ADVERTISEMENT

ಆರೋಗ್ಯ: ನೀರು.. ಇದು ಜೀವಾಮೃತ– ಶುದ್ಧೀಕರಣ ಪ್ರಕ್ರಿಯೆ ತಿಳಿದುಕೊಳ್ಳುವುದು ಹೇಗೆ?

ಡಾ.ಕುಶ್ವಂತ್ ಕೋಳಿಬೈಲು ಲೇಖನ

ಡಾ.ಕುಶ್ವಂತ್ ಕೋಳಿಬೈಲು
Published 25 ಫೆಬ್ರುವರಿ 2025, 1:35 IST
Last Updated 25 ಫೆಬ್ರುವರಿ 2025, 1:35 IST
<div class="paragraphs"><p>ಆರೋಗ್ಯ: ನೀರು.. ಇದು ಜೀವಾಮೃತ– ಶುದ್ಧೀಕರಣ ಪ್ರಕ್ರಿಯೆ ತಿಳಿದುಕೊಳ್ಳುವುದು ಹೇಗೆ?</p></div>

ಆರೋಗ್ಯ: ನೀರು.. ಇದು ಜೀವಾಮೃತ– ಶುದ್ಧೀಕರಣ ಪ್ರಕ್ರಿಯೆ ತಿಳಿದುಕೊಳ್ಳುವುದು ಹೇಗೆ?

   

ಮನುಷ್ಯನಿಗೆ ಗಾಳಿಯ ನಂತರ ಅತ್ಯಂತ ಅಗತ್ಯವಾದ ವಸ್ತುವೆಂದರೆ, ಅದು ನೀರು. ನೀರು ಮನುಷ್ಯರ ಜೀವಕ್ಕೆ ಅತ್ಯಗತ್ಯವಾಗಿ ಬೇಕಾಗುವ ಜೀವಾಮೃತ.

ಮನುಷ್ಯನು ಸೇವಿಸುವ ಗಾಳಿ ಮತ್ತು ನೀರಿನ ಗುಣಮಟ್ಟದ ಮೇಲೆ ಅವರ ಆರೋಗ್ಯವು ಅವಲಂಬಿತವಾಗಿದೆಯೆಂದರೆ ಅದು ಅತಿಶಯೋಕ್ತಿಯಲ್ಲ. ಪ್ರಪಂಚದ ಎಲ್ಲ ದೇಶಗಳ ಮತ್ತು ಪ್ರದೇಶಗಳ ನೀರಿನ ಗುಣಮಟ್ಟವು ಒಂದೇ ರೀತಿಯದ್ದಾಗಿರುವುದಿಲ್ಲ. ಬಡ ರಾಷ್ಟ್ರಗಳಲ್ಲಿ ಹೆಚ್ಚಿರುವ ಆರೋಗ್ಯದ ಸಮಸ್ಯೆಗಳು, ಕಡಿಮೆ ಮಟ್ಟದಲ್ಲಿರುವ ಜನರ ಜೀವಿತಾವಧಿ ಮತ್ತು ಹೆಚ್ಚಿರುವ ಶಿಶುಗಳ ಮರಣಪ್ರಮಾಣಗಳಿಗೆ ಕಳೆಪೆ ಗುಣಮಟ್ಟದ ನೀರು ಕೂಡ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಅಶುದ್ಧವಾದ ನೀರು, ಅತಿಸಾರ ಮತ್ತು ವಾಂತಿಯ ಜೊತೆಗೆ ಕರುಳಿನಲ್ಲಿ ಸೋಂಕನ್ನು ಕೂಡ ಉಂಟುಮಾಡುತ್ತದೆ‌. ಶ್ವಾಸಕೋಶದ ಸೋಂಕನ್ನು ಹೊರತು ಪಡಿಸಿದರೆ ಬಡದೇಶಗಳಲ್ಲಿ ಅತಿಸಾರವು ಅತಿ ಹೆಚ್ಚು ಮಕ್ಕಳ ಮರಣಕ್ಕೆ ಕಾರಣವಾಗುತ್ತದೆ.

ADVERTISEMENT

ಈ ಕಾರಣಗಳಿಂದ ವಿವಿಧ ದೇಶಗಳಲ್ಲಿರುವ ನೀರಿನ ಗುಣಮಟ್ಟ ಮತ್ತು ಅದರಿಂದ ಉಂಟಾಗುವ ಆರೋಗ್ಯಸಮಸ್ಯೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನೆಸ್ಕೋ ವಿಶೇಷ ನಿಗಾ ವಹಿಸುತ್ತದೆ. ಪ್ರತಿಯೊಬ್ಬ ಮನುಷ್ಯನಿಗೆ ಆತನ ಸೇವನೆಗೆ, ಅಡುಗೆಗೆ ಮತ್ತು ವ್ಯಕ್ತಿಗತ ಸ್ವಚ್ಛತೆಗಾಗಿ ಕನಿಷ್ಠ ಏಳೂವರೆ ಲೀಟರಿನಷ್ಟು ನೀರು ನಿತ್ಯ ಬೇಕಾಗುತ್ತದೆ. ಬಟ್ಟೆ ತೊಳೆಯುವುದರಿಂದ ಹಿಡಿದು ಮನೆಯ ಸ್ವಚ್ಛತಾ ಕಾರ್ಯಗಳನ್ನು ಲೆಕ್ಕ ಹಾಕಿದರೆ ಪ್ರತಿಯೊಬ್ಬನಿಗೆ ನಿತ್ಯ ಐವತ್ತು ಲೀಟರಿನಷ್ಟು ನೀರಿನ ಅಗತ್ಯ ಬರುತ್ತದೆ. ಮನುಷ್ಯ ತನ್ನ ವೈಯಕ್ತಿಕ ಅಗತ್ಯತೆಗಳಿಗೆ ಮಾತ್ರವಲ್ಲದೆ ಕೃಷಿಯಿಂದ ಹಿಡಿದು ಕೈಗಾರಿಕೆಗಳನ್ನು ನಡೆಸಲು ಕೂಡ ನೀರಿನ ಮೇಲೆ ಅವಲಂಬಿತನಾಗಿದ್ದಾನೆ. ಭೂಮಿಯ ರಚನೆಯಲ್ಲಿ ಶೇ. 79ರಷ್ಟು ನೀರಿನ ಅಂಶವಿದ್ದರೂ ಅದರಲ್ಲಿ‌‌‌ ಪ್ರತಿಶತ ತೊಂಬತ್ತಾರರಷ್ಟು ಪ್ರಮಾಣದ ನೀರು ಸಾಗರದಲ್ಲಿರುವ ಉಪ್ಪು ನೀರಾಗಿರುತ್ತದೆ. ಉಳಿದಿರುವ ಸುಮಾರು ಶೇ. ಮೂರರಿಂದ ನಾಲ್ಕರಷ್ಟು ನೀರು ಮಾತ್ರ ಮನುಷ್ಯನ ದಿನನಿತ್ಯದ ಅಗತ್ಯಗಳಿಗೆ ಸೂಕ್ತವಾದ ನೀರಾಗಿರುತ್ತದೆ.

ನೀರನ್ನು ಅದರ ಗುಣಮಟ್ಟದ ಆಧಾರದ ಮೇಲೆ ವಿಂಗಡಿಸಲಾಗಿದೆ. ಕುಡಿಯಲು ಬಳಸಬಹುದಾದ ನೀರು, ಸ್ನಾನ ಮಾಡಲು ಬಳಸಬಹುದಾದ ನೀರು, ಮೀನು ಸಾಕಣೆಗೆ ಬಳಸಬಹುದಾದ ನೀರು, ಕೃಷಿಗೆ ಬಳಸಬಹುದಾದ ನೀರು ಮತ್ತು ಕೈಗಾರಿಕೆಗಳಲ್ಲಿ ಬಳಸಬಹುದಾದ ನೀರಿನ ಗುಣಮಟ್ಟಗಳಲ್ಲಿ ವಿವಿಧ ವ್ಯತ್ಯಾಸಗಳಿವೆ. ಸ್ನಾನಕ್ಕೆ ಬಳಸಬಹುದಾದ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ ಹಾಗೆಯೆ ಕೈಗಾರಿಕೆಗಳಲ್ಲಿ ಬಳಸಲು ಸೂಕ್ತವಾಗಿದೆಯೆಂದು ಪ್ರಮಾಣೀಕೃತ ನೀರನ್ನು ಬಳಸಿ ಕೃಷಿ ಮಾಡಲಾಗುವುದಿಲ್ಲ.

ನೀರು ಹಲವು ಪದಾರ್ಥಗಳಿಂದ ಮತ್ತು ಕಲವು ಕಾರಣಗಳಿಂದ ಕಲುಷಿತಗೊಳ್ಳುತ್ತದೆ. ನೀರಿನ ಮೂಲಕ್ಕೆ ಕೊಳಚೆನೀರು ಸೇರುವುದರಿಂದ ನೀರಿನಲ್ಲಿ ಸಾಂಕ್ರಾಮಿಕ ರೋಗಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಮತ್ತು ವೈರಸ್ ಸೇರಿಕೊಳ್ಳುತ್ತವೆ. ನೀರಿಗೆ ವಿವಿಧ ರಾಸಾಯನಿಕ ಪದಾರ್ಥಗಳು ಮತ್ತು ಕೀಟನಾಶಕ/ಕಳೆನಾಶಕಗಳು ಸೇರಿಕೊಳ್ಳಬಹುದು. ನೀರಿಗೆ ಪರಿಸರದಿಂದ ಸೇರಿಕೊಳ್ಳುವ  ಸೀಸ, ಪಾದರಸದಂಥ ‘ಹೆವಿ ಮೆಟಲ್’ಗಳು ಕೂಡ ಅಪಾಯಕಾರಿಯಾಗಬಲ್ಲದು. ಕೆಲವು ಪ್ರದೇಶಗಳ ಅಂತರ್ಜಲದಲ್ಲಿ ಸ್ವಾಭಾವಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಫ್ಲೋರಿನ್ ಮತ್ತು ಆರ್ಸನಿಕ್ ಕೂಡ ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿ.

ನೀರಿನಲ್ಲಿರುವ ಅಪಾಯಕಾರಿ ಸೂಕ್ಷ್ಮಾಣುಜೀವಿಗಳ ಪ್ರಮಾಣ, ನೀರಿನ ಆಮ್ಲಿಯತೆ, ನೀರಿನಲ್ಲಿ ಕರಗಿರುವ ಆಮ್ಲಜನಕತೆ ಪ್ರಮಾಣ ಮತ್ತು ನೀರಿನಲ್ಲಿ ಬೆರೆತಿರುವ ರಾಸಾಯನಿಕ ಪದಾರ್ಥಗಳ ಪ್ರಮಾಣದ ಮೇಲೆ ನಾವು ನೀರನ್ನು ವಿಂಗಡಿಸುತ್ತೇವೆ. ನಾವು ಕುಡಿಯಲು ಬಳಸುವ ನೀರಿನಲ್ಲಿ ಅಪಾಯಕಾರಿ ಸೂಕ್ಷ್ಮಾಣುಜೀವಿಗಳು ಇರಬಾರದು. ಕುಡಿಯಲು ಬಳಸುವ ನೀರಿನ ಆಮ್ಲೀಯತೆಯು 6.5ರಿಂದ 8.5ರ ಒಳಗಿರಬೇಕು. ಕುಡಿಯಲು ಬಳಸುವ ನೀರಿನಲ್ಲಿ ಉತ್ತಮ ಪ್ರಮಾಣದ ಆಮ್ಲಜನಕವು ಕರಗಿರಬೇಕು. ಎಲ್ಲದ್ದಕ್ಕಿಂತ ಮುಖ್ಯವಾಗಿ ಕುಡಿಯುವ ನೀರಿನಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕಗಳು ಮತ್ತು ಅಪಾಯಕಾರಿ ಲೋಹಗಳು ಬೆರೆತಿರಬಾರದು.

ಮನುಷ್ಯರು ಬಹಳ ಶತಮಾನಗಳಿಂದ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮವೆಂಬ ನಂಬಿದ್ದರು. ನೀರನ್ನು ಕುದಿಸುವುದರಿಂದ ಅದರಲ್ಲಿರುವ ಅಪಾಯಕಾರಿ ಸೂಕ್ಷ್ಮಾಣುಜೀವಿಗಳು ಸಾಯುತ್ತವೆ. ನೀರಿನಲ್ಲಿ ಇರಬಹುದಾದ ರಾಸಾಯನಿಕ ಪದಾರ್ಥಗಳ ಮತ್ತು ಲೋಹಗಳ ಪ್ರಮಾಣದಲ್ಲಿ ಕುದಿಸುವುದರಿಂದ ವ್ಯತ್ಯಾಸವಾಗುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ನಗರಗಳಿಗೆ ನೀರನ್ನು ಪೈಪುಗಳ ಮೂಲಕ ಸರಬರಾಜು ಮಾಡುವವರಿಗೆ ನೀರನ್ನು ಕುದಿಸಿ ಕೀಟಾಣುಗಳನ್ನು ನಾಶಪಡಿಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಪ್ರಪಂಚದ ಹೆಚ್ಚಿ‌ನ ಕಡೆ ನೀರಿನಲ್ಲಿರುವ ಅಪಾಯಕಾರಿ ಸೂಕ್ಷ್ಮಾಣುಜೀವಿಗಳನ್ನು ನಾಶ ಮಾಡಲು ನೀರಿಗೆ ಸೂಕ್ತ ಪ್ರಮಾಣದ ಕ್ಲೋರಿನ್ ಬಳಸಲಾಗುತ್ತದೆ. ಇದು ಕಡಿಮೆ ಖರ್ಚಿನಲ್ಲಿ ಆಗುವ ಕೆಲಸವಾದುದರಿಂದ ಈ ಕ್ರಮವು ಹೆಚ್ಚು ಪ್ರಚಲಿತವಾಗಿದೆ. ಕ್ಲೋರಿನ್ ನೀರಿನ ರುಚಿ ಮತ್ತು ವಾಸನೆಯನ್ನು ಬದಲಿಸುವ ಕುರಿತಾದ ದೂರುಗಳು ಕೂಡ ಇಂದು ನಿನ್ನೆಯದಲ್ಲ. ಸೂರ್ಯನ ಬೆಳಕು ಕೂಡ ನೀರಿನಲ್ಲಿರುವ ಸೂಕ್ಷ್ಮಾಣುಗಳನ್ನು ನಾಶಮಾಡುವ ಕಾರಣದಿಂದಾಗಿ ನೀರನ್ನು ಓಝೋನ್ ಮತ್ತು ಯುವಿ ವಿಕಿರಣಗಳ ಮೂಲಕವು ಶುದ್ಧೀಕರಣ ಮಾಡಬಹುದು. ಸ್ವಲ್ಪ ದುಬಾರಿಯಾಗುವ ಈ ಕ್ರಮ ಕೂಡ ರಾಸಾಯನಿಕಗಳನ್ನು ನೀರಿನಿಂದ ಬೇರ್ಪಡಿಸುವುದಿಲ್ಲ.

ನೀರಿನಲ್ಲಿ ಬೆರೆತಿರುವ ರಾಸಾಯನಿಕಗಳನ್ನು, ಖನಿಜ ಮತ್ತು ಲೋಹಗಳನ್ನು ಬೇರ್ಪಡಿಸಲು ನೀರನ್ನು ಫಿಲ್ಟರ್ ಮೂಲಕ ಶುದ್ಧೀಕರಣ ಮಾಡಬೇಕಾಗುತ್ತದೆ. ಮರಳು ಅಥವಾ ಕಾರ್ಬನ್ ಮೂಲಕ ನೀರನ್ನು ನಿಧಾನವಾಗಿ ಫಿಲ್ಟರ್ ಮಾಡುವುದರಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಕೂಡ ಫಿಲ್ಟರ್ ಮಾಡಬಹುದು. ನಾವು ಕುಡಿಯಲು ಬಳಸುವ ನೀರು ಸೂಕ್ತ ರೀತಿಯಲ್ಲಿ ಫಿಲ್ಟರ್ ಆಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಮತ್ತು ಅದರಲ್ಲಿರುವ ಅಪಾಯಕಾರಿ ಸೂಕ್ಷ್ಮಾಣುಜೀವಿಗಳನ್ನು ಕುದಿಸುವ ಮೂಲಕ ಅಥವಾ ಕ್ಲೋರಿನ್ ಮೂಲಕ ನಿರ್ಣಾಮ ಮಾಡಿದ ಬಳಿಕ ಕುಡಿಯಲು ಬಳಸಬೇಕು. ನಾವು ಬಳಸುವ ನೀರಿನ ಮೂಲ ಯಾವುದು ಮತ್ತು ಅದು ನಮ್ಮನ್ನು ತಲುಪುವ ಮೊದಲು ಯಾವುದೆಲ್ಲ ರೀತಿಯಲ್ಲಿ ಶುದ್ಧೀಕರಣಗೊಂಡಿದೆ ಎಂದು ತಿಳಿದುಕೊಳ್ಳುವುದು ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.