ADVERTISEMENT

ಎಮರ್ಜೆನ್ಸಿ ಇದ್ರೆ ಮಾತ್ರ ಸರ್ಜರಿ

doctor

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 19:30 IST
Last Updated 16 ಮಾರ್ಚ್ 2020, 19:30 IST
   

ಕೊರೊನಾ ವೈರಸ್‌ ಸೋಂಕು ಭೀತಿಯ ಹಿನ್ನೆಲೆಯಲ್ಲಿ ನಗರದ ಆಸ್ಪತ್ರೆಗಳಲ್ಲಿ ಮೊದಲೇ ನಿಗದಿಯಾಗಿದ್ದ ಶಸ್ತ್ರಚಿಕಿತ್ಸೆಗಳನ್ನು ವೈದ್ಯರು ಮುನ್ನೆಚ್ಚರಿಕಾ ಕ್ರಮವಾಗಿ ಮುಂದೂಡುತ್ತಿದ್ದಾರೆ.

ಹೃದಯ ಸಂಬಂಧಿ ಕಾಯಿಲೆ, ಅಪಘಾತ ಪ್ರಕರಣಗಳಂತಹ ತೀರಾ ಅಗತ್ಯ ಮತ್ತು ತುರ್ತಾಗಿರುವ ಆಪರೇಷನ್‌ಗಳನ್ನು ಮಾಡುತ್ತೇವೆ. ಉಳಿದಂತೆ ರೋಗಿಯ ಒಪ್ಪಿಗೆ ಪಡೆದು ಕೆಲವು ಸರ್ಜರಿಗಳನ್ನು ಮುಂದೂಡಲಾಗುತ್ತಿದೆ.ಸರ್ಜರಿ ಆದ ವ್ಯಕ್ತಿಗೆ ಕೋವಿಡ್‌– 19 ಸೋಂಕು ತಗುಲಿದರೆ ಸ್ಥಿತಿ ಅಪಾಯಕಾರಿಯಾಗಬಹುದು. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ರೋಗಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುತ್ತಾರೆ ವೈದ್ಯರು.

ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ವಹಿಸಲಾಗಿದೆ. ಆಸ್ಪತ್ರೆಗೆ ಬಂದಿರುವ ರೋಗಿಗಳ ವಿವರ ಪಡೆದು, ಅವರು ಹೊರದೇಶಕ್ಕೆ ತೆರಳಿದ್ದರೆ ಅಥವಾ ಫ್ರಾನ್ಸ್‌, ಇಟಲಿಯಂತಹ ದೇಶದಿಂದ ಹಿಂತಿರುಗಿದ್ದರೆ ಅವರನ್ನು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಕಳುಹಿಸುತ್ತೇವೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆಯ ವೈದ್ಯರು.

ADVERTISEMENT

‘ತುರ್ತು ಪರಿಸ್ಥಿತಿ ಇದ್ದರಷ್ಟೇ ನಮ್ಮಲ್ಲಿ ಸರ್ಜರಿ ಮಾಡಲಾಗುತ್ತದೆ. ಆಪರೇಷನ್‌ ಥಿಯೇಟರ್‌ ಕೂಡ ಸಂಪೂರ್ಣ ಕ್ರಿಮಿಮುಕ್ತವಾಗಿದೆ. ಆಪರೇಷನ್‌ಗೆ ಮುಂಚೆ ಅಲ್ಲಿನ ಎಲ್ಲಾ ಸಾಧನಗಳನ್ನು ಸ್ಟೆರಿಲೈಜ್‌ ಮಾಡಿರುತ್ತೇವೆ. ರೋಗಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಲಾಗುತ್ತದೆ’ ಎನ್ನುತ್ತಾರೆ ಬಿಆರ್‌ ಲೈಫ್‌ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಎಸ್‌.ಜಿ ಹರೀಶ್‌.

‘ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ರೋಗಿಗಳಿಗೆ ಆಪರೇಷನ್‌ ಮಾಡುವುದಿಲ್ಲ. ಅವರನ್ನು ಎಲ್ಲಾ ರೀತಿಯ ಪರೀಕ್ಷೆಗೆ ಒಳಪಡಿಸಿ ಬಳಿಕ ಅಗತ್ಯವಿದ್ದಲ್ಲಿ ಮಾತ್ರ ಸರ್ಜರಿ ಮಾಡುತ್ತೇವೆ. ಸುಮಾರು ಆಪರೇಷನ್‌ಗಳನ್ನು ಮುಂದಕ್ಕೆ ಹಾಕಿದ್ದೇವೆ’ ಎಂದರು.

ಇನ್ನು ಕೆಲ ರೋಗಿಗಳು ಕೊರೊನಾ ಸೋಂಕು ಭೀತಿಯಿಂದ ತಾವಾಗೇ ಸರ್ಜರಿಗಳನ್ನು ಮುಂದಕ್ಕೆ ಹಾಕಿರುವ ಪ್ರಸಂಗಗಳೂ ಇವೆ. ಈ ಮೊದಲು ನಿಗದಿಯಾಗಿದ್ದ ಮಂಡಿಕೀಲು, ಚಿಪ್ಪು ಬದಲಾವಣೆ ಸರ್ಜರಿಗಳನ್ನು ರೋಗಿಗಳೇ ಸದ್ಯಕ್ಕೆ ಬೇಡ ಎಂದು ಹೇಳುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ನಾಲ್ಕೈದು ದಿನ ಆಸ್ಪತ್ರೆಯಲ್ಲಿಯೇ ಉಳಿದುಕೊಳ್ಳಬೇಕು ಎಂಬ ಭಯದಿಂದ ರೋಗಿಗಳು ಸದ್ಯ ಆಪರೇಷನ್‌ ಬೇಡ ಎಂದು ಮನವಿ ಮಾಡಿದ್ದಾರೆ’ ಎಂದು ಸಕ್ರಾ ವರ್ಲ್ಡ್‌ ಆಸ್ಪತ್ರೆಯ ಹಿರಿಯ ವೈದ್ಯ ರಘು ಜೆ. ತಿಳಿಸಿದರು.

ಅಗತ್ಯವಿರುವ ಸರ್ಜರಿಯನ್ನು ಮಾತ್ರ ಶೆಡ್ಯೂಲ್‌ ಪ್ರಕಾರ ಮಾಡಲಾಗುತ್ತಿದೆ ಎಂದು ಅಪೋಲೊ ಆಸ್ಪತ್ರೆ ವೈದ್ಯರುಮಾಹಿತಿ ನೀಡಿದ್ದಾರೆ.

ಕೆಮ್ಮು, ಶೀತ, ಜ್ವರದಿಂದ ಬಳಲುತ್ತಿರುವ ಸಾಕಷ್ಟು ರೋಗಿಗಳು ಆಸ್ಪತ್ರೆಗೆ ತಪಾಸಣೆಗೆ ಬರುತ್ತಿದ್ದಾರೆ. ಇವು ಕೋವಿಡ್‌ ಲಕ್ಷಣಗಳಿರಬಹುದು ಎಂಬ ಭೀತಿ ಅವರನ್ನು ಕಾಡುತ್ತಿದೆ. ಇದು ಸಾಮಾನ್ಯ ನೆಗಡಿ, ಜ್ವರ ಎಂದರೂ ಅವರು ನಂಬುತ್ತಿಲ್ಲ. ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ಬೆನ್ನು ಬೀಳುತ್ತಾರೆ. ಇದರಿಂದ ಉಳಿದ ರೋಗಿಗಳಿಗೂ ತೊಂದರೆಯಾಗುತ್ತಿದೆ. ಆಸ್ಪತ್ರೆ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚುತ್ತಿದೆ. ಹಾಗಾಗಿ ಕೆಲವು ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗುತ್ತಿದೆ ಎಂದು ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಯ ಹೆಸರು ಹೇಳಲು ಇಚ್ಛಿಸದ ವೈದ್ಯೆಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.