ADVERTISEMENT

ವೈದ್ಯರಿಗೆ ಸವಾಲಾದ ಹೇರ್‌ಪಿನ್‌; ಬದುಕುಳಿದ ಮಗು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 19:30 IST
Last Updated 31 ಮಾರ್ಚ್ 2019, 19:30 IST
   

ಕಣ್ಣಿಗೆ ಕಾಣುವುದನ್ನೆಲ್ಲಾ ಬಾಯಲ್ಲಿ ಇಟ್ಟುಕೊಂಡು ನೋಡುವುದು ಮಕ್ಕಳ ಚಾಳಿ. ಅದಕ್ಕೆ ಬ್ರೇಕ್‌ ಹಾಕಲು ಸಾಧ್ಯವಾಗದಿದ್ದರೆ ಎಡವಟ್ಟು ಸಂಭವಿಸುವುದು ಕಟ್ಟಿಟ್ಟ ಬುತ್ತಿ.

ನಗರದ ವೈಟ್‌ಫೀಲ್ಡ್‌ನಲ್ಲಿ ನೆಲೆಸಿದ್ದ ಟೆಕ್ಕಿಯೊಬ್ಬರ 18 ತಿಂಗಳಿನ ಮಗು ಆಟ ಆಡುತ್ತಲೇ ಹೇರ್‌ಪಿನ್‌ ನುಂಗಿಬಿಟ್ಟಿತು. ಚೂಪಾದ ಹೇರ್‌ಪಿನ್‌ ಗಂಟಲ ಬಳಿ ಸೇರಿಕೊಂಡಾಗ ಮಗು ನರಳಲು ಆರಂಭಿಸಿತು. ತಕ್ಷಣವೇ ರೈನ್‌ಬೋ ಮಕ್ಕಳ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಯಿತು.

ಅಷ್ಟರಲ್ಲಾಗಲೇ ಮಗು ಹೇರ್‌ಪಿನ್‌ ನುಂಗಿಬಿಟ್ಟಿತ್ತು. ಎಕ್ಸ್‌ರೇ ಮಾಡಿದಾಗ ಹೇರ್‌ಪಿನ್‌ ಹೊಟ್ಟೆಯಲ್ಲಿರುವುದು ಖಚಿತವಾಯಿತು. ಹೊಟ್ಟೆಗೆ ಹೇರ್‌ಪಿನ್‌ನಿಂದ ಸದ್ಯಕ್ಕೆ ಯಾವುದೇ ಹಾನಿಯಾಗಿಲ್ಲ ಎಂಬುದೂ ತಿಳಿಯಿತು. ಆದರೆ ಚೂಪಾದ ಹೇರ್‌ಪಿನ್‌ ಅನ್ನು ಅಲ್ಲೇ ಬಿಟ್ಟರೆ ಮಗುವಿನ ಹೊಟ್ಟೆಗೆ ನೇರವಾಗಿ ಹಾನಿಯಾಗುವ ಸಾಧ್ಯತೆ ಹೆಚ್ಚಿತ್ತು. ಹೊರತೆಗೆಯಬೇಕಾದರೆ ಎರಡೇ ದಾರಿ. ಒಂದು ಶಸ್ತ್ರಚಿಕಿತ್ಸೆ ಮಾಡಬೇಕು. ಇನ್ನೊಂದು; ಅನ್ನನಾಳದ ಮೂಲಕ ಹೊರತೆಗೆಯುವುದು.

ADVERTISEMENT

ಕೇವಲ ಒಂದೂವರೆ ವರ್ಷದ ಮಗುವಾಗಿದ್ದ ಕಾರಣ ಎರಡೂ ದಾರಿಗಳು ಕಷ್ಟವೇ ಆಗಿದ್ದವು. ಶಸ್ತ್ರಚಿಕಿತ್ಸೆ ಮಾಡದೇ ಮಗುವನ್ನು ಬಚಾವು ಮಾಡಲು ಡಾ.ಅರುಣ್‌ ಗಾರ್ಗ್‌ ಅವರನ್ನು ಒಳಗೊಂಡ ವೈದ್ಯರ ತಂಡ ನಿರ್ಧರಿಸಿತು.

ಅಪ್ಪರ್‌ ಎಂಡೋಸ್ಕೋಪಿ ಮೂಲಕ ಮೆಟಾಲಿಕ್‌ ಪಿನ್‌ ತೆಗೆಯುವ ನಿರ್ಧಾರ ಮಾಡಲಾಯಿತು. ಎಂಡೋಸ್ಕೋಪಿ ಮಾಡಿದಾಗ ಹೊಟ್ಟೆಯ ಒಂದು ಭಾಗಕ್ಕೆ ಪಿನ್‌ ಸಿಕ್ಕಿಹಾಕಿಕೊಂಡಿರುವುದು ತಿಳಿಯಿತು. ಆದ್ದರಿಂದ ಇಕ್ಕಳದ ಸಹಾಯದಿಂದ ಅದನ್ನು ಆಚೆ ತೆಗೆಯಲು ಮುಂದಾದರು. ಆದರೆ ಪಿನ್ ದೊಡ್ಡದಾಗಿದ್ದರಿಂದ ಅದು ಅನ್ನನಾಳಕ್ಕೆ ಸಿಕ್ಕಹಾಕಿಕೊಳ್ಳುವ ಅಪಾಯ ಇತ್ತು.

ಇದರಲ್ಲಿ ನಿಪುಣರಾಗಿದ್ದ ಅರುಣ್‌ ಅವರು ನಾಜೂಕಾಗಿ ಈ ಕಾರ್ಯ ಮಾಡಬಹುದು ಎಂದು ತಂಡದ ಇತರ ಸದಸ್ಯರಲ್ಲಿ ವಿಶ್ವಾಸ ತುಂಬಿದರು. ಹೇರ್‌ಪಿನ್‌ ಅನ್ನು ಉದ್ದಮುಖಮಾಡಿ ಅನ್ನನಾಳಕ್ಕೆ ಹಾನಿಯಾಗದಂತೆ ಹೊರತೆಗೆಯುವಲ್ಲಿ ಕೊನೆಗೂ ವೈದ್ಯರು ಯಶಸ್ವಿಯಾದರು.

‘ಹೇರ್‌ಪಿನ್‌ ನುಂಗಿದ ತಕ್ಷಣ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದರಿಂದ ಮಾತ್ರ ಮಗು ಬದುಕುಳಿಯಲು ಸಾಧ್ಯವಾಗಿದೆ. ಹೇರ್‌ಪಿನ್‌ ತುದಿ ಚೂಪಾಗಿದ್ದರೂ ಹೊಟ್ಟೆಗೆ ಹಾನಿಯಾಗದಿರುವುದು ಆಶ್ಚರ್ಯವೇ. ಹೊಟ್ಟೆ ಅಥವಾ ಕರುಳಿಗೆ ಸ್ವಲ್ಪ ತೊಂದರೆಯಾಗಿದ್ದರೂ, ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತಿತ್ತು’ ಎಂದು ಡಾ.ಅರುಣ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.