ADVERTISEMENT

PV Web Exclusive | ಮನೋಮಯ: ಇಮೊಜಿಗಳ ಭರಾಟೆ...ಭಾವನೆಗಳ ಮಾರುಕಟ್ಟೆ

ಭಾವಾಭಿವ್ಯಕ್ತಿ ಮರೆಯುತಿಹರೆ ಮಕ್ಕಳು?

ಎಸ್.ರಶ್ಮಿ
Published 15 ಅಕ್ಟೋಬರ್ 2020, 7:19 IST
Last Updated 15 ಅಕ್ಟೋಬರ್ 2020, 7:19 IST
ಶಬ್ದಗಳ ಬದಲಿಗೆ ಇಮೊಜಿಗಳು
ಶಬ್ದಗಳ ಬದಲಿಗೆ ಇಮೊಜಿಗಳು   

ಕಣ್ತುಂಬ ಪ್ರೀತಿ, ತುಟಿಯಂಚಿಗೆ ಮುತ್ತು, ದಳದಳ ಕಣ್ಣಿಂದಿಳಿಯುವ ನೀರು, ನಕ್ಕು ನಕ್ಕು ಕಣ್ಣೀರು, ಕುಹಕದಿಂದ ಹುಬ್ಬೇರಿಸುವ ಚಾಳಿ, ಹುಬ್ಬು ಗಂಟಿಕ್ಕುವುದು, ನಾಚಿ ಕೆನ್ನೆಗೆಂಪಾಯಿತು, ನೀ ಅಂದ್ರೆ ನಂಗಿಷ್ಟ.. ಇನ್ನು ಇಂಥವನ್ನೆಲ್ಲ ಬರೆದು ಯಾವ ಕಾಲವಾಯಿತೋ..?

ನಮ್ಮ ಫೋನಿನಲ್ಲಿ ಶೂರ್ಪನಖಿ ಸಂತಾನ (ಕಿವಿ–ಮೂಗುಗಳಿಲ್ಲದ ಇವಕ್ಕೆ ಇನ್ನೇನು ಅನ್ನಬಹುದು) ಬಂದು ಪ್ರತಿಷ್ಠಾಪಿಸಿದರೆ ಭಾಷೆಗೆ ಬರಬಿದ್ದಂತೆ ನಾವದನ್ನು ಬಳಸತೊಡಗಿದೆವು. ಸಂವಹನ ಸರಳವಾಗಿದ್ದು ಸಹಜ ಮತ್ತು ಸತ್ಯ. ಈ ಪುಟ್ಟ ಜೀವಗಳು ದಬದಬ ಬಂದು ಬೀಳತೊಡಗಿದವು. ನಿನ್ನ ಕಾಳಜಿ ಮಾಡುವೆ, ನಿನ್ನ ತಬ್ಬಿ ಸಂತೈಸುವೆ, ಕಣ್ಣೀರ್ಗರೆಯುವಷ್ಟು ದುಃಖದ ಸಂಗತಿ ಇಂಥವೆಲ್ಲಕ್ಕೂ ಭಾವಾಭಿವ್ಯಕ್ತಿಗೊಳಿಸುವ ಇಮೊಜಿಗಳು ಎಲ್ಲರ ಮನಮೋಜಿಗಳಾಗುವಲ್ಲಿ ಬಹಳ ದಿನಗಳಾಗಲಿಲ್ಲ.

ಆದರೆ...

ADVERTISEMENT

ಸಹಜ, ಸುಲಭವಾಗಿರುವ ಸಂವಹನ, ಭಾಷಾ ಕೌಶಲವನ್ನು ನಿಧಾನವಾಗಿ ಸೊರಗುವಂತೆ ಮಾಡುತ್ತಿದೆಯಂತೆ! ಹದಿಹರೆಯದವರ ಮೇಲೆ ಸಾಮಾಜಿಕ ಜಾಲತಾಣಗಳ ಬಳಕೆಯ ಪರಿಣಾಮದ ಕುರಿತು ವಿಶ್ವ ಆರೋಗ್ಯಸಂಸ್ಥೆ ಕೈಗೊಂಡಿರುವ ಹಲವಾರು ಅಧ್ಯಯನಗಳು ಈ ಬಗ್ಗೆ ಆತಂಕ ವ್ಯಕ್ತ ಪಡಿಸಿವೆ.

ಯೋಚಿಸಬೇಕಾದ ವಿಷಯಗಳಿವು..:

* ಮಕ್ಕಳು ತಮ್ಮದೇ ಆದ ಸ್ಲ್ಯಾಂಗ್‌ಗೆ ಹೆಚ್ಚು ಅವಲಂಬಿತರಾಗಿದ್ದಾರೆ. (Lol, Ystd, ಹೀಗೆ.. ಪೂರ್ಣ ಪದಗಳನ್ನು ಬರೆಯವುದನ್ನು ಬಿಟ್ಟಿದ್ದಾರೆ)

* ಅವರಲ್ಲಿ ಭಾವಾಭಿವ್ಯಕ್ತಿಗೆ ತಕ್ಕಂತೆ ಧ್ವನಿ ಏರಿಳಿತಗಳು ಕಣ್ಮರೆಯಾಗುತ್ತಿವೆ.

* ಆಂಗಿಕ ಅಭಿನಯ ಅಥವಾ ನಾನ್‌ ವರ್ಬಲ್‌ ಕಮ್ಯುನಿಕೇಷನ್‌ ಕಡಿಮೆ ಆಗುತ್ತಿದೆ

* ಹೊಸಬರೊಂದಿಗೆ ವರ್ತಿಸುವುದು ಇವರಿಗೆ ಕಡುಕಷ್ಟ

* ಭಾಷಾ ಕೌಶಲದಲ್ಲಿ ಹಿಂದುಳಿಯುತ್ತಿದ್ದಾರೆ

* ಗುಂಪಿನಲ್ಲಿ ಹರಟೆ, ಮಾತುಕತೆ ಕಡಿಮೆಯಾಗುತ್ತಿದೆ

* ಪರಸ್ಪರ ಟೀಕೆ, ನಗು, ತಮಾಷೆಗೆ ಈ ಜನರೇಷನ್‌ ಮುಕ್ತವಾಗಿ ತೆರೆದುಕೊಳ್ಳುವುದಿಲ್ಲ

* ಮಕ್ಕಳಿಗೆ ನಗುವುದರಲ್ಲಿ ಅದೆಷ್ಟು ಬಗೆ ಅಂತನೂ ಗೊತ್ತಿಲ್ಲ. ಅವರೆಲ್ಲ ನಗುವೂ ಇಮೊಜಿ ಮೂಲಕವೇ ವರ್ಗಾವಣೆ ಆಗುತ್ತಿವೆ.

ಡಿಜಿಟಲ್‌ ಡಿ ಆ್ಯಕ್ಟಿವೇಷನ್‌ ಕೇಂದ್ರದಲ್ಲಿರುವ ಮನೋವೈದ್ಯರಾದ ಡಾ.ಮನೋಜಕುಮಾರ್‌ ಅವರು ಈ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ಮಕ್ಕಳು ಸಾಮಾಜಿಕ ಮತ್ತು ಸಾಮೂಹಿಕ ಪಾಲ್ಗೊಳ್ಳುವಿಕೆಯಿಂದ ದೂರವಾಗುತ್ತಿದ್ದಾರೆ. ಗ್ರೂಪ್‌ ಚಾಟ್‌ಗಳಲ್ಲಿ ಚಟುವಟಿಕೆಯಿಂದ ಇರುವಷ್ಟು ಅವರು ಗುಂಪಿನಲ್ಲಿ ಮಾತುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಇದೀಗ ಆನ್‌ಲೈನ್‌ ಕ್ಲಾಸುಗಳಿಂದಾಗಿಯೂ ಅವರ ಸ್ಕ್ರೀನಿಂಗ್‌ ಟೈಮ್‌ ಹೆಚ್ಚಾಗಿದೆ. ಆಂತರ್ಯದಲ್ಲಿ ಒಬ್ಬರಿಗೆ ಒಬ್ಬರು ಜೊತೆಗಿದ್ದರೂ ಅವರಿಗೆ ’ಸಹವಾಸ’, ‘ಸಹಭಾಗಿತ್ವ’ ಪದಗಳ ಅರ್ಥಗಳನ್ನು ತಿಳಿಹೇಳಬೇಕಾಗಿದೆ.

ಕೆಲವೊಮ್ಮೆ ಅವರಿಗನಿಸಿರುವುದನ್ನು ತಿಳಿಹೇಳುವುದರಲ್ಲಿಯೂ ಅವರು ವಿಫಲರಾಗುತ್ತಿದ್ದಾರೆ. ಹೀಗಾಗಿ ಕೆಲವು ಸಮಸ್ಯೆಗಳಿಗೆ ಸ್ಪಷ್ಟ ಸ್ವರೂಪ ದೊರೆಯುವುದೇ ಇಲ್ಲ. ಇದೂ ಹದಿಹರೆಯದವರಲ್ಲಿ ಒತ್ತಡವನ್ನು ಉಂಟು ಮಾಡುತ್ತಿದೆ ಎನ್ನಲಾಗುತ್ತಿದೆ.

ಹದಿಹರೆಯದ ಮಕ್ಕಳಲ್ಲಿ ಅತಿಹೆಚ್ಚು ಜನಪ್ರಿಯವಾಗಿರುವುದು ಸಂಕೇತ ಭಾಷೆ. ಈ ಸಂಕೇತಗಳಲ್ಲಿ ಅತಿಹೆಚ್ಚು ಮಹತ್ವ ಪಡೆಯುವುದು ಶೂರ್ಪನಖಿ ಸಂತಾನದಂತಿರುವ ಇಮೊಜಿಗಳು. ಈ ಇಮೊಜಿಗಳ ಮೂಲಕ ಸಂವಹನ ಮಾಡುವುದರಿಂದ ಪದಬರ ಅವರಲ್ಲಿ ಸೃಷ್ಟಿಯಾಗುತ್ತಿದೆ. ಕೆಲವೊಮ್ಮೆ ಕಣ್ಣೀರು ಬರುವಂತೆ ನಗುವ ಇಮೊಜಿ ಹಾಕಿದರೂ, ಒಣಗಣ್ಣಿನ ಸಮಸ್ಯೆ, ಒತ್ತಡದ ಸಮಸ್ಯೆಗಳಿಂದ ಮಕ್ಕಳು ಬಳಲುತ್ತಿದ್ದಾರೆ ಎನ್ನುವುದು ಪತ್ತೆ ಹಚ್ಚಲು ಆಗುವುದೇ ಇಲ್ಲ.

ತೀರ ಸ್ಕ್ರೀನ್‌ ಟೈಮಿಂಗ್‌ನಿಂದಾಗಿಯೇ ಹುಟ್ಟುವ ಖಿನ್ನತೆ, ಭಾವತೀವ್ರತೆ, ಆತಂಕ, ಒತ್ತಡ ಇವುಗಳಿಂದ ಬಳಲುವಾಗ ವರ್ತನೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಬಹುತೇಕ ಮಕ್ಕಳಲ್ಲಿ ಟೀಕೆಗಳನ್ನು ಸ್ವೀಕರಿಸುವ, ಕೇಳುವ ಗುಣ ಕಡಿಮೆಯಾಗುತ್ತಿದೆ. ಸ್ವಪ್ರೀತಿಯೆಂಬುದು ಸಂಕೀರ್ಣ ಭಾವವಾಗಿ ಬೆಳೆಯುತ್ತಿದೆ. ಒಂದೋ ಅತಿಪ್ರೀತಿ ಹುಟ್ಟುತ್ತದೆ. ಇಲ್ಲವೇ ಅತಿಯಾದ ತಿರಸ್ಕಾರ ಬೆಳೆಸಿಕೊಳ್ಳುತ್ತಾರೆ. ಇವರ ಪ್ರತಿ ಭಾವಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಲೈಕ್ಸ್‌ ಹಾಗೂ ಕಮೆಂಟುಗಳೇ ಮಾನದಂಡವಾಗಿರುತ್ತವೆ.

ಇವರಿಗೆ ಒಂಟಿತನ ಕಾಡದಿದ್ದರೂ, ಅನುಭವಿಸುವುದಂತೂ ದಿಟ.

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು

* ವರ್ತನಾ ಸಮಸ್ಯೆ: ಇದ್ದಕ್ಕಿದ್ದಂತೆ ಅಳುವುದು, ಸಿಟ್ಟು ಮಾಡಿಕೊಳ್ಳುವುದು, ಸಿಡುಕುವುದು

* ನಿರುತ್ಸಾಹ: ಎಲ್ಲದಕ್ಕೂ ನಿರಾಸಕ್ತಿ ತೋರುವುದು, ಮಲಗಿಯೇ ಅಥವಾ ಮನೆಯಲ್ಲಿಯೇ ಇರುವುದು

* ಹಸಿವಿಲ್ಲದಿರುವುದು: ಈ ಮಕ್ಕಳಿಗೆ ಹಸಿವೆಂಬುದು ಆಗುವುದೇ ಇಲ್ಲ. ಅಪ್ಪ ಅಮ್ಮನ ಒತ್ತಾಯಕ್ಕೆ ಮಣಿದು ಉಣ್ಣುತ್ತಾರೆ. ಇಲ್ಲವೇ ಚಿಪ್ಸ್‌ನಂಥ ಕುರುಕಲು ತಿಂಡಿ, ಬಿಸ್ಕತ್ತುಗಳಿಗೆ ಮೊರೆ ಹೋಗುತ್ತಾರೆ

* ಸಂವಹನ: ಮಾತನಾಡುವಾಗ ಧ್ವನಿಯಲ್ಲಿ ಏರಿಳಿತಗಳಿಲ್ಲದೇ ಇರುವುದು, ಒಂದೋ ಜೋರು ಧ್ವನಿಯ ಮಾತು, ಇಲ್ಲವೇ ಇಳಿ ಧ್ವನಿಯಲ್ಲಿ ಮಾತನಾಡುತ್ತಾರೆ.

*ಕೇಳ್ವಿಕೆಯ ಕೊರತೆ: ಎದುರಿನವರು ಏನು ಮಾತನಾಡುತ್ತಾರೆ ಎಂದು ಕೇಳುವ ಸಂಯಮ ಇರದಂತೆ ವರ್ತಿಸುತ್ತಾರೆ.

ಪರಿಹಾರಗಳು

ಮಕ್ಕಳನ್ನು ಆಗಾಗ ಮಾತಿಗೆಳೆಯಿರಿ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಗಮನಿಸುತ್ತಿರಿ. ಟೀಕೆಗಳಿದ್ದರೆ ಆ ಬಗ್ಗೆ ಪ್ರಶ್ನಿಸಿ, ಅವರಿಗೆ ಹೇಗೆನಿಸಿತೆಂದು ಕೇಳಿ. ನಿರ್ಬಂಧ ಅಥವಾ ನಿಷೇಧ ಹೇರುವ ಬದಲು ಸಾಕಷ್ಟು ಸಮಾಧಾನದಿಂದ ಪರಿಸ್ಥಿತಿಯ ಬಗ್ಗೆ ತಿಳಿಹೇಳಿ.

ಪ್ರತಿದಿನ 7 ಗಂಟೆಗೂ ಹೆಚ್ಚು ಅವಧಿಗೆ ಸ್ಕ್ರೀನ್‌ ಸಮಯದಲ್ಲಿ ಮುಳುಗಿ ಹೋಗಿದ್ದರೆ, ಅಂಥ ಮಕ್ಕಳ ಜೊತೆಗೆ ನೀವು ಕ್ವಾಲಿಟಿ ಟೈಮ್‌ ಕಳೆಯಲೇ ಬೇಕಾದ ಅಗತ್ಯವಿದೆ. ಹಗುರವಾದ ಹರಟೆ, ನಗು, ಭಾವನಾತ್ಮಕ ಅಂಶಗಳನ್ನು ಹೇಳುತ್ತಲೇ ಇರಬೇಕು. ಹಂಚುತ್ತಲೇ ಇರಬೇಕು. ಇಲ್ಲದಿದ್ದರೆ ನಿಮ್ಮ ಜೋಕುಗಳಿಗೂ ಮೆಸೇಜುಗಳಲ್ಲಿಯೇ ಪ್ರತಿಕ್ರಿಯಿಸಬಹುದು.

ಒಟ್ಟಿಗೆ ಸಿನಿಮಾ ನೋಡಿ, ಪುಸ್ತಕ ಓದಿ, ನಿಮ್ಮ ಬಾಲ್ಯದ ನೆನಹುಗಳನ್ನು ಹಂಚಿಕೊಳ್ಳಿ. ಅವರ ಅನುಭವಗಳನ್ನು ಕೇಳಿ, ಮಾತನಾಡಲು ಪ್ರಚೋದಿಸಿ, ಪ್ರೇರೇಪಿಸಿ. ಇಲ್ಲದಿರೆ ನಮ್ಮ ಮಕ್ಕಳು ಭಾವರಹಿತ ಲೋಕದಲ್ಲಿ ಬದುಕಬೇಕಾದೀತು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.