ADVERTISEMENT

ಕೈಯಿಂದ ಊಟ ಮಾಡಿದರೆ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ? ಇಲ್ಲಿದೆ ಮಹತ್ವದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 12:24 IST
Last Updated 3 ನವೆಂಬರ್ 2025, 12:24 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಪ್ರಸ್ತುತ ದಿನಗಳಲ್ಲಿ ಆಹಾರವನ್ನು ಕೈಯಿಂದ ಸೇವಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಬಹುತೇಕರು ಚಮಚ ಅಥವಾ ಫೋರ್ಕ್‌ ಬಳಸಿ ಊಟ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ನಮ್ಮ ಪೂರ್ವಜರು ಅನುಸರಿಸಿದ ಕೈಯಿಂದ ಊಟ ಮಾಡುವ ಪದ್ಧತಿ ಆರೋಗ್ಯಕರ ಮತ್ತು ವೈಜ್ಞಾನಿಕವಾಗಿ ಸಮರ್ಥನೀಯವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿರುವ ಈ ಅಭ್ಯಾಸವು ಕೇವಲ ಸಂಪ್ರದಾಯವಲ್ಲ, ಬದಲಿಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಕೈಯಿಂದ ಆಹಾರ ಸೇವಿಸುವುದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ಪೋಷಣಾ ಮತ್ತು ಆಹಾರಶಾಸ್ತ್ರ ವಿಭಾಗದ ವೈದ್ಯರಾದ ಡಾ.ಎಡ್ವಿನಾ ರಾಜ್ ಅವರು ತಿಳಿಸಿದ್ದಾರೆ.  

ADVERTISEMENT

ಕೈಯಿಂದ ಆಹಾರ ಸೇವಿಸುವುದರ ಪ್ರಯೋಜನಗಳೇನು?  

  • ಜೀರ್ಣಕ್ರಿಯೆ ಸುಧಾರಣೆ: ಕೈಯಿಂದ ಆಹಾರ ಸೇವಿಸುವಾಗ ಬೆರಳುಗಳ ತುದಿಯಲ್ಲಿರುವ ಸಂವೇದನಾ ನರಗಳು ಸಕ್ರಿಯವಾಗುತ್ತವೆ. ಈ ಪ್ರಕ್ರಿಯೆ ಮೆದುಳಿಗೆ ಸಂಕೇತವನ್ನು ಕಳುಹಿಸಿ, ಜಠರದಲ್ಲಿ ಜೀರ್ಣರಸಗಳ ಸ್ರವಿಸುವಿಕೆಯನ್ನು ಪ್ರಾರಂಭಿಸುವಂತೆ ಮಾಡುತ್ತದೆ. ಇದರಿಂದ ಆಹಾರ ಜೀರ್ಣವಾಗಲು ಮೊದಲೇ ದೇಹವು ಸಿದ್ಧವಾಗುತ್ತದೆ. ಚಮಚದೊಂದಿಗೆ ಊಟ ಮಾಡುವಾಗ ಈ ನೈಸರ್ಗಿಕ ಪ್ರಕ್ರಿಯೆ ಸಂಭವಿಸುವುದಿಲ್ಲ.

  • ಉತ್ತಮ ಬ್ಯಾಕ್ಟೀರಿಯಾಗಳ ವರ್ಧನೆ: ಕೈಗಳಲ್ಲಿ ಲಕ್ಷಾಂತರ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳು ನೆಲೆಸಿವೆ. ಕೈಗಳನ್ನು ಸ್ವಚ್ಛವಾಗಿ ತೊಳೆದ ನಂತರ ಊಟ ಮಾಡುವಾಗ, ಈ ಉತ್ತಮ ಬ್ಯಾಕ್ಟೀರಿಯಾಗಳು ನಮ್ಮ ಜೀರ್ಣಾಂಗಕ್ಕೆ ಪ್ರವೇಶಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. 

  • ಮೈಂಡ್‌ಫುಲ್‌ ಈಟಿಂಗ್‌ ಅಥವಾ ಸಚೇತನ ಆಹಾರ ಸೇವನೆ: ಕೈಯಿಂದ ಆಹಾರ ಸೇವಿಸುವಾಗ ಆಹಾರದ ಬಗ್ಗೆ ಹೆಚ್ಚು ಜಾಗೃತರಾಗಿರುತ್ತೇವೆ. ಆಹಾರದ ಉಷ್ಣತೆ, ವಿನ್ಯಾಸ ಮತ್ತು ಪ್ರಮಾಣವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಬಹುದು. ಇದರಿಂದ ಮಿತವಾಗಿ ಮತ್ತು ನಿಧಾನವಾಗಿ ತಿನ್ನುವ ಅಭ್ಯಾಸ ಬೆಳೆಯುತ್ತದೆ. ಇದರಿಂದ ಅತಿಯಾದ ಆಹಾರ ಸೇವನೆಯನ್ನು ತಡೆಯಬಹುದು.

  • ರಕ್ತದಲ್ಲಿ ಸಕ್ಕರೆ ನಿಯಂತ್ರಣ: ಕೈಯಿಂದ ಆಹಾರ ಸೇವಿಸುವಾಗ ನಿಧಾನವಾಗಿ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಕ್ರಮೇಣ ಹೆಚ್ಚಾಗುತ್ತದೆ. ಇದು ಮಧುಮೇಹ ರೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿ. ಆಯುರ್ವೇದದ ಪ್ರಕಾರ, ಬೆರಳುಗಳು ಪಂಚಭೂತಗಳನ್ನು ಪ್ರತಿನಿಧಿಸುತ್ತವೆ. ಇವು ಆಹಾರದೊಂದಿಗೆ ಸಂಪರ್ಕದಲ್ಲಿ ಬಂದಾಗ ದೇಹದಲ್ಲಿ ಸಮತೋಲನವನ್ನು ಸೃಷ್ಟಿಸುತ್ತವೆ.

ಚಮಚ ಬಳಕೆಯ ಹಿಂದಿನ ಕಾರಣಗಳೇನು? 

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ನಗರೀಕರಣ ಮತ್ತು ತ್ವರಿತ ಜೀವನಶೈಲಿಯಿಂದಾಗಿ ಚಮಚ, ಫೋರ್ಕ್‌ಗಳ ಬಳಕೆ ಹೆಚ್ಚಾಗಿದೆ. ಹೊರಗಿನ ಆಹಾರ, ಕಚೇರಿ ಸಂಸ್ಕೃತಿ ಮತ್ತು ಸಾಮಾಜಿಕ ಒತ್ತಡಗಳು ಕೈಯಿಂದ ಊಟ ಮಾಡುವ ಪದ್ಧತಿಯ ನಿರ್ಲಕ್ಷಕ್ಕೆ ಕಾರಣವಾಗಿವೆ. ಅನೇಕರು ಕೈಯಿಂದ ಆಹಾರ ಸೇವಿಸುವುದು ಹಳೆಯ ಕಾಲದ ಆಚರಣೆ ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ಇದು ವೈಜ್ಞಾನಿಕವಾಗಿದೆ. 

ಆರೋಗ್ಯಕರ ಅಭ್ಯಾಸಗಳು: 

  • ಕೈಯಿಂದ ಆಹಾರ ಸೇವಿಸುವ ಮೊದಲು ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯುವುದು ಅತ್ಯಗತ್ಯ. ಇದರಿಂದ ಹಾನಿಕಾರಕ ಸೂಕ್ಷ್ಮಜೀವಿಗಳು ದೇಹ ಪ್ರವೇಶಿಸುವುದನ್ನು ತಡೆಯಬಹುದು.

  • ಉಗುರುಗಳನ್ನು ಹೆಚ್ಚು ಬೆಳೆಯಲು ಬಿಡದೆ, ಕತ್ತರಿಸುವುದು ಮತ್ತು ನಿಯಮಿತವಾಗಿ ಕೈಗಳನ್ನು ಸ್ವಚ್ಛವಾಗಿಡುವುದು.

  • ದೈನಂದಿನ ಜೀವನದಲ್ಲಿ ಕನಿಷ್ಠ ಒಂದು ಊಟವನ್ನಾದರೂ ಕೈಯಿಂದ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುವುದು ಸೂಕ್ತ.

  • ಅತುರವಾಗಿ ತಿನ್ನುವ ಬದಲು ನಿಧಾನವಾಗಿ, ಶಾಂತವಾದ ವಾತಾವರಣದಲ್ಲಿ ಊಟ ಮಾಡುವುದು ಉತ್ತಮ.

  • ಕೈಯಿಂದ ಆಹಾರ ಸೇವಿಸುವುದು ನಮ್ಮ ಸಂಸ್ಕೃತಿಯ ಮುಖ್ಯ ಅಂಶ. ಇದನ್ನು  ಅನುಸರಿಸುವುದು ಮತ್ತು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಜವಾಬ್ದಾರಿ. 

(ಡಾ ಎಡ್ವಿನಾ ರಾಜ್ ಅವರು ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಕ್ಲಿನಿಕಲ್ ಪೋಷಣಾ ಮತ್ತು ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದಾರೆ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.