ADVERTISEMENT

ಕ್ಷೇಮ ಕುಶಲ: ಕೂದಲಿನ ಆರೋಗ್ಯಕ್ಕೆ ಬೇಡ ಕತ್ತರಿ

ಡಾ.ವಿಜಯಲಕ್ಷ್ಮಿ ಪಿ.
Published 22 ಸೆಪ್ಟೆಂಬರ್ 2025, 23:30 IST
Last Updated 22 ಸೆಪ್ಟೆಂಬರ್ 2025, 23:30 IST
   

ಕಪ್ಪು, ಕೆಂಚು, ಹೊಂಬಣ್ಣ - ಇವು ಕೂದಲಿನ ಸಹಜವಾದ ಬಣ್ಣಗಳೇ. ದೃಢವಾದ, ಮೃದುವಾದ, ದಟ್ಟವಾದ, ನೀಳವಾದ ಕೂದಲು ಕೆಲವರಿಗಿದ್ದರೆ, ಗುಂಗುರು ಕೂದಲಿನ ಸೌಂದರ್ಯವೇ ಬೇರೆ. ಇವೆಲ್ಲವೂ ಕೂದಲಿನ ಸ್ವಭಾವಗಳೇ. ಕೂದಲಿನ ಸ್ವಭಾವಗಳು ಸಾಧಾರಣವಾಗಿ ವಂಶವಾಹಿಗಳ ಮೇಲೆ ಅವಲಂಬಿಸಿರುತ್ತವೆ. ಸಹಜವಾದ ಕೂದಲಿನ ಸ್ವಭಾವವನ್ನು ಬದಲಿಸುವುದು ಸಾಧ್ಯವಿಲ್ಲ. ರಾಸಾಯನಿಕಗಳನ್ನು ಬಳಸಿ ಮತ್ತು ಕೆಲವು ಕೇಶವಿನ್ಯಾಸದ ಸಾಧನಗಳಿಂದ ಕೂದಲಿನ ಸಹಜ ಸ್ವಭಾವಗಳು ವ್ಯತ್ಯಾಸವಾಗುವಂತೆ ಮಾಡಿದರೂ ಅದು ಅಲ್ಪಕಾಲಕ್ಕಷ್ಟೇ ಉಪಯುಕ್ತ. ರಸಾಯನಿಕಗಳ ಉಪಯೋಗ ಕೂದಲಿನ ಮತ್ತು ತಲೆಯ ಚರ್ಮದ ಆರೋಗ್ಯದ ಮೇಲೆ ವಿಪರಿಣಾಮವನ್ನು ಬೀರುತ್ತದೆ. ಕೂದಲು ಉದುರುವಿಕೆ, ಹೊಟ್ಟು, ತಲೆಯಲ್ಲಿ ಸೋರಿಯಾಸಿಸ್ ಮೊದಲಾದ ರೋಗಗಳಿಗೂ ಕಾರಣವಾಗುತ್ತದೆ. ಹಾಗಾಗಿ ರಾಸಾಯನಿಕಗಳನ್ನು ಕೂದಲಿಗೆ ಬಳಸುವ ಮುನ್ನ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕು.

ಕೂದಲು ಉದುರುವಿಕೆ:

ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವನ, ವಾರ್ಧಕ್ಯಗಳು ಇರುವಂತೆ ಕೂದಲುಗಳಿಗೂ ಬೆಳೆಯುವ ಕಾಲ, ಸ್ವಸ್ಥವಾಗಿರುವ ಕಾಲ, ಹಣ್ಣಾಗಿ ಉದುರುವ ಕಾಲಗಳಿರುತ್ತವೆ. ಆದ್ದರಿಂದ ಎಷ್ಟೇ ಗಮನ ವಹಿಸಿದರೂ ತಲೆ ಬಾಚಿದಾಗ ನಿತ್ಯವೂ ನಾಲ್ಕಾರು ಕೂದಲುಗಳು ಉದುರುವುದು ಸಾಮಾನ್ಯ; ಆದರೆ ಅದು ಅತಿಯಾದರೆ ರೋಗವಾಗಬಹುದು. ಇದಕ್ಕೆ ಆನುವಂಶಿಕತೆ ಒಂದು ಕಾರಣವಾದರೆ, ಪೌಷ್ಟಿಕಾಂಶಗಳ ಕೊರತೆ ಕೂಡ ಮುಖ್ಯ ಕಾರಣವಾಗುತ್ತದೆ. ಥೈರಾಡ್‌ ಗ್ರಂಥಿಯ ಸ್ರವಿಸುವಿಕೆಯ ವ್ಯತ್ಯಾಸ, ಇತರೆ ರೋಗಗಳೂ ಕೂದಲು ಉದುರುವಿಕೆ ಅಥವಾ ಬೋಳುತಲೆಗೆ ಕಾರಣವಾಗುತ್ತದೆ. ಕೂದಲಿಗೆ ಮಾಡುವ ಆರೈಕೆಯ ಮೂಲಕ, ಮತ್ತು ನಾವು ಸೇವಿಸುವ ಆಹಾರದ ಮೂಲಕ ಕೂದಲಿಗೆ ಪೌಷ್ಟಿಕಾಂಶಗಳು ಪೂರೈಕೆಯಾಗುತ್ತವೆ. ಆಹಾರದ್ರವ್ಯಗಳ ಸಂಸ್ಕಾರ ವ್ಯತ್ಯಾಸದಿಂದ ಅಥವಾ ವಿರುದ್ಧಾಹಾರಗಳ ಸೇವನೆಯಿಂದ ಕೂದಲಿನ ಆರೋಗ್ಯ ಹಾಳಾಗಬಹುದು. ಬಿಸಿಲಿನಲ್ಲಿ ಅತಿಯಾಗಿ ಕೆಲಸ ಮಾಡುವುದು, ಅತಿಯಾದ ತಿರುಗಾಟ, ಸುದೀರ್ಘಕಾಲ ಸಕಾಲದಲ್ಲಿ ಸುಖವಾಗಿ ನಿದ್ರೆ ಮಾಡದಿರುವುದು ಸಹ ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. ಆದ್ದರಿಂದ ಕೂದಲು ಸೊಂಪಾಗಿ ಬೆಳೆಯಲು ಎಣ್ಣೆ ಹಚ್ಚುವುದರ ಜೊತೆಗೆ ದೈಹಿಕ ಆರೋಗ್ಯ ರಕ್ಷಣೆಯೂ ಮುಖ್ಯವಾಗುತ್ತದೆ. ಭೃಂಗರಾಜ, ನೆಲ್ಲಿಕಾಯಿ, ಒಂದೆಲಗ, ಕರಿಬೇವಿನ ಸೋಪ್ಪು ಇವುಗಳನ್ನು ಹಾಕಿ ಕುದಿಸಿ ತಯಾರಿಸಿರುವ ಎಣ್ಣೆಯನ್ನು ನಿತ್ಯವೂ ತಲೆಗೆ ಹಚ್ಚುವುದರಿಂದ ತಲೆಕೂದಲು ಉದುರುವುದು ಕಡಿಮೆಯಾಗುತ್ತದೆ.

ADVERTISEMENT

ಬಾಲನೆರೆ, ಅಧವಾ ಕೂದಲು ಕೆಂಚು ಅಧವಾ ಬಿಳಿಬಣ್ಣಕ್ಕೆ ತಿರುಗುವುದು: ಕರಿದ ಪದಾರ್ಥಗಳು, ವಿಪರೀತ ಖಾರ, ಮದ್ಯ ಅಥವಾ ಕ್ಷಾರೀಯ ಪಾನೀಯಗಳ ನಿರಂತರ ಸೇವನೆ, ಅತಿಯಾದ ಉಪವಾಸ, ಅಕಾಲ ಭೋಜನ, ಅಮ್ಲಪಿತ್ತಕ್ಕೆ ಕಾರಣವಾಗುವಂತಹ ಆಹಾರಗಳ ಸೇವನೆ – ಇವು ಬಾಲನೆರೆ ಅಥವಾ ಬಿಳಿಕೂದಲಿಗೆ ಕಾರಣಗಳಾಗುತ್ತವೆ. ತಲೆಗೆ ಸ್ನಾನ ಮಾಡುವ ನೀರಿನಲ್ಲಿ ಕ್ಷಾರೀಯಾಂಶ, ಕ್ಲೋರಿನ್ ಅಂಶ ಹೆಚ್ಚಿದ್ದರೆ ಇವುಗಳ ನಿರಂತರ ಉಪಯೋಗದಿಂದಲೂ ನೆರೆಕೂದಲು ಬರುವ ಸಾಧ್ಯತೆ ಇರುತ್ತದೆ. ಅತಿಯಾದ ಸಿಟ್ಟು, ದ್ವೇಷ ಮುಂತಾದ ಮನೋವಿಕೃತಿಗಳೂ ನೆರೆಗೂದಲಿಗೆ ಕಾರಣವಾಗುತ್ತವೆ. ಪಿತ್ತ ಹೆಚ್ಚಾಗುವ ಆಹಾರಗಳ ನಿರಂತರ ಸೇವನೆಯನ್ನು ತ್ಯಜಿಸುವುದಿಂದ, ಮನಸ್ಸನ್ನು ಶಾಂತವಾಗಿರುವುದರಿಂದ ಬಾಲನೆರೆಯನ್ನು ತಡೆಯಬಹುದು. ಮೆಹಂದಿ, ಮೆಂತ್ಯ, ಭೃಂಗರಾಜ, ನೆಲ್ಲಿಕಾಯಿ ಇವುಗಳಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದಲೂ, ಈ ದ್ರವ್ಯಗಳನ್ನು ಸುಟ್ಟು ಬಂದ ಮಸಿಗೆ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ ಬೆರೆಸಿ ವಾರಕ್ಕೊಮ್ಮೆ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದಲೂ ನೆರೆಕೂದಲನ್ನು ಹೊಗಲಾಡಿಸಬಹುದು.

ತಲೆಹೊಟ್ಟು:

ತಲೆಯ ಚರ್ಮದಲ್ಲಿ ಜಿಡ್ಡಿನ ಅಂಶ ಕಡಿಮೆಯಾಗಿ ಒಣಗುವುದರಿಂದ ತಲೆಯಲ್ಲಿ ನೆವೆ, ಹೊಟ್ಟು ಉತ್ಪತ್ತಿಯಾಗುತ್ತವೆ, ಕೂದಲು ಒರಟಾಗುತ್ತದೆ. ಕೂದಲಿಗೆ ಅತಿಯಾದ ರಾಸಾಯನಿಕಗಳ ಬಳಕೆ, ಎಣ್ಣೆಯನ್ನು ಹಚ್ಚದೇ ಇರುವುದು, ವಾಯುಮಾಲಿನ್ಯದ ಪ್ರದೇಶದಲ್ಲಿ ನಿರಂತರ ಕೆಲಸಮಾಡುವುದು, ಅತಿಯಾದ ಆತಂಕ–ದುಃಖಗಳೂ ಕೂದಲು–ತಲೆಯ ಚರ್ಮವನ್ನು ಒಣಗಿಸುತ್ತವೆ. ತುಪ್ಪ ಅಥವಾ ಬೆಣ್ಣೆ ಅಥವಾ ಮೊಟ್ಟೆ ಮತ್ತು ಮಾಂಸಾಹಾರಗಳನ್ನು ಹಿತಮಿತವಾಗಿ ಸೇವಿಸುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ. ಮೆಂತ್ಯವನ್ನು ನೆನೆಸಿ, ರುಬ್ಬಿ ತಲೆಗೆ ಹಚ್ಚಿ ಸುಮಾರು ಮುಕ್ಕಾಲು ಗಂಟೆಯ ನಂತರ ಸ್ನಾನ ಮಾಡುವುದರಿಂದಲೂ ತಲೆಯ ಹೊಟ್ಟನ್ನು ಹೋಗಲಾಡಿಸಬಹುದು, ಲೋಳೇಸರ, ದಾಸವಾಳದ ಎಲೆ ಮತ್ತು ಹೂವಿನ ಲೋಳೆ, ಬೆಂಡೆಕಾಯಿ, ಮೊಟ್ಟೆಯ ಬಿಳಿಯ ಭಾಗ – ಇವುಗಳನ್ನು ಬೆರೆಸಿ ತಲೆಗೆ ಹಚ್ಚಿ ಸುಮಾರು ಮುಕ್ಕಾಲು ಗಂಟೆಯ ನಂತರ ಸ್ನಾನ ಮಾಡುವುದರಿಂದಲೂ ತಲೆಯ ಹೊಟ್ಟನ್ನು ಕಡಿಮೆ ಮಾಡಬಹುದು. ತಲೆಹೊಟ್ಟಿಗೆ ಸರಿಯಾಗಿ ಆರೈಕೆ ಮಾಡದಿದ್ದರೆ ಅದು ಚರ್ಮರೋಗವಾಗಿ ಬದಲಾಗಬಹುದು. ತಲೆಯಲ್ಲಿ ಹುಣ್ಣು, ನೆವೆ, ನೀರು ಸೋರುವುದು, ಹೇನು ಮೊದಲಾದ ತೊಂದರೆಗಳು ಉತ್ಪತ್ತಿಯಾಗುತ್ತವೆ. ಇಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆಯಂತೆ ಚಿಕಿತ್ಸೆ ತೆಗೆದುಕೊಳ್ಳಬೇಕು.

ಇಂದ್ರಲುಪ್ತ:

ತಲೆಯಲ್ಲಿ ಕೆಲವು ಭಾಗದ ಕೂದಲುಗಳು ಗುಂಪು ಗುಂಪಾಗಿ ಉದರುವುದು, ನೆವೆ ಆಗುವುದನ್ನು ‘ಇಂದ್ರಲುಪ್ತ’ ರೋಗ ಎನ್ನುತ್ತಾರೆ. ಆಧುನಿಕ ವೈದ್ಯರು ಫಂಗಸ್ ಮುಂತಾದ ಸೋಂಕಿನಿಂದ ಇಂದ್ರಲುಪ್ತ ರೋಗವು ಉತ್ಪತ್ತಿಯಾಗುತ್ತದೆ ಎನ್ನುತ್ತಾರೆ. ಅತಿಯಾದ ಕಫಕರ ಆಹಾರಗಳ ಸೇವನೆ, ಅತಿಯಾದ ತಂಪಿನ ವಾತವರಣದಲ್ಲಿರುವಿಕೆ, ಒದ್ದೆಯ ತಲೆಯಲ್ಲಿ ತಂಪಾದ ಗಾಳಿಯಲ್ಲಿ ಅಥವಾ ಮಳೆಯಲ್ಲಿ ಹೋಗುವುದು, ಹೀಗೆ ಕಫವಾತಗಳ ನಿರಂತರ ಪ್ರಕೋಪದಿಂದ ಇಂತ್ರಲುಪ್ತ ರೋಗ ಉತ್ಪತ್ತಿಯಾಗುತ್ತದೆ. ಇದಕ್ಕೆ ವೈದ್ಯರ ಸಲಹೆಯನ್ನು ಪಡೆದು ಚಿಕಿತ್ಸೆ ಪಡೆಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.