬರ್ 2020, 4:20 IST
Last Updated 14 ನವೆಂಬರ್ 2020, 4:20 IST
ಹಾಲುಗರಿಗೆ
ಹಾಲುಗರಿಗೆ   

ಒಲೆಯಲ್ಲಿ ಬೆಲ್ಲದ ನೀರಿಟ್ಟು ‘ಬಳ್ಳಿ’ ಹೊಸೆಯಲು ಶುರುಮಾಡುತ್ತಿದ್ದಂತೆ, ಮತ್ತೊಂದು ಒಲೆ ಮೇಲಿದ್ದ ಬೇಳೆ ಉಕ್ಕಿ ಬರುತ್ತದೆ. ಬೇಳೆಗೆ ಬೆಲ್ಲ ಹಾಕಿ ಕೈಯಾಡುತ್ತಿದ್ದಂತೆ ಪಕ್ಕದ ಒಲೆಯಲ್ಲಿದ್ದ ಬೆಲ್ಲದ ಹೆಸರು ಕುದಿ ಬಂದಿರುತ್ತದೆ. ಇನ್ನೂ ಬಳ್ಳಿ ಹೊಸೆದೇ ಇಲ್ಲ. ಧಾವಂತದಿಂದ ಬಳ್ಳಿ ಹೊಸೆಯುತ್ತಿರುವಷ್ಟರಲ್ಲೇ ಪೂಜೆ ಮಾಡಲು ಮನೆ ಯಜಮಾನನ ಕರೆ ಬರುತ್ತದೆ. ಅಷ್ಟರಲ್ಲಾಗಲೇ ಗ್ಯಾಸ್‌ ಮೇಲಿಟ್ಟಿದ್ದ ‘ಅಕ್ಕಿ ಹುಗ್ಗಿ’ಯ ಕುಕ್ಕರ್‌ ವಿಶಿಲ್‌ ಹಾಕುತ್ತದೆ. ಪಕ್ಕಕ್ಕೆ ಇಟ್ಟಿದ್ದ ಬದನೆಕಾಯಿ ಪಲ್ಯ ಬೇಯುವುದನ್ನೇ ಕಾಯುತ್ತಿದ್ದ ಉಪ್ಪಿಟ್ಟಿನ ಪಾತ್ರೆ, ಕೆಳಗಿಳಿಸಿದ ಮೇಲೆ ಆ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತದೆ. ಇನ್ನು ಹೋಳಿಗೆಯ ಹೆಂಚು, ಸಾಂಬಾರಿನ ಪಾತ್ರೆ, ದೋಸೆ ಕಾವಲಿ ತಮ್ಮ ಪಾಳಿಯನ್ನು ಕಾಯುತ್ತಿರುತ್ತವೆ.

ದೀಪಾವಳಿ ಹಬ್ಬದ ದಿನಗಳಲ್ಲಿ ಬೆಳ್ಳಂಬೆಳಿಗ್ಗೆ ಮಲೆನಾಡಿನ ಗ್ರಾಮೀಣ ಮನೆಗಳ ಅಡುಗೆ ಕೋಣೆಯನ್ನು ಹೊಕ್ಕರೆ ಈ ದೃಶ್ಯ ಕಣ್ಣು ಕಟ್ಟುತ್ತದೆ.

ಹಬ್ಬದ ಆಚರಣೆ ಜತೆ ಜತೆಗೇ ದೇವರಿಗೆ ನೈವೇದ್ಯಕ್ಕಾಗಿ, ಮನೆಯವರೆಲ್ಲ ಸೇರಿ ಸವಿಯಲು ಸಂಪ್ರದಾಯಿಕ ಅಡುಗೆಗಳು ತಯಾರಾಗುತ್ತವೆ. ನಗರ ಪ್ರದೇಶದ ಅಡುಗೆ ಮನೆಗಳಲ್ಲಿ ಬಹುತೇಕ ಸಾಂಪ್ರದಾಯಿಕ ಖಾದ್ಯಗಳು ತೆರೆಮರೆಗೆ ಸರಿದರೂ ಗ್ರಾಮೀಣ ಅಡುಗೆ ಮನೆಗಳು ತಮ್ಮ ಗತ ವೈಭವವನ್ನು ಉಳಿಸಿಕೊಂಡು ಸಾಗುತ್ತಿವೆ. ದೀಪಾವಳಿ ಹಬ್ಬದಲ್ಲಿ ಅಡುಗೆ ಖಾದ್ಯಗಳಿಗಿಂತ ಆಚರಣೆಗಳೇ ಹೆಚ್ಚು. ಬೀಸುವ ಕಲ್ಲಿಂದ ಹಿಡಿದು ದನದ ಸಗಣಿಯನ್ನು ಸಂಗ್ರಹಿಸುವ ತಿಪ್ಪೆವರೆಗೆ ಎಲ್ಲಕ್ಕೂ ಪೂಜೆಯ ಭಾಗ್ಯ. ಬರೀ ಪೂಜೆಯಲ್ಲ ವಿವಿಧ ಖಾದ್ಯಗಳ ನೈವೇದ್ಯವೂ ನೆರವೇರುತ್ತದೆ. ನೈವೇದ್ಯಕ್ಕೆ ಸಾಂಪ್ರದಾಯಿಕ ಅಡುಗೆಗಳ ಹಾಜರಿ ಇರಲೇಬೇಕಲ್ಲ.

ADVERTISEMENT

ಹಬ್ಬದ ಹೊಸ್ತಿಲಲ್ಲೇ ಬರುವ ‘ಬೂರೆ ಹಬ್ಬ’ದಿಂದ (ಅಂಭ್ಯಂಜನ ಸ್ನಾನ) ಹಿಡಿದು ವರ್ಷದ ತೊಡಕಿನವರೆಗೂ ಸಾಂಪ್ರದಾಯಿಕ ಅಡುಗೆಗಳು ಪಾಕ ಪ್ರಿಯರ ಉದರ ತಣಿಸುತ್ತವೆ. ಮಾಗಿ ಚಳಿಯ ವಾತಾವರಣಕ್ಕೆ ಪೂರಕವಾಗಿ ದೇಹಕ್ಕೆ ಹೊಂದುವಂತಹ ಖಾದ್ಯಗಳನ್ನು ಪೂರ್ವಿಕರು ರೂಪಿಸಿರುವುದು ವಿಸ್ಮಯವೇ ಸರಿ.

ಅಭ್ಯಂಜನ ಸ್ನಾನದ ದಿನ ಮಧ್ಯ ಕರ್ನಾಟಕದ ಬಹುತೇಕ ಮನೆಗಳಲ್ಲಿ ಶಾವಿಗೆ ಪಾಯಸ ತಯಾರಾಗುತ್ತದೆ. ಹಾಲು, ತುಪ್ಪ, ದ್ರಾಕ್ಷಿ, ಗೋಡಂಬಿಗಳಿಂದ ತಯಾರಾಗುವ ಈ ಪಾಯಸ ಚಳಿಗಾಲಕ್ಕೆ ದೇಹಕ್ಕೆ ಅಗತ್ಯವಿರುವಷ್ಟು ಜಿಡ್ಡಿನಂಶ, ಪ್ರೊಟೀನ್‌ಗಳನ್ನು ಒದಗಿಸುತ್ತದೆ.

ಇನ್ನು ಅಪ್ಪಟ ಮಲೆನಾಡು ತೀರ್ಥಹಳ್ಳಿ ಭಾಗದಲ್ಲಿ ಚಿನ್ನಿಕಾಯಿ ಸಿಹಿ ಕಡುಬು ಕಡ್ಡಾಯ. ಚಿನ್ನಿಕಾಯಿ ಹೆಚ್ಚು ಪೋಷಕಾಂಶ ಹೊಂದಿರುವ ಹಾಗೂ ದೇಹಕ್ಕೆ ಉಷ್ಣತೆ ನೀಡುವ ಕಾಯಿ. ಚಳಿಗಾಲದಲ್ಲಿ ಎಣ್ಣೆ ಸ್ನಾನದಲ್ಲಿ ಮಿಂದೇಳುವ ದೇಹಕ್ಕೆ ಪೂರಕ ಪ್ರೊಟೀನ್‌ಗಳನ್ನು ಒದಗಿಸುತ್ತದೆ. ಅಕ್ಕಿ ರವೆ, ಗೋಧಿ ರವೆ, ಬೆಲ್ಲದೊಂದಿಗೆ ಬೆರೆತು ಹಬೆಯಲ್ಲಿ ಅರಿಷಿನದ ಎಲೆಯೊಂದಿಗೆ ಬೇಯುವ ಚಿನ್ನಿಕಾಯಿ ಕಡುಬಿನ ರುಚಿಯ ಬಲ್ಲವನೇ ಬಲ್ಲ.

ಸಾಮಾನ್ಯವಾಗಿ ಕರ್ನಾಟಕದ ಎಲ್ಲರ ಮನೆಗಳಲ್ಲೂ ಈ ಹಬ್ಬಕ್ಕೆ ಹೋಳಿಗೆ ಅಥವಾ ಒಬ್ಬಟ್ಟಿನ ಸವಿ ಇರುತ್ತದೆ. ಅರೆ ಮಲೆನಾಡಿನ ಮನೆಗಳಲ್ಲಿ ತಯಾರಾಗುವ ‘ಬಳ್ಳಿ ಹುಗ್ಗಿ’ ಹೋಳಿಗೆ ಸವಿಯಲು ಸಾಥ್‌ ನೀಡುತ್ತದೆ. ಬೆಲ್ಲ ಹಾಗೂ ಅಕ್ಕಿ ಹಿಟ್ಟಿನಿಂದ ತಯಾರಾಗುವ ಬಳ್ಳಿ ಹುಗ್ಗಿಯನ್ನು ಬಹುತೇಕರು ಹೋಳಿಗೆ ಅದ್ದಿಕೊಂಡು ಸವಿಯುತ್ತಾರೆ.

ಒಲೆ ಮೇಲೆ ಪಾತ್ರೆಯಲ್ಲಿ ಬೆಲ್ಲಕ್ಕೆ ತಕ್ಕಷ್ಟು ನೀರು ಹಾಕಿ ಕುದಿಯಲು ಬಿಡಬೇಕು. ಅಕ್ಕಿ ಹಿಟ್ಟನ್ನು ಬಿಸಿನೀರಿಗೆ ಹಾಕಿ ಕೂಡಿಸಿಕೊಂಡು ಚೆನ್ನಾಗಿ ನಾದಬೇಕು. ಬಳಿಕ ಬಳ್ಳಿರೀತಿ ಹೊಸೆದು ಕುದಿಯುವ ಬೆಲ್ಲದ ನೀರಿಗೆ ಹಾಕಿ ಐದು ನಿಮಿಷ ಕುದಿಸಬೇಕು. ಅಕ್ಕಿ ಹಿಟ್ಟಿನ ಬಳ್ಳಿಗಳು ಬೆಲ್ಲದ ನೀರಿನೊಂದಿಗೆ ಬೆರೆತು ‘ಬಳ್ಳಿ ಹುಗ್ಗಿ’ಯಾಗಿ ಹೊರಹೊಮ್ಮುತ್ತದೆ. ದೀಪಾವಳಿಯ ಬಲಿಪಾಡ್ಯಮಿ ದಿನ ಮಾಡುವ ಗೋಪೂಜೆಗೆ ಈ ಖಾದ್ಯದ ಹಾಜರಿ ಇರಲೇಬೇಕು.

ದೀಪಾವಳಿಯ ಐದನೇ ದಿನ ‘ವರ್ಷದ ತೊಡಕು’ ಆಚರಿಸಲಾಗುತ್ತದೆ. ಅರೆಮಲೆನಾಡಿನ ಕೆಲ ಮನೆಗಳಲ್ಲಿ ಈ ದಿನ ಉದ್ದಿನ ವಡೆ, ಹಾಲುಗಿರಿಗೆ, ಎಣ್‌ ಮುಳುಕ (ಗಾರ್ಗಿ) ತಯಾರಾಗುತ್ತವೆ. ಉದ್ದಿನ ವಡೆ, ಬೆಲ್ಲದಿಂದ ತಯಾರಾಗುವ ಗಾರ್ಗಿ ಬಹುತೇಕರಿಗೆ ಪರಿಚಯವಿರುತ್ತದೆ. ಹಾಲುಗಿರಿಗೆ ಅಕ್ಕಿ ಹಿಟ್ಟಿನಿಂದ ತಯಾರಿಸುವ ಖಾದ್ಯ. ಮಲೆನಾಡಿನ ದೀವರ ಜನಾಂಗದವರು ಇದನ್ನು ‘ಕಜ್ಜಾಯ’ ಎಂದು ಕರೆಯುವರು. ತಯಾರಿಸುವ ವಿಧಾನ ಅಲ್ಪ ಭಿನ್ನ. ದೀವರ ಜನಾಂಗವರು ಕೋಳಿಸಾರಿನೊಂದಿಗೆ ಇದನ್ನು ಸವಿದರೆ, ಸಸ್ಯಾಹಾರಿಗಳು ಹೆಸರುಬೇಳೆ ಪಾಯಸದೊಂದಿಗೆ ಸವಿಯುವರು.

ಚಪ್ಪೆ ರೊಟ್ಟಿಯೆಂಬ ಬೆರಗು: ತೀರ್ಥಹಳ್ಳಿಯ ಕೆಲಭಾಗಗಳಲ್ಲಿ ದೀಪಾವಳಿ ಹಬ್ಬಕ್ಕೆ ‘ಚಪ್ಪೆ ರೊಟ್ಟಿ’ ತಯಾರಿ ಕಡ್ಡಾಯ. ಅಕ್ಕಿ ಹಿಟ್ಟಿನಲ್ಲಿ ಅಂಗೈಯಗಲದಷ್ಟು ರೊಟ್ಟಿ ತಯಾರಿಸಿ ಮಧ್ಯಕ್ಕೆ ತೂತು ಮಾಡಿ ಹೆಂಚಿನ ಮೇಲೆ ಬೇಯಿಸಲಾಗುತ್ತದೆ. ಪ್ರತಿ ದೀಪಾವಳಿಯಂದು ಮಾತ್ರ ಈ ಚಪ್ಪೆ ರೊಟ್ಟಿ ತಯಾರಾಗುತ್ತದೆ. ಅದೂ ಮಡಿಯಿಂದಲೇ ತಯಾರಿಸಬೇಕು.

ಚಪ್ಪೆ ರೊಟ್ಟಿಯನ್ನೊಳಗೊಂಡ ಹಾರ ದೀಪಾವಳಿ ಹಬ್ಬದಂದು ಹೋರಿಗಳ ಕೊರಳನ್ನು ಅಲಂಕರಿಸುತ್ತದೆ. ಹೋರಿಗಳನ್ನು ಪೂಜಿಸಿ ಬೆದರಿಸುವಾಗ, ಓಡಿ ಹೋಗುವ ಹೋರಿಗಳನ್ನು ಹಿಡಿದು ಚಪ್ಪೆ ರೊಟ್ಟಿ ಕಿತ್ತು ತಿನ್ನುವ ಸಂಪ್ರದಾಯ ಈ ಭಾಗದಲ್ಲಿ ಮನೆಮಾಡಿದೆ. ಚಪ್ಪೆ ರೊಟ್ಟಿಯೊಂದಿಗೆ ಬಾಳೆಹಣ್ಣು, ಅಂಬಾಡಿ ಎಲೆ, ಪಚ್ಚೆತೆನೆ, ಹಣ್ಣಡಿಕೆ, ಅಡಿಕೆ ದಿನ್ನೆ, ತುಳಸಿ, ಉಗಣೆಕಾಯಿ, ನೆಲ್ಲಿ ಕಾಯಿ, ಕಿತ್ಲೆ ಸೊಪ್ಪು, ಏಲಕ್ಕಿ ಕರೆ ಹೀಗೆ ಪ್ರಕೃತಿಯಲ್ಲಿ ಸಿಗುವ ಹನ್ನೊಂದು ಬಗೆಯ ವಸ್ತುಗಳನ್ನು ಬಳಸಿ ಹಾರ ಮಾಡಲಾಗುತ್ತದೆ. ಒಂದೊಂದು ಹಾರಗಳನ್ನು ತೆಂಗಿನ ಮರ, ಜಾನುವಾರುಗಳು, ಮನೆಯ ಬೆಂಕ್ಟಿ, ಕಡಗೋಲುಗಳಿಗೆ ಕಟ್ಟಲಾಗುತ್ತದೆ. ಮರುದಿನ ಹಾರದಲ್ಲಿನ ಚಪ್ಪೆ ರೊಟ್ಟಿಯನ್ನು ಮನೆಯವರು ಕಿತ್ತು ತಿನ್ನುವರು.

ಹೀಗೆ ಆಯಾ ಹಬ್ಬದೊಂದೊದಿಗೆ ಹಲವು ಖಾದ್ಯಗಳು ಬೆರೆತುಕೊಂಡಿವೆ. ಅವು ಹಬ್ಬದ ದಿನ ಮಾತ್ರವೇ ತಯಾರಾಗುವುದು ವಿಶೇಷ. ಈಗೀಗ ಮಾರುಕಟ್ಟೆಯಲ್ಲಿ ಎಲ್ಲ ಕಾಲದಲ್ಲೂ ಎಲ್ಲ ಬಗೆಯ ಪದಾರ್ಥಗಳು ಸಿಗುವುದರಿಂದ ಬೇಕೆನಿಸಿದಾಗ ಖಾದ್ಯಗಳನ್ನು ತಯಾರಿಸಿ ಸವಿಯುವುದುಂಟು. ಆದರೂ ಹಬ್ಬದ ದಿನ ಮಾಡಿದ ಖಾದ್ಯ ವಿಶಿಷ್ಟ ಸ್ವಾದವನ್ನು ಹೊಂದಿರುತ್ತದೆ ಎನ್ನುವರು ಪಾಕಪ್ರಿಯರು.

ಅದೇನೇ ಇರಲಿ, ದೀಪಗಳ ಹಬ್ಬ ಬಂದಿದೆ. ಸಿಹಿ ಸವಿಯಲೆಂದೇ ಜಿಹ್ವೆಯೂ ಇದೆ. ಬಗೆ ಬಗೆಯ ಸಂಪ್ರದಾಯಿಕ ಖಾದ್ಯಗಳ ಮಾಡಿ ತಿಂದು ತೇಗಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.