ADVERTISEMENT

ಮಂಕಾದ ಮಗುವಿನಲ್ಲಿ ನಗು ಅರಳಿಸಿ: ವೈದ್ಯರ ಸಲಹೆ ಹೀಗಿದೆ...

ಡಿ.ಎಂ.ಹೆಗಡೆ
Published 16 ಫೆಬ್ರುವರಿ 2025, 23:30 IST
Last Updated 16 ಫೆಬ್ರುವರಿ 2025, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನನಗೆ ಈ ವರ್ಷ ವಿಚ್ಛೇದನವಾಗಿದೆ. ಮಗಳ ಕಸ್ಟಡಿ ತಾಯಿಗೆ ದೊರೆತಿದೆ. ವಾರಕ್ಕೆ ಒಮ್ಮೆ ಭೇಟಿಯ ಅವಕಾಶ ನೀಡಲಾಗಿದೆ. ಮಗು ಮಂಕಾದಂತೆ ಅನಿಸುತ್ತಿದೆ. ಅವಳ ಬೆಳವಣಿಗೆಗೆ ತೊಂದರೆಯಾಗದಂತೆ ಹೇಗೆ ನೋಡಿಕೊಳ್ಳಬೇಕು? ಮಗಳ ವಯಸ್ಸು 11.

ಪಾಲಕರ ಇಂಥ ನಿರ್ಧಾರಗಳಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ ಎನ್ನುವುದು ನಿಜ. ಸ್ನೇಹಿತರ ಎದುರಿಗೆ ಅವರಿಗೆ ಅವಮಾನವಾಗುತ್ತದೆ. ಅವರು ನಿರುತ್ತರಿಗಳಾಗುತ್ತಾರೆ. ಕುಗ್ಗುತ್ತಾರೆ. ತಮ್ಮದಲ್ಲದ ತಪ್ಪಿಗೆ ಅವರು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇರಲಿ. 

ADVERTISEMENT

ಮಕ್ಕಳ ಮನಸ್ಥಿತಿಯನ್ನು ಅರಿತುಕೊಂಡು ವ್ಯವಧಾನದಿಂದ ವ್ಯವಹರಿಸುವ ಪಾಲಕರು ಕಡಿಮೆ. ಹಿರಿಯರಿಲ್ಲದ ಮನೆಯಲ್ಲಿ ನಿಜಕ್ಕೂ ತೊಂದರೆಯಾಗುವುದು ಪುಟ್ಟ ಮಕ್ಕಳಿಗೆ. ಮನೆತುಂಬಾ ಜನರಿರುವ ಸಂಸಾರದಲ್ಲಿ ಮಕ್ಕಳು ಆಡೋಡಿಕೊಂಡು ಬೆಳೆದುಬಿಡುತ್ತಾರೆ. ಅಜ್ಜ ಅಜ್ಜಿಯರಿಗೆ ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಸಾಕಷ್ಟು ಅನುಭವಗಳಾಗಿರುತ್ತವೆ. ಅದರ ಪ್ರಯೋಜನವು ಮೊಮ್ಮಕ್ಕಳಿಗೆ ಆಗುತ್ತದೆ.

ಸೋಜಿಗದ ವಿಷಯವೇನೆಂದರೆ, ಜೀವ ಜಗತ್ತಿನಲ್ಲಿ ಮನುಷ್ಯನನ್ನು ಬಿಟ್ಟು ಉಳಿದ ಎಲ್ಲಾ ಪ್ರಾಣಿಗಳಿಗೂ ತೀರಾ ಸಹಜವಾಗಿಯೇ ಪೇರೆಂಟಿಂಗ್‌ ಗೊತ್ತಿದೆ. ನಮಗೆ ಮಾತ್ರ ಸರಿಯಾದ ಪೇರೆಂಟಿಂಗ್‌ ಹೇಗೆನ್ನುವುದು ಗೊತ್ತಿಲ್ಲ. ಅದರ ಪರಿಣಾಮದಿಂದಾಗಿಯೇ ಇವತ್ತಿನ ಸಮಾಜ ಹೀಗಿದೆ.

ಪರಸ್ಪರ ಪ್ರೀತಿ ವಿಶ್ವಾಸದಿಂದ ಇರುವ ಪಾಲಕರ ನಡುವೆ ಬೆಳೆದ ಮಕ್ಕಳ ಮಾನಸಿಕ ಬೆಳವಣಿಗೆ ಹೆಚ್ಚು ಸಹಜವಾಗಿರುತ್ತದೆ. ಜಗಳಾವಾಡುವ, ಬಡಿದಾಡುವ, ದುರಭ್ಯಾಸವಿರುವ ಪಾಲಕರ ನಡುವೆ ಬೆಳೆದ ಮಕ್ಕಳ ಮನಸ್ಥಿತಿ ಗಾಸಿಗೊಂಡಿರುತ್ತದೆ. ಅವರು ಹೆಚ್ಚು ಅಸಮತೋಲನ ಮನಸ್ಥಿತಿಯನ್ನು ಹೊಂದಿರುತ್ತಾರೆ. ಯಾವಾಗಲೂ ಬದಲಾಗುತ್ತಿರುವ ಕಾಲವೂ ಈಗೀಗ ಹೆಚ್ಚು ಅವರಸರದಲ್ಲಿರುವಂತೆ ಕಾಣುತ್ತದೆ. ಬದಲಾವಣೆಗಳು ಯಾವಾಗಲೂ ಧನಾತ್ಮಕವಾಗಿಯೇ ಇರಬೇಕಂತಿಲ್ಲ. ಅವಘಡಗಳೂ ಬದಲಾವಣೆಯ
ಭಾಗವೇ ಆಗಿವೆ.

ಮಗಳು ಮಂಕಾಗಿರುವುದಕ್ಕೆ ನೀವು ಬೇರೆಯಾಗಿದ್ದು ಮಾತ್ರವೇ ಕಾರಣವಾಗಿರಲಾರದು. ಅವಳಿಗೂ ವಯೋಸಹಜವಾದ ಆತಂಕಗಳಿರಬಹುದು. ಅವಳೂ ತನ್ನನ್ನು ತಾನು ಸಂತೈಸಿಕೊಂಡು ಬದುಕುವುದಕ್ಕೆ ಮೌನವಾಗಿ ಪ್ರಯತ್ನಿಸುತ್ತಿರಬಹುದು.

ಮಗಳನ್ನು ಭೇಟಿಯಾದಾಗ ಏನು ಮಾಡಬಹುದು?

ಮಗಳನ್ನು ವಾರಕೊಮ್ಮೆ ಭೇಟಿ ನೀಡುವ ಅವಕಾಶ ಸಿಕ್ಕಿದೆ. ಸಾಧ್ಯವಾದಷ್ಟೂ ಸಹನೆಯಿಂದ, ಪ್ರೀತಿಯಿಂದ ನಡೆದುಕೊಳ್ಳಿ. ಅವಳ ತಾಯಿಯ ಬಗ್ಗೆ ಏನನ್ನೂ ಕೆಟ್ಟದ್ದಾಗಿ ಹೇಳಬೇಡಿ. ಆಕೆಯ ಬಗ್ಗೆ ಸಂಶಯದಿಂದಲೋ, ಅಸೂಯೆಯಿಂದಲೋ ಏನನ್ನೂ ವಿಚಾರಿಸಬೇಡಿ. ನಿಮ್ಮ ಹೆಂಡತಿ ನಿಮ್ಮ ಬಗ್ಗೆ ಏನನ್ನಾದರೂ ಕೆಟ್ಟದ್ದಾಗಿ ಮಗಳಿಗೆ ಹೇಳಿದ್ದಿರಬಹುದೇನೋ ಎನ್ನುವುದನ್ನೂ ವಿಚಾರಿಸಬೇಡಿ. ಮಗಳ ಮನಸ್ಸಿನ ಧಾವಂತಕ್ಕೆ ಸಾಂತ್ವನದ ಮಾತಾಡಿ. ಅಗತ್ಯವೆನಿಸಿದರೆ ಆಪ್ತಸಮಾಲೋಚಕರ ಬಳಿಗೆ ಕರೆದುಕೊಂಡು ಹೋಗಿ. ಅವಳ ಆಸೆ, ಅನಿಸಿಕೆಗಳನ್ನು ತಿಳಿದುಕೊಳ್ಳಿ. ಎಂಥದ್ದೇ ಸಂದರ್ಭದಲ್ಲಿಯೂ, ನೀವು ಅವಳಿಗೆ ನೆರಳಾಗಿ ಇರುತ್ತೀರಿ ಎನ್ನುವುದನ್ನು ಅವಳಿಗೆ ಮನದಟ್ಟು ಮಾಡಿ. ಅವಳ ಗೆಳೆಯರ ಬಗ್ಗೆ ತಿಳಿದುಕೊಳ್ಳಿ.

ಬದುಕಿನಲ್ಲಿ ಭರವಸೆ ಬರುವಂತೆ, ಆಕೆ ಏನನ್ನಾದರೂ ಸಾಧಿಸುವ ಸಾಧ್ಯತೆಗಳ ಬಗ್ಗೆ ತಿಳಿಸಿ ಹೇಳಿ. ಅವಳ ಕನಸುಗಳು ನನಸಾಗಲಿಕ್ಕೆ ನೀವು ಸಹಾಯಮಾಡುವುದಾಗಿ ಹೇಳಿ. ಅದರಂತೆ ನಡೆದುಕೊಳ್ಳಿ. ಅಪ್ಪಿತಪ್ಪಿಯೂ ಮನಸ್ಸಿಗೆ ನೋವಾಗುವ ಹಾಗೆ ಹಂಗಿಸಿ ಮಾತನಾಡಬೇಡಿ. ಆಗಾಗ ಉಪಯುಕ್ತವಾದ ಉಡುಗೊರೆಗಳನ್ನು ಕೊಡಲು ಪ್ರಯತ್ನಿಸಿ.

ಯಾವತ್ತಿದ್ದರೂ ಅವಳು ನಿಮ್ಮ ಬದುಕಿನ ಮೊದಲ ರಾಜಕುಮಾರಿ ಎನ್ನುವ ಹಾಗೆ ಅವಳೊಂದಿಗೆ ಅಭಿಮಾನದಿಂದ ಇರಿ. ಅವಳಿಗೆ ಅಗತ್ಯಕ್ಕಿಂತ ಹೆಚ್ಚು ಹಣವನ್ನು ಕೊಡಬೇಡಿ. ಅವಳ ಆಸೆ, ಅಭಿರುಚಿಗಳಿಗೆ, ಅವಳ ಸಾಧನೆಗೆ ಶಕ್ತಿಯಾಗಿ ಇರಿ. ಅವಳು ಕರೆದಲ್ಲೆಲ್ಲಾ ಜೊತೆಗೆ ಹೋಗಿ. ಅವಳಿಗೆ ಇರುಸು ಮುರುಸು ಆಗುವ ಕಡೆಗಳಿಗೆ ಹೋಗಬೇಡಿ.

ಒಟ್ಟಿನಲ್ಲಿ ನಿಮ್ಮ ಮಗಳು ಒಬ್ಬ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳುವುದಕ್ಕೆ ನಿಮ್ಮಿಂದ ಏನೇನು ಸಾಧ್ಯವೋ ಅವೆಲ್ಲವನ್ನೂ ಮಾಡಿ. ಸಂಬಂಧಗಳ ಬಗ್ಗೆ ನಂಬಿಕೆ ಬರುವಂತೆ ಸಹಜವಾಗಿ ನಡೆದುಕೊಳ್ಳಿ. ಒಳ್ಳೆಯದಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.