ADVERTISEMENT

ದೈಹಿಕ ಕ್ಷಮತೆ ಹೆಚ್ಚಳಕ್ಕೆ ದೊಣ್ಣೆ ಮೆಣಸು, ಸಿಂಪಿ

ಮನಸ್ವಿ
Published 12 ಮಾರ್ಚ್ 2021, 19:30 IST
Last Updated 12 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್–19 ಬಂದಾಗಿನಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ಜನರು ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಯೋಗ, ವ್ಯಾಯಾಮದಿಂದ ದೇಹವನ್ನ ಕಾಪಾಡಿಕೊಳ್ಳುವ ಜೊತೆಗೆ ಆಹಾರದಲ್ಲೂ ಕಟ್ಟುನಿಟ್ಟು ಪಥ್ಯವನ್ನು ಪಾಲಿಸುತ್ತಿದ್ದಾರೆ. ದೇಹದಲ್ಲಿ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುವ ಆಹಾರ ಪದಾರ್ಥಗಳ ಸೇವನೆ ಹೆಚ್ಚಿದೆ. ಅಂತಹ ಆಹಾರ ಪದಾರ್ಥಗಳು ದೇಹವನ್ನು ಕಾಯಿಲೆಗಳಿಂದ ರಕ್ಷಿಸುತ್ತವೆ. ಎಲ್ಲ ಕಾಲಕ್ಕೂ ಸಲ್ಲುವ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ.

ಕೆಂಪು ದೊಣ್ಣೆ ಮೆಣಸು:ಪಲ್ಯ, ಬೋಂಡಾ–ಬಜ್ಜಿಯಂತಹ ಖಾದ್ಯ ತಯಾರಿಸಲು ದೊಣ್ಣೆಮೆಣಸು ಬಳಸುವುದು ಸಾಮಾನ್ಯ. ಆದರೆ ಆದಷ್ಟು ಹೆಚ್ಚು ಕೆಂಪುದೊಣ್ಣೆ ಮೆಣಸನ್ನು ಬಳಸಬೇಕು. ಇದರಿಂದ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು. ಇದರಲ್ಲಿರುವ ವಿಟಮಿನ್ ಸಿ ಅಂಶ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚುವಂತೆ ಮಾಡುತ್ತದೆ. ಅಲ್ಲದೇ ಶೀತ, ಜ್ವರದಂತಹ ಸಾಮಾನ್ಯ ರೋಗ ಬಾರದಂತೆ ತಡೆಯುತ್ತದೆ.

ಗ್ರೀನ್ ಟೀ ಸೇವನೆ:ಈ ಕಾಲದಲ್ಲಿ ಕಾಫಿ, ಟೀ ಸೇವನೆಗಿಂತ ಗ್ರೀನ್ ಟೀ ಸೇವನೆ ಬಹಳ ಉತ್ತಮ. ಇದು ದೇಹವು ಕಾಯಿಲೆಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶ ಹೆಚ್ಚಿದ್ದು ದೇಹದಲ್ಲಿನ ಕೆಟ್ಟ ಕೊಬ್ಬಿನಂಶದ ಸಂಗ್ರಹಣೆಯನ್ನು ನಿಯಂತ್ರಿಸುತ್ತದೆ. ಇದರಲ್ಲಿ ಸ್ವಲ್ಪ ಪ್ರಮಾಣದ ಕೆಫಿನ್ ಅಂಶವಿದ್ದು ಇದು ದೇಹವನ್ನು ಆವರಿಸುವ ಆಲಸ್ಯವನ್ನು ದೂರ ಮಾಡುತ್ತದೆ.

ADVERTISEMENT

ಸೋಂಪು ಸೇವಿಸಿ: ಸೋಂಪಿ (ಫೆನೆಲ್)ನಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ. ಅಲ್ಲದೇ ದೇಹಕ್ಕೆ ಅವಶ್ಯಕವಾಗುವ ಖನಿಜಾಂಶಗಳಾದ ಪೊಟ್ಯಾಷಿಯಂ, ಕಬ್ಬಿಣಾಂಶ, ಕ್ಯಾಲ್ಸಿಯಂ, ಜಿಂಕ್‌, ಸತು, ಸಿಲೆನಿಯಂ ಅಂಶಗಳು ಹೆಚ್ಚಿರುತ್ತವೆ. ಇದರ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ ಸೋಂಕು ಉಂಟಾಗುವುದನ್ನು ತಪ್ಪಿಸಬಹುದು.

ಚಿಪ್ಪಿನೊಳಗಿನ ಆಹಾರ: ಸಿಂಪಿ ಅಥವಾ ಕಪ್ಪೆಚಿಪ್ಪು ಸೇವನೆ ತುಂಬಾ ಉತ್ತಮ. ಇದರಲ್ಲಿರುವ ವಿಟಮಿನ್ ಸಿ ಹಾಗೂ ಇ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುವಂತೆ ಮಾಡಿ ಕಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ.

ಸಾಮನ್‌ ಮೀನು: ಮಾಂಸಾಹಾರಿಗಳು ಹೆಚ್ಚು ಇಷ್ಟಪಡುವ ಸಾಮನ್ ಮೀನನ್ನು ಸೇವಿಸುವುದು ಸೂಕ್ತ. ಇದು ದೇಹದಲ್ಲಿ ಟಿ–ಜೀವಕೋಶಗಳ ಸಂಖ್ಯೆಯನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ದೇಹದಲ್ಲಿ ಟಿ–ಜೀವಕೋಶಗಳ ಸಂಖ್ಯೆ ಅಧಿಕ ಇರುವವರಲ್ಲಿ ಕಾಯಿಲೆ ಕಡಿಮೆ ಎಂಬ ಮಾತಿದೆ. ಅಷ್ಟೇ ಅಲ್ಲದೇ ಇದರಲ್ಲಿ ವಿಟಮಿನ್ ಡಿ ಅಂಶ ಅಧಿಕವಿದೆ. ಅದರೊಂದಿಗೆ ಒಮೆಗಾ–3 ಕೊಬ್ಬಿನಂಶವು ಇದರಲ್ಲಿ ಹೆಚ್ಚಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.