ವಿಪರೀತವಾಗಿ ಅವೈಜ್ಞಾನಿಕವಾಗಿ ಕೆಲಸ ಮಾಡಿದರೆ ಮೂಳೆಗಳು ಸವೆಯುತ್ತವೆ ನಿಜ. ಆದರೆ, ಕ್ರಮಬದ್ಧವಾಗಿ ವ್ಯಾಯಾಮ ಮಾಡುವುದರಿಂದ ಸಂಧಿವಾತಕ್ಕೆ ಪರಿಹಾರವಿದೆ ಎಂಬುದನ್ನು ಮರೆಯುವ ಹಾಗಿಲ್ಲ. ನೋವಿನ ಕೀಲುಗಳು ಮತ್ತು ಅವುಗಳ ಸುತ್ತವಿರುವ ಸ್ನಾಯುಗಳನ್ನು ಬಲಪಡಿಸಲು, ಮೂಳೆ ಸದರವಾಗದಂತೆ ತಡೆಯಲು ವ್ಯಾಯಾಮ ಉತ್ತಮ ರೀತಿಯಲ್ಲಿ ನೆರವು ನೀಡಬಲ್ಲದು. ಊತ ಮತ್ತು ನೋವನ್ನು ನಿಯಂತ್ರಿಸಿ, ಕಾರ್ಟಿಲೆಜ್ ಅನ್ನು ಇನ್ನಷ್ಟು ನಯಗೊಳ್ಳಲು, ಬಿಗಿತ ಕಡಿಮೆಯಾಗಲು ವ್ಯಾಯಾಮ ಸಹಕಾರಿಯಾಗುತ್ತದೆ.
ವ್ಯಾಯಾಮ ನಿಯಮಿತವಾಗಿದ್ದರೆ ದೇಹ ಶೀಘ್ರ ದಣಿವಾಗುವುದನ್ನು ತಪ್ಪಿಸಬಹುದು. ನಿದ್ರೆಯು ಚೆನ್ನಾಗಿ ಬರುತ್ತದೆ. ಕೀಲುಗಳಲ್ಲಿರುವ ಕಾರ್ಟಿಲೆಜ್ ಹದಗೆಟ್ಟಾಗ ಅಸ್ಥಿ ಸಂಧಿವಾತ ಸಂಭವಿಸುತ್ತದೆ. ವ್ಯಾಯಾಮದಿಂದ ದೇಹದೆಲ್ಲೆಡೆಗೆ ರಕ್ತಪೂರೈಕೆ ಸಮರ್ಪಕವಾಗಿ ಆಗುತ್ತದೆ. ಇದರಿಂದ ಕಾರ್ಟಿಲೆಜ್‌ಗೆ ಅಗತ್ಯವಿರುವ ಪೋಷಕಾಂಶಗಳು ರವಾನೆಯಾಗುತ್ತದೆ.
ಅತಿಯಾದ ವ್ಯಾಯಾಮ ಪಟ್ಟುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸಂಧಿವಾತ ಇರುವವರು ಲಘು ವ್ಯಾಯಾಮಗಳನ್ನು ಮಾಡಬೇಕು. ಹಾರ್ಮೋನ್ ಅಸಮತೋಲನ ಮತ್ತು ಹೃದ್ರೋಗದಂಥ ಸಮಸ್ಯೆಗಳಿರುವವರು ವೈದ್ಯರ ನಿಗಾದಲ್ಲಿ ವ್ಯಾಯಾಮಗಳನ್ನು ಮಾಡುವುದು ಒಳಿತು. ಸದಾ ಸೂಕ್ತ ಪಾದರಕ್ಷೆಗಳನ್ನು ಧರಿಸಿ.
ದೈಹಿಕವಾಗಿ ಸದೃಢರನ್ನಾಗಿ ಮಾಡುವುದಲ್ಲದೇ, ಮಾನಸಿಕ ಯೋಗಕ್ಷೇಮವನ್ನು ಸುಸ್ಥಿತಿಯಲ್ಲಿಡುತ್ತದೆ. ದೇಹದ ಎಲ್ಲ ಭಾಗಗಳಿಗೂ ಸರಿಯಾದ ಪೋಷಕಾಂಶ ದೊರೆಯುವುದರಿಂದ ಮನಸ್ಸು ಪ್ರಫುಲ್ಲವಾಗಿರುತ್ತದೆ. ಸಂಧಿವಾತ ಹೊಂದಿರುವವರಲ್ಲಿ ಖಿನ್ನತೆಯು ಸಾಮಾನ್ಯವಾಗಿದ್ದು, ವ್ಯಾಯಾಮದಿಂದ ಪರಿಹಾರ ಸಿಗಬಲ್ಲದು.
ಕೀಲುಗಳು ಎಷ್ಟರ ಮಟ್ಟಿಗೆ ನಮ್ಯವಾಗಿ ಚಲಿಸಬಲ್ಲದು ಎಂಬುದನ್ನು ಮೊದಲು ಗಮನಿಸಿ. ಅದರ ಆಧಾರ ಮೇಲೆ ವ್ಯಾಯಮ ಮಾಡಿ. ಸ್ನಾಯುವಿನ ಶಕ್ತಿ ಮತ್ತು ಧಾರಣಾ ಶಕ್ತಿಯನ್ನು ಹೆಚ್ಚಿಸುವ ವ್ಯಾಯಾಮಗಳನ್ನು ಆಯ್ಕೆ ಮಾಡಿ. ಜಡ ಜೀವನಶೈಲಿಯಿಂದ ಹೊರ ಬರಲು ಏರೋಬಿಕ್ ವ್ಯಾಯಾಮ ಉತ್ತಮ.
ಯಾವಾಗಲೂ ಕಡಿಮೆ ಸ್ಟ್ರೆಚಿಂಗ್ ಇರುವ ವ್ಯಾಯಾಮಗಳನ್ನು ಆರಿಸಿಕೊಳ್ಳಿ. ವಿಶೇಷವಾಗಿ ಸಂಧಿವಾತ ಇರುವವರಲ್ಲಿ ಹರಿದ ಕಾರ್ಟಿಲೆಜ್ ಅನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ವ್ಯಾಯಾಮ ಇರಬೇಕು. ಒಮ್ಮೆಲೇ ಶ್ರಮದಾಯಕ ವ್ಯಾಯಾಮಗಳಿಂದ ಆರಂಭಿಸಬೇಡಿ. ಬದಲಿಗೆ ಲಘು ವ್ಯಾಯಾಮಗಳನ್ನು ಆರಿಸಿಕೊಳ್ಳಿ. ಕೀಲುಗಳ ನೋವಿಗೆ ಬಿರುಸು ನಡಿಗೆಯು ಉತ್ತಮ ಔಷಧವಾಗಬಲ್ಲದು.
ಸಂಧಿವಾತ ಇರುವವರು ಹೆಚ್ಚು ದೈಹಿಕ ಚಟುವಟಿಕೆಯಿಂದ ಇರಬಾರದು ಎಂಬ ತಪ್ಪು ಕಲ್ಪನೆಯಿದೆ. ದೈಹಿಕ ಚಟುವಟಿಕೆ ಮತ್ತು ವಿಶ್ರಾಂತಿಗಳ ನಡುವೆ ಸಮತೋಲನ ಸಾಧಿಸವುದು ಮುಖ್ಯ. ವ್ಯಾಯಾಮವು ವೈಜ್ಞಾನಿಕವಾಗಿ ಇಡೀ ದೇಹಕ್ಕೆ ಅಗತ್ಯವಿರುವಷ್ಟು ಮಾಡಬೇಕು. ಬದಲಿಗೆ ಕೇವಲ ನೋವುಪೀಡಿತ ಕೀಲುಗಳನ್ನು ಗಮನದಲ್ಲಿಟ್ಟುಕೊಂಡು ವ್ಯಾಯಾಮ ಮಾಡಿದರೆ ನೋವು ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚು.
ಹಿರಿಯ ಫಿಸಿಯೋಥೆರಪಿಸ್ಟ್, ಎಸ್‌ಬಿಎಫ್ ಹೆಲ್ತ್‌ಕೇರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.