ಪ್ರಾತಿನಿಧಿಕ ಚಿತ್ರ
ಮೆದುಳಿನ ಸ್ಟ್ರೋಕ್ ಅಥವಾ 'ಮೆದುಳಿನ ಆಘಾತ' - ಮೆದುಳಿನ ಒಂದು ಭಾಗಕ್ಕೆ ರಕ್ತದ ಹರಿವು ಸ್ಥಗಿತಗೊಂಡಾಗ ಅಥವಾ ಹೆಪ್ಪುಗಟ್ಟಿದಾಗ ಸಂಭವಿಸುತ್ತದೆ. ಇದು ಮೆದುಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಯನ್ನೂ ಕಡಿತಗೊಳಿಸುತ್ತದೆ.
ಮೆದುಳಿನ ಸ್ಟ್ರೋಕ್‌ಗಳಲ್ಲಿ ಎರಡು ಮುಖ್ಯ ಪ್ರಕಾರಗಳಿವೆ: ಇಸ್ಕೆಮಿಕ್ (Ischemic Stroke) ಮತ್ತು ಹೆಮರಾಜಿಕ್ (Hemorrhagic Stroke). ಇಸ್ಕೆಮಿಕ್ ಸ್ಟ್ರೋಕ್ ಅತ್ಯಂತ ಸಾಮಾನ್ಯವಾಗಿದ್ದು, ಒಟ್ಟು ಪ್ರಕರಣಗಳಲ್ಲಿ ಇದರ ಪ್ರಮಾಣ 85–90 ಪ್ರತಿಶತ. ಮೆದುಳಿನ ಧಮನಿಯಲ್ಲಿ ಅಡೆತಡೆ ಕಾಣಿಸಿಕೊಂಡಾಗ ಇದು ಸಂಭವಿಸುತ್ತದೆ. ಹೆಮರಾಜಿಕ್ ಸ್ಟ್ರೋಕ್ ಮೆದುಳಿನಲ್ಲಿ ಅನಿಯಂತ್ರಿತ ರಕ್ತಸ್ರಾವದಿಂದ ಸಂಭವಿಸುತ್ತದೆ. ಇದಕ್ಕೆ ಹೆಚ್ಚಿನ ರಕ್ತದ ಒತ್ತಡ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾರಣವಾಗಿರಬಹುದು.
ಪ್ರತಿ ವರ್ಷ ಭಾರತದಲ್ಲಿ ಸುಮಾರು 15 ಲಕ್ಷ ಮಂದಿಗೆ ಸ್ಟ್ರೋಕ್ ಅಥವಾ ಲಕ್ವ ಸಂಭವಿಸುತ್ತದೆ. ಹೀಗಾಗಿ ಇದರ ತಡೆಯುವಿಕೆ ಅತ್ಯಂತ ಅಗತ್ಯ. ಸರಿಯಾದ ಆಹಾರ ಮತ್ತು ವ್ಯಾಯಾಮ, ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದರಿಂದ ಸ್ಟ್ರೋಕ್ ತಡೆಯಬಹುದು.
ಸ್ಟ್ರೋಕ್‌ನ ಸಾಮಾನ್ಯ ಲಕ್ಷಣಗಳು
ದೇಹದ ಒಂದು ಭಾಗದಲ್ಲಿ ಏಕಾಏಕಿ ಬಲ ಇಲ್ಲದಂತಾಗುವುದು, ಮಾತನಾಡಲು ಅಥವಾ ಮಾತನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು, ದೃಷ್ಟಿ ಸಮಸ್ಯೆಗಳು, ಅಸಮತೋಲನ, ಅಥವಾ ಭಾರೀ ತಲೆನೋವು. ಈ ಲಕ್ಷಣಗಳಿದ್ದಲ್ಲಿ, ಮೆದುಳಿಗೆ ಆಗುವ ಹಾನಿಯನ್ನು ಕಡಿಮೆ ಮಾಡಲು ತುರ್ತಾಗಿ ವೈದ್ಯಕೀಯ ನೆರವು ಪಡೆಯುವುದು ಅತ್ಯಗತ್ಯ.
ಸಂಶೋಧನೆಗಳಿಂದ ನಮಗೆ ತಿಳಿದುಬಂದಂತೆ, ಸೂಕ್ತ ಆಹಾರ ಪದ್ಧತಿ ಮತ್ತು ದೈಹಿಕ ವ್ಯಾಯಾಮದಿಂದ ಸ್ಟ್ರೋಕ್ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಆರೋಗ್ಯಕರ ಜೀವನಶೈಲಿಯ ಮೂಲಕ ರಕ್ತದ ಒತ್ತಡ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡಬಹುದು ಮತ್ತು ಮಧುಮೇಹವನ್ನು ನಿಯಂತ್ರಣ ಮಾಡಬಹುದು. ಇವು ಇಸ್ಕೆಮಿಕ್ ಸ್ಟ್ರೋಕ್‌ಗಳನ್ನು ತಡೆಯುವ ಮುಖ್ಯ ಅಂಶಗಳು. ಹೆಮರಾಜಿಕ್ ಸ್ಟ್ರೋಕ್‌ಗಳಿಗೆ, ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡುವುದರಿಂದ ರಕ್ತ ನಾಳಗಳು ಒಡೆದುಹೋಗದಂತೆ ತಡೆಯಬಹುದು.
ಸ್ಟ್ರೋಕ್/ ಲಕ್ವ ತಡೆಗಟ್ಟುವಲ್ಲಿ ಆಹಾರದ ಪಾತ್ರ
ಸಮತೋಲನದಿಂದ ಕೂಡಿದ ಮತ್ತು ಪೌಷ್ಟಿಕ ಆಹಾರ ಸೇವನೆ ಬಹುಮುಖ್ಯವಾಗಿದೆ. ಮೆದುಳು ಮತ್ತು ಹೃದಯ ಆರೋಗ್ಯಕ್ಕೆ ಪೂರಕವಾದ ಕೆಲವು ಆಹಾರ ಪದ್ಧತಿಗಳು ಈ ರೀತಿಯಾಗಿ ಇವೆ:
ಆರೋಗ್ಯಕರ ಕೊಬ್ಬುಗಳ ಸೇವನೆಯನ್ನು ಅಳವಡಿಸಿಕೊಳ್ಳಬೇಕು: ಆಲಿವ್ ಆಯಿಲ್, ಒಣ ಹಣ್ಣುಗಳು ಮತ್ತು ಆವೊಕಾಡೊ ಹಣ್ಣನ್ನು ಹೆಚ್ಚಾಗಿ ಬಳಸಬೇಕು. ಸ್ಯಾಚುರೇಟೆಡ್ (ಬೆಣ್ಣೆ, ಚೀಸ್, ಮಾಂಸಾಹಾರ ಅಥವಾ ಸಂಸ್ಕರಿತ ಮಾಂಸಾಹಾರ) ಮತ್ತು ಟ್ರಾನ್ಸ್ ಕೊಬ್ಬುಗಳಿಂದ (ಮಾರ್ಗರೀನ್, ಎಣ್ಣೆಯಲ್ಲಿ ಕರಿದ ತಿಂಡಿಗಳು, ಬೇಕರಿ ಉತ್ಪನ್ನ) ದೂರವಿರಿ. ಅದೇ ರೀತಿ, ಸ್ಯಾಲ್ಮನ್ ಮತ್ತು (ಮಾಕರೆಲ್ ಮೀನುಗಳಲ್ಲಿ ಓಮೆಗಾ-3 ಅಂಶ ಹೆಚ್ಚಾಗಿ ಇದ್ದು, ಅದನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾದ ಒಮೇಗಾ 3 ಅಂಶಗಳು ದೊರೆಯುತ್ತದೆ.
ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿರಿ: ತಾಜಾ ಹಣ್ಣುಗಳು ಮತ್ತು ತರಕಾರಿಗಳು ಆಂಟಿ-ಆಕ್ಸಿಡೆಂಟ್‌ಗಳು, ವಿಟಮಿನ್ಸ್ ಮತ್ತು ಖನಿಜಗಳಿಂದ ತುಂಬಿದ್ದು, ಅವು ರಕ್ತನಾಳಗಳನ್ನು ರಕ್ಷಿಸುತ್ತವೆ. ಹಸಿರು ಸೊಪ್ಪುಗಳು, ಸಿಟ್ರಸ್ ಹಣ್ಣುಗಳು ಮತ್ತು ಬೆರಿ ... ವಿಶೇಷವಾಗಿ ಉತ್ತಮವಾಗಿವೆ.
ಉಪ್ಪು ತಗ್ಗಿಸಿ: ಅತಿಯಾದ ಉಪ್ಪು ತಿನ್ನುವುದರಿಂದ ರಕ್ತದ ಒತ್ತಡ ಏರುತ್ತದೆ. ಇದು ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ. ಆಹಾರವನ್ನು ರುಚಿಕರವಾಗಿಸಲು ರುಚಿಗೆ ತಕ್ಕಷ್ಟೇ ಉಪ್ಪನ್ನು ಮಿತಿಯಲ್ಲೇ ಬಳಸಬೇಕು.
ಸಿರಿ ಧಾನ್ಯ ಸೇವಿಸಿರಿ: ಕೆಂಪಕ್ಕಿ, ಕ್ವಿನೋವಾ ಮತ್ತು ಓಟ್ಸ್, ಸಿರಿಧಾನ್ಯ ಮುಂತಾದವು ಅತಿಹೆಚ್ಚು ಫೈಬರ್ ಪ್ರಮಾಣವನ್ನು ಹೊಂದಿದ್ದು, ರಕ್ತದ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.
ಸಕ್ಕರೆ ಸೇವನೆ ಕಡಿಮೆ ಮಾಡಿ: ಅತಿಯಾದ ಸಕ್ಕರೆ ದೇಹದ ಕೊಬ್ಬು ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ. ಇದು ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚು ನೀರು ಕುಡಿಯುವುದು ರಕ್ತನಾಳದ ಆರೋಗ್ಯಕ್ಕೆ ಪೂರಕ. ನೀರು, ಹರ್ಬಲ್ ಟೀ ಅಥವಾ ನೈಸರ್ಗಿಕವಾದ ಹಣ್ಣಿನ ರಸಗಳನ್ನೇ (ಬಾಟಲಿಯಲ್ಲಿ ಲಭ್ಯವಿರುವಂಥದ್ದಲ್ಲ) ಸೇವಿಸಿ.
ಸ್ಟ್ರೋಕ್ ತಡೆಯಲು ನಿಯಮಿತ ವ್ಯಾಯಾಮದ ಪ್ರಯೋಜನ
ನಿಯಮಿತ ವ್ಯಾಯಾಮವು ಆರೋಗ್ಯಕರ ಆಹಾರದೊಂದಿಗೆ ಕೆಲಸ ಮಾಡಿ, ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ರಕ್ತದ ಒತ್ತಡವನ್ನು ಕಡಿಮೆ ಮಾಡಿ, ತೂಕ ನಿಯಂತ್ರಣಕ್ಕೆ, ರಕ್ತ ಸರಾಗ ಹರಿವಿಗೆ ಅನುಕೂಲ ಮಾಡುತ್ತದೆ. ಕೆಲವೊಂದು ವ್ಯಾಯಾಮ ಸಲಹೆಗಳು ಇಲ್ಲಿವೆ:
ಏರೋಬಿಕ್ ವ್ಯಾಯಾಮ: ನಡೆಯುವಿಕೆ, ಓಡುವಿಕೆ, ಸೈಕ್ಲಿಂಗ್ ಅಥವಾ ಈಜುವುದು ಹೃದಯ ಮತ್ತು ರಕ್ತಪರಿಚಲನೆಗೆ ಸಹಾಯ ಮಾಡುತ್ತದೆ. ಪ್ರತಿ ವಾರ ಕನಿಷ್ಠ 150 ನಿಮಿಷಗಳ ವ್ಯಾಯಾಮ ಮಾಡುವವ ಗುರಿ ಇರಿಸಿಕೊಳ್ಳಿ.
ದೈಹಿಕ ವ್ಯಾಯಾಮ: ಭಾರ ಎತ್ತುವುದು (ವೇಟ್ ಲಿಫ್ಟಿಂಗ್) ಅಥವಾ ದೈಹಿಕ ಶ್ರಮದ ವ್ಯಾಯಾಮಗಳನ್ನು ವಾರದಲ್ಲಿ ಎರಡು ಬಾರಿ ಮಾಡಿರಿ.
ಸಮತೋಲನ ವ್ಯಾಯಾಮಗಳು: ಯೋಗ, ಪಿಲಾಟೆಸ್ ಅಥವಾ ಟೈ ಚಿ ಅಭ್ಯಾಸ ಮಾಡಿ.
ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು, ಸ್ಟ್ರೋಕ್ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಿದರೆ, ಪ್ರತಿಯೊಬ್ಬರೂ ತಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನೆನಪಿರಲಿ, ಮುನ್ನೆಚ್ಚರಿಕೆಯು ಯಾವತ್ತಿದ್ದರೂ ಚಿಕಿತ್ಸೆಗಿಂತ ಉತ್ತಮ. ಸಣ್ಣ ಹಾಗೂ ನಿರಂತರ ಪ್ರಯತ್ನಗಳು ದೊಡ್ಡ ಪರಿಣಾಮವನ್ನುಂಟುಮಾಡಬಹುದು.
ಲೇಖಕರು: ಡಾ. ಮಹೇಂದ್ರ ಜೆ.ವಿ., ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು – ನ್ಯೂರೋಲಜಿ ವಿಭಾಗ, ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸಸ್, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.