ADVERTISEMENT

ಮಕ್ಕಳ ಡಬ್ಬಿಗೆ ಹಣ್ಣು ತರಕಾರಿ ಇರಲಿ

ಪ್ರಜಾವಾಣಿ ವಿಶೇಷ
Published 31 ಮೇ 2019, 19:30 IST
Last Updated 31 ಮೇ 2019, 19:30 IST
   

ಚಿಣ್ಣರ ಬೇಸಿಗೆ ರಜಾ ದಿನಗಳು ಮುಗಿದಿವೆ. ಸುಮಾರು ಎರಡು ತಿಂಗಳ ಕಾಲ ರಜಾದ ಮಜಾ ಅನುಭವಿಸಿದ ಮಕ್ಕಳು ಮರಳಿ ಶಾಲೆಗೆ ಹೋಗಲು ಶುರು ಮಾಡಿದ್ದಾರೆ. ರಜೆಯಲ್ಲಿ ಅನುಭವಿಸಿದ ಮನರಂಜನೆ, ತಮಾಷೆ, ಆಡಿದ ಆಟಗಳು, ಪ್ರವಾಸ, ಅಜ್ಜನ ಮನೆಯ ಪಯಣ, ಬೇಸಿಗೆ ಶಿಬಿರ.. ಈ ಎಲ್ಲದಕ್ಕೂ ಬೈ ಹೇಳಿ ಹೊಸ ಪಠ್ಯಪುಸ್ತಕಗಳು, ನೋಟ್‌ಬುಕ್‌ಗಳನ್ನು ಶಾಲಾ ಬ್ಯಾಗಿಗೆ ಸೇರಿಸುವ ಸಮಯವಿದು. ರಜೆಯಲ್ಲಿ ಮರೆತ ಓದಿನ ಬಗ್ಗೆ ಶಿಕ್ಷಕರು ಏನನ್ನುವರೋ, ಕೊಟ್ಟ ಮನೆಪಾಠ ಮುಗಿಸಿಲ್ಲದ್ದಕ್ಕೆ ಎಷ್ಟು ಬೈಗಳ ತಿನ್ನಬೇಕೋ, ಹೊಸ ಪಠ್ಯಪುಸ್ತಕದಲ್ಲಿ ಏನೇನಿದೆಯೋ ಎಂಬ ಚಿಂತೆ ಮಕ್ಕಳಿಗೆ.

ಆದರೆ ತಾಯಂದಿರಿಗೆ ಇನ್ನೊಂದು ಬಗೆಯ ಚಿಂತೆ. ನಿತ್ಯ ಪುಟ್ಟ ಮಕ್ಕಳಿಗೆ ಲಂಚ್‌ ಬಾಕ್ಸ್‌ ಸಿದ್ಧಪಡಿಸಬೇಕು, ಮಕ್ಕಳಿಗೆ ಇಷ್ಟವಾಗದೇ ಹಾಗೇ ಉಳಿಸಿಕೊಂಡು ವಾಪಸ್‌ ತಂದರೆ ಎಂಬ ಕಾಳಜಿ. ಅವರಿಗೆ ಇಷ್ಟವಾದ ಆರೋಗ್ಯಕರ ಹಾಗೂ ರುಚಿಕರ ತಿನಿಸುಗಳನ್ನು ಹುಡುಕುವುದೇ ಒಂದು ಸಾಹಸವಾಗಿ ಬಿಡುತ್ತದೆ. ಅಂತಹ ತಾಯಂದಿರು ಮಾಡಬಹುದಾದ ಕೆಲವು ಸುಲಭವಾದ ತಿನಿಸುಗಳು ಇಲ್ಲಿವೆ.

ಒಣ​ ಹಣ್ಣು ಮತ್ತು ಬೀಜ

ADVERTISEMENT

ಮಕ್ಕಳಿಗೆ ಪೌಷ್ಟಿಕ ಆಹಾರ ತಿನ್ನಿಸುವುದು ಹರ ಸಾಹಸವೇ ಸರಿ. ಅದರಲ್ಲೂ ಬಾದಾಮಿ, ಪಿಸ್ತಾದಂತಹ ಒಣ ಹಣ್ಣುಗಳು, ಬೀಜಗಳನ್ನು ತಿನ್ನಿಸುವುದು ಇನ್ನೂ ಕಷ್ಟ. ಆದರೆ ಶಾಲೆಗೆ ಒಯ್ಯುವ ಡಬ್ಬಿಯಲ್ಲಿ ಬಾದಾಮಿ, ಖರ್ಜೂರ, ಉತ್ತುತ್ತೆ, ಪಿಸ್ತಾ, ಗೋಡಂಬಿ, ಅಂಜೂರ, ಒಣ ದ್ರಾಕ್ಷಿಯನ್ನು ಒಂದು ಹಿಡಿಯಷ್ಟು ಹಾಕಿಕೊಡಿ. ಅದಕ್ಕೆಂದೇ ಸಿಗುವ ಪುಟ್ಟ ಡಬ್ಬಿಯಲ್ಲಿ ಇವುಗಳನ್ನು ಇರಿಸುವುದು ಒಳಿತು. ಪುಟ್ಟ ಮಕ್ಕಳಿಗೆ ನೀಡುವ ಸ್ನ್ಯಾಕ್‌ ಬಿಡುವಿನಲ್ಲಿ ತಿಂದು ಖುಷಿಪಡದಿದ್ದರೆ ಹೇಳಿ. ಅವುಗಳನ್ನು ಪುಡಿ ಮಾಡಿ ಸ್ವಲ್ಪ ಸಕ್ಕರೆ, ತುಪ್ಪ ಸೇರಿಸಿ ಉಂಡೆಯನ್ನೂ ಮಾಡಿ ಕೊಡಬಹುದು.

ಮಗುವಿಗೆ ಈ ವಯಸ್ಸಿನಲ್ಲಿಯೇ ತರಕಾರಿ ತಿನ್ನಿಸುವ ಅಭ್ಯಾಸ ಮಾಡಿಸುವುದು ಒಳಿತು. ರಂಗು ರಂಗಿನ ತರಕಾರಿಗಳಾದ ಕ್ಯಾರೆಟ್‌, ಬೀಟ್‌ರೂಟ್‌, ಟೊಮೆಟೊ, ಸೌತೆಕಾಯಿ ಮೊದಲಾದ ತರಕಾರಿಗಳನ್ನು ತೆಳುವಾಗಿ, ಉದ್ದವಾಗಿ ಸೀಳಿ. ಇದಕ್ಕೆ ಟೊಮೆಟೊ ಸಾಸ್‌, ಖರ್ಜೂರದ ಸಾಸ್‌ ಅಥವಾ ಪೀನಟ್‌ ಬಟರ್‌ ಅನ್ನು ಕಟ್ಟಿಕೊಡಿ. ಅದ್ದಿಕೊಂಡು ಚಪ್ಪರಿಸಿ ತಿನ್ನದಿದ್ದರೆ ಹೇಳಿ.

ಸ್ಯಾಂಡ್‌ವಿಚ್‌

ಬ್ರೆಡ್‌ ಸ್ಯಾಂಡ್‌ವಿಚ್‌ ಮಾಡಿಕೊಡಿ. ಇದಕ್ಕೆ ಟೊಮೆಟೊ, ಸೌತೆಕಾಯಿ, ಕ್ಯಾಬೇಜ್‌ ಚೂರನ್ನು ಹಾಕಿ. ಜೊತೆಗೆ ಬೇಯಿಸಿದ ಮೊಟ್ಟೆ ಚೂರು, ಚೀಸ್‌ ಹಾಕಬಹುದು. ಟೊಮೆಟೊ ಸಾಸ್‌ ಅಥವಾ ಬೆಣ್ಣೆಯನ್ನು ಹಾಕಿ ತವಾದ ಮೇಲೆ ಬಿಸಿ ಮಾಡಿ ಡಬ್ಬಿಗೆ ಹಾಕಿ. ಇದರಂತೆ ಬಾಳೆಹಣ್ಣಿನ ಚೂರುಗಳನ್ನು ಕೂಡ ಹಾಕಬಹುದು.

ಇದರಂತೆ ಚಪಾತಿ ಮೇಲೆ ತುರಿದ ಕ್ಯಾರೆಟ್‌, ಬೀಟ್‌ರೂಟ್‌ ಹಾಕಿ. ಜೊತೆಗೆ ಒಂದಿಷ್ಟು ಸಾಸ್‌ ಅಥವಾ ಪೀನಟ್‌ ಬಟರ್‌ ಹಾಕಿ, ಸುರುಳಿ ಸುತ್ತಿ ಕೊಡಿ. ಸುವಾಸನೆಭರಿತ ಯೋಗ್ಹರ್ಟ್‌‍ ಕಪ್‌ ಅನ್ನು ಮಗುವಿನ ಚೀಲದಲ್ಲಿ ಹಾಕಿ ಕಳುಹಿಸಿಕೊಡಿ. ನಿಮ್ಮ ಮಗು ಅದನ್ನು ಊಟದ ಜೊತೆ ತಿನ್ನುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಬೇಯಿಸಿದ ಕಡಲೆಬೀಜ, ಬಟಾಣಿಗೆ ಒಂದಿಷ್ಟು ಉಪ್ಪು, ಚಾಟ್‌ ಪುಡಿ ಉದುರಿಸಿ ಪುಟ್ಟ ಡಬ್ಬಿಯಲ್ಲಿ ಹಾಕಿಕೊಟ್ಟರೆ ಅಮ್ಮನನ್ನು ನೆನೆಸಿಕೊಂಡು ತಿನ್ನದೇ ಬಿಡುವುದಿಲ್ಲ.

***

ಹಣ್ಣಿನ ಚೂರು

ಬಣ್ಣದ ಹಣ್ಣುಗಳೆಂದರೆ ಮಕ್ಕಳಿಗೆ ಇಷ್ಟವೇ. ಅದರಲ್ಲೂ ಆಯಾ ಕಾಲದ ಹಣ್ಣುಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಲಭ್ಯವಿದ್ದು, ಮಕ್ಕಳಿಗೆ ಅದರ ರುಚಿ ಹತ್ತಿಸಿದರೆ ಸಾಕು, ನಿತ್ಯ ತಾವೇ ಬೇಡಿ ತೆಗೆದುಕೊಂಡು ಹೋಗುತ್ತವೆ. ಸದ್ಯ ಕಲ್ಲಂಗಡಿ, ಕರಬೂಜ, ಮಾವಿನ ಹಣ್ಣು, ಪೇರಳೆ ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ಜೊತೆಗೆ ಸಪೋಟ, ದ್ರಾಕ್ಷಿ, ದಾಳಿಂಬೆ ಕೂಡ ಸಾಕಷ್ಟು ಬರುತ್ತಿವೆ. ಇವುಗಳನ್ನು ಚೆನ್ನಾಗಿ ತೊಳೆದು, ವಿವಿಧ ಆಕಾರದಲ್ಲಿ ಕತ್ತರಿಸಿ ಅವರ ಊಟದ ಡಬ್ಬಿಗೆ ಹಾಕಿ. ಬಣ್ಣ, ಬಣ್ಣದ ರಸಪೂರಿತ ಹಣ್ಣನ್ನು ಮಕ್ಕಳು ಇಷ್ಟಪಟ್ಟು ತಿನ್ನದಿದ್ದರೆ ಹೇಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.